ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಪುತ್ತೂರಿನ ಬಜತ್ತೂರು ಗ್ರಾಮದ ಕೃಷಿ ಕುಟುಂಬದ ಮೂಲದ ಚಂದ್ರಶೇಖರ್ ಪಾಲೆತ್ತಾಡಿಯವರು ರೈತಪರ ಚಳವಳಿ, ನಾಟಕ, ಯಕ್ಷಗಾನ, ಭಾಷಣ, ಹಿಗೆ ನಾನಾ ರೂಪದಲ್ಲಿ ತನ್ನ ಬಹುತ್ವಗಳಲ್ಲಿ ಕಾಣಿಸಿಕೊಂಡವರು. ನೈಜ ಸಮಾಜವಾದ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತಿರುವ ಈ ಹೊತ್ತಿಗೆ ಕೆಲವೇ ಕೆಲವು ನೈಜ ಸಮಾಜವಾದ ಪರಿಪಾಲಕರನ್ನ ನಾವು ನೋಡಬಹುದಾದರೆ ಅದರಲ್ಲಿ ಪಾಲೆತ್ತಾಡಿಯವರೂ ಒಬ್ಬರು. ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಪತ್ರಿಕಾರಂಗದಲ್ಲಿ ಭಿನ್ನ ದೃಷ್ಠಿಕೋನದೊಂದಿಗೆ ಸಾಗಿ ಬಂದವರು ಪಾಲೆತ್ತಾಡಿ. ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಕೊನೆಗೆ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ವೃತ್ತಿಯ ತನಕ ನಡೆದು ಬಂದ ಪಾಲೆತ್ತಾಡಿಯವರ ಹೆಸರನ್ನ ಮುಂಬೈನಲ್ಲಿ ತಿಳಿಯದವರಿಲ್ಲ. ಮರಾಠಿ ಮಣ್ಣು ಮುಂಬೈನಲ್ಲಿ ಕನ್ನಡದ ಕಂಪನ್ನು ಧಟ್ಟವಾಗಿ ಹಲವಾರು ಸವಾಲುಗಳ ನಡುವೆಯೂ ಪಸರಿಸಿದ ಚಂದ್ರಶೇಖರ್ ಪಾಲೆತ್ತಾಡಿಯವರು ಪರರಾಜ್ಯವೊಂದರಲ್ಲಿ ಕನ್ನಡ ಭಾಷೆಯ ಪ್ರಾದೇಶಿಕ ಪತ್ರಿಕೆಯೊಂದು ಆ ರಾಜ್ಯದ ಪತ್ರಿಕೆಗಳಿಗೆ ಸರಿಸಮಾನವಾಗಿ ಪ್ರಸರಣವನ್ನ ಹೊಂದುವಲ್ಲಿ ಪಟ್ಟ ಶ್ರಮ ತೊಟ್ಟ ಛಲ ವರ್ಣಿಸಲಸದಳ. ಕನ್ನಡ ಪತ್ರಿಕಾರಂಗ ಗಟ್ಟಿ ಧ್ವನಿಯಾದ ಚಂದ್ರಶೇಖರ್ ಪಾಲೆತ್ತಾಡಿಯವರ ಪತ್ರಿಕಾರಂಗದ ಜೀವಮಾನದ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ.
