ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ವಠಾರದಲ್ಲಿ 6ನೇ ವರ್ಷದ ಆಟಿದ ಅಂಗಣೊ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಜಾನಪದೀಯ ಆಟಿ ಕಳೆಂಜನ ಕುಣಿತದ ಬಳಿಕ ನಡೆದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಶ್ರೀಕೃಷ್ಣ ಗುರೂಜಿ ಉದ್ಘಾಟಿಸಿದರು.
ಬಳಿಕ ತುಳು ಜಾನಪದಕ್ಕೆ ಸಂಬಂಧಿಸಿದ ನಾನಾ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಆಟಿ ತಿಂಗಳ ವಿಶೇಷ ತಿಂಡಿ, ತಿನಿಸುಗಳನ್ನೊಳಗೊಂಡ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ತುಳುನಾಡ ಪಾಡ್ದನ ಎಂಬ ವಿಶೇಷ ಕಾರ್ಯಕ್ರಮವು ಕಾಸರಗೋಡು ಕನ್ಯಪ್ಪಾಡಿ ಬೊಳಿಕೆ ಜಾನಪದ ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತು.
ಸಮಾರೋಪ ಸಮಾರಂಭವನ್ನು ಶ್ರೀ ಶಂಕರ ಸ್ವಾಮಿ ಕೃಪಾ ಕನ್ಯಪ್ಪಾಡಿ ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಮೊಕ್ತೇಸರ ಎಂ.ಕೆ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಆಶೀರ್ವಚನ ನೀಡಿದರು.
ಗುಡ್ಡಪ್ಪ ಸುವರ್ಣ ಪಂಜ, ಕಿರಣ್ ಉಳ್ಳಾಲ, ಶ್ರೀಧರ ಬಾಳೆಕಲ್ಲು, ಜಯರಾಮ ಕುಲಾಲ್ ಡೆಂಬಲ, ಸಂಕಪ್ಪ ಸುವರ್ಣ ಬಾಡೂರು, ನಳಿನಾಕ್ಷಿ ಕಾಮಜಾಲು ಉಪಸ್ಥಿತರಿದ್ದರು.
ಸ್ಪರ್ಧೆಯ ನಿರ್ಣಾಯಕರಾಗಿ ಐತ್ತಪ್ಪ ಬಾಳೆಕಲ್ಲು, ಸಂಜೀವ ಪಳನೀರು, ಮತ್ತಿತರರು ಸಹಕರಿಸಿದರು. ಸ್ಪರ್ಧಾ ವಿಜೇತರ ವಿವರಣೆಯನ್ನು ಮಹೇಶ್ ಕುಕ್ಕಾಜೆ ವಾಚಿಸಿದರು. ರವಿ ಎಸ್. ಎಂ ಕುಕ್ಕಾಜೆ ಸ್ವಾಗತಿಸಿದರು. ಲಿಖಿತ್ ಅಡ್ಕ ಮಾಣಿಲ ವಂದಿಸಿದರು. ಗಿರೀಶ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
