ಮಂಗಳೂರು: ಕೋವಿಡ್ ಸಂಕಷ್ಟ ದ ಸಂದರ್ಭ ಆರ್ಥಿಕವಾಗಿ ಹಿಂದುಳಿದ 900 ಕುಟುಂಬಗಳಿಗೆ ಅಕ್ಕಿ ಸಹಿತ ದಿನಬಳಕೆಯ ವಸ್ತುಗಳ ಕಿಟ್ ವಿತರಿಸಿದ್ದ ಪ್ರಜ್ಞಾ ಸಲಹಾ ಕೇಂದ್ರ, ಶಾಲೆಗಳು ತೆರೆಯುತ್ತಿದ್ದಂತೆಯೇ, 900 ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್ ವಿತರಿಸುವ ಕಾರ್ಯನಡೆಸುತ್ತಿದೆ.


ಕಳೆದ ಮೂರೂವರೆ ದಶಕಗಳಿಂದ ಮಂಗಳೂರಿನ ಕಂಕನಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳ ಜೊತೆಯಲ್ಲಿ ವಿಶೇಷವಾಗಿ ಮಕ್ಕಳಹಕ್ಕು, ಕೌಟುಂಬಿಕ ದೌರ್ಜನ್ಯ ಹಾಗೂ ಸಮಾಜದಲ್ಲಿ ನಿರಂತರ ಕಿರುಕುಳಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ಸಾಂತ್ವನದ ಜೊತೆಗೆ, ಸಮಸ್ಯೆಗೆ ಪರಿಹಾರ, ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು ನಡೆಸುತ್ತಿದೆ. ಸರಕಾರದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜಮುಖಿಯಾಗಿ ಮುನ್ನಡೆಯುತ್ತಿದೆ.
ಪ್ರಸ್ತುತ ಸಂಸ್ಥೆಯು ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯಡಿಯಲ್ಲಿ ಕಿನ್ನಿಗೋಳಿ ವ್ಯಾಪ್ತಿಯನ್ನು ಕೇಂದ್ರವಾಗಿರಿಸಿಕೊಂಡು ಸುಮಾರು ಮೂರು ವರ್ಷಗಳಿಂದ ಆಸುಪಾಸಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಧ್ಯೇಯವಾಗಿರಿಸಿಕೊಂಡು ಅನೇಕ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಸಂಯೋಜನೆಯೊಂದಿಗೆ ಹತ್ತು ಹಲವು ಜಾಗೃತಿ ಆಧಾರಿತ ಕಾರ್ಯಕ್ರಮಗಳನ್ನು ನಿರ್ವಹಿಸುವುದರೊಂದಿಗೆ,
ಪರಿಸ್ಥಿತಿಯಲ್ಲಿ ಜನರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಬಡಕುಟುಂಬಗಳಿಗೆ ನೆರವಾದ ಪ್ರಜ್ಞಾ ಸಂಸ್ಥೆ ಮಾನವೀಯತೆ ಮೆರೆದಿದೆ.
ಬ್ಯಾಗ್ ವಿತರಣೆಗೆ ಚಾಲನೆ
ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ಪ್ರೌಢಶಾಲೆಗಳು ಇದೀಗ ಪುನರಾರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಆಯ್ದ ಸರಕಾರಿ ಹಾಗೂ ಅನುದಾನಿತ ಪ್ರೌಡ ಶಾಲೆ ಸೇರಿ ಹನ್ನೊಂದು ಸರ್ಕಾರಿ ಪೌಢಶಾಲೆಗಳನ್ನು ಗುರುತಿಸಿ, 900 ಬ್ಯಾಗ್ ವಿತರಣೆಗೆ ಪ್ರಜ್ಞಾ ಸಂಸ್ಥೆ ಚಾಲನೆ ನೀಡಿದೆ.
ಪ್ರಜ್ಞಾ ಸಂಸ್ಥೆಯ ಸಂಸ್ಥಾಪಕಿ ಪ್ರೊ. ಹಿಲ್ಡಾ ರಾಯಪ್ಪನ್ ಮಾರ್ಗದರ್ಶನದಲ್ಲಿ ಪ್ರಜ್ಞಾ ಸಂಸ್ಥೆಯ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಹಾಗೂ ಪ್ರಜ್ಞಾಸಂಸ್ಥೆಯ ಕಾರ್ಯಕರ್ತರು ಬ್ಯಾಗ್ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೀರ್ಕೆರೆ , ಮುಚ್ಚೂರು, ಬಡಗ ಎಕ್ಕಾರು, ಮುಲ್ಕಿ ಸರ್ಕಾರಿ ಪ್ರೌಢಶಾಲೆ, ನಾರಾಯಣ ಸನಿಲ್ ಸರ್ಕಾರಿ ಪ್ರೌಢಶಾಲೆ, ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರು, ಕೆಪಿಎಸ್ ಕೆ ಅನುದಾನಿತ ಪ್ರೌಢಶಾಲೆ ಪಂಜಿನಡ್ಕ, ಶಾಂತರಾಮ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಕೆಮ್ರಾಲ್, ಮುಕ್ತಿ ಪ್ತಕಾಶ್ ಪ್ರೌಢಶಾಲೆ ನೀರುಡೆ, ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ, ಪೊಂಪೈ ಪ್ರೌಢಶಾಲೆ ಐಕಳ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಗುತ್ತಿದೆ.

