ಬಂಟ್ವಾಳ, ಮಾ.3: ಕೃಷಿ ಮಾಡಬೇಕಾದರೆ ಸ್ಥಾಕಷ್ಟು ಸ್ಥಳ ಬೇಕು, ನಗರ ಪ್ರದೇಶದಲ್ಲಿ ಇದು ಅಸಾಧ್ಯವೆಂಬುದು ಸಾಕಷ್ಟು ಮಂದಿಯ ಅಭಿಪ್ರಾಯ. ಆದರೆ ಬಿ.ಸಿ.ರೋಡಿನ ಕೈಕಂಬದಲ್ಲಿ ವಾಣಿಜ್ಯ ಸಂಕೀರ್ಣವೊಂದರ ಮಾಲಕ ತಮ್ಮ ಸಂಕೀರ್ಣದ ೪ನೇ ಮಹಡಿಯ ಮೇಲಿನ ಖಾಲಿ ಸ್ಥಳದಲ್ಲಿ ಹತ್ತಾರು ಬಗೆಯ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ.
ಕೈಕಂಬ ಜಂಕ್ಷನ್‌ನಲ್ಲಿರುವ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ಮಾಲಕ ಡಾ| ಗೋವರ್ಧನ್ ರಾವ್ ಅವರೇ ಟೇರೆಸ್ ಕೃಷಿ ಮಾಡಿರುವ ಕೃಷಿಕ. ಇವರ ಟೇರೆಸ್ ಮೇಲಿರುವಷ್ಟು ಗಿಡಗಳು ಎಕರೆಗಟ್ಟಲೆೆ ಸ್ಥಳವಿರುವ ಕೃಷಿಕರ ಬಳಿಯೂ ಇರಲಿಲ್ಲ. ೪ನೇ ಮಹಡಿಗೆ ಮಣ್ಣು, ಗೊಬ್ಬರವನ್ನು ಹೊತ್ತುಕೊಂಡು ಹೋಗಿಯೇ ಕೃಷಿ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ.

ಡಾ| ಗೋವರ್ಧನ್ ರಾವ್ ಅವರು ಸೌದಿ ಅರೇಬಿಯಾದ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿದ್ದು, 2019ರಲ್ಲಿ ನಿವೃತ್ತಿ ಹೊಂದಿ ಮನೆಗೆ ಆಗಮಿಸಿದ್ದರು. ಕೈಕಂಬದ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲೇ ಅವರ ಮನೆಯಿದ್ದು, ಪ್ರಾರಂಭದಲ್ಲಿ ಮನೆಯ ಮಹಡಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದರು. ಬಳಿಕ ಸಮಯ ಕಳೆಯುವುದಕ್ಕಾಗಿ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ಕೃಷಿಯನ್ನು ಆರಂಭಿಸಿದರು. 4 ಸಾವಿರ ಚ.ಅಡಿ ವಿಸ್ತೀರ್ಣ ವಾಣಿಜ್ಯ ಸಂಕೀರ್ಣದ 4ನೇ ಮಹಡಿಯಲ್ಲಿ ಸುಮಾರು 4 ಸಾವಿರ ಚದರ ಅಡಿ ವಿಸೀರ್ಣದಲ್ಲಿ ಇವರ ಕೃಷಿ ವಿಸ್ತರಿಸಿಕೊಂಡಿದೆ. ಟೊಮೆಟೊ, ಹಿರೇಕಾಯಿ, ಸೋರೆಕಾಯಿ, ಅಲಸಂಡೆ, ಅರಿವೆ, ಬಸಳೆ, ಮೆಣಸು, ಗೆಣಸು, ಬದನೆ, ಈರುಳ್ಳಿ ಮೊದಲಾದ ತರಕಾರಿ ಗಿಡಗಳಿವೆ. ಚೆಂಡು ಹೂವು, ಗುಲಾಬಿ ಸೇರಿದಂತೆ ಹತ್ತಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಚಿಕ್ಕು, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬುನೇರಳೆ, ಪೇರಳೆ, ಬುಗರಿ ಹಣ್ಣು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳು ಕೂಡ ಇವರ ಬಳಿ ಇದ್ದು, ಈಗಾಗಲೇ ಫಸಲು ಬಿಡುತ್ತಿವೆ. ಮಣ್ಣು, ಕೊಳೆತ ತರಕಾರಿ, ಬೆಲ್ಲ, ಸೆಗಣಿ ಮೊದಲಾದ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಳಿದಂತೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕುವ ಕಾರ್ಯ ನಿರ್ವಹಿಸುತ್ತಾರೆ. ಪ್ರಾರಂಭದಲ್ಲಿ ಮಣ್ಣು, ಗೊಬ್ಬರವನ್ನು ತಾವೇ ಹೊತ್ತುಕೊಂಡು ೮೬ ಮೆಟ್ಟಿಲು ಹತ್ತಿ ಕೊಂಡು ಹೋಗುತ್ತಿದ್ದು, ಪ್ರಸ್ತುತ ಅದಕ್ಕೆ ರಾಟೆಯ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಗೆ ಬಿಸಿಲು ಬೀಳದಂತೆ ರಕ್ಷಿಸಲು ಹಸಿರು ನೆಟ್‌ನ ವ್ಯವಸ್ಥೆ ಕೂಡ ಮಾಡಿದ್ದಾರೆ.
ಮಾರಾಟ ಮಾಡುವುದಿಲ್ಲ.!
ಈಗಾಗಲೇ ಸಾಕಷ್ಟು ತರಕಾರಿ ಬೆಳೆದಿರುವ ಇವರು ಯಾವುದೇ ತರಕಾರಿಯನ್ನು ಮಾರಾಟ ಮಾಡಿಲ್ಲ. ಬದಲಾಗಿ ನಂದಾವರ ದೇವಸ್ಥಾನಕ್ಕೆ ಉಚಿತವಾಗಿ ತರಕಾರಿ ನೀಡುತ್ತಿದ್ದಾರೆ. ಉಳಿದಂತೆ ಮನೆಗೆ ಬಂದವರು ತರಕಾರಿ ಪಡೆದುಕೊಂಡು ಹೋಗುತ್ತಾರೆ. ತಾವು ಹವ್ಯಾಸವಾಗಿ ಇದನ್ನು ಮಾಡುತ್ತಿದ್ದು, ಮಾರಾಟದ ಉದ್ದೇಶದಿಂದ ಬೆಳೆಸುತ್ತಿಲ್ಲ ಎನ್ನುತ್ತಾರೆ.
ಗಿಡಗಳು ನೆಮ್ಮದಿ ನೀಡುತ್ತವೆ
ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಬೇಕು. ಸ್ಥಳವಿಲ್ಲದೇ ಇದ್ದರೆ ಈ ರೀತಿ ಟೇರೆಸ್ ಮೇಲೆ ಬೆಳೆಯಬಹುದು. ತಾನು ಸಮಯ ಕಳೆಯುವ ಉದ್ದೇಶದಿಂದ ಈ ರೀತಿ ಗಿಡಗಳನ್ನು ಬೆಳೆಸುತ್ತಿದ್ದು, ಇದು ನೆಮ್ಮದಿ ನೀಡುತ್ತಿದೆ. ನಾವು ಬೆಳೆಸಿದ ಗಿಡಗಳು ಎಂದಿಗೂ ನಮಗೆ ಮೋಸ ಮಾಡುವುದಿಲ್ಲ. ಮುಂದೆ ಎಲ್ಲಾದರೂ ಸ್ಥಳ ಸಿಕ್ಕಿದರೆ ಮೆಡಿಸಿನ್ ಗಿಡಗಳನ್ನು ಬೆಳೆಸಬೇಕು ಎಂಬ ಆಲೋಚನೆ ಇದೆ.
– ಡಾ| ಗೋವರ್ಧನ್ ರಾವ್
ಟೆರೆಸ್ ಕೃಷಿಕ, ಕೈಕಂಬ.
