ಬಂಟ್ವಾಳ : ಪುರಾಣ ಪ್ರಸಿದ್ಧ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸುಮಾರು 2 ಕೋ. ರೂ ವೆಚ್ಚದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿದ್ದು, ಆ ಪ್ರಯುಕ್ತ ಮೇ 17ರಂದು ಶ್ರೀ ಕ್ಷೇತ್ರದಲ್ಲಿ ನೂತನ ದೇವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ ಅವರು ಶಿಲಾನ್ಯಾಸ ನೆರವೇರಿಸಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಭಕ್ತಾಧಿಗಳು ಒಟ್ಟು ಸೇರಿದಾಗ ದೇವಸ್ಥಾನದ ಪುನರುತ್ಥಾನ ಸಾಧ್ಯ. ಭಕ್ತರ ಭಕ್ತಿಯ ಶ್ರಮದಿಂದ ದೇವಸ್ಥಾನ ಬೆಳಗುವುದು ಎಂದು ಹೇಳಿದರು.

ಹೊಸ್ಮಾರು, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ, ಭಕ್ತಿಗೆ ದೇವರ ಅನುಗ್ರಹವಿದೆ. ತಮ್ಮ ಆರಾಧ್ಯ ದೇವರ ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸಿದರೆ ಇಷ್ಟಾರ್ಥ ಸಿದ್ಧಿಯಾಗುವುದು. ದುರ್ಗೆ ಧುರಿತ ನಿವಾರಕಿಯಾಗಿದ್ದು, ಭಕ್ತರ ಮನಸ್ಸಿನ ಸಂಕಲ್ಪ ಈಡೇರಿಸುತ್ತಾಳೆ ಎಂದರು.
ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡಿ, ಊರಿಗೆ ದೇಗುಲ ಶೃಂಗಾರ, ದೇವಸ್ಥಾನವೆಂಬುದು ಸಂಸ್ಕೃತಿಯ ಅಡಿಗಲ್ಲು. ಗ್ರಾಮದ ಸೌಭಾಗ್ಯ. ಭಕ್ತಿಯ ಹೆಜ್ಜೆಯೊಂದಿಗೆ ಭಕ್ತರು ಸಾಗಿದಾಗ ದೇವಸ್ಥಾನ ನಿರ್ಮಾಣ ಸುಲಭ ಸಾಧ್ಯವಾಗುವುದು ಎಂದ ಅವರು ಬಿರು ಬೇಸಿಗೆಯಿಂದ ಎಲ್ಲರೂ ಕಂಗೆಟ್ಟಿದ್ದು, ಮಳೆಗಾಗಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಹೇಳಿದರು.
ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ಮಾಜಿ ಸಚಿವ ಅಮರನಾಥ ಶೆಟ್ಟಿ ಮೂಡುಬಿದಿರೆ, ಉದ್ಯಮಿ ಶ್ರೀಪತಿ ಭಟ್, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಾಬು ಪೂಜಾರಿ ಕೌಡಾಡಿಗುತ್ತು, ಭೊಜರಾಜ ಶೆಟ್ಟಿ ಕೊರಗಟ್ಟೆ, ಬೆಂಗಳೂರು ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಯೋಗೀಶ್ ಕಲಸಡ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭರತ್ ಕುಮಾರ್ ಜೈನ್ ಸೇವಾ ವಂದಿಸಿದರು. ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.