Friday, July 4, 2025

ಶಿಕ್ಷಕರ ಬಗ್ಗೆ ತಾಯಂದಿರು ಏನು ಹೇಳುತ್ತಾರೆ? 

ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ

ವಿದ್ಯಾರ್ಥಿಗಳ ತಾಯಂದಿರಿಗೆ ಶಿಕ್ಷಕರ ಸಮಸ್ಯೆಗಳ ಸರಿಯಾದ ಆರಿವಿದೆ. ಶಾಲೆಗೆ ಒಂದು ದಿನದ ರಜೆ ಇದೆಯೆನ್ನುವಾಗ ಬಹುತೇಕ ತಾಯಂದಿರಿಗೆ ತಲೆ ನೋವು ಆರಂಭವಾಗುವುದಿದೆ. ಆದರೆ ಇದನ್ನು ಹೊರಗೆಡಹುವುದಿಲ್ಲ. ಇನ್ನು ಹಲವು ದಿನಗಳ ಕಾಲ ರಜೆಯಿದೆಯೆಂದಾದರೆ ಅವರ ಬಾಯಿಯಿಂದ ಬರುವ ಮೊದಲ ಉದ್ಗಾರ,” ಹೇಗಪ್ಪ ಇಷ್ಟು ದಿನಗಳನ್ನು ಸಂಭಾಳಿಸುವುದು?” ಇದರ ಅರ್ಥ ಮಕ್ಕಳ ಬಗ್ಗೆ ಕೀಳಭಿಪ್ರಾಯವಲ್ಲ. ಅವರ ಎಲ್ಲ ಚಲನವಲನಗಳ ಮೇಲ್ತನಿಕೆ ಮಾಡುತ್ತಿರಬೇಕು. ಅವರ ಬೇಕು ಬೇಡಗಳನ್ನು ಕಾಲ ಕಾಲಕ್ಕೆ ಪೂರೈಸಬೇಕು. ಒಬ್ಬರಿಗಿಂತ ಹೆಚ್ಚು ಜನರಿದ್ದಲ್ಲಿ ಅವರೊಳಗಿನ ಕಲಹ ಕೋಲಾಹಲಗಳನ್ನು ನಿಯಂತ್ರಿಸಬೇಕು. ಒಬ್ಬರಿಗಿಂತ ಇಬ್ಬರಿದ್ದರೆ ಮೇಲು ಎಂಬ ಉಕ್ತಿಯಿದೆಯಾದರೂ ಮಕ್ಕಳ ಮಟ್ಟಿಗೆ ಎಲ್ಲಾ ಕಡೆಗೂ ಇದನ್ನು ಅನ್ವಯಿಸುವಂತಿಲ್ಲ. ಹೆಚ್ಚು ಸಾಹಸಿಕ ಕೆಲಸಗಳಿಗೆ ಕೈ ಹಾಕಿ ಅಪಾಯ ತಂದೊಡ್ಡುವ ಜಾಣ ಮಕ್ಕಳೂ ಇದ್ದಾರೆ. ಜೊತೆಗೆ ರಜಾ ಕಾಲಕ್ಕೆ ಕೊಟ್ಟ ಮನೆಗೆಲಸಗಳನ್ನು ಪ್ರತೀ ದಿನ ಮಾಡಿಸ ಬೇಕು. ದಿನಾ ಶಾಲೆಗೆ ಹೋಗುವಾಗ ಮಾಡಿಸುವುದು ಸುಲಭ. ರಜಾಕಾಲದಲ್ಲಿ ಮಾಡಿಸುವುದು ಕಷ್ಟ. ಯಾಕೆಂದರೆ ರಜೆ ತುಂಬಾ ದಿನಗಳಿವೆ. ರಜೆ ಮುಗಿಯುವುದರೊಳಗೆ ಮಾಡಿದರಾಯಿತು ಎಂದು ಮಕ್ಕಳೇ ತೀರ್ಪು ನೀಡುತ್ತಾರೆ. ಒಂದೊಮ್ಮೆ ಒಪ್ಪದಿದ್ದರೆ ಮಕ್ಕಳ ಸತ್ಯಾಗ್ರಹ, ಅಳು ಎಲ್ಲವನ್ನೂ ಎದುರಿಸಬೇಕಾಗುತ್ತದೆ.

ಕಲಿಕೆಯ ನಿರಂತರತೆ ಉಳಿಯಲೆಂದು ವಿಷಯ ಬೋಧಕರು ರಜೆ ಮುಗಿಸಿ ಬರುತ್ತಿದ್ದಂತೆ ಕೆಲವು ನಿರ್ದಿಷ್ಟ ಅಂಶಗಳನ್ನು ಕಲಿತು ಮನವರಿಕೆ ಮಾಡಿಕೊಂಡು ಬರಲು, ಅಥವಾ ವಿಜ್ಞಾನ, ಗಣಿತ ಸೂತ್ರಗಳ ಕಂಠಪಾಠ, ಮಗ್ಗಿ ಕಂಠ ಪಾಠ, ಭಾಷಾ ಪಾಠಗಳ ಪದ್ಯಗಳ ಕಂಠ ಪಾಠ, ಚಿತ್ರಾಭ್ಯಾಸ, ರಜೆಗೆ ಮೊದಲು ಮುಗಿಸಿದ ಪರೀಕ್ಷೆಯ ಪ್ರಶ್ನಾ ಪತ್ರಿಕೆಗೆ ಪಠ್ಯ ನೋಡಿ ಉತ್ತರ ಬರೆಯುವುದು, ಭೂಪಟ ಅಧ್ಯಯನ ಹೀಗೆ ಹಲವಾರು ಕೆಲಸಗಳನ್ನು ಮಾಡಲು ಸೂಚಿಸಿರುತ್ತಾರೆ. ಈ ಕೆಲಸಗಳಿಗೆ ವೇಳಾ ಪಟ್ಟಿ ಮತ್ತು ಸಮಯದ ಹಂಚಿಕೆ ಮಾಡಲು ಹಾಗೂ ದಿನಾ ಸ್ವಲ್ಪ ಸ್ವಲ್ಪವೇ ಮಾಡಲು ತಿಳಿಸಿರುತ್ತಾರೆ. ಆದರೆ ಮಕ್ಕಳು ರಜೆಯ ಹಿಂದಿನ ದಿನ ಮನೆಯೊಳಗೆ ಬಂದು ಶಾಲಾ ಸಂಚಿ ಇಟ್ಟು ಬಿಟ್ಟರೆ ಮತ್ತೆ ಆ ಕಡೆಗೆ ತಲೆಯೆತ್ತಿಯೂ ನೋಡುವುದಿಲ್ಲ. ಇದೇ ತಾಯಂದಿರ ದೊಡ್ಡ ತಲೆನೋವು. ದಿನಾ ಶಾಲೆಯಿದ್ದರೆ ಸಂಜೆ ಮನೆಗೆ ಬಂದೊಡನೆ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳೇ ಸ್ವಯಂ ತೊಡಗುತ್ತಾರೆ. ಮನೆಗೆಲಸ ಮಾಡಿಸುವ ತಲೆ ನೋವು ಬಹಳ ಕಡಿಮೆ, ಕೆಲವರಿಗೆ ನೆನಪಿಸಬೇಕಾದೀತು ಅಷ್ಟೆ.

ಅಕ್ಕಪಕ್ಕದ ಮನೆಯೊಡತಿಯರು ಮಾತನಾಡುತ್ತಾ, “ನಮಗೆ ಇಬ್ಬರನ್ನು ನಿಭಾಯಿಸಲು ಕಷ್ಟ ಆಗುತ್ತಿದೆ. ಟೀಚರ್ಸ್ ಅಷ್ಟು ಮಕ್ಕಳನ್ನು ಸಂಭಾಳಿಸುವುದೆಂದರೆ ಎಷ್ಟು ಕಷ್ಟ ಅಲ್ವಾ? ಮಕ್ಕಳ ಗಲಾಟೆ ನಿಯಂತ್ರಿಸಿ ತರಗತಿಯಲ್ಲಿ ಶಿಸ್ತು ಮೂಡಿಸ ಬೇಕು, ಎಲ್ಲ ಮಕ್ಕಳ ಗಮನವನ್ನು ತನ್ನ ಕಡೆಗೆ ಸೆಳೆಯಬೇಕು, ಹೇಳಿದ ವಿಷಯ ಅರ್ಥ ಆಗದವರಿಗೆ ಪುನಹ ವಿವರಿಸಬೇಕು, ಅರ್ಥ ಆದ ಮಕ್ಕಳು ಮರುವಿವರಣೆಯಾಗುತ್ತಿರುವಾಗ ಮಾಡುವ ಪುಂಡಾಟಿಕೆಯನ್ನೂ ನಿಯಂತ್ರಿಸಬೇಕು. ನಮ್ಮ ಮಕ್ಕಳು ಮಾಡುವ ಪೀಕಲಾಟ ನಮಗೆ ಚಿಟ್ಟು ಹಿಡಿಸುತ್ತದೆ, ಅವರಿಂದ ಒಂದು ಕೆಲಸ ಮಾಡಿಸಲಿಕ್ಕಾಗುವುದಿಲ್ಲ. ನಾವು ಮಾತು ತೆಗೆದೊಡನೆ ನಮ್ಮ ಮಕ್ಕಳು ನಮ್ಮ ಬಾಯಿಗೇ ಬೀಗ ಹಾಕುತ್ತಾರೆ. ಪಾಪ ಮಾಸ್ಟ್ರುಗಳಿಗೆಷ್ಟು ಕಷ್ಟ. ಅವರಲ್ಲಿ ಅದೆಂತಹ ತಾಳ್ಮೆಯನ್ನು ಭಗವಂತ ಮೂಟೆ ಕಟ್ಟಿರಿಸಿದ್ದಾನೋ ಏನೋ? ಅವರು ಗಲಾಟೆ ಮಾಡುವಾಗ ನನಗೆ ಕೋಪ ಬಂದು ಏನಾದರೂ ಮಾಡಿಬಿಡೋಣ ಅನ್ನಿಸುತ್ತದೆ. … ” ಹೀಗೆ ಅವರ ಮಾತುಕತೆ ಸಾಗುತ್ತದೆ.

ನಿಜವಾಗಿಯೂ ತಾಯಂದಿರ ಊಹನೆ ತಪ್ಪಲ್ಲ. ಶಿಕ್ಷಕ ಸಹನೆಯ ಸಾಕಾರ ಮೂರ್ತಿ ಆಗಿರಲೇ ಬೇಕು. ಆತ ಸರಕಾರ, ಇಲಾಖೆ, ಸಂಸ್ಥೆಯ ಮುಖ್ಯಸ್ಥರು, ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪಾಲಕ ಶಿಕ್ಷಕ ಪರಿಷತ್ತು, ಹಿರಿಯ ವಿದ್ಯಾರ್ಥಿ ಸಂಘ, ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು, ರಾಜಕೀಯ ಒತ್ತಡ, ಕೆಲಸಗಳ ಒತ್ತಡ, ಕೌಟುಂಬಿಕ ಅಗತ್ಯಗಳ ಮುಂತಾದ ಅನೇಕ ವ್ಯವಸ್ಥೆಗಳಿಗೆ ನೋವಾಗದಂತೆ ವ್ಯವಹರಿಸಲು, ತನ್ನ ಕರ್ತವ್ಯ ನಿಭಾಯಿಸಲು ಸಾಕ್ಷಾತ್ ಗೌತಮ ಬುದ್ಧನೆ ಆಗಬೇಕು. ಆದರೂ ತಾಯಂದಿರ ಭರವಸೆ, ನಿರೀಕ್ಷೆಗಳು, ಆಶಯಗಳು ಹುಸಿಯಾಗಲೇ ಬಾರದು, ಬೋಧಕರಿಗೆ ಮಕ್ಕಳ ಕಲಿಕೆಯೇ ಪ್ರಧಾನ ಭೂಮಿಕೆ. ಈ ಜವಾಬ್ದಾರಿಯು ಭಂಗವಾಗದಂತೆ ತಾಯಂದಿರ ಆಸೆ ಆಕಾಂಕ್ಷೆಗಳನ್ನು ಸರಿದೂಗಿಸುವ ದಿವ್ಯ ಶಕ್ತಿಯನ್ನು ಹಾರೈಸೋಣ.

More from the blog

School holiday:ಬಂಟ್ವಾಳ ತಾಲೂಕಿನ ಶಾಲಾ,ಕಾಲೇಜುಗಳಿಗೆ ರಜೆ

ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಿನಾಂಕ 04.07.2025 ರಂದು ರಜೆ ಘೋಷಿಸಲಾಗಿದೆ...

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಸ್ವಯಂ ಸೇವಕರ ತರಬೇತಿ ಕಾರ್ಯಗಾರ..

ವಿಟ್ಲ : ಕರ್ನಾಟಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್ ಕೆ ಡಿ ಆರ್ ಡಿ ಪಿ ಯ 10460 ಮಂದಿ ಶೌರ್ಯ ಸ್ವಯಂಸೇವಕರು ಎನ್ ಡಿ ಆರ್ ಎಫ್ ತಂಡದ ಕಾರ್ಯದಲ್ಲಿ ಬೆಂಬಲವನ್ನು...

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ..

ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪೇಟೆಯಲ್ಲಿ ಕೆಲವು ದಿನಗಳಿಂದ ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಮಂಗಳವಾರ ಬೆಳಗ್ಗೆ ಏಕಾಏಕಿ ಅಟೋರಿಕ್ಷಾಗಳು ರಸ್ತೆಯಲ್ಲಿ...