ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಕಲಾಯಿಯಲ್ಲಿ ಕರ್ತವ್ಯ ನಿರತ ಆಶಾ ಕಾರ್ಯಕರ್ತೆಗೆ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಾಯಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ್ ಎಂಬವರು ಎ. 1ರಂದು ಸಂಜೆ ತಾನು ಫೀಲ್ಡ್ ನಲ್ಲಿದ್ದ ವೇಳೆ ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರ ಹೋಮ್ ಕ್ವಾರಂಟೈನ್ ಕುರಿತು ಆಶಾ ಕಾರ್ಯಕರ್ತೆಯರಿಗೆ ವಿಶೇಷ ಜವಾಬ್ದಾರಿ ನೀಡಲಾಗಿದ್ದು, ಆರೋಪಿಗಳ ಸಂಬಂಧಿ ನಿತೇಶ್ ವಿದೇಶದಿಂದ ಬಂದಿದ್ದರು. ಈ ಕುರಿತು ಆಶಾ ಕಾರ್ಯಕರ್ತೆ ವಿಚಾರಣೆ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಬೆದರಿಕೆಯೊಡ್ಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಚಾರವನ್ನು ಆಶಾ ಕಾರ್ಯಕರ್ತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೂ ತಿಳಿಸಿದ್ದು, ಅವರು ಕೂಡಾ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿರುವ ಜತೆಗೆ, ಕಾನೂನು ಕ್ರಮಕ್ಕೆ ಪೊಲೀಸರಿಗೂ ಸೂಚಿಸಿದ್ದರು.














