Friday, January 30, 2026

ನಿವೃತ್ತಿ ಮತ್ತು ವಿದಾಯ: ಗೊಂದಲದೊಳಗೆ…

ಲೇ: ರಮೇಶ ಎಂ ಬಾಯಾರು ಎಂ.ಎ, ಬಿಎಡ್,
ನಿವೃತ್ತ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರು

ನಿವೃತ್ತಿ ಅನ್ನುವುದಕ್ಕಿಂತಲೂ ರಿಟಯರ್ ಎಂದರೆ ಎಲ್ಲರಿಗೂ ಸುಲಭ ಗ್ರಹ್ಯವಾಗುತ್ತದೆ. ಗಾಡಿಗೆ ಮಾಡುವ retyre ಮತ್ತು ಸರಕಾರಿ ಉದ್ಯೋಗಗಳಲ್ಲಿ ಆಗುವ retire ಇವೆರಡದರ ಉಚ್ಚಾರ ಒಂದೇ; ಆದರೆ ಬರವಣಿಗೆಯ ವಿನ್ಯಾಸದಲ್ಲಿ ಪುಟ್ಟ ವ್ಯತ್ಯಾಸ. ಸೇವಾರ್ಹ ಪ್ರಾಯ ಮೀರಿದವರಿಗೆ ಸರಕಾರವು ನೀಡುವ ನಿವೃತ್ತಿ ಮತ್ತು ನಿವೃತ್ತರಿಗೆ ಸಮಾಜ ನೀಡುವ ವಿದಾಯ ಈ ಎರಡೂ ಪದಗಳಲ್ಲಿ ಅನೇಕರಲ್ಲಿ ಬಹಳ ಗೊಂದಲ ಇದೆ. ನಿವೃತ್ತಿ ಎಂದರೇನು? ನಿವೃತ್ತಿಯ ನಂತರ ವೃತ್ತಿ ಇಲ್ಲವೇ? ವಿದಾಯ ಎಂದರೆ ಕಳುಹಿಸುವುದು ಎಂದೇ ಅರ್ಥ. ಆಂಗ್ಲ ಭಾಷೆಯಲ್ಲಿ ಬಳಸುವ ಸೆಂಡ್ ಓಫೆಂದರೆ ದೂರಕ್ಕೆ ಕಳುಹಿಸುವುದೆಂದಲ್ಲವೇ ಅರ್ಥ? ಹಾಗಾದರೆ ಆತ ಮತ್ತೆ ಆ ಕಛೇರಿಗೆ ಅಥವಾ ಊರಿಗೆ ಬರಬಾರದೇ? ಬಸವಣ್ಣನವರು ಹೇಳುವಂತೆ, ಕಾಯಕವೇ ಕೈಲಾಸ ಎನ್ನುವುದಾದರೆ ನಿವೃತ್ತಿಯ ನಂತರದ ಜೀವನದಲ್ಲಿ ಈ ಮಾತು ಹೇಗೆ ಅನ್ವಯವಾಗುತ್ತದೆ?
ಒಂದಲ್ಲ ಒಂದು ಕೆಲಸಗಳಲ್ಲಿ ನಿವೃತ್ತರು ಸೇವೆ ಮಾಡುತ್ತಾರೆ. ಕೃಷಿ, ಕಲೆ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ರಾಜಕೀಯ ಹೀಗೆ ನಾನಾ ವಿಭಾಗಗಳಲ್ಲಿ ಸೇವೆ ಮಾಡುತ್ತಾರೆ. ಕೆಲವರು ವಯೋನಿವೃತ್ತಿ ಮತ್ತು ವಿದಾಯ ಪಡೆದ ನಂತರ ಹೊಸದಾದ ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಯಾವುದರಲ್ಲೂ ತಮ್ಮನ್ನು ತೊಡಗಿಸದೇ ಇರಲೂಬಹುದು. ನಿವೃತ್ತಿ ಹಂತದಲ್ಲಿ ಸರಕಾರಕ್ಕೆ ಪಿಂಚಣಿಗಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಅದರಲ್ಲಿ ನಿವೃತ್ತಿಯ ನಂತರದಲ್ಲಿ ನಾನು ಯಾವುದೇ ಉದ್ಯೋಗದಲ್ಲಿರುವುದಿಲ್ಲ ಎಂಬ ಮುಚ್ಚಳಿಕೆಯೂ ಇದೆ. ಹಾಗಾದರೆ ನಿವೃತ್ತಿಯ ನಂತರದಲ್ಲಿ ವಿಶ್ರಾಂತಿಯನ್ನೇ ಆಯ್ದುಕೊಂಡವರು ಅನುಸರಿಸುವ ನಿಜವಾದ ನಿವೃತ್ತಿಯೇ ಸರಿಯೆನಿಸುವುದಲ್ಲವೇ? ಮಾನವನಿಗೆ ಜೀವನದಿಂದ ನಿವೃತ್ತಿ ಆಥವಾ ವಿದಾಯವೇ ಹೊರತು ಬದುಕಿದ್ದಾಗಲೇ ನಿವೃತ್ತಿ ಅಥವಾ ವಿದಾಯ ಎಂಬ ಆಡಳಿತ ಪರಿಭಾಷೆಯ ಸಂಸ್ಕಾರಗಳು ಬೇಕೇ? ನಿವೃತ್ತಿಯು ಸಾವಿನಲ್ಲೇ ಒದಗುವುದಲ್ಲದೇ ಮೊದಲಲ್ಲ. ಹಾಗಿರುವಾಗ ವೈಭವದ ’send off’ ಯಾಕೆ? ನಿವೃತ್ತರೆನಿಸಿಕೊಳ್ಳುವವರ ಮನಸ್ಸಿಗೆ ’ವಿದಾಯ’ವು ಹಿತೆನಿಸಬಹುದೇ? ಈ ಸಂದರ್ಭದಲ್ಲಿ ಹಲವರು ಸುರಿಸುವ ಕಂಬನಿ, ಗದ್ಗದಿತ ಕಂಠದ ಮಾತುಗಳು ದುಃಖವನ್ನು ತರಲಾರದೇ?
ವಿದಾಯ ಎನ್ನುವುದರ ಬದಲು, ಗೌರವಾರ್ಪಣೆ ಅಥವಾ ಕೃತಜ್ಞತಾರ್ಪಣೆ ಎಂಬ ಪದ ಬಳಕೆ ಸೂಕ್ತವಾಗಬಹುದೇ? ಸರಕಾರ ನೀಯೋಜಿಸಿದ ಉದ್ಯೋಗದಿಂದ ನಿವೃತ್ತರಾದರೂ ಸಮಾಜದ ವಿವಿಧ ಸೇವೆಗಳಲ್ಲಿ ಮುಂದುವರಿಯುವುದೂ ವೃತ್ತಿ ಅಥವಾ ಪ್ರವೃತ್ತಿಯಲ್ಲವೇ? ಸಂಬಳ ಪಡೆಯುವ ವೃತ್ತಿ ಮಾತ್ರ ವೃತ್ತಿಯೇ? ಗೌರವ ಸೇವೆಗಳು ವೃತ್ತಿಯಲ್ಲವೇ? ಖಾಸಗೀ ವಲಯದಲ್ಲಿ ನಿವೃತ್ತಿಯೆಂಬುದೇ ಇಲ್ಲ. ರೈತನಾದವನು, ವಕೀಲನಾದವನು, ರಾಜಕೀಯ ಸೇವಾಕರ್ತನು, ಪತ್ರಕರ್ತನು ಹೀಗೆ ಅನೇಕ ವೃತ್ತಿಗಳಲ್ಲಿ ಸಾಮಾಜಿಕವಾಗಿ ನಿವೃತ್ತಿಯೇ ಇಲ್ಲ. ತನ್ನ ದೈಹಿಕ ಸಾಮರ್ಥ್ಯವನ್ನು ಆಧರಿಸಿ ಆತ ಬದುಕಿನಿಂದ ನಿವೃತ್ತನಾಗುವ ತನಕ ಸೇವೆ ಮಾಡುತ್ತಾನೆ. ಶಿಕ್ಷಣ ಇಲಾಖೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು ರಾಜ್ಯದಾದ್ಯಂತ ಸಂಪನ್ಮೂಲ ವ್ಯಕ್ತಿಯಾಗಿ ಅಥವಾ ಶಿಕ್ಷಣದ ಬಗ್ಗೆ ಗೋಷ್ಟಿ ನಡೆಸಲು ಅವಕಾಶವಿದ್ದು ಇದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತ ಪಾಸ್‌ಗಳನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಕೊಡುವ ವ್ಯವಸ್ಥೆಯಿದೆ. ಹಾಗಿರುವಾಗ ಈ ನಿವೃತ್ತರಿಗೆ ನೀಡಿದ ನಿವೃತ್ತಿ ಮತ್ತು ವಿದಾಯ ಎಂಬ ಸಂಸ್ಕಾರಗಳು ಅಪ್ರಸ್ತುತ ಅಲ್ಲವೇ? ಸರಕಾರದ ಉದ್ಯೋಗದಿಂದ ವಯೋಮಾನ ಆಧರಿಸಿ ಹೊರ ಬರುವ ವ್ಯಕ್ತಿಯು, ಪಿಂಚಣಿದಾರನೇ ಹೊರತು ನಿವೃತ್ತನಲ್ಲ. ಹಾಗಾಗಿ ನಿವೃತ್ತ ತಹಶೀಲ್ದಾರ್ ಅನ್ನುವುದಕ್ಕಿಂತ ಪಿಂಚಣಿದಾರ ತಹಶೀಲ್ದಾರ್, ಪಿಂಚಣಿದಾರ ಶಿಕ್ಷಕ, ಪಿಂಚಣಿದಾರ ದ್ವಿತೀಯ ದರ್ಜೆಯ ನೌಕರ ಎಂದು ಹೇಳಬಹುದೇ?
ವಯಸ್ಸು ದೌರ್ಬಲ್ಯವೋ ಅಥವಾ ಅನಾರೋಗ್ಯ ದೌರ್ಬಲ್ಯವೋ ಎಂಬ ಪ್ರಶ್ನೆಯೂ ಇಲ್ಲಿ ಮೂಡುವುದು ಸಹಜ. ಎಷ್ಟೋ ಮಂದಿ ವಿವಿಧ ಕಾಯಿಲೆಗಳಿಂದ ಪೀಡನೆ ಅನುಭವಿಸುವವರು ಸರಕಾರದ ಉದ್ಯೋಗದಲ್ಲಿ ಪಿಂಚಣಿ ಪಡೆಯುವ ವಯೋಮಾನ ಆಗಿಲ್ಲ ಎಂದು ಸೇವೆಯಲ್ಲೇ ಇದ್ದಾರೆ. ಮುಪ್ಪಲ್ಲದೇ ಇದ್ದು ಅನಾರೋಗ್ಯದಿಂದ ಇರುವವರು ಸೇವೆ ಮಾಡುವ ಅರ್ಹತಾ ಪ್ರಾಯರು ಎಂದು ಪರಿಗಣಿಸುವುದೂ ಸಮಂಜಸವಾಗುವುದಿಲ್ಲವಲ್ಲ? ಸಾಮಾನ್ಯವಾಗಿ ವಯಸ್ಸು ಎನ್ನುವುದು ಪಕ್ವತೆಯ ಸಂಕೇತ. ಕಾಯಿಲೆಯುಳ್ಳವರಿಗಿಂತ ಪಕ್ವತೆಯುಳ್ಳವರೇ ಸರಕಾರದ ಸೇವೆಯಲ್ಲಿ ವಯೋ ನಿವೃತ್ತರಾಗದೇ ಮುಂದುವರಿಯಲು ಅವಕಾಶ ನೀಡಬಾರದೇಕೆ? ವಿದಾಯ ಬೇಡ ಸೇವೆ ಮಾಡುತ್ತೇವೆ ಎನ್ನುವ ಉತ್ಸಾಹೀ ನೌಕರರೂ ಇದ್ದಾರೆ. ನಿವೃತ್ತಿ ಎಂಬ ಪದ ಬಳಕೆ ಸರಿಯಲ್ಲ. ಇದು ಸೋಮಾರಿಗಳು ಬಳಸುವ ಪದ ಎಂದು ಜಾನಪದ ವಿದ್ವಾಂಸ ಹಾಗೂ ಪ್ರೊಫೆಸರ್ ಶ್ರೀ ತುಕಾರಾಮ ಪೂಜಾರಿಯವರು ಹೇಳುತ್ತಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾದರೂ ಸೂಕ್ತ ಹೇಳಿಕೆಯೆಂದೇ ಅನಿಸುವುದಲ್ಲವೇ?
ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯನವರ ವ್ಯಾಖ್ಯಾನ ಆಧರಿಸಿ ಪ್ರೌಢ ಶಾಲಾ ಕನ್ನಡ ಭಾಷಾ ಅಧ್ಯಾಪಕ ಹಾಗೂ ಸಾಹಿತಿ ಶ್ರೀ ಶಿವಕುಮಾರ್ ಸಾಯ ಇವರು ವೃತ್ತಿ, ನಿವೃತ್ತಿ, ಪ್ರವೃತ್ತಿ ಇವು ಮೂರೂ ಸಂಸ್ಕೃತದ ನಾಮ ಪದಗಳು. ವೃತ್ತಿಗೆ ವೃತ್ತ, ಚಕ್ರದ ಪರಿಧಿ ಅಥವಾ ಉದ್ಯೋಗ ಎಂಬ ಅರ್ಥವಿದೆ ಎನ್ನುವರು. ದಾಸ ಸಾಹಿತ್ಯದಲ್ಲೂ ವೃತ್ತಿಗೆ ಸುತ್ತುವಿಕೆ ಎಂಬ ಅರ್ಥವಿದೆ. ವೃತ್ತವೆಂಬ ಭಾವವೇ ಇಲ್ಲಿಯೂ ಇದೆ. ಪ್ರವೃತ್ತಿಯೆಂದರೆ ಐಹಿಕ ಜೀವನದಲ್ಲಿ ತೋರುವ ಆಸಕ್ತಿ, ಉಪಕ್ರಮ, ವ್ಯವಾಹಾರ, ಮನಸ್ಸಿನ ಒಲವು ಎಂಬ ಅರ್ಥಗಳನ್ನು ಹೇಳುತ್ತಾರೆ. ನಿವೃತ್ತಿ ಎಂದರೆ ಲೌಕಿಕ ವ್ಯವಹಾರದಲ್ಲಿ ಅನಾಸಕ್ತಿ, ಮುಕ್ತಿ, ಪರಮಸುಖ, ಬಿಡುಗಡೆ, ವಿಶ್ರಾಂತಿ ಎಂಬ ಅರ್ಥಗಳಿವೆ. ಸರಕಾರೀ ನಿವೃತ್ತರಿಗೆ ಈ ಅರ್ಥಗಳನ್ನು ಹೇಗೆ ಅನ್ವಯಿಸಬಹುದು ಎಂಬ ಸಂದೇಹವೇಳುತ್ತದೆ. ಆದುದರಿಂದ ಒಂದು ಉದ್ಯೋಗದಿಂದ ಮಾತ್ರ ಬಿಡುಗಡೆಯಾದ ಕಾರಣಕ್ಕೆ ಆತ ಅಥವಾ ಆಕೆ ನಿವೃತ್ತ ಅಥವಾ ನಿವೃತ್ತೆ ಎನ್ನುವುದು ಅಪ್ರಬುದ್ಧವಾಗುತ್ತದೆ ಎಂದರೆ ತಪ್ಪಾಗುವುದೇ?
ಹಿಂದೂ ಶಾಸ್ತ್ರಗಳು ಹೇಳುವಂತೆ ಜೀವನದಲ್ಲಿ ಎರಡು ಪಥಗಳಿವೆ. ಒಂದನೇಯದು ಪ್ರವೃತ್ತಿ. ಎರಡನೇಯದು ನಿವೃತ್ತಿ. ಪ್ರವೃತ್ತಿಯಲ್ಲಿ ಮನುಷ್ಯನು ಲೌಕಿವಾದಿ. ದೈವಾನುಗ್ರಹದಿಂದ ಧನ, ಕನಕ, ಸಂಪತ್ತು, ಗೋಚರಾದಿಗಳನ್ನು ಗಳಿಸುತ್ತಾನೆ. ತನ್ನ ಬದುಕಿನ ಎಲ್ಲ ಸಾಮಾಜಿಕ, ಧಾರ್ಮಿಕ ಆಸೆ ಆಕಾಂಕ್ಷೆಗಳನ್ನು ಅನುಭವಿಸುತ್ತಾನೆ. ಕ್ರಮೇಣ ತನ್ನ ಆಸೆ ಆಕಾಂಕ್ಷೆಗಳಿಂದ ದೂರ ಸರಿಯ ತೊಡಗುತ್ತಾನೆ. ಹೆಚ್ಚು ಹೆಚ್ಚು ಅಂತರ್ಮುಖಿಯಾಗುತ್ತಾನೆ ಇದುವೇ ನಿವೃತ್ತಿ. ಈ ಕಾಲ ಘಟ್ಟದಲ್ಲಿ ಯಜ್ಞ ಯಾಗಗಳನ್ನು ಮಾಡಿ ಪ್ರವೃತ್ತಿಯಲ್ಲಿ ಮಾಡಿರಬಹುದಾದ ಪಾಕರ್ಮಗಳಿಗೆ ಪ್ರಾಯಶ್ಚಿತ್ತ, ಲೋಕ ಕಲ್ಯಾಣದ ಪ್ರಾರ್ಥನೆ ಮಾಡುತ್ತಾನೆ. ಇದನ್ನು ಭಗವದ್ಗೀತೆಯ ಕರ್ಮಯೋಗದಲ್ಲಿ ನಿಷ್ಕಾಮ ಕರ್ಮವೆಂದು ಹೇಳಿದೆ. ಈ ವಿವರಣೆಗಳು ಸರಕಾರದಿಂದ ಪಿಂಚಣಿ ಪಡೆಯುವವರಿಗೆ ಎಲ್ಲೂ ಪೂರಕವಾಗಿ ಕಂಡುಬರುವುದಿಲ್ಲ.
ಶಿಕ್ಷಣ ಇಲಾಖೆಯಲ್ಲಿಯೇ ನಿವೃತ್ತ ಶಿಕ್ಷಕರನ್ನು ವೆತನ ನೀಡಿ ಅತಿಥಿ ಶಿಕ್ಷಕರೆಂದು ನೇಮಿಸುವ ವ್ಯವಸ್ಥೆಗಳೂ ಕಳೆದ ದಶಕದಲ್ಲಿ ಇದ್ದಿತು. ಅವರು ಇಲಾಖೆಯಿಮದ ಪಡೆದ ನಿವೃತ್ತಿ ಮತ್ತೆ ಪ್ರವೃತ್ತಿಯಾಗುವುದೇ? ವೇತನ ಬರುವ ಕೆಲಸಗಳು ಮಾತ್ರವೇ ವೃತ್ತಿ ಅಥವಾ ಕಸುಬೇ? ಭಿಕ್ಷಾವೃತ್ತಿಗೆ ವೇತನವೆಲ್ಲಿದೆ? ಮನೆಯೊಡತಿ ಮನೆಯಲ್ಲಿ ದಿನದ ಬಹುಭಾಗ ದುಡಿಯುತ್ತಾಳೆ ಅವಳಿಗೆ ವೇತನವಿಲ್ಲ. ಹಾಗೆಂದ ಮಾತ್ರಕ್ಕೆ ಅದು ಸೇವೆ, ಕಸುಬು, ವೃತ್ತಿ ಈ ಪದಗಳ ವ್ಯಾಪ್ತಿಗೆ ಬರುವುದಿಲ್ಲವೇ? ಇವರಿಗೆಲ್ಲಿದೆ ನಿವೃತ್ತಿ? ಆದುದರಿಂದ ಸಾಯುವ ತನಕ ಮಾಡುವ ಯಾವುದೇ ಸೇವೆಗಳಾಗಿದ್ದರೂ ಅವು ಪ್ರವೃತ್ತಿಗಳು. ಈ ಪ್ರವೃತ್ತಿಗಳು ಗೌರವ ಸೇವೆಯಿರಬಹುದು, ನೇರ ಪ್ರತಿಫಲ ಪಡೆಯುವ ಸೇವೆಯಿರಬಹುದು, ರೈತನು ಪ್ರಕೃತಿಯೊಂದಿಗೆ ಮಾಡುವ ಸೆಣಸಾಟಗಳಿರಬಹುದು… ಎಲ್ಲವೂ ವೃತ್ತಿಗಳೇ ಆಗಿರುವುದರಿಂದ ನಿವೃತ್ತಿ, ವಿದಾಯ ಎಲ್ಲವೂ ಜೀವನದಲ್ಲಿ ಪ್ರಸ್ತುತ ಅನಿಸವುದಿಲ್ಲ. ಕ್ರಿಕೆಟ್‌ಗೆ ವಿದಾಯ, ರಾಜಕೀಯಕ್ಕೆ ವಿದಾಯ, ನಟನೆಗೆ ವಿದಾಯ ಪಡೆದವರು ಮತ್ತೆ ಆ ಕಡೆಗೆ ನುಸುಳುವಂತಿಲ್ಲ ಅಲ್ಲವೇ? ಆದರೆ ಬದುಕಿನಲ್ಲಿ ವೃತ್ತಿಗೆ ವಿದಾಯ ನಿವೃತ್ತಿಗಳಿರಬಾರದು.
ದಶಂಬರ ಹದಿನಾರನೇ ದಿನಾಂಕ ವಿಶ್ವ ಪಿಂಚಣಿದಾರರ ದಿನ. ಪಿಂಚಣಿದಾರರಲ್ಲಿ ಕಳಕಳಿಯ ವಿನಂತಿಯೆನೆಂದರೆ ಪಿಂಚಣಿ ಪಡಯುವವರು ನಿವೃತ್ತರಲ್ಲ. ಅವರು ಯಾವುದೋ ಒಂದು ವಿಭಾಗದಲ್ಲಿ ನಿವೃತ್ತರೇ ಆಗಿದ್ದರೂ ಬದುಕಿನುದ್ದಕ್ಕೂ ರ್ಪರವೃತ್ತರೇ ಆಗಿದ್ದಾರೆ. ಅವರಿಗೆ ಭದ್ರತೆಯ ಬಾಳೊಂದಿದೆ. ಆ ಬಾಳು ಯಶಸ್ವಿಯಾಗಿ ಸಂಪೂರ್ಣವಾಗಲು ಮತ್ತಷ್ಟು ಲವಲವಿಕೆಯಿಂದ ಕಾರ್ಯಶೀಲರಾಗಿರಿ. ನಿರಂತರ ಪ್ರವೃತ್ತರೇ ಆಗಿರಿ.

 

 

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...