ಲಾಕ್‌ಡೌನ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಿತ್ಯ ಬಳಕೆಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ ಈಗ ಬೇಕರಿ ಉತ್ಪನ್ನಗಳು, ಸಿಹಿ ತಿಂಡಿಗಳ ಮಾರಾಟಕ್ಕೆ ಅವಕಾಶ ನೀಡಿದೆ.


ಬೇಕರಿ ಹಾಗೂ ಸಂಬಂಧಪಟ್ಟಉತ್ಪನ್ನಗಳನ್ನು ವಿಶೇಷವಾಗಿ ರೋಗಿಗಳು, ಹಿರಿಯರು, ಮಕ್ಕಳು ಹೆಚ್ಚು ಬಳಕೆ ಮಾಡುತ್ತಾರೆ.ಈ ಹಿನ್ನೆಲೆಯಲ್ಲಿ ಬೇಕರಿ, ಬಿಸ್ಕತ್, ಕಾಂಡಿಮೆಂಟ್, ಸಿಹಿ ತಿಂಡಿಗಳ ಉತ್ಪಾದನೆ, ಪೂರೈಕೆ, ಹಾಗೂ ಕನಿಷ್ಠ ಸಿಬ್ಬಂದಿಯೊಂದಿಗೆ ಬೇರೆ ಬೇರೆ ಕಡೆಗೆ ಇಲ್ಲವೇ ಸಣ್ಣ ಅಂಗಡಿಗಳಿಗೆ ಪೂರೈಸಲು ಅವಕಾಶ ನೀಡಿದೆ.
ಈ ಸಂಬಂಧ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ, ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.
ಈ ಘಟಕಗಳು ಅತ್ಯುತ್ತಮ ಗುಣಮಟ್ಟದ ವ್ಯವಸ್ಥೆಯಡಿ, ಸ್ವಚ್ಛವಾದ ವಾತಾವರಣದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು, ಆದರೆ ಯಾವುದೇ ಸಂದರ್ಭದಲ್ಲಿ ಇಂತಹ ಘಟಕಗಳಲ್ಲಿ ಗ್ರಾಹಕರಿಗೆ ಪೂರೈಸುವ, ಸೇವಿಸುವ ಅವಕಾಶ ಇರುವುದಿಲ್ಲ, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಬೇಕರಿ, ಬಿಸ್ಕತ್, ಸಿಹಿ ತಿಂಡಿಗಳ ಉತ್ಪಾದನೆ, ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಲಾಕ್‌ಡೌನ್ ಆದೇಶದಿಂದ ವಿನಾಯಿತಿ ನೀಡಿದೆ. ಈಗಾಗಲೇ ನಿತ್ಯ ಬಳಕೆಯ ದಿನಸಿ ವಸ್ತುಗಳು, ತರಕಾರಿ, ಹಾಲು ಹಾಗೂ ಆನ್‌ಲೈನ್ ಮೂಲಕ ಆಹಾರ, ತಿಂಡಿ ತಿನಿಸುಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ.












