ಬಂಟ್ವಾಳ: ಮಾ.17 ಇಚ್ಛಾಶಕ್ತಿ ಇದ್ದರೆ ಯಾವುದೇ ಕಾರ್ಯ ಅಸಾಧ್ಯವಲ್ಲ ಎಂಬುದನ್ನು ಬಂಟ್ವಾಳ ಪೊಲೀಸ್ ಇಲಾಖೆ ತೋರಿಸಿ ಕೊಟ್ಟಿದೆ. ಮೊನ್ನೆ ಮೊನ್ನೆವರೆಗೂ ಪಾಳು ಬಿದ್ದು ಯಾರೂ ಹತ್ತಿರ ಹೋಗದ ಸ್ಥಿತಿಯಲ್ಲಿದ್ದ ಪಾಳು ಬಿದ್ದ ಕಟ್ಟಡವೊಂದು ಇದೀಗ ಪೊಲೀಸ್ ವಸತಿ ಗೃಹವಾಗಿ ಪರಿವರ್ತನೆಗೊಂಡಿದೆ. ಪಾಣೆಮಂಗಳೂರು ಗೂಡಿನಬಳಿಯ ಪಶು ಇಲಾಖೆಯ ಹಳೆ ಕಟ್ಟಡದ ನಿವೇಶವನ್ನು ಬಂಟ್ವಾಳ ಸಂಚಾರಿ ಠಾಣೆಗೆ ಹಸ್ತಾಂತರಿಸಲಾಗಿತ್ತು. ಆದರೆ ಅಲ್ಲಿ ಠಾಣೆಗೆ ಬೇಕಾದಷ್ಟು ಜಾಗ ಸಿಗದ ಹಿನ್ನೆಲೆಯಲ್ಲಿ ಪಶು ಇಲಾಖೆಯ ಹಳೆ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಆದರೆ ಇದೀಗ ಆ ಕಟ್ಟಡವನ್ನು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ರಿಬ್ಬನ್ ಕತ್ತರಿಸಿ ನವೀಕೃತ ವಸತಿ ಗೃಹವನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಗಣಹೋಮ ನೆರವೇರಿಸಲಾಗಿತ್ತು. ಈ ಸಂದರ್ಭದಲ್ಲಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ, ಸಂಚಾರಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಶ್ ಕೆ.ವಿ, ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಕಲೈಮಾರ್ ಹಾಗೂ ಮೂರು ಠಾಣೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಸ್ತುತ ಈ ಕಟ್ಟಡದಲ್ಲಿ ಕೆಎಸ್‌ಆರ್‌ಪಿಯ ಸಿಬಂದಿ ಉಳಿದುಕೊಳ್ಳಲಿದ್ದಾರೆ. ಬಂಟ್ವಾಳ ನಗರ ಠಾಣೆಯ ವ್ಯಾಪ್ತಿಯ ಸುಮಾರು 50ರಷ್ಟು ಕೆಎಸ್‌ಆರ್‌ಪಿಸಿ ಸಿಬ್ಬಂದಿ ನಿತ್ಯ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಅವರು ಶಾಲೆಗಳು, ಮದುವೆ ಹಾಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಅಲ್ಲಿ ಮದುವೆ, ಇನ್ನಿತರ ಸಮಾರಂಭ ಇದ್ದಾಗ ಎದ್ದು ಹೋಗಬೇಕಿತ್ತು. ಹೀಗಾಗಿ ಅವರಿಗೆ ಶಾಶ್ವತ ನೆಲೆ ಇರಲಿಲ್ಲ. ಇದೀಗ ಈ ಕಟ್ಟಡ ನವೀಕರಣಗೊಳ್ಳುವ ಮೂಲಕ ಕೆಎಸ್‌ಆರ್‌ಪಿ ಸಿಬಂದಿಗೆ ಶಾಶ್ವತ ನೆಲೆ ಸಿಕ್ಕಂತಾಗಿದೆ. ಕೆಎಸ್‌ಆರ್‌ಪಿಯ ಬಸ್ಸು ನಿಲ್ಲಿಸುವುದಕ್ಕೂ ಇಲ್ಲಿ ಸ್ಥಳಾವಕಾಶವಿದ್ದು, ವಿದ್ಯುತ್, ಶೌಚಾಲಯ, ಅಡುಗೆ ಕೋಣೆ ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
