ಬಂಟ್ವಾಳ: ವ್ಯಕ್ತಿತ್ವ ವಿಕಸನಕ್ಕೆ ಜೀವನ ಕೌಶಲವು ಪ್ರೇರಣೆ ಎಂದು ಮಣಿಪಾಲದ ಎಟೆರ್ನಾ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸುಪರ್ಣ ಎಂ. ಎಸ್ ಹೇಳಿದರು.
ಅವರು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜು ಇಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಂತರ್ ಶಾಲೆ ಕ್ವಿಜ್ ಸ್ಪರ್ಧೆ-ಸಿದ್ಧಾಂತ್ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ, ಜೀವನ ಕೌಶಲಗಳ ಜತೆ ವಿಷಯದ ಬಗೆಗಿನ ತಿಳುವಳಿಕೆ, ಆಳವಾದ ಅರಿವು, ಸ್ಪರ್ಧಾತ್ಮಕ ಮನೋಭಾವವನ್ನು ಅವಲಂಬಿಸಿರುತ್ತದೆ. ಜೀವನದ ಸಾಧನೆಗೆ ಬೌದ್ಧಿಕ ಮತ್ತು ಭೌತಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತದೆ. ನಕಾರಾತ್ಮಕ ಚಿಂತನೆಗಳು ದೂರ ನಿಂತಾಗ ಸಕಾರಾತ್ಮಕ ಭಾವನೆಗಳು ಜನನವಾಗುತ್ತದೆ. ಭಾವನೆಗಳು ವೃದ್ಧಿಸುತ್ತಾ ಹೋದಂತೆ ಸೃಜನಶೀಲತೆ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯವಿಚಾರದ ಜತೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಎಸ್.ವಿ.ಎಸ್ ಕಾಲೇಜು ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ಸುಮಾರು 30 ಪ್ರೌಢಶಾಲೆಯಿಂದ ಆಯ್ಕೆ ಮಾಡಿದ 60 ವಿದ್ಯಾರ್ಥಿಗಳು ಈ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿದ್ಧಾಂತ್ ಕಾರ್ಯಕ್ರಮ ಸಂಯೋಜಕಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಖಿಲಾ ಪೈ ಪ್ರಾಸ್ತಾವಿಕ ಮಾತುಗಳನಾಡಿದರು. ಸಹಸಂಯೋಜಕ ಮತ್ತು ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಅತಿಥಿ ಪರಿಚಯಿಸಿದರು.
ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಯೋಜಕಿ ತೇಜಸ್ವಿ ಪಿ. ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಚೇತನ್ ಎಸ್. ವಂದಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ವಿನುತಾ ಭಟ್ ಕಾರ್‍ಯಕ್ರಮ ನಿರೂಪಿಸಿದರು.
