Wednesday, February 12, 2025

ಅಧಿಕಾರ

ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು
ಮೊ: 9448626093

ಹೂವಿರುವಲ್ಲಿ ದುಂಬಿಗಳ ಹಾರಾಟ ಸಹಜ. ಹೂಗಳಲ್ಲಿರುವ ಸವಿಯಾದ ಮಕರಂಧವೇ ಇದಕ್ಕೆ ಕಾರಣ. ಅದೇ
ರೀತಿಯಲ್ಲಿ ಅಧಿಕಾರವಿರುವಲ್ಲಿಗೆ ಮಾನವನ ಮನದ ಸೆಳೆತ ಸಹಜ. ಮನುಷ್ಯನಿಗೆ ತನ್ನ ಬೇಕು ಬೇಡಗಳನ್ನು ನಿಭಾಯಿಸಲು
ಅಧಿಕಾರ ನೆರವು ನೀಡುತ್ತದೆ ಎಂಬುದು ನಿಸ್ಸಂದೇಹ. ಅಧಿಕಾರವಿದ್ದಲ್ಲಿಗೆ ಹಣ, ಅಂತಸ್ತು, ಮಾನ- ಸಂಮಾನಗಳು
ಹರಿದುಬರುತ್ತವೆ. ಅಪಾರ ಸಂಖ್ಯೆಯಲ್ಲಿ ಹಿಂಬಾಲಕರು ಒದಗಿ ಬರುತ್ತಾರೆ. ಅಧಿಕಾರವುಳ್ಳವನ ನ್ಯಾಯ ಅಥವಾ ಅನ್ಯಾಯಗಳನ್ನು
ಪ್ರಶ್ನಿಸುವವರಿರುವುದಿಲ್ಲ. ಅಧಿಕಾರವೆನ್ನುವುದು ಚಂಚಲವಾಗಿರುತ್ತದೆನ್ನುವುದನ್ನು ನಾವು ತಿಳಿದಿರಬೇಕು.
ಒಂಭತ್ತು ತಿಂಗಳ ಹಿಂದೆ ಜರಗಿದ ರಾಜ್ಯ ವಿಧಾನ ಸಭಾ ಚುನಾವಣೆ ಮುಗಿದೊಡನೆ ಅಧಿಕಾರ ಸ್ಥಾಪನೆಗೆ ನಮ್ಮ
ಅಧಿಕಾರದಾಹೀ ರಾಜಕೀಯ ನಾಯಕರು ಮಾಡಿದ ಡೋಬರಾಟಗಳು ಇಂದಿಗೂ ಕನ್ನಡಿಗರ ಮುಂದೆ ಕುಣಿದಾಡುತ್ತಿವೆ. ಇವರ
ದೊಂಬರಾಟಗಳು ನಮಗೆ ಪುಕ್ಕಟೆ ಮನರಂಜನೆಯನ್ನು ನೀಡುವುದರೊಂದಿಗೆ ಅಧಿಕಾರವೆನ್ನುವುದು ಅತ್ಯಂತ
ಲಾಭದಾಯಕವಾಗಿದೆ ಎಂಬುದನ್ನು ಪುಷ್ಟೀಕರಿಸಿತು. ಅಧಿಕಾರಕ್ಕಾಗಿ ಪರಸ್ಪರ ಕೊಚ್ಚೆ ಕೆಸರುಗಳನ್ನು ಎಸೆದುಕೊಂಡು, ಕಾಗೆ
ಗೂಗೆಗಳಂತೆ ಬೈಗುಳಗಳನ್ನು ವಿನಿಮಯಿಸಿದ ಎಲ್ಲ ಘಟನೆಗಳೂ ಅಧಿಕಾರದ ಮುಂದೆ ಕ್ಷಣ ಮಾತ್ರದಲಿ ಮಂಜಿನಂತೆ ಕರಗಿ
ನೀರಾದುವು.
ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳ ಟಿಕೆಟಿಗಾಗಿ ಮೇಲಾಟ. ಚುನಾವಣೆಯಲ್ಲಿ ಗೆಲುವಿಗಾಗಿ ಹೊಡೆದಾಟ
ಮತ್ತು ಫಲಿತಾಂಶದ ನಂತರದಲ್ಲಿ ಅಧಿಕಾರದ ಗದ್ದುಗೆಗಾಗಿ ಆಟಾಟೋಪ ವರ್ತಮಾನ ಕಾಲದ ನಗ್ನ ದೃಷ್ಯ. ಆದರೆ ಅಧಿಕಾರದ
ನಂತರದಲ್ಲಿ ವ್ಯಕ್ತಿಯ ಸ್ಥಾನಮಾನಗಳು ಯಥಾ ಸ್ಥಿತಿಯಲ್ಲಿಯೇ ಮುಂದುವರಿಯುತ್ತವೆ ಎನ್ನಲಾಗದು. ವ್ಯಕ್ತಿಚಾರಿತ್ರ್ಯ, ಸಜ್ಜನಿಕೆ
ಮತ್ತು ಮನೋಧರ್ಮಗಳನ್ನಾಧರಿಸಿ ಸಿಗುವ ಮಾನ ಸಂಮಾನಗಳು ಚಿರಂಜೀವಿಯಾಗಿರುತ್ತವೆ. ಅಧಿಕಾರ ದೊರೆತೊಡನೆ
ವ್ಯಕ್ತಿಯಲ್ಲಿರುವ ಗುಣ ಸಂಪನ್ನತೆಗಳು ಮಾಯವಾಗಿ ದರ್ಪವು ಆತನಲ್ಲಿ ವಿಜೃಂಭಿಸಲಾರಂಭಿಸಿದರೆ ಅಧಿಕಾರದ ಪತನದೊಂದಿಗೆ
ಆತನ ಎಲ್ಲ ಗೌರವಾದರಗಳು ಸಮುದ್ರ ಪಾಲಾಗುತ್ತವೆ.
ಇಂದು ಲೋಕಸಭಾ ಚುನಾವಣೆಯ ಘೋಷಣೆಯಾಗಿದೆ. ತರಹೇವಾರಿ ನಗು, ವಿನಯಗಳನ್ನು ಪ್ರದರ್ಶಿಸುತ್ತಾ
ಅಭ್ಯರ್ಥಿಗಳು ಮತಭಿಕ್ಷೆಗಾಗಿ ಜನರನ್ನು ಸಂಪರ್ಕಿಸುತ್ತಾರೆ. ಮತದಾರರನ್ನು ಓಲೈಸಲಿರುವ ಎಲ್ಲ ಮಾರ್ಗೋಪಾಯಗಳನ್ನೂ
ಕಂಡು ಕೊಳ್ಳುತ್ತಾರೆ, ಅನುಸರಿಸುತ್ತಾರೆ. ಚೆನ್ನಾಗಿ ಬಾಗುತ್ತಾರೆ, ವಂದಿಸುತ್ತಾರೆ, ಪಾದ ಸ್ಪರ್ಶಿಸಿ ನಮಿಸುತ್ತಾರೆ, ಅಂಗಲಾಚುತ್ತಾರೆ,
ಆಮಿಷಗಳನೊಡ್ಡುತ್ತಾರೆ, ಭರವಸೆಗಳನ್ನೀಯುತ್ತಾರೆ. ಎಲ್ಲ ಎಲ್ಲೆಗಳನ್ನೂ ಮೀರಿ ಮತದಾರರನ್ನು ಸೆಳೆಯುತ್ತಾರೆ. ಆದರೆ ಗೆದ್ದ
ಮರುದಿನ ಅವರು ನಮ್ಮ ಕೈಯಲ್ಲಿ ಹಾರವಿದ್ದರೆ ಮಾತ್ರವೇ ಬಾಗುತ್ತಾರೆ. ಹಾರವಿಲ್ಲ ಎಂದಾದರೆ ಬೀಗುತ್ತಾರೆ ಎಂಬುದು
ದೇಶವ್ಯಾಪೀ ಅನುಭವ. ಆದುದರಿಂದ ನಾವು ಮತದಾನದ ಮೂಲಕ ನಮ್ಮ ಹಕ್ಕಿನ ಚಲಾವಣೆ ಮಾಡೋಣ. ಆದರೆ
ಗುಂಡಿಯನ್ನದುಮುವ ಮೊದಲು ಸಹಸ್ರ ಬಾರಿ ನಮ್ಮ ಮನಸನ್ನು ಜಾಗೃತ ಚಿಂತನೆಯ ಒರೆಗೆ ಹಚ್ಚೋಣ. ಅಭ್ಯರ್ಥಿಯ ಭರವಸೆ
ನಮಗೆ ಬೇಡ. ಆದರೆ ನಮ್ಮ ನ್ಯಾಯಬದ್ಧವಾದ ಅಗತ್ಯಗಳಿಗೆ ಅವನು ಒದಗಿ ಬರಬೇಕು. ಮನವ ಸಹಜವಾದ ಸ್ವಾರ್ಥ ಮತ್ತು
ಸ್ಜಜನಪರತೆಯಿಂದ ಆತ ಹೊರಗುಳಿಯವನೆಂಬುದರ ಬಗ್ಗೆ ಖಾತ್ರಿ ನಮಗಾಗಾಗಲೇ ಬೇಕು.
“NOTA” ಎಂಬ ಗುಂಡಿಯೂ ಇವಿಎಂಗೆ ಅಳವಡಿಸಿದ ಬ್ಯಾಲೆಟ್ ಯೂನಿಟಿನಲ್ಲಿದೆ. ಈ ಗುಂಡಿಯು ಯಾರಿಗೂ ಅನಿವಾರ್ಯವಾಗದಿರಲಿ. ನಮ್ಮ ಪ್ರತಿನಿಧಿಯೊಬ್ಬರು ಆಯ್ಕೆಯಾಗಲೇ ಬೇಕು. ನಮ್ಮ ಆಶಯದಂತೆ ಸಕಲ ಗುಣ ಸಂಪನ್ನರು ದೊರೆಯದಿರಲೂ ಬಹುದು. ಆದರೆ ಇರುವ ಅಭ್ಯರ್ಥಿಗಳಲ್ಲಿ ಉತ್ತಮರಾದವರನ್ನು ಆರಿಸುವುದರ ಬದ್ಧತೆ ನಮಗಿರಲಿ. ನಮ್ಮಿಂದ ಪ್ರಜಾಪ್ರಭುತ್ವಕ್ಕೆ ಗೆಲುವಾಗಬೇಕು. ಪ್ರಭುತ್ವದ ಕಾರಣದಿಂದಾಗಿ ಪ್ರಜಾಪ್ರಭುತ್ವ ನೇಪಥ್ಯಕ್ಕೆ ಸರಿಯದಿರಲಿ. ಪ್ರಜಾಪ್ರಭುತ್ವಕ್ಕೆ ಜಯವಾಗಲಿ; ಪ್ರಜಾಪ್ರಭುತ್ವ ಚಿರಾಯುವಾಗಲಿ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...