Sunday, February 1, 2026

ವಿಶ್ವ ಕಿಡ್ನಿ ದಿನ – ಮಾರ್ಚ್ 11

ಬಂಟ್ವಾಳ: ಮಾ.11ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ವಿಶ್ವ ಕಿಡ್ನಿ ದಿನ ಎಂದು ಆಚರಿಸಲಾಗುತ್ತಿದೆ. ಜಾಗತಿಕವಾಗಿ, ವಿಶ್ವದಾದ್ಯಂತ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಅರಿವು ಜಾಗತಿ ಮೂಡಿಸಿ, ಜನರಲ್ಲಿ ಕಿಡ್ನಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. 2016ರಲ್ಲಿ 66 ದೇಶಗಳು ಈ ಆಚರಣೆಯನ್ನು ಜಾರಿಗೆ ತಂದರು. 2008ರಲ್ಲಿ 88 ದೇಶಗಳು ಈ ಆಚರಣೆಯಲ್ಲಿ ಭಾಗಿಯಾದರು. 2015ರಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ಈ ಆಚರಣೆ ವಿಸ್ತರಿಸಲಾಯಿತು. 2006ರಲ್ಲಿ ನಿಮ್ಮ ಕಿಡ್ನಿ ಸರಿಯಾಗಿದೆಯೇ? ಎಂಬ ಧ್ಯೇಯ ವಾಕ್ಯದಿಂದ ಆರಂಭವಾದ ಈ ಆಚರಣೆ 2015ರಲ್ಲಿ ಎಲ್ಲರಿಗೂ ಆರೋಗ್ಯವಂತ ಕಿಡ್ನಿ ಮತ್ತು 2016ರಲ್ಲಿ ಮಕ್ಕಳು ಮತ್ತು ಕಿಡ್ನಿ ರೋಗಗಳು, ಬೇಗನೆ ಕಾರ್ಯ ಪ್ರವೃತ್ತರಾಗಿ ಮತ್ತು ತಡೆಗಟ್ಟಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಆಚರಣೆಯ ಹಿಂದಿನ ಉದ್ದೇಶಗಳು ಏನು?
1. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ, ಕಿಡ್ನಿಗಳಿಗೆ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವ ಉದ್ದೇಶ.
2. ಮಧುಮೆಹ ಮತ್ತು ಅಧಿಕ ರಕ್ತದೊತ್ತಡದ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕಾಲ ಕಾಲಕ್ಕೆ ಕಿಡ್ನಿಯ ಕಾರ್‍ಯ ದಕ್ಷತೆಯನ್ನು ಪರೀಕ್ಷಿಸುವ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು.
3. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ದಾನ ಮತ್ತು ಕಿಡ್ನಿ ಕಸಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು.
4. ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಕಿಡ್ನಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು.
5. ಅನಗತ್ಯವಾಗಿ ಹೆಚ್ಚು ಬಳಸಲ್ಪಡುವ ನೋವು ನಿವಾರಕಗಳು ಮತ್ತು ರೋಗ ನಿರೋಧಕ ಔಷಧಿಗಳಿಂದ ಕಿಡ್ನಿಗಳಿಗೆ ಆಗುವ ತೋದರೆಗಳ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವುದು.
6. ಕಿಡ್ನಿ ಸಂಬಂಧಿ ರೋಗಗಳನ್ನು ಆರಂಭಿಕ ಹಂತದಲ್ಲಿ ತಡೆಯಲು ಬೇಕಾದ ತುರ್ತು ಕ್ರಮಗಳಾದ ಜೀವನ ಶೈಲಿ ಬದಲಾವಣೆ, ಆಹಾರ ಪದ್ದತಿಯ ಬದಲಾವಣೆ, ಧೂಮಪಾನ ವರ್ಜನೆ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು.

ನಿಮಗಿರುವುದು ಎರಡೇ ಕಿಡ್ನಿ……… ಕಾಪಾಡಿಕೊಳ್ಳಿ
ಕಿಡ್ನಿ ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಮನುಷ್ಯನಿಗೆ ಒಟ್ಟು ಎರಡು ಕಿಡ್ನಿಗಳಿರುತ್ತದೆ. ಇವೆರಡು ದಿನವಿಡಿ ಕೆಲಸ ಮಾಡುತ್ತಿರುತ್ತದೆ. ಕಿಡ್ನಿ ನಮ್ಮ ದೇಹದ ಫಿಲ್ಟರ್ ಇದ್ದಂತೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸ ಕಿಡ್ನಿ ನಿರಂತರವಾಗಿ ಮಾಡುತ್ತಿರುತ್ತದೆ. ಕೇವಲ 150ಗ್ರಾಮ್ ತೂಕದ ಈ ಕಿಡ್ನಿ ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸ ಮಾತ್ರ ಊಹೆಗೂ ನಿಲುಕದು. ಹೃದಯದಷ್ಟೇ ಪ್ರಮುಖವಾದ ಇನ್ನೊಂದು ಅಂಗವೆಂದರೆ ಕಿಡ್ನಿ ಎಂದರೂ ತಪ್ಪಾಗಲಿಕ್ಕಿಲ್ಲ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರು ಆದರೂ ದೇಹದ ಎಲ್ಲಾ ಆಂತರಿಕ ವ್ಯವಸ್ಥೆಗಳು ಅಲ್ಲೋಲಕಲ್ಲೋಲವಾಗುತ್ತದೆ.

 

ಸಾಮಾನ್ಯವಾಗಿ ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯುವುದು ಕಷ್ಟವಾಗಬಹುದು. ರೋಗದ ತೀವ್ರತೆ ಹೆಚ್ಚಿದಂತೆಲ್ಲ ಕಿಡ್ನಿ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹದಲ್ಲಿ ಕಲ್ಮಷಗಳು ಹೆಚ್ಚಾಗಿ ವಿಪರೀತ ಸುಸ್ತು, ಹಸಿವಿಲ್ಲದಿರುವುದು, ಬೇಗನೆ ಸುಸ್ತಾಗುವುದು, ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಮೊಣಕಾಲು ಊದಿಕೊಳ್ಳುವುದು, ಬೆಳಗ್ಗಿನ ಹೊತ್ತು ಮುಖ ಊದಿಕೊಳ್ಳುವುದು, ಮೂತ್ರದಲ್ಲಿ ರಕ್ತ ಒಸರುವುದು, ಮೂತ್ರದ ಬಣ್ಣ ಹೆಚ್ಚು ದಪ್ಪವಾಗುವುದು, ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೋಟಿನ್‌ನ ಅಂಶ ಹೆಚ್ಚಾಗುವುದು, ನೊರೆಯುಕ್ತ ಮೂತ್ರ, ಮೂತ್ರದ ಪ್ರಮಾಣ ಕಡಿಮೆಯಾಗುವುದು, ರಾತ್ರಿ ಹೊತ್ತು ಹೆಚ್ಚು ಮೂತ್ರ ಬರುವುದು ಮತ್ತು ಪದೇ ಪದೇ ಮೂತ್ರ ಮಾಡುವುದು, ಹೊಟ್ಟೆಯ ಸುತ್ತ ಕಿಬ್ಬೊಟ್ಟೆಯ ಬಳಿ ನೋವು, ನಿದ್ರಾಹೀನತೆ, ತಲೆನೋವು, ಉಸಿರಾಟದಲ್ಲಿ ಏರುಪೇರು, ಅಧಿಕ ರಕ್ತದೊತ್ತಡ, ವಾಕರಿಕೆ ಬಂದಂತಾಗುವುದು ಮತ್ತು ವಾಂತಿ, ಬಾಯಿಯಲ್ಲಿ ವಿಪರೀತ ವಾಸನೆ ಮತ್ತು ಬಾಯಿ ಒಣಗಿದಂತಾಗುವುದು. ಸಾಮಾನ್ಯವಾಗಿ ಸ್ನಾಯಖಂಡಗಳ ಸಂಚಲನದಿಂದ ಉಂಟಾಗುವ ಅನಗತ್ಯವಾದ ವಸ್ತುವಾದ ಕ್ರಿಯಾಟೆನಿನ್ ರಕ್ತಕ್ಕೆ ಸೇರುತ್ತದೆ. ಇದನ್ನು ಕಿಡ್ನಿ ತನ್ನ ಕಾರ್ಯ ದಕ್ಷತೆಯಿಂದ ಮೂತ್ರದ ಮುಖಾಂತರ ಹೊರಹಾಕುತ್ತದೆ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ರಕ್ತದಲ್ಲಿ ಈ ಕ್ರಿಯಾಟೆನಿನ್ ಅಂಶ ಜಾಸ್ತಿಯಾಗಿ ಕಿಡ್ನಿ ಮೇಲೆ ತಿಳಿಸಿದ ಕಿಡ್ನಿ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ದೇಹದಲ್ಲಿನ ವಿವಿಧ ಜೀವಕೋಶಗಳ ಜೀವಕ್ರಿಯೆಯಿಂದಾಗಿ ಉತ್ಪತಿಯಾಗುವ ಯಾರಿಯಾ, ನೈಟ್ರೋಜನ್ ಮತ್ತು ಯೂರಿಕ್ ಆಸಿಡ್ ಮುಂತಾದ ಕಲ್ಮಷಗಳನ್ನು ಕೂಡಾ ಕಿಡ್ನಿ ಮೂತ್ರದ ಮುಖಾಂತರ ದೇಹದಿಂದ ಹೊರಹಾಕಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಈ ಅಂಶಗಳು ರೋಗಿಯ ರಕ್ತದಲ್ಲಿ ಹೆಚ್ಚಿದಂತೆ ಬೇರೆ ಬೇರೆ ರೀತಿಯಲ್ಲಿ ರೋಗಿಯನ್ನು ಕಾಡಿ ವ್ಯಕ್ತಿಯನ್ನು ನಿಜವಾಗಿಯೂ ಬಳಲುವಂತೆ ಮಾಡಿ ಜೀವನೋತ್ಸಹವನ್ನು ಬತ್ತಿಸಿ, ಆತನನ್ನು ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಮಾಡುತ್ತದೆ. ಆರಂಭಿಕ ಹಂತದಲ್ಲಿಯೇ ಈ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಲ್ಲಿ ಪರಿಣಾಮಕಾರಿಯಾಗಿ ರೋಗವನ್ನು ನಿಯಂತ್ರಿಸಬಹುದು.

ಕಿಡ್ನಿ ಸಂಬಂಧಿ ರೋಗವನ್ನು ತಡೆಯುವುದು ಹೇಗೆ?

ಮೂತ್ರಪಿಂಡದ ಕಾಯಿಲೆ, ನಮಗರಿವಿಲ್ಲದೆಯೇ ನಿಧಾನವಾಗಿ ಕೊಲ್ಲುವ ಕಾಯಿಲೆಯಾಗಿದ್ದು ಜೀವನಶೈಲಿ ಮೇಲೆ ನೇರ ಸಂಬಂಧ ಹೊಂದಿರುತ್ತದೆ. ಹೆಚ್ಚಿನ ಮೂತ್ರಪಿಂಡ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

1. ರನ್ನಿಂಗ್, ಬಿರುಸುನಡಿಗೆ, ಸೈಕಲ್ ತುಳಿತ ಮತ್ತಿತರ ದೈಹಿಕ ಕಸರತ್ತುಗಳಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿ ಕಿಡ್ನಿಯನ್ನು ಕ್ರೀಯಾಶೀಲವಾಗಿರಿಸುವುದು.

2. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿ ಡಯಾಬಿಟಿಸ್‌ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಖಂಡಿತವಾಗಿ ಬರಲಾರದು.
ದಿನಕ್ಕೆ ಏನಿಲ್ಲವೆಂದರೂ 3 ರಿಂದ 4 ಲೀಟರ್ ನೀರು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಸೋಸಿ ಹೋಗುತ್ತದೆ ಮತ್ತು ಕಿಡ್ನಿಯು ಯಾವತ್ತೂ ಕ್ರೀಯಾಶೀಲವಾಗಿರುತ್ತದೆ. ನೀರಿನ ಅಥವಾ ದ್ರವಾಹಾರದ ಅಂಶ ಕಡಿಮೆಯಾದಂತೆಯೇ ಕಿಡ್ನಿಯಲ್ಲಿ ಕಲ್ಲುಗಳು ಮತ್ತು ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಮಾಂಸಾಹಾರ ಮತ್ತು ಉಪ್ಪು ಕಿಡ್ನಿ ಖಾಯಿಲೆಗಳನ್ನು ಆಮಂತ್ರಿಸುತ್ತದೆ.
3. ಧೂಮಪಾನ, ಮಧ್ಯಪಾನದಿಂದ ದೂರವಿರುವುದು. ಇವು ಬರೀ ಕಿಡ್ನಿಯ ಆರೋಗ್ಯಕಷ್ಟೆಯಲ್ಲ, ದೇಹದ ಎಲ್ಲಾ ಅಂಗಾಗಗಳ ಆರೋಗ್ಯಕ್ಕೆ ಅತೀ ಅವಶ್ಯಕ.
4. ದೇಹದ ತೂಕದ ಮೇಲೆ ನಿಯಂತ್ರಣ ಇಡುವುದು ಹೆಚ್ಚಿನ ರೋಗಗಳು ದೇಹದ ತೂಕ, ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಮೇಲೆ ಅವಲಂಭಿಸಿರುತ್ತದೆ. ದೇಹದ ತೂಕವನ್ನು ದೇಹದ ಎತ್ತರಕ್ಕೆ ಅನುರೂಪವಾಗಿ ಇಟ್ಟುಕೊಂಡಲ್ಲಿ ಹೆಚ್ಚಿನ ರೋಗಗಳನ್ನು ತಡೆಯಬಹುದು.
5. ಔಷಧಿಗಳನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಬೇಕು. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸಬಾರದು. ಅತಿಯಾದ ನೋವು ನಿವಾರಣೆಗಳ ಸೇವನೆ ಕಿಡ್ನಿ ಮತ್ತು ಲಿವರ್‌ನ ಆರೋಗ್ಯಕ್ಕೆ ಮಾರಕವಾಗಬಲ್ಲದು.
6. ನಿರಂತರವಾಗಿ, ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಅತೀ ಅವಶ್ಯಕ. ನೋವಿದ್ದಾಗ ಮಾತ್ರ ವೈದ್ಯರ ಬಳಿ ಹೋಗುವ ಪರಿಪಾಠ ಒಳ್ಳೆಯದಲ್ಲ, ಯಾಕೆಂದರೆ ಹೆಚ್ಚಿನ ಕಿಡ್ನಿಯ ಸಂಬಂಧಿ ಕಾಯಿಲೆಗಳು ನೋವು ಬರುವ ಹಂತಕ್ಕೆ ಬಂದಾಗ ಕಿಡ್ನಿಗಳಿಗೆ ಹೆಚ್ಚಿನ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕಿಡ್ನಿಯನ್ನು ಹಾನಿ ಮಾಡುವ ಹತ್ತು ಕೆಟ್ಟ ಅಭ್ಯಾಸಗಳು..
1. ಮೂತ್ರ ಬರುವಾಗ ಮೂತ್ರ ಮಾಡದೇ ಉದ್ದೇಶ ಪೂರ್ವಕವಾಗಿ ಮೂತ್ರವನ್ನು ತಡೆದು ಹಿಡಿದಿಟ್ಟುಕೊಳ್ಳುವುದು ಬಹಳ ಅಪಾಯಕಾರಿ. ದಿನವೊಂದಕ್ಕೆ ಒಬ್ಬ ಆರೊಗ್ಯವಂಥ ಮನುಷ್ಯ1500ml ರಿಂದ 1800ml ನಷ್ಟು ಮೂತ್ರ ವಿಸರ್ಜಿಸುತ್ತಾನೆ. ದಿನವೊಂದರಲ್ಲಿ 5 ರಿಂದ 8 ಬಾರಿ ಮನುಷ್ಯರು ಮೂತ್ರ ವಿಸರ್ಜಿಸುತ್ತಾರೆ. ಒಮ್ಮೆ ವಿಸರ್ಜಿಸುವಾಗ 150 ರಿಂದ 300ml ನಷ್ಟು ಮೂತ್ರ ವಿಸರ್ಜಿಸುತ್ತಾರೆ. ಮೂತ್ರದ ಪ್ರಮಾಣ ನಾವು ತಿನ್ನುವ ಆಹಾರ, ಸೇವಿಸುವ ನೀರು ವಾತಾವರಣದ ಉಷ್ಣತೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಮೂತ್ರ ವಿಸರ್ಜಿಸಬೇಕಾದ ಸಮಯದಲ್ಲಿ ವಿಸರ್ಜಿಸದಿದ್ದಲ್ಲಿ ಮೂತ್ರ ಕೋಶದ ಸೋಂಕು ಅಥವಾ ಮೂತ್ರಕೋಶದ ಕಲ್ಲುಗಳಿಗೆ ಪರೋಕ್ಷವಾಗಿ ಕಾರಣವಾಗುತ್ತದೆ. ಮೂತ್ರ ಚೀಲದ ಸಾಮರ್ಥ್ಯ ಅರ್ಧ ಲೀಟರ್ ಆಗಿದ್ದು, ಅಗತ್ಯಕ್ಕಿಂತ ಹೆಚ್ಚು ಹೊತ್ತು ಮೂತ್ರ ಶೇಖರಣೆಯಾಗಿ ಮೂತ್ರ ಚೀಲದಲ್ಲಿ (ಬ್ಲಾಡರ್) ಇದ್ದಲ್ಲಿ ಅದರಲ್ಲಿನ ಲವಣಗಳು ತಳಕ್ಕೆ ಸೇರಿ ಕಿಡ್ನಿ ಕಲ್ಲುಗಳಾಗುತ್ತದೆ ಮತ್ತು ಬ್ಯಾಕ್ಟಿರಿಯಾಗಳು ಹೆಚ್ಚು ಬೆಳೆದು ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಅತಿಯಾದ ಕೊಬ್ಬು ಇರುವ ಜಂಕ್ ಆಹಾರ ಸೇವನೆ ಮತ್ತು ಕರಿದ ತಿಂಡಿಗಳ ಸೇವನೆಯಿಂದ ದೇಹದಲ್ಲಿ ಬೊಜ್ಜು (ಕೊಲೆಸ್ಟ್ರಾಲ್) ಶೇಖರಣೆಯಾಗಿ ಕಿಡ್ನಿಯ ಕಾರ್ಯಕ್ಷಮತೆಯನ್ನು ಕ್ಷೀಣಿಸುತ್ತದೆ. ನಿಗದಿತ ಪ್ರಮಾಣಕ್ಕಿಂತ ಕಡಮೆ ದ್ರವಾಹಾರ ಮತ್ತು ನೀರು ಸೇವಿಸುವುದರಿಂದ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಮೂತ್ರ ಕೋಶದ ಸಂರ್ಪೂಣವಾದ ಆರೋಗ್ಯಕ್ಕೆ ಸಾಕಷ್ಟು ನೀರಿನ ಸೇವನೆ ಅತೀ ಅವಶ್ಯಕ. ದಿನವೊಂದರಲ್ಲಿ 2 ರಿಂದ 3 ಲೀಟರ್ ನೀರು ಅತೀ ಅಗತ್ಯ. ದೇಹದಲ್ಲಿ ಉತ್ಪತ್ತಿಯಾದ ಕಲ್ಮಷಗಳು ಮತ್ತು ವಿಷಕಾರಕ ಅಂಶಗಳನ್ನು ಹೊರಹಾಕಲು ಸಾಕಷ್ಟು ನೀರಿನ ಸೇವನೆ ಅತೀ ಅಗತ್ಯ.
3. ಅತಿಯಾದ ಸಕ್ಕರೆ ಸೇವನೆ ಕಿಡ್ನಿಯ ಆರೊಗ್ಯಕ್ಕೆ ಹಾನಿಕರ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಅತಿಯಾದ ಸಕ್ಕರೆ ಸೇವಿಸುವವರಲ್ಲಿ ಮೂತ್ರದಲ್ಲಿ ಪ್ರೋಟಿನ್ ಅಂಶ ಜಾಸ್ತಿ ಸೋರಿ ಹೋಗುತ್ತದೆ ಮತ್ತು ಕಿಡ್ನಿಗಳ ಕಾರ್ಯಕ್ಷಮತೆ ಕ್ಷೀಣಿಸುತ್ತದೆ ಎಂದೂ ತಿಳಿದುಬಂದಿದೆ.
4. ಮಾಂಸಾಹಾರಿಗಳಲ್ಲಿ ಅತಿಯಾದ ಪ್ರಾಣಿಜನ್ಯ ಪ್ರೋಟಿನ್ ಸೇವನೆಯಿಂದ ಕಿಡ್ನಿಯ ಮೇಲೆ ಹೆಚ್ಚಿನ ಒತ್ತಡ ಬಿದ್ದು ಕಿಡ್ನಿಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ದನದ ಮಾಂಸ (ರೆಡ್‌ವಿಟ್) ಸೇವನೆಯಿಂದ ಈ ರೀತಿ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
5. ಅತಿಯಾದ ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಜಾಸ್ತಿಯಾಗಿ, ಕಿಡ್ನಿಗಳ ರಕ್ತನಾಳಗಳ ಮೇಲೆ ಹಾನಿಯುಂಟಾಗಿ ಕಿಡ್ನಿಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಕಡಮೆ ಲವಣ ಸೇವನೆ ದೇಹದ ಆರೋಗ್ಯಕ್ಕೆ ಮತ್ತು ಕಿಡ್ನಿಯ ಆರೋಗ್ಯಕ್ಕೆ ಉತ್ತಮ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
6. ನಿದ್ರಾಹೀನತೆಯಿಂದ ಕಿಡ್ನಿಯ ಜೀವಕೋಶಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ದಿನವೊಂದರಲ್ಲಿ 6 ರಿಂದ 7 ಗಂಟೆಗಳ ಸುಖನಿದ್ರೆ ಕಿಡ್ನಿಯ ಆರೊಗ್ಯಕ್ಕೆ ಅತೀ ಅವಶ್ಯಕ. ಪದೇ ಪದೇ ನಿದ್ರೆಗೆಡುವುದರಿಂದ ಕಿಡ್ನಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
7. ವಿಟಮಿನ್ ಮತ್ತು ಮಿನರಲ್ ಅಂದರೆ ಲವಣಾಂಶಗಳ ಕೊರತೆಯಿಂದಲೂ ಕಿಡ್ನಿಗಳಿಗೆ ಹಾನಿಯಾಗಬಹುದು. ಮೆಗ್ನೀಶಿಯಂ ಮತ್ತು ವಿಟಮಿನ್ ಬಿ6 ನಮ್ಮ ದೇಹದ ಕಿಡ್ನಿಯ ಆರೋಗ್ಯಕ್ಕೆ ಪೂರಕ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದರ ಕೊರತೆ ಉಂಟಾದಲ್ಲಿ ಕಿಡ್ನಿಗಳ ಕಾರ್‍ಯಕ್ಷಮತೆ ಕ್ಷೀಣಿಸುತ್ತದೆ.
8. ಅತಿಯಾದ ಕಾಫಿ ಸೇವನೆ ಕಿಡ್ನಿಗಳಿಗೆ ಮಾರಕವಾಗಬಹುದು. ಅತಿಯಾದ ಕೆಫೇನ್ ರಾಸಾಯನಿಕ ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಹಾಕಿ, ಕಿಡ್ನಿಗಳ ವೈಫಲ್ಯಕ್ಕೆ ನಾಂದಿ ಹಾಡುತ್ತದೆ.
9. ಮಧ್ಯಪಾನ ಮತ್ತು ಧೂಮಪಾನ ಕಿಡ್ನಿಯ ವೈಫಲ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ. ಮಧ್ಯಪಾನಿಗಳಲ್ಲಿ ಕಿಡ್ನಿ ಮತ್ತು ಯಕೃತ್ತು ಬೇಗನೆ ಹಾನಿಗೊಳಗಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
10. ಅನಾವಶ್ಯಕ ನೋವು ನಿವಾರಕಗಳು ಮತ್ತು ಆಂಟಿ ಬಯೋಟಿಕ್ ಸೇವನೆ ಕಿಡ್ನಿಯ ಮೇಲೆ ಒತ್ತಡ ಹಾಕಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಅತೀ ಅವಶ್ಯವಿದ್ದಲ್ಲಿ ವೈದ್ಯರ ಸೂಚನೆ ಮೇರೆಗೆ ಮಾತ್ರ ನೋವು ನಿವಾರಕಗಳನ್ನು ಸೇವಿಸಬೇಕು. ಚಾಕಲೇಟು ತಿಂದಂತೆ ಸಣ್ಣಪುಟ್ಟ ನೋವುಗಳಿಗೆ ಔಷಧ ಸೇವಿಸುವುದು ಬಹಳ ಅಪಾಯಕಾರಿ.

ಕೊನೆ ಮಾತು
ಕಿಡ್ನಿ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಎರಡು ಕಿಡ್ನಿಗಳಿದ್ದರೂ, ಒಂದು ಕಿಡ್ನಿ ತೆಗೆದರೂ ಇನ್ನೊಂದು ಕಿಡ್ನಿ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕಿಡ್ನಿಯಲ್ಲಿನ ಸೂಕ್ಷ್ಮವಾದ ರಕ್ತನಾಳಗಳು, ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಶೋಧಕದಂತೆ ಕಾರ್ಯ ನಿರ್ವಹಿಸುತ್ತದೆ. ಕಿಡ್ನಿ ಚೆನ್ನಾಗಿದ್ದರೆ ಅದು ಶರೀರದಲ್ಲಿನ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ. ರಕ್ತದೊಳಗಿನ ಕಲ್ಮಶಗಳನ್ನು ಸೋಸಿ ಮೂತ್ರವಾಗಿ ಹೊರ ಹಾಕುತ್ತದೆ. ಆಹಾರದಲ್ಲಿನ ಸತ್ವಗಳನ್ನು ಬಳಸಿಕೊಂಡು ದೇಹದ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮೂತ್ರಪಿಂಡದ ಆರೋಗ್ಯ ಕೆಟ್ಟಲ್ಲಿ ರಕ್ತದಲ್ಲಿನ ಕಲ್ಮಶಗಳಾದ ಕ್ರೀಯಾಟೆನಿನ್ ಎಂಬ ಅಂಶ ಜಾಸ್ತಿಯಾಗುತ್ತದೆ. ಆದೇ ರೀತಿ ರಕ್ತದಲ್ಲಿನ ಯೂರಿಯಾ ನೈಟ್ರೋಜನ್ (ಬಿ.ಯು.ಎನ್) ಎಂಬ ಅಂಶವು ಜಾಸ್ತಿಯಾಗುತ್ತದೆ. ಈ ಎರಡು ಪರೀಕ್ಷೆಗಳ ಮುಖಾಂತರ ಕಿಡ್ನಿಯ ಕಾರ್ಯಕ್ಷಮತೆವನ್ನು ಪರೀಕ್ಷಿಸಲಾಗುತ್ತದೆ. ಇವೆರಡು ರಕ್ತದಲ್ಲಿ ಅಧಿಕವಾದಲ್ಲಿ ಕಿಡ್ನಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದರ್ಥ. ಒಟ್ಟಿನಲ್ಲಿ ಕಿಡ್ನಿ ಎನ್ನುವುದು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಫಿಲ್ಟರ್ ಇದ್ದಂತೆ. ಮನೆಯಲ್ಲಿನ ಫಿಲ್ಟರ್ ಹೇಗೆ ಕೆಲವೊಮ್ಮೆ ಏರುಪೇರಾಗಿ ಕೆಲಸ ಮಾಡುವುದೋ ಹಾಗೆಯೇ ತಮ್ಮೊಳಗಿನ ಕಿಡ್ನಿ ಕೂಡ. ಇದನ್ನು ಎಷ್ಟು ಚೆನ್ನಾಗಿ ಆರೋಗ್ಯಕಾರವಾಗಿ ನೋಡಿಕೊಳ್ಳುತ್ತೇವೆಯೋ, ಅಷ್ಟು ವರ್ಷ ನಾವು ಆರೋಗ್ಯವಂತರಾಗಿ ಬಾಳಬಹುದು. ಒಟ್ಟಿನಲ್ಲಿ ಕಿಡ್ನಿ ಎನ್ನುವ 150 ಗ್ರಾಂ. ನ ಎರಡು ಅಂಗಗಳು ಗಾತ್ರದಲ್ಲಿ ಚಿಕ್ಕದಾದರೂ, ಮಾಡುವ ಕೆಲಸವಂತೂ ಊಹೆಗೂ ನಿಲುಕದು ಮತ್ತು ಆದರ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ನಾವು ನೂರುಕಾಲ ಸುಖವಾಗಿ ಬದುಕಬಹುದು.

-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...