ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದಲ್ಲಿ 10 ತಿಂಗಳ ಹಸುಳೆಗೆ ಕೊರೋನ ಸೋಂಕು ಬಾಧಿಸಿದ ಹಿನ್ನೆಲೆಯಲ್ಲಿ ಸಜಿಪನಡು ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಿರುವ ಬೆನ್ನಲ್ಲೇ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರೇ ರಸ್ತೆಗಳ ಸಂಪರ್ಕ ಕಡಿತ ಮಾಡಿ ಸ್ವಯಂ ದಿಗ್ಭಂಧನಕ್ಕೆ ಒಳಗಾದ ಘಟನೆಗಳು ವರದಿಯಾಗಿದೆ.

ಗ್ರಾಮಸ್ಥರನ್ನು ಹೊರತು ಪಡಿಸಿ ಯಾರೂ ಗ್ರಾಮದೊಳಗೆ ಪ್ರವೇಶಿಸಬಾರದು ಎಂಬ ಕಾರಣಕ್ಕೆ ತಾಲೂಕಿನ ಸಿದ್ಧಕಟ್ಟೆ, ವಿಟ್ಲ. ಮೊದಲಾದೆಡೆಗಳಲ್ಲಿ ರಸ್ತೆಗಳಿಗೆ ಕಲ್ಲುಗಳನ್ನು, ಮರದ ದಿಮ್ಮಿ, ಮಣ್ಣು, ಮರಳುಗಳನ್ನು ಹಾಕಿ ರಸ್ತೆ ಸಂಚಾರವನ್ನುಬಂದ್ ಮಾಡಿದ್ದಾರೆ.
ಆದರೆ ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿ ವರ್ಗ ರಸ್ತೆಗೆ ಅಡ್ಡವಾಗಿರಿಸಿದ್ದನ್ನು ತೆರವುಗೊಳಿಸಿದ್ದಾರೆ. ಗ್ರಾಮಗ್ರಾಮಗಳ ರಸ್ತೆಯನ್ನು ಬಂದ್ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಸಾಕಷ್ಟು ತೊಂದರೆಯಾಗುತ್ತದೆ.

ಈ ಕ್ರಮ ಕಾನೂನು ಬಾಹಿರವಾಗಿದ್ದು, ಜನರು ಕಾನೂನು ಕೈಗೆತ್ತಿಕೊಂಡು ಕೆಲಸ ಮಾಡುವುದು ಸರಿಯಲ್ಲ ಎಂಬುದು ಅಧಿಕಾರಿ ವರ್ಗದ ಮಾತು.
ಒಂದು ವೇಳೆ ಗ್ರಾಮದಲ್ಲಿ ಅಂತಹ ಸಮಸ್ಯೆಗಳು ಇದ್ದಲ್ಲಿ ಗ್ರಾಮ ಮಟ್ಟದಲ್ಲಿ ಟಾಸ್ಕಪೋರ್ಸ್ ಸಮಿತಿ ರಚನೆ ಮಾಡಲಾಗಿದೆ, ಅವರ ಮೂಲಕ ತಾಲೂಕು ಆಡಳಿತ ಹಾಗೂ ಪೋಲೀಸರ ಅಥವಾ ಇತರ ಸಂಬಂಧಿಸಿದ ಇಲಾಖೆ ಯ ಗಮನಕ್ಕೆ ತಂದರೆ ಕಾನೂನು ರೀತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

