ಬರಹ: ಹೆಚ್ಕೆ ನಯನಾಡು

ಬದುಕಿಗೆ ಸ್ಪೂರ್ತಿ ನೀಡುವ ಆಟಿ ಕಳೆಂಜೆ
ಕಳೆಂಜೆ ಕಳೆಂಜೆನೋ!
ಕಳೆಂಜೆ ಬತ್ತೇನೊ!
ಮಾರಿ ಗಿಡತ್ತೇನೋ!
ಆಟಿದ ಮಾರಿ ಗಿಡತ್ತೇನೊ!
ಓ ಆಟಿ ಕಳೆಂಜಾ.. ಬಾ ಊರಿನ ಮಾರಿ ಕಳೆಯಲು ಬಾ ಎಂದು ತುಳುನಾಡಿನಲ್ಲಿ ಆಟಿ ಕಳೆಂಜನಿಗೆ ವಿಶಿಷ್ಟ ಸ್ಥಾನ ನೀಡುತ್ತಿದ್ದ ತುಳು-ಕನ್ನಡದ ಜನತೆ ಇಂದು ಕೊರೊನಾದಂತಹ ಮಹಾಮ್ಮಾರಿಯನ್ನು ಆಟಿ ಕಳೆಂಜ ಓಡಿಸಲಿಲ್ಲ ಎನ್ನುವ ಬೇಸರದಲ್ಲಿರಬಹುದು ಸರಿ. ಆದರೆ ಸಂಪ್ರದಾಯದ ಆಟಿ ತಿಂಗಳಿನ ದಿನಗಳಲ್ಲಿ ತುಳುನಾಡಿನ ಮನೆಯಂಗಳದಲ್ಲಿ ಹೆಜ್ಜೆ ಹಾಕಿ ನಲಿಯುತ್ತಿದ್ದ ಆಟಿ ಕಳೆಂಜ ಈಗೆಲ್ಲಿ?
ಇಲ್ಲ ಊರಿನ ಅಂಗಳದಲ್ಲಿ ತೆಂಬರೆಯ ಶಬ್ದಕ್ಕೆ, ತೆಂಗಿನ ಗರಿಯ ಕೊಡೆ ಹಿಡಿದು, ದೈವ ಪ್ರೀತಿ ಭಕ್ತಿ ಆಧರಣೆಯಲ್ಲಿ ವಸ್ತ್ರವ ಧರಿಸಿ ಮನೆ ಮನೆ ತಿರುಗುವ ಆಟಿ ಕಳೆಂಜ ಎಲ್ಲರಿಗೂ ಪ್ರೀತಿದಾಯಕ.ಕಿರಿಯರಿಗೆ ಆತ್ಮೀಯತೆ, ಹಿರಿಯರಿಗೆ ನಂಬಿಕೆ.
ತುಳುನಾಡಿನಲ್ಲಿ ಆಟಿ(ಆಷಾಡ) ಮೇಲಿನ ಕರ್ನಾಟಕದಲ್ಲಿ ಶ್ರಾವಣವಾದರೂ ನಮ್ಮೂರಿಗೆ ಆಟಿ, ಆಟಿ ಕಳೆಂಜ,
ಕಳೆಂಜ ಎಂದರೆ ಕಳೆಯುವವನು ಎಂದರ್ಥ, ಊರಿಗೆ ಬಂದ ಮಹಾಮ್ಮಾರಿಯನ್ನು , ಮಾನವ, ಸಾಕುಪ್ರಾಣಿ, ಬೆಳೆ-ಸೆಳೆಯ ಕೀಟ ರೋಗ ಬಾಧೆಯನ್ನು ಕಳೆಯಲು ವರ್ಷಕ್ಕೊಮ್ಮೆ ಬರುವ ಮಾಂತ್ರಿಕ ರೂಪದ ನಮ್ಮ ನಂಬಿಕೆಯ ಆಟಿ ಕಳೆಂಜ .

ಆಟಿ ಕಳೆಂಜನ ರೂಪವೇ ಮಾಂತ್ರಿಕ, ಮಾಟ ಕಳೆಯುವ ಸೂತ್ರಕ, ದುಷ್ಟ ಶಕ್ತಿಯನ್ನು ಹೋಗಲಾಡಿಸಲು ಒಂದು ಆಶಯದೊಂದಿಗೆ , ಬದುಕಿಗೆ ಹೊಸ ಧೈರ್ಯ, ಚೈತನ್ಯ ನೀಡುವುದರೊಂದಿಗೆ, ಆರೋಗ್ಯ ಭಾಗ್ಯ ಮತ್ತು ಪ್ರೀತಿ ನೀಡುವ ಶಕ್ತಿಯೇ ಆಟಿ ಕಳೆಂಜ.
ಈ ಸಾಂಪ್ರದಾಯಿಕ ನ್ರತ್ಯವನ್ನು ಒಂದು ನಿರ್ದಿಷ್ಟ ಜನಾಂಗದ ಬಂಧುಗಳು ಮಾಡುತ್ತಾರೆ. ಹಾಗಂತ ಇಂದು ಅವರ ಬಳಕೆ ಕಮ್ಮಿಯಾಗಿದೆ,
ಹಿಂದಿನ ಮಾದರಿಯ ಆಟಿ ಕಳೆಂಜ ಹೇಗಿದ್ದ? ಎಳೆಯ ಹುಡುಗನಿಗೆ ತೆಂಗಿನ ಎಳೆಯ ಗರಿಗಳ ಹೆಣೆದು ಉಡುಗೆ ಧರಿಸಿ, ಕಾಲ್ಗೆಜ್ಜೆ ಹಾಕಿ, ಕಡು ಕೆಂಪು ಬಣ್ಣದ ಬಟ್ಟೆ, ಮುಟ್ಟಾಳೆ ಟೋಪಿಯಾಕಿಸಿ, ಮುಖಕ್ಕೆ ಕಪ್ಪು-ಬಿಳಿ ಬಣ್ಣ ಬಳಿದು ಮಡಲ ಕೊಡೆ ಹಿಡಿದು ತಿರುಗಿಸುತ್ತಾ, ಹೂವಿನ ಎಲೆಗಳ ಅಲಂಕಾರದಿಂದ ತನ್ನ ಪೋಷಕರ ಜತೆ ಪಾಡ್ದನ ತೆಂಬರೆ ಬಾರಿಸುತ್ತಾ ಕಳೆಂಜನ ಕತೆ ಸಾರುತ್ತಾ, ಮನೆ ಮನೆ ಸಾಗುತ್ತಾನೆ.
ಮನೆಯಜಮಾನ (ಯಜಮಾನ್ತಿ) ತಡ್ಪೆಯಲ್ಲಿ (ಗೆರಸೆ)ನೀಡುವ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ,ಫಲವಸ್ತು, ಪಡೆದು ನಿಮ್ಮ ಮನೆಯ ಮಾರಿಯನ್ನು ಪಡೆದು ಕೊಂಡು ಹೋದೆ ಎನ್ನುತ್ತಾ ಮನೆಯಂಗಳದಿಂದ ಹೊರಡುತ್ತಾನೆ ಕಳೆಂಜ.

ಕಳೆಂಜ ದೈವವೋ ಗೊತ್ತಿಲ್ಲ!
ಅವನಿಗೆ ಗುಡಿಯಿಲ್ಲಾ, ಗೋಪುರವಿಲ್ಲಾ, ಆಟಿ ತಿಂಗಳ ಹೊರತು ಅವನನ್ನು ಆರಾಧಿಸುವವರೂ ಇಲ್ಲ. ಈತ ನಂಬಿಕೆಯ ಪ್ರತೀಕ, ಬಡತನ ರೋಗಿಗಳ ರುಜಿನಗಳಿಗೆ, ದುರ್ಬಲರಿಗೆ, ಊರ ಸಮ್ರದ್ದಿಗೆ ಕಳೆಂಜನೇ ಸಾಮ್ರಾಜ್ಯ. ಮಾರಿಯನ್ನು ಹೋಗಲಾಡಿಸಲು ಕಳೆಂಜನೆ ರಾಯಭಾರಿ ಆದರೆ ಆಟಿಯೇ ಅವನನ್ನು ಕಾಯುವುದು, ನಮ್ಮ ಶ್ರದ್ದಾ ನಂಬಿಕೆಗೆ ಅವನು ರಾಯಭಾರಿ.
ಹೌದು ಮಾರಿಯನ್ನು ಹೋಗಲಾಡಿಸುತ್ತೇನೆ ಎಂದು ಅವ ಪಡೆದ ಅಕ್ಕಿ ಫಸಲು ಹಿಂದಿನ ಕಾಲದಲ್ಲಿ ಶೇಖರಿಸಿ ಒಂದು ಕಡೆಯಲ್ಲಿ ಬೇಯಿಸಿ, ಸಂಸಾರ ಸೇರಿಗೆ ಸೇವಿಸಿ ಎಲ್ಲರಿಗೂ ಒಳಿತಾಗಲಿ ಎಂದು ಆಶೀಸುತ್ತಿದ್ದರಂತೆ, ಆದರೆ ಇಂದು ಅಂತಹ ಸನ್ನಿವೇಶ ನೋಡಲು ಆಗುವುದಿಲ್ಲ, ಕಳೆಂಜನ ವೇಷವನ್ನು ನೋಡಲು ಆಗುತ್ತಿಲ್ಲಾ, ಕಳೆಂಜನೇ ಮಾಸ್ಕ್ ಹಾಕಿ ಬರುವ ಕಾಲ ಇಂದಿನದಾಗಿದೆ. ಸಂಪ್ರದಾಯವೆಲ್ಲಾ ನಮ್ಮಿಂದಾ ದೂರವಾಯಿತೇ..?

