ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ನೀರೊದಗಿಸಲು ಇನ್ನು ಹತ್ತು ದಿವಸಕ್ಕಾಗುವಷ್ಟು ನೀರಿದೆ. ನೀರಿನ ಕೊರತೆ ಇಲ್ಲ,
ಮಿತಬಳಕೆಯ ಕುರಿತು ಜಾಗೃತಿಯೂ ಇರಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಬಂಟ್ವಾಳದ ನೇತ್ರಾವತಿ ತೀರದಲ್ಲಿ ನೀರಿನ ಲಭ್ಯತೆ ಕುರಿತು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಿತ್ಯ ಅಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತಿದ್ದೇವೆ. ಸಮಸ್ಯೆ ಬಾರದಂತೆ ನೀರನ್ನು ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಜನರು ನೀರಿನ ಮಹತ್ವ ಪಡೆಯೇಕು ಎಂದರು.


ನೀರಿನ ಹರಿವು ಎಲ್ಲೆಲ್ಲಿದೆಯೋ ಅದನ್ನು ಉಪಯೋಗಿಸಲು ಸೂಚನೆ ನೀಡಲಾಗಿದೆ. ಪುರವಾಸಿಗಳು ಆದಷ್ಟು ನೀರನ್ನು ಮಿತವಾಗಿ ಬಳಸಲು ಅಭ್ಯಾಸ ಮಾಡಿಕೊಳ್ಳಬೇಕು. ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನೀರಿಲ್ಲ ಎಂಬ ಚಿಂತೆ ಬೇಡ, ಹಾಗೆಯೇ ಅದರ ಬಗ್ಗೆ ಜಾಗೃತಿಯೂ ಇರಲಿ ಎಂದರು.
ಜಾಕ್ ವೆಲ್ ನಿಂದ ಒಂದು ಕಿ.ಮೀನಷ್ಟು ಜಾಗದಲ್ಲಿ ಈ ಜಲಮೂಲವಿದ್ದು, ಇಲ್ಲಿಂದ ಜಾಕ್ ವೆಲ್ ಇದ್ದ ಪ್ರದೇಶಕ್ಕೆ ನೀರು ಹರಿಯುವಂತೆ ಮಾಡಿ ಲಿಫ್ಟ್ ಮಾಡುವ ಪ್ರಕ್ರಿಯೆಗೆ ತತ್ ಕ್ಷಣದಿಂದ ಚಾಲನೆ ನೀಡಲಾಗಿದೆ. ಇದಾದರೆ ಬಂಟ್ವಾಳಕ್ಕೆ ನೀರಿನ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಅಧಿಕಾರಿಗಳದ್ದು. ಈಗ 5 ಎಂಎಲ್ ಡಿಯಷ್ಟು ನೀರೊದಗಿಸುವ ಸಾಮರ್ಥ್ಯ ಹೊಂದಿದ್ದು, ಒಟ್ಟು ದಿನವಹಿ 8 ಎಂಎಲ್ ಡಿ ನೀರು ಬಂಟ್ವಾಳ ಜನರಿಗೆ ಪೂರೈಸಬೇಕಾಗುತ್ತದೆ ಎಂದರು.
ಶಾಸಕರೊಂದಿಗೆ ಪುರಸಭೆ ಸದಸ್ಯ ಎ.ಗೋವಿಂದ ಪ್ರಭು, ಜಿಪಂ ಸದಸ್ಯ ಎ.ತುಂಗಪ್ಪ ಬಂಗೇರ, ಮಾಜಿ ಪುರಸಭೆ ಸದಸ್ಯ ದೇವದಾಸ ಶೆಟ್ಟಿ, ಎಂಜಿನಿಯರುಗಳಾದ ಡೊಮಿನಿಕ್ ಡಿಮೆಲ್ಲೊ, ಶೋಭಾಲಕ್ಷ್ಮೀ ಉಪಸ್ಥಿತರಿದ್ದರು.
42 ಬೋರ್ ವೆಲ್ ಗಳು ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿವೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ. ಶುದ್ಧ ನೀರು ವಿತರಣೆಯಾಗುತ್ತಿದ್ದು, ಪಲ್ಲಿಗುಡ್ಡ ಪ್ರದೇಶದಿಂದಲೂ ನೀರನ್ನು ಪಡೆಯುವ ಕುರಿತು ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ 10 ದಿನಗಳಿಗೆ ಆಗುವಷ್ಟು ನೀರಿದೆ.
– ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕರು.