Wednesday, July 2, 2025

ಹಳ್ಳಿ ಮನೆಗಳು-1

ಲೇಖನ : ರಮೇಶ ಎಂ ಬಾಯಾರು, ಎಂ.ಎ,ಬಿ.ಎಡ್
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಹಳ್ಳಿಗಳ ಜನಜೀವನ ಹಿಂದಿನಂತೆ ಇಂದಿಲ್ಲ. ನಗರದ ಎಲ್ಲ ವೈಭವಗಳ ಮೆರುಗು ಹಳ್ಳಿ ಮನೆಗಳಿಗೂ ಇಂದು ಪ್ರವೇಶಿಸಿ ಆಗಿದೆ. ಜನರ ಜೀವನ ಶೈಲಿಯಲ್ಲೂ ನಗರ ಜೀವನದ ಪರಿಮಳ ಹಾಸು ಹೊಕ್ಕಾಗಿದೆ. ಹಳ್ಳಿಯ ಮನೆಗಳ ಮತ್ತು ಹಳ್ಳಿಯ ಜನರ ಜೀವನದ ಸೊಗಡನ್ನು ನನ್ನ ಅನುಭವದ ಐವತ್ತು ವರ್ಷಗಳಾಚೆಗೆ ಒಯ್ದರೆ ನಾನೇ ದಂಗಾಗಿ ಬಿಡುತ್ತೇನೆ.
ಮುಸ್ಸಂಜೆಯಾದೊಡನೆ ಮನೆ ಮನೆಗಳಲ್ಲಿ ಚಿಮಿಣಿ ದೀಪ ಅಥವಾ ಲಾಟೀನು ಬೆಳಕು, ವಿಶೇಷ ಕಾರ್ಯಕ್ರಮಗಳಿದ್ದಾಗ ಪೆಟ್ರೋಮೇಕ್ಸ್‌ನ ಬೆಳಕು ಸಾಮಾನ್ಯ. ದಾರಿ ಹೋಕರು ಸೆಲ್ ಟಾರ್ಚ್ ಹಿಡಿದರೆ ಅವರು ಶ್ರೀಮಂತರೇ ಸರಿ. ಜನಸಾಮಾನ್ಯರು ಮತ್ತು ಕೂಲಿ ಕಾರ್ಮಿಕರು ಅವರವರ ಕೆಲಸ ಮುಗಿಸಿ ಅಂಗಡಿಗಳಿಗೆ ಹೋಗಿ ಬರುತ್ತಿದ್ದರು. ಬರುವಾಗ ಕತ್ತಲಾದರೆ, ತಿಂಗಳ ಬೆಳಕೂ ಇಲ್ಲದಿದ್ದರೆ, ದಾರಿ ಬದಿಯ ಮನೆಯ ಹತ್ತಿರ ನಿಂತು ಗಟ್ಟಿಯಾಗಿ ಹೇಳುತ್ತಿದ್ದರು.
ಓ ಅಣ್ಣೆರೆ, ಒಂತೆ ಮಡಲ್ ಕೊರುವರಾ? ಓ ಅಕ್ಕಾ ಎಂದೋ ಓ ಅಣ್ಣಾ ಎಂದೋ ಕರೆಯುತ್ತಿದ್ದರು. ಕೆಲವರು ಹೆಸರಿನೊಂದಿಗೆ ಅಣ್ಣ ಅಕ್ಕ ಸೇರಿಸಿಯೇ ಕರೆಯುತ್ತಿದ್ದರು. (ಮಡಲು ಎಂದರೆ ತೆಂಗಿನ ಗರಿ. ಒಂತೆ ಎಂದರೆ ಸ್ವಲ್ಪ. ಕೊರುವರಾ ಎಂದರೆ ಕೊಡುವಿರಾ ಎಂದರ್ಥ). ದಾರಿಹೋಕರನ್ನು ಮನೆಗೆ ಕರೆದು ಮಡಲಿನ ಸೂಡಿ ಮಾಡಿ ಬೆಂಕಿ ಹಚ್ಚಿ ಅವನನ್ನು ಕಳುಹಿಸುತ್ತಿದ್ದರು. ಕೆಲವರು ಸ್ವಲ್ಪವೇ ಎಂದು ಬಾಟ್ಲಿ ಮೂಸಿ ಬಂದಿದ್ದು ತಿಳಿದರೆ ಜಾಗರೂಕತೆಯಿಂದ ಹೋಗು ಎಂದು ಮಡಲ ಸೂಡಿ ಕೊಡುತ್ತಾ ಎಚ್ಚರಿಸುತ್ತಿದ್ದರು. ಅಂದಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಇಪ್ಪತ್ತೈದರಷ್ಟು ಸೂಡಿ ದಾಸ್ತಾನೇ ಇರುತ್ತಿತ್ತು. ಸೂಡಿ ಬೀಸಿ ಬರುವ ಸ್ಟೈಲು ನೋಡಿಯೇ ದಾರಿ ಪಕ್ಕದ ಮನೆಯವರು ಅಂದಾಜಿಸುತ್ತಿದ್ದರು- ಬರುತ್ತಿರುವ ವ್ಯಕ್ತಿ ……….ವನೇ ಎಂದು.


ದಾರಿಯಾದರೋ ಹೇಗಿರುತ್ತಿತ್ತು ಎಂದರೆ ಗದ್ದೆಯ ಹುಣಿ, ಅಕ್ಕ ಪಕ್ಕ ನೀರು ಹರಿವ ಕಣಿಗಳು, ತೋಡಿದ್ದಲ್ಲಿ ಅಡಿಕೆ ಮರದ ಸೀಳು ಹಾಕಿ ಮಾಡಿದ ಕಾಲ್ಸಂಕ, ಎರಡೂ ಕಡೆಯಿಂದ ಮುಳ್ಳಿನ ಬೇಲಿ ನಡುವೆ ಎರಡಡಿ ಅಗಲದ ದಾರಿ. ನಡೆದಾಡುವವರಿಗೆ ಹಗಲೇ ಕಷ್ಟ. ರಾತ್ರಿಯ ಸಮಯವಾದರೆ ಫಜೀತಿ ಕೇಳಬೇಕೆ? ಅಂಗಡಿಯಿಂದ ತಂದ ದಿನಸಿ ಮತ್ತು ತರಕಾರಿಯ ಸಂಚಿ, ಕೈಯಲ್ಲೊಂದು ಪದೇ ಪದೇ ಬೀಸಿ ಉರಿಸಬೇಕಾಗಿದ್ದ ಸೂಟೆ (ಮಡಲಸೂಡಿ). ದಾರಿಹೋಕನ ದುರವಸ್ಥೆಗೆ ಮಳೆಯೂ ಬಂದರೆ, ಸೂಟೆಯನ್ನು ಜೀವಂತ (ಉರಿಸುತ್ತಾ ಇರಿಸುವುದು) ಇಡಲು ಪಡುವ ಪೇಚಾಟ ಯಮಯಾತನೆ.

ಕೊಡೆಯಿಲ್ಲ, ಗೊರಬೆ ಹೊದೆದು ಮಳೆಯಲ್ಲಿ ಸಾಗಬೇಕು. ತೆಂಗಿನ ಮಡಲಿನಿಂದ ಮಾಡಿದ ಗೊರಬೆಯೊಳಗೆ ದೇಹ ಮತ್ತು ಸಾಮಗ್ರಿ ಅವಿತಿರಬೇಕು. ಇಲ್ಲದೇ ಹೋದರೆ ಚಂಡಿ ಪುಂಡಿ( ಪೂರ್ತಿ ಒದ್ದೆ). ಇನ್ನು ಸೂಟೆ ಗಾಳಿಯಲ್ಲಿ ಹಾರಾಡುತ್ತಿರಬೇಕು. ಅದೇ ಹೊತ್ತಿಗೆ ಹಳ್ಳಿ ಮನೆಯಿಂದ ಅಂಗಡಿಗೆಂದು ಹೊರಟು ಯಾರಾದರೂ ಬರುತ್ತಿದ್ದರೆ, ದಾರಿ ಮಧ್ಯೆ ಆಗುವ ಹೊಯ್ದಾಟ-ಸಿಂಗಲ್ ರೋಡಿನಲ್ಲಿ ಎರಡು ಬಸ್ಸುಗಳು ಆಚೀಚೆ ದಾಟುವ ಸನ್ನಿವೇಶಕ್ಕಿಂತ- ತಲೆನೋವಿನದು. ದಾರಿ ಮಧ್ಯೆ ಸೂಟೆ ನಂದಿದರೆ ದಾರಿ ಹೋಕ ಅಲ್ಲೇ ಕುಳಿತು ಇನ್ಯಾರು ಈ ದಾರಿಯಲ್ಲಿ ಬರಬಹುದಪ್ಪಾ ಎನ್ನುತ್ತಾ ಕುಕ್ಕರ ಕುಳ್ಳಿರಬೇಕು. ಯಾರೂ ಬರದಿದ್ದರೆ ಬೆಳಗ್ಗಿನ ತನಕ ಆತ ಆ ದಾರಿಯಲ್ಲೇ ಸುಖವಾಗಿ ವಿಶ್ರಾಂತಿ ಪಡೆಯಬೇಕು.
ರಾತ್ರಿ ಬಹಳವಾಗಿದೆ. ಕೆಲಸಕ್ಕೆ ಹೋದ ಗಂಡ ಇನ್ನೂ ಬಂದಿಲ್ಲ. ಏಕೆ ಬಂದಿಲ್ಲ? ಯಾರನ್ನು ಕೇಳುವುದು? ಮನೆಯ ಯಜಮಾನ ಅಥವಾ ಕೆಲಸಕ್ಕೆ ಹೋಗಿರುವ ಯುವಕ ಮನೆ ಸೇರುವ ಸಮಯ ದಾಟಿದೊಡನೆ, ಮನೆಯವರು ದಾರಿ ಬದಿಗೆ ಬರುತ್ತಾರೆ. ದಾರಿಯಲ್ಲಿ ಯಾರೇ ಬರಲಿ ಅವರಲ್ಲಿ ಕೇಳುತ್ತಾರೆ, ಎನ್ನ ಮಗೆ ತೂಯರೆ ತಿಕ್ಕಿಯೆನಾ?; ಇಲ್ಲಾಲ್ದಾರ್ ಬೈದಿಜೆರ್, ಈರ್ ಓಲಾಂಡಲಾ ತೂಯರಾ ಮಿನಿ ಎಂದು. (ಮಗ ಇನ್ನೂ ಬಂದಿಲ್ಲ ನಿಮಗೆ ಸಿಕ್ಕಿದನೋ? ಎಂದು ತಾಯಿ ಕೇಳಿದರೆ, ಮನೆಯವರು ಬಂದಿಲ್ಲ. ನಿಮಗೆ ಕಾಣ ಸಿಕ್ಕಿದರೇ ಎಂದು ಹೆಂಡತಿಯಾದವಳು ಕೇಳುತ್ತಿದ್ದರು). ಕೆಲವರು ಇಲ್ಲ ಎಂದರೆ ಇನ್ನೂ ಕೆಲವರು ಅಂಗಡಿಯಲ್ಲಿದ್ದಾರೆ, ಹೋಟೆಲಿನಲ್ಲಿದ್ದಾರೆ ಎಂದಾಗ ದಾರಿ ಕಾಯುವವರು, ಅಬ್ಬ ಎಂದು ನಿರಾಳರಾಗುತ್ತಿದ್ದರು. ಕೆಲವೊಮ್ಮೆ, ಆತ ಕೆಂಪು ಬೋರ್ಡಿಗೆ (ಗಡಂಗ್) ಹೋದ ಎಂದು ಹೇಳಿ ಬಿಟ್ಟರೆ ಮತ್ತೆ ತಳ ಮಳ ಮನೆಯವರಿಗೆ. ದಾರಿ ನೋಡುವ ಕೆಲಸ ಎಷ್ಟು ಹೊತ್ತಿರುತ್ತದೆಂದರೆ, ಸಾಮಾನ್ಯವಾಗಿ ಆಯಾ ಹಳ್ಳಿಗಳಲ್ಲಿ ಆ ದಾರಿಯಲ್ಲಿ ಕೊನೆಗೆ ಬರುವವರು ಯಾರು ಎಂಬ ಪ್ರತೀತಿ ಇರುತ್ತದೆ. (ಕೊನೆಯ ಬಸ್ ಕಾದ ಹಾಗೆ). ಆತ ಹೋದ ನಂತರ ದಾರಿ ಕಾಯುವುದು ಬಿಟ್ಟು ಮನೆಗೆ ಹೋಗಿ ಚಿಲಕ ಹಾಕುತ್ತಿದ್ದರು)

……………… ಮುಂದುವರಿಯುತ್ತದೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...