ಬಂಟ್ವಾಳ: ಹತ್ತಾರು ವರ್ಷದ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರೆಯುವ ಎಲ್ಲಾ ಲಕ್ಷಣಗಳು ಈ ದಿನ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಮಂಗಳೂರು ಶಾಸಕ ಯು.ಟಿ.ಖಾದರ್ ಅವರ ನೇತೃತ್ವದ ಸಭೆಯಲ್ಲಿ ನಡೆಯಿತು.
ಬಂಟ್ವಾಳ ಪುರಸಭೆಯ ಒಣ ಕಸವನ್ನು ಸಜಿಪನಡು ಗ್ರಾಮದ ಕಂಚಿನಡ್ಕಪದವಿಗೆ ಮಾರ್ಚ್ 12 ರಂದು ಕಳುಹಿಸಿದಾಗ ಸ್ಥಳೀಯ ಪಂಚಾಯತ್ ಆಡಳಿತ ಮತ್ತು ಸಾರ್ವಜನಿಕರು ವಿರೋಧಿಸಿದಾಗ ಪೋಲೀಸ್ ರಕ್ಷಣೆಯೊಂದಿಗೆ ಕಸ ವಿಲೇವಾರಿ ನಡೆಸಲಾಗಿತ್ತು. ಈ ಬಗ್ಗೆ ವಿಧಾನಸಭೆಯ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ರವರು ವಿಷಯ ಪ್ರಸ್ತಾಪಿಸಿ ಕಸ ವಿಲೇವಾರಿ ತಡೆಹಿಡಿಯುವಂತೆ ಆಗ್ರಹಿಸಿದಾಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ನ್ಯಾಯಾಲಯದ ಆದೇಶ, ಸದನ ಭರವಸೆ ಸಮಿತಿಯ ಆದೇಶ, ಪರಿಸರ ಇಲಾಖೆ, ಜಿಲ್ಲಾಧಿಕಾರಿಯವರ ಆದೇಶದಂತೆ ಕಸ ವಿಲೇವಾರಿ ನಡೆಯುತ್ತಿದೆ. ಜನರ ಸಮಸ್ಯೆಯ ಬಗ್ಗೆ ನಾವು ಅಧಿಕಾರಿಗಳ ಜತೆ ಕುಳಿತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದು ವಿಷಯಕ್ಕೆ ತೆರೆ ಎಳೆದರು. ಅದರಂತೆ ಈ ದಿನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.


ಸಭೆಯ ತಿರ್ಮಾನದಂತೆ ಬಂಟ್ವಾಳ ಪುರಸಭೆಯು ಮೂಲದಲ್ಲೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿಯೇ ಮನೆ ಮನೆಯಿಂದ ಸಂಗ್ರಹಿಸುವುದು, ಒಣಕಸ ಮಾತ್ರ ಕಂಚಿನಡ್ಕಪದವಿಗೆ ಕೊಂಡೊಯ್ಯುವುದು, ಕಂಚಿನಡ್ಕ ಪದವಿನ ತ್ಯಾಜ್ಯ ಘಟಕ್ಕೆ ಸಿಸಿ ಟಿವಿ ಅಳವಡಿಸುವುದು, ಘಟಕದಲ್ಲಿ ವಾಚ್ ಮೆನ್ ನಿಯೋಜಿಸುವುದು, ಒಣ ಕಸವನ್ನು ಪ್ರತ್ಯೇಕ ಗೊಳಿಸಿ ವಿಲೇ ಮಾಡಲು ಸೂಕ್ತ ಸಿಬ್ಬಂದಿಗಳನ್ನು ನೇಮಿಸುವುದು, ಒಣ ಕಸ ಹಾಕುವ ಪ್ರದೇಶದಲ್ಲಿ ತಕ್ಷಣ ತಾತ್ಕಾಲಿಕ ಶೆಡ್ ಮತ್ತು ಅತೀ ಶೀಘ್ರವಾಗಿ ಶೆಡ್ ನಿರ್ಮಿಸುವ ಜತೆಗೆ ಸ್ಥಳೀಯರಿಗೆ ಇದರಿಂದ ಯಾವುದೇ ಸಮಸ್ಯೆಗಳು ಬಾರದಂತೆ ತ್ಯಾಜ್ಯ ವಿಲೇವಾರಿ ನಡೆಸುವಂತೆ ನಿರ್ಧರಿಸಲಾಯಿತು.
ಮುಂದಿನ ವಾರದೊಳಗೆ ಸ್ಥಳಕ್ಕೆ ಎರಡೂ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಜತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಅವಶ್ಯಕತೆಗಳ ಬಗ್ಗೆ ಮುಂದುವರಿಯಲು ನಿರ್ಧರಿಸಲಾಯಿತು. ಸ್ಥಳೀಯ ನಿವಾಸಿಗಳು ಪ್ರಸ್ತುತ ವಾಸ ಇರುವ ಸ್ಥಳಕ್ಕೆ ಹಕ್ಕುಪತ್ರ ನೀಡುವಂತೆ ಶಾಸಕ ಯು.ಟಿ.ಖಾದರ್ ರವರು ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ಸಹಾಯಕ ಆಯಕ್ತ ಮದನ್ ಮೋಹನ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ರಾಜಣ್ಣ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ್ ಶೆಟ್ಟಿ , ಸಜಿಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಜಾಕ್, ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ, ಪರಿಸರ ಅಧಿಕಾರಿ ಯಾಸ್ಮಿನ್ ಸುಲ್ತಾನ್ ಮತ್ತಿತರರು ಉಪಸ್ಥಿತರಿದ್ದರು.
ಹತ್ತಾರು ವರ್ಷದ ಸಮಸ್ಯೆಯೊಂದು ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದು ಇದೀಗ ಶಾಸಕರ ಮುತುವರ್ಜಿ ಮತ್ತು ಅಧಿಕಾರಿಗಳ ಕಾರ್ಯ ಕ್ಷಮತೆಯಿಂದ ಪರಿಹಾರ ಕಂಡುಕೊಂಡಿದೆ.

