ಬದುಕಿನ ಅನಿವಾರ್ಯತೆಗಳಲ್ಲಿ ಅಸನ, ವಸನ, ವಸತಿಗಳಂತೆಯೇ ಶಿಕ್ಷಣವೂ ಆದ್ಯತೆಯ ಅಂಶ. ಜಗವೇ ಮೆಚ್ಚುವಂತಹ, ಆದರ್ಶ ಜೀವನ ಸಾಗಿಸಲು ಶಿಕ್ಷಣವೇ ಅಡಿಪಾಯ. ವ್ಯಕ್ತಿಯ ದೈನಂದಿನ ಬದುಕಿನಲ್ಲಿ ಶಿಕ್ಷಣವು ಹಾಸು ಹೊಕ್ಕಾಗಿದ್ದುಕೊಂಡು ಅವನನ್ನು ಉಸಿರಿರುವ ತನಕ ಬೆಳೆಸುತ್ತಿರಬೇಕು. ಆರೋಗ್ಯಶಾಲೀ ದೈಹಿಕ ಬೆಳವಣಿಗೆಗೆ ಆಹಾರ, ವ್ಯಾಯಾಮಗಳು ಅಗತ್ಯವಾಗಿರುವಂತೆ ಸ್ವಸ್ಥ ಮನಸ್ಸಿನ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣವು ದೊರೆಯಲೇ ಬೇಕು. ಒಬ್ಬ ವ್ಯಕ್ತಿಯ ಭವಿಷ್ಯವನ್ನು ಅವನು ಪಡೆದ ಮೌಲ್ಯಯುತ ಶಿಕ್ಷಣ ಮಾತ್ರವೇ ರೂಪಿಸುತ್ತದೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಶಿಕ್ಷಣವು ಮನೆ, ಶಾಲೆ ಮತ್ತು ಸಮಾಜದಿಂದ ಮಗುವಿಗೆ ಹರಿದು ಬರಬೇಕು.
ಫಸ್ಟ್ ರ್‍ಯಾಂಕ್, ಫಸ್ಟ್ ಪ್ರೈಝ್ ಎಂಬ ಕಲ್ಪನೆಗಳು ತೊಲಗಿ ನಮ್ಮ ಮಕ್ಕಳು ನಿಜವಾದ ಮಾನವರಾಗಬೇಕು. ಅವರು ತಮ್ಮಲ್ಲಿ ದೇವತ್ವವನ್ನು ತುಂಬಿ ಜನಪ್ರಿಯತೆಗೇರುವಂತಾಗಬೇಕು, ಕುವೆಂಪು ಆಶಿಸುವ ವಿಶ್ವ ಮಾನವರಾಗಿ ಮೆರೆಯಬೇಕು. ಸಮಾಜದ ಬಂಧುವಾಗಿ ನಮ್ಮ ಮಕ್ಕಳು ಈ ಸಮಾಜದಲ್ಲಿ ಅರಳಬೇಕೆಂಬ ಉತ್ಕಟಾಕಾಂಕ್ಷೆಯು ಪಾಲಕರಲ್ಲಿರಬೇಕು. ಮೊಬೈಲು, ದೂರದರ್ಶನಗಳಿಗೆ ಹಲವು ಘಂಟೆಗಳನ್ನು ನೀಡಲು ಸಿದ್ಧರಿರುವ ಹೆತ್ತವರು ತಮ್ಮ ಮಕ್ಕಳ ಮೌಲ್ಯವನ್ನು ಎತ್ತರಿಸುವ ಚಿಂತನೆಗೂ ದಿನದ ಬಹು ಪಾಲನ್ನು ವಿನಿಯೋಗಿಸಲೇ ಬೇಕು.
ಅರಿಷಡ್ವರ್ಗಗಳು ಹುಟ್ಟಿನಿಂದಲೇ ಮನುಷ್ಯರನ್ನು ಆಕ್ರಮಿಸಿರುವುದಿಲ್ಲ. ಪುಟ್ಟ ಮಗು ಸಂಪೂರ್ಣವಾದ ಮುಗ್ಧತೆ ಹೊಂದಿರುತ್ತದೆ. ಆದರೆ ಆ ಮಗುವೇ ಮುಂದೆ ಅರಿಷಡ್ವರ್ಗಗಳ ದಾಸನಾಗಿ ದುಗ್ಧತೆಗಳಿಗೆ ಕಾರಣನಾಗುತ್ತಾನೆ. ಇದಕ್ಕೆ ಕಾರಣ ಅವರಿಗೆ ದೊರೆತ ಆದರ್ಶ ಸಂಸ್ಕಾರಹೀನವಾದುದೆಂಬುದನ್ನು ಅಲ್ಲಗಳೆಯುವಂತಿಲ್ಲ. ಸರ್ವರ ಮಾನಸಿಕ ಸ್ಥಿತಿಯು ಅನ್ಯೋನ್ಯತೆಯ ಬದುಕಿಗೆ ತಾರಕವಾಗಬೇಕು. ಅದಕ್ಕಾಗಿಯೇ ಶಿಕ್ಷಣದ ಪರಿಕಲ್ಪನೆ ಪಾವಿತ್ರ್ಯವಂತ ಮನಸ್ಸುಗಳನ್ನು ಬೆಳೆಸುವ ಮಹಾನ್ ಆಶಯದಿಂದ ಪ್ರೇರಿತವಾಗಬೇಕು. ಶಿಕ್ಷಣ ತಜ್ಞರ ಚಿಂತನೆಗಳು ಮಾತ್ರವೇ ಈ ದಿಸೆಯಲ್ಲಿ ಸಾಗಿದರೆ ಸಾಲದು. ಶಿಕ್ಷಣ ವ್ಯವಸ್ಥೆಯ ಪ್ರತಿಯೊಬ್ಬ ಭಾಗೇದಾರಿಯಲ್ಲೂ ಈ ಬಗ್ಗೆ ತುಡಿತ ಮಿಡಿತಗಳಿರಬೇಕು.


ಊರ ಜಾತ್ರೆ, ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಊರವರೆಲ್ಲರೂ ಭಾಗವಹಿಸಬೇಕಾದುದು ಸಮಷ್ಠಿಯ ಹಿತಕ್ಕೆ ಕಾರಣವಾಗುತ್ತದೆ. ಆದರೆ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ಇಳಿಮುಖವಾಗಿದೆ ಎಂಬುದು ನಮ್ಮ ಸಾಮಾಜಿಕ ಮೌಲ್ಯ ನಶಿಸುತ್ತಿರುವುದರ ಸಂಕೇತ. ನೆರೆ ಮನೆಯಲ್ಲಾಗುವ ಮದುವೆ, ಮುಂಜಿಗಳಲ್ಲಿ ಅಭಿಮಾನದಿಂದ ಭಾಗವಹಿಸುವ, ಆರ್ಥಿಕವಾಗಿ ನೆರವಾಗುವ ಮೌಲ್ಯವು ಸಮುದಾಯ ಮತ್ತು ಸಮಾಜವನ್ನು ಬಲಿಷ್ಠಗೊಳಿಸುತ್ತದೆ. ಪಾಲಕರು ಇಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವಂತಹ ಶಿಕ್ಷಣ ಮತ್ತು ಆದರ್ಶಗಳನ್ನು ನೀಡುವುದು ಅತೀ ಅನಿವಾರ್ಯವಾಗಿದೆ.
ಮನೆಯೇ ಮೊದಲ ಪಾಠ ಶಾಲೆ. ಮೌಲ್ಯಗಳು ಮನೆ ಮಂದಿಯಿಂದ ಮಕ್ಕಳಿಗೆ ಪ್ರವಹಿಸಲ್ಪಡಬೇಕು. ಆದರ್ಶವಿಲ್ಲದ ಮಾರ್ಗದರ್ಶನಗಳಿಂದ ಮೌಲ್ಯಗಳು ಅರಳಲಾರವು. ಕರೆದ ಹಾಲಿಗೆ ನೀರು ಬೆರೆಸಿ ಮಾರುವ ತಂದೆ ತಾಯಿಗಳ ಲಾಭದ ಉದ್ದೇಶವು ವೀಕ್ಷಕ ಮಗುವನ್ನು ಮೋಸಗಾರನನ್ನಾಗಿ ವಿಕೃತಗೊಳಿಸುತ್ತದೆ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಶಿವಾಜಿ ಮಹಾರಾಜರು, ಮಹಾತ್ಮಾ ಗಾಂಧಿಜಿಯವರು ಹೀಗೇ ಸಹಸ್ರ ಸಹಸ್ರ ಮಹಾ ಚೇತನಗಳನ್ನು ಸಮಾಜಕ್ಕೆ ಕಾಣಿಕೆ ನೀಡುವಲ್ಲಿ ತಾಯಂದಿರ ಕೊಡುಗೆಗಳೇನೇಂಬುದನ್ನು ಓದಿದ್ದೇವೆ. ತಾಯಂದಿರು ಸಾಂಪ್ರದಾಯಿಕವಾಗಿ ಪಾಕಶಾಲೆಯಲ್ಲಿ ಶ್ರಮಿಸುತ್ತಾ ಮಕ್ಕಳಾದಿಯಾಗಿ ಮನೆಮಂದಿಗೆಲ್ಲ ಶುಚಿ ರುಚಿಯಾದ ಆಹಾರವನ್ನು ತಯಾರಿಸುತ್ತಾರೆ ಮತ್ತು ಉಣಿಸುತ್ತಾರೆ. ಅದೇ ಪಾಕಶಾಲೆ ಒಂದು ಪಾಠಶಾಲೆಯಾಗಿ ರೂಪಾಂತರವಾಗುವುದೂ ಅಗತ್ಯವಾಗಿದೆ. ಶುಚಿ ರುಚಿಯಾದ ಊಟವನ್ನುಣಿಸುವ ಸಂದರ್ಭದಲ್ಲಿ ಶುಚಿ ರುಚಿಯಾದ ವಿಚಾರಗಳನ್ನು, ಆಚಾರಗಳನ್ನು ತಿಳಿಸುವ ಪ್ರಾಜ್ಞತೆ ನಮ್ಮ ತಾಯಂದಿರಲ್ಲಿ ಜನ್ಮಿಸಿದರೆ ಅದುವೇ ಮೌಲ್ಯಯುತ ಶಿಕ್ಷಣವಾಗುತ್ತದೆ. ಆದರೆ ಇಂದಿನ ಧಾರಾವಾಹಿಗಳ ಆಕರ್ಷಣೆಗಳು, ಹಣ ಸಂಪಾದನೆ ಮಾಡುವ ಆಕಾಂಕ್ಷೆಗಳು, ಅಣು ಕುಟುಂಬದ ಬಯಕೆಗಳು ಈ ಸದಾಶಯವನ್ನು ಸಾಕಾರಗೊಳಿಸುವಲ್ಲಿ ಬೆಂಬಲವಾಗಿ ಕೂಡಿ ಬರಬಹುದೇ ಎಂಬ ಯಕ್ಷ ಪ್ರಶ್ನೆ ನಮಗೆದುರಾಗುತ್ತದೆಯಲ್ಲವೇ?
ನಮ್ಮ ಹಿರಿಯರು ಮನೆಗೆ ನೆಂಟರು ಅಥವಾ ಆಪ್ತರು ಬಂದಾಗ ಅವರಿಗೆ ವಿಶಿಷ್ಟವಾದ ಉಪಚಾರಗಳನ್ನು ಮಾಡುವ ಸಂಪ್ರದಾಯದವರು. ನೆಂಟರಿಷ್ಟರು ಬಂದಾಗ ಹಿಂದೆ ಇದ್ದಂತಹ ಸಂಭ್ರಮಿಸುವಿಕೆ ಇಂದೂ ಉಳಿದುಕೊಂಡಿದೆಯೇ? ಇಲ್ಲವೆಂದಾದರೆ ಯಾಕೆ ಉಳಿದುಕೊಂಡಿಲ್ಲ ಎಂಬ ಚಿಂತನೆಯನ್ನು ನಾವು ಮಾಡಿದ್ದೇವೆಯೇ? ನೆಂಟರು ಬರಲಿ ಯಾರೇ ಬರಲಿ, ಒಮ್ಮೆ ಕಳ್ಳ ನಗೆ ಬೀರುತ್ತೇವೆ. ಮತ್ತೆ ನಮ್ಮ ಕಾಯಕದಲ್ಲೇ ಮುಂದುವರಿಯುತ್ತೇವೆ. ಅವರೊಡನೆ ಸ್ನೇಹಶೀಲರಾಗಿ ಮಾತುಕತೆ ನಡೆಸುವುದಿಲ್ಲ. ಮನೆ ಮಂದಿಯಲ್ಲಿ ಕೆಲವರು ಮೊಬೈಲ್ ಹಿಡಿದು ಅದೇನೇನನ್ನೋ ಶ್ರದ್ಧೆಯಿಂದ ನೋಡುತ್ತಾ ಅಧೋಮುಖಿಗಳಾಗಿರುತ್ತಾರೆ. ಇನ್ನು ಕೆಲವರು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಅಂಧಮುಖಿಗಳಾಗಿರುತ್ತಾರೆ. ಮನೆಗೆ ಬಂದವರತ್ತ ಮುಖವನ್ನು ಮಾಡದೇ ಇದ್ದರೆ ಸಂಬಂಧಗಳು ಉಳಿಯುವುದಾಗಲೀ ಬೆಳೆಯುವುದಾಗಲೀ ಹೇಗೆ ಸಾಧ್ಯ? ಸಂಬಂಧಗಳನ್ನು ದಷ್ಟ ಪುಷ್ಟಗೊಳಿಸುವ ಮೌಲ್ಯಗಳನ್ನು ಬೆಳೆಸುವಲ್ಲಿ ನಮ್ಮ ಶಿಕ್ಷಣವಿಧಾನ ಸೋತಿರಬಹುದೇ? ಅಥವಾ ಸೋಲಬೇಕೇ?
ಬದುಕೆಂಬುದು ಬಯಕೆಗಳ ಸಾಗರ. ಆದರೆ ಎಲ್ಲ ಬಯಕೆಗಳನ್ನು ಅನುಭವಿಸುವಲ್ಲಿ ಶಿಸ್ತು ಅತೀ ಮುಖ್ಯ. ಶಿಸ್ತು ಎಂದೊಡನೆ ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂಬ ತಪ್ಪು ಕಲ್ಪನೆ ಅನೇಕರಿಗೆ. ಆದರೆ ಶಿಸ್ತಿಲ್ಲದೆ ಗುರಿ ಮುಟ್ಟಲು ಅಸಾಧ್ಯವಿದೆ. ಆಟ, ಊಟ, ಕೂಟ, ಓಟ, ನೋಟ ಎಲ್ಲದರಲ್ಲೂ ಶಿಸ್ತಿದ್ದಾಗ ಅಂದ. ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಮನ್ನಣೆ ಅಧಿಕವಿರುತ್ತದೆ. ಆಂತರಿಕ ಸೌಂದರ್ಯಕ್ಕೆ ಶಿಸ್ತೇ ಜೀವಾಳ. ಶಿಸ್ತು ಶಿಕ್ಷಣದ ಹಳಿಯಿಂದ ಹೊರಗಿರಬಾರದು. ಶಿಕ್ಷಣದೊಂದಿಗೆ ಮಿಳಿತವಾಗಿರಬೇಕು.
ಮಕ್ಕಳು ಮುಗ್ಧತೆಯನ್ನು ಅರಳಿಸುತ್ತಾ ಅವರಲ್ಲಿ ಹುದುಗಿರುವ ಧೀಮಂತಿಕೆಯನ್ನು ಶ್ರೀಮಂತಗೊಳಿಸುತ್ತಾ ಅವರ ಒಳನೋಟಗಳಿಗೆ ಹೊಳಪು ನೀಡಲು ಪ್ರತಿಯೊಬ್ಬರೂ ಸ್ವಾರ್ಥರಹಿತವಾಗಿ ಶ್ರಮಿಸಬೇಕು. ಯಾವುದೇ ಮಗುವೂ ಛೀ, ಥೂ ಗಳಿಗೊಳಗಾಗದಿರಲು ಅವರನ್ನು ಮೌಲ್ಯಯುತ ಶಿಕ್ಷಣದ ಜೊತೆಗೆ ನಡೆಸಲೇ ಬೇಕು. ಅವರಿಗೆ ಮೌಲ್ಯ ಶಿಕ್ಷಣವನ್ನು ನೀಡಲೇ ಬೇಕು. ಮಕ್ಕಳು ಮೌಲ್ಯವಂತರಾಗಿರಲು ಪಾಲಕರು ಜಾಗೃತರಾಗಿರಬೇಕೆಂಬುದೇ ಆಶಯ.
ರಮೇಶ ಎಂ ಬಾಯಾರು, ಎಂ.ಎ; ಬಿ.ಇಡಿ
ರಾಜ್ಯಪ್ರಶಸ್ತಿ ಪುರಸ್ಕೃತ ಅಧ್ಯಾಪಕರು
ಆಡಳಿತಾಧಿಕಾರಿ,
ಜನತಾ ಎಜುಕೇಷನಲ್ ಸೊಸೈಟಿ (ರಿ)
ಅಡ್ಯನಡ್ಕ-574260