ಬಂಟ್ವಾಳ: ವಿವಿಧ ಕ್ಷೇತ್ರಗಳಲ್ಲಿ ಬಿ.ಎಂ. ತುಂಬೆ ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಸುಜೀರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಉಮರ್ ಫಾರೂಕ್ ತಿಳಿಸಿದ್ದಾರೆ.
ಅವರು ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬಿ.ಎಂ. ತುಂಬೆ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಇಲ್ಲಿನ ಸಮಾಜವಿಜ್ಞಾನ ವಿಷಯದ ಶಿಕ್ಷಕರಾಗಿರುವ ಬಿ.ಎಂ.ತುಂಬೆ ಅವರ ಸಾಧನೆಯು ನಮಗೂ ಗೌರವ ತಂದುಕೊಟ್ಟಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸ್ಕೌಟ್ ಆಂಡ್ ಗೈಡ್ಸ್‌ನ ಜಾಂಬೂರಿಯಲ್ಲಿ ಭಾಗವಹಿಸಲು ಅಮೆರಿಕಾದ ವರ್ಜಿನಿಯಕ್ಕೆ ತೆರಳಿರುವ ಬಿ.ಎಂ. ತುಂಬೆ ಅವರನ್ನು ಶಾಲಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಶಾಲೆಯ ಸ್ಕೌಟ್ ಆಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಶಶಿಮಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಅಹ್ಮದ್ ಪೆರಿಮಾರ್ ಉಪಸ್ಥಿತರಿದ್ದರು.
ಶಿಕ್ಷಕಿ ಜ್ಯೋತಿರಾವ್ ವಂದಿಸಿದರು. ಶಿಕ್ಷಕ ಜಯಪ್ರಕಾಶ್ ನಿರೂಪಿಸಿದರು.

