ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ದೋಣಿ ನಾವಿಕರೊಬ್ಬರು ರಕ್ಷಣೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬಲ್ಲಿ ಗುರುವಾರ ನಡೆದಿದೆ.
ಕಡೇಶಿವಾಲಯದ ನಿವಾಸಿ, ದೋಣಿ ನಾವಿಕ ಅಬ್ಬಾಸ್ ಎಂಬವರು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.



ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನೇತ್ರಾವತಿ ನದಿಯಲ್ಲಿ ತೀರದಲ್ಲಿ ಸಾರ್ವಜನಿಕರಾಗಿ ಕಾಯುತ್ತಿದ್ದಾಗ ದೂರದಲ್ಲಿ ಯಾವುದೋ ಒಂದು ವಸ್ತು ತೇಲಿ ಬರುತ್ತಿದ್ದ ಹಾಗೆ ಕಂಡಿದೆ. ತಕ್ಷಣ ದೋಣಿ ಮೂಲಕ ತೆರಳಿತ್ತಿದ್ದಾಗ ಮಹಿಳೆಯೊಬ್ಬರು ನೀರಿನಲ್ಲಿ ಚಟಪಡಿಸುತ್ತಿದ್ದರು. ನೀರಿನ ಸೆಳೆತಕ್ಕೆ ಹೋಗುತ್ತಿದ್ದ ಅವರನ್ನು ಕೇಶವ ಎಂಬವರ ಸಹಾಯದೊಂದಿಗೆ ಮೆಲಕ್ಕೆತ್ತಿ ರಕ್ಷಣೆ ಮಾಡಲಾಯಿತು ಎಂದು ನಾಡದೋಣಿಯ ನಾವಿಕ ಅಬ್ಬಾಸ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಈ ಬಗ್ಗೆ ವಿಚಾರಿಸಿದಾಗ ತಾನು ಉಪ್ಪಿನಂಗಡಿ ನಿವಾಸಿ ಮಂಜಕ್ಕ ಎಂದು ತಿಳಿಸಿದ್ದು, ಸುಮಾರು 70 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಬ್ಬಾಸ್ ಅವರು ತಿಳಿಸಿದ್ದಾರೆ.
ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.












