ಆತ ಆಗಷ್ಟೇ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ ಹುಡುಗ. ತನ್ನದೇ ಆದ ನೂರಾರು ಕನಸುಗಳನ್ನು ಕಟ್ಟಿಕೊಂಡಿದ ಆತ ಏನೋ ಸಾಧಿಸಿ ಬಿಡತೀನಿ ಎಂಬ ಭ್ರಮೆಯಲ್ಲಿ ಇದ್ದ. ಸ್ವಂತ ತಂದೆ ತಾಯಿ ಸೇರಿದಂತೆ ಯಾರದು ಹಂಗಿಲ್ಲದೇ ತನ್ನ ಬದುಕು ತಾನು ಕಟ್ಟಿಕೊಳ್ಳಬಲ್ಲೆ ಎಂಬ ಹುಚ್ಚು ಜಿದ್ದಿಗೆ ಬಿದ್ದಿದ.

ಬಂದ ಹೊಸತು ಇದ್ದ ಪುಡಿಗಾಸು ಲಾಡ್ಜ್ ಒಂದರಲ್ಲಿ ರೂಮ್ ಮಾಡಿ ಕೆಲವು ದಿನ ಉಂಡೆಲೆದು ಅಲ್ಲಿಲ್ಲಿ ಕೆಲಸಕ್ಕೆ ಪ್ರಯತ್ನಿಸಿದ ಆದರೆ ಯಾವುದು ಫಲ ನೀಡಲಿಲ್ಲ. ಗೊತ್ತಿಲ್ಲದ ಊರು, ಹೊಸ ಜನ, ನಗರದ ಓಡಾಟ ಎಲ್ಲವೂ ಆರಂಭದಲ್ಲಿ ಹಿತ ಎನಿಸಿತು. ಕೈಯಲ್ಲಿನ ಕಾಸು ಖಾಲಿಯಾದಂತೆ ಲಾಡ್ಜನಿಂದ ಹೊರ ಬಿದ್ದ. ಊಟಕ್ಕೂ ಸಹ ಕಾಸು ಇಲ್ಲದಂತೆ ಆಗಿ ದೇವಸ್ಥಾನದ ಪ್ರಸಾದ ಐದಾರು ಸಲ ಇಸಕೊಂಡು ಅಲ್ಲಿಯೂ ಸಹ ನೋಟೇಡ್ ಆಗಿ ಮೆಜೆಸ್ಟಿಕನ ದೊಡ್ಡ ಹೋಟೆಲಗಳಲ್ಲಿ ಕೆಲಸ ಕೇಳಿ ಇಲ್ಲ ಅನಿಸಕೊಂಡ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಲಗ್ಗೇಜು ಹೊರಲು ಹೋಗಿ ಅಲ್ಲಿರುವ ಕೂಲಿಯವರಿಂದ ತದುಕಿಕೊಂಡಿದ್ದ. ಎರಡು ಮೂರು ದಿನ ಆದರೂ ಒಂದು ಹೊತ್ತಿನ ಊಟ ಕಾಣದೆ ಕಬ್ಬನ ಪಾರ್ಕನಲ್ಲಿ ಅಳುತ್ತಾ ಕುಳಿತು ಕಾಲ ಕಳೆಯುತ್ತಿದ್ದ. ಸಾಕು ಇನ್ನೂ ಸಹವಾಸ ಮನೆಗೆ ವಾಪಸ್ ಹೋಗಿ ಅಲ್ಲಿಯೇ ಓದು ಉದ್ಯೋಗ ಏನಾದರೂ ಮಾಡೋಣ ಅಂದುಕೊಂಡ. ಹಾಗೆ ಹೋಗಿದ್ದರೆ ಅವನ ಜೀವನ ಸರಿ ಆಗುತ್ತಿತ್ತೇನೋ!! ಆದರೆ ಆದ್ದದೇ ಬೇರೆ!!!
ಟಿಕೆಟ್ ಇಲ್ಲದೆ ಹುಬ್ಬಳ್ಳಿ ರೈಲು ಹತ್ತಿಕೊಂಡು ಹೋಗೋಣ ಎಂದುಕೊಂಡು ಆತ ಆ ದಿನ ಬೆಳಿಗ್ಗೆಯಿಂದ ಮೆಜೆಸ್ಟಿಕನ ಬಸ್ ನಿಲ್ದಾಣದಲ್ಲಿ ತಿರುಗಾಡಕೊಂಡು ಅಲ್ಲಿಯೇ ಕುರ್ಚಿ ಮೇಲೆ ಸಪ್ಪೆ ಮುಖ ಹಾಕಿ ಕುಳಿತುಕೊಂಡಿದ್ದ.
ಅಷ್ಟರಲ್ಲಿ ಒಬ್ಬ ವ್ಯಕ್ತಿ ತುಂಬಾ ಹೊತ್ತಿನಿಂದ ಇವನನ್ನೇ ಗಮನಿಸುತ್ತಿರುವುದು ಅವನ ಅರಿವಿಗೆ ಬಂತು. “ಯಾರ ಇವನು, ಅಷ್ಟು ಹೊತ್ತಿನಿಂದ ನನ್ನ ಕಡೆ ಯಾಕೆ ನೋಡತಾ ಇದಾನೆ? ಕಳ್ಳನಾ! ಕದಿಯೋಕೆ ನನ್ನ ಹತ್ತಿರ ಅಷ್ಟಕ್ಕೂ ಏನಿದೆ?? ಈ ಹರಕಲು ಬಟ್ಟೆ ನೋಡಿ ಹಿಂದೆ ಬಿದ್ದಿದ್ದಾನೆ ಅಂದರೆ ಯಾವನೋ ಮೋಸಗಾರ ಇರಬಹುದಾ???” ಹೀಗೆ ಏನೇನೋ ಚಿಂತಿಸುತ್ತಾ “ಜಾಗ ಚೆಂಜ್ ಮಾಡಿ, ಬೇರೆ ಕಡೆ ಹೋಗೋಣ.. ಅಲ್ಲಿಗೂ ನನ್ನ ಹಿಂದೆ ಬರತಾನಾ, ನೋಡೋಣ” ಎಂದು ಆತಂಕಗೊಂಡು ಗಾಬರಿಯಿಂದ ಆ ಬಸ್ ನಿಲ್ದಾಣದಿಂದ ಪಕ್ಕದಲ್ಲಿ ಇರುವ ಇನ್ನೊಂದು ನಿಲ್ದಾಣಕ್ಕೆ ಬಂದು ಕುಳಿತ. ಸ್ವಲ್ಪ ಹೊತ್ತಿನ ನಂತರ ನೋಡಿದರೆ ಅಲ್ಲಿಯೂ ಆತ ಪ್ರತ್ಯಕ್ಷ. ಈಗ ಆತ ತುಂಬಾ ಹೆದರಿಕೊಂಡ. ಅಲ್ಲಿರುವ ಯಾರಿಗಾದರೂ ಹೇಳೋಣ ಅಂದರೆ ಆತನ ಅವತಾರ ನೋಡಿ ಎಲ್ಲರೂ ದೂರ ಎದ್ದು ಹೋಗುವವರೇ.
ಆದರೂ ಏನು ಆಗಲ್ಲ ಎಂದು ಅತ್ತಿತ್ತ ಅಲೆದು ಮತ್ತೆಲ್ಲೋ ಧೈರ್ಯ ಮಾಡಿ ಕುತುಕೊಂಡ. ಈಗ ಆ ವ್ಯಕ್ತಿ ಇವನ ಕಡೆಯೇ ಬರತಾ ಇದಾನೆ. ಇವನ ಕೈಕಾಲುಗಳಲ್ಲಿ ಭಯಂಕರ ನಡುಕ ಶುರುವಾಯಿತು. ಅವನು ಹತ್ತಿರ ಬಂದಂತೆ ಇವನ ಮನದಲ್ಲಿ ತೀವ್ರ ತಳಮಳ. ನೋಡ ನೋಡುತ್ತಿದಂತೆ ಆ ವ್ಯಕ್ತಿ ಬಂದು ಇವನ ಪಕ್ಕವೇ ಕುಳಿತ. ಈಗ ಹುಡುಗನ ಬೆವರು ಹೆದರಿ ಕಿತ್ತುಕೊಂಡ ಬರತಾ ಇದೆ. ಒಂದೆರಡು ನಿಮಿಷ ಸುಮ್ಮನೆ ಕುಳಿತಿದ್ದ ಆ ವ್ಯಕ್ತಿ ಹಾಗೆ ಇವನನ್ನು ಗುರಾಯಿಸಿದ. ಭಯಗೊಂಡ ಹುಡುಗ ಅಲ್ಲಿಂದ ಕಾಲ್ಕಿಳಬೇಕು ಎನ್ನುವಷ್ಟರಲ್ಲಿ ಆ ವ್ಯಕ್ತಿ
“ಏನಪ್ಪಾ, ಊಟ ಮಾಡಿದ್ದೀಯಾ?” ಎಂದ. ಆ ಮಾತು ಕೇಳಿದೊಡನೆ ಅವನಿಗೆ ಯಾರೋ ಒಳ್ಳೆಯವರು ಇರಬೇಕು, ನನ್ನ ಕಷ್ಟ ನೋಡಿ ಊಟ ಕೊಡಿಸಿ ವಿಚಾರಿಸಿಕೊಳ್ಳೋಕೆ ಬಂದಿರಬೇಕು ಎಂದುಕೊಂಡ ಹುಡುಗ “ಇಲ್ಲ ಸರ್, ಯಾಕೆ?”
“ಹಂಗೆಲ್ಲಾ ಹಸಿವಕೊಂಡು ಇರಬಾರದು, ನೋಡೋಕೆ ನನ್ನ ಚಿಕ್ಕ ತಮ್ಮ ಇದ್ದ ಹಾಗೆ ಇದೀಯಾ ಬಾ.. ಮೊದಲು ಊಟ ಕೊಡಸತೀನಿ” ಸರಿ ಎಂದು ಹುಡುಗ ಆತನ ಜೊತೆಗೆ ಹೆಜ್ಜೆ ಹಾಕಿದ.
ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಇರುವ ಗತಕಾಲದ ಪ್ರತಿಭಟನೆಗಳ ಕಂಡು ಈಗ ಪಾಳು ಬಿದ್ದಿರುವ ತುಳಸಿ ಪಾರ್ಕ್ ಹತ್ತಿರ ಕರೆದುಕೊಂಡು ಬಂದು ಅಲ್ಲಿಯೇ ಇಂದಿರಾ ಕ್ಯಾಂಟಿನ್ ಅಲ್ಲಿ ಐದು ರೂಪಾಯಿ ಕೊಟ್ಟು ಒಂದು ಚಿತ್ರಾನ್ನ ಕೊಡಿಸಿದ.
“ಅಣ್ಣ, ನೀವು?”
“ನಾನು ಇಂತಹ ಕಡೆ ಎಲ್ಲಾ ತಿನ್ನಲ್ಲಪಾ, ನಂದಾಗಿದೆ. ನೀನು ತಿನ್ನು..”
ಹುಡುಗ ಹಸಿದಿದ್ದರಿಂದ ಸಿಕ್ಕಿದ್ದೇ ಮೃಷ್ಟಾನ್ನವೆಂದು ಗಬಗಬ ತಿಂದು ಖಾಲಿ ಮಾಡಿದ “ಬೇಕಾದರೆ ಇನ್ನೊಂದು ಪ್ಲೇಟ್ ತಗೊಂಡು ಹೊಟ್ಟೆ ತುಂಬಾ ತಿನ್ನೋ” ಎಂದು ಮತ್ತೊಂದು ಪ್ಲೇಟ್ ಕೊಡಿಸಿದ. ತಿಂದ ನಂತರ ಈತನ ಬಗ್ಗೆ ಒಳ್ಳೆಯ ಭಾವನೆ ಹಾಗೂ ಸಂತೃಪ್ತಿಯ ಛಾಯೆ ಕಂಡಿತು. ತಿಂದ ನಂತರ “ಸರಿ, ಬಾ” ಅಂತ ಅದೇ ತುಳಸಿ ಪಾರ್ಕಗೆ ಕರೆದುಕೊಂಡು ಬಂದು ಕಟ್ಟೆಯ ಕುಳಿತು ಯಾರು, ಏನು, ಯಾವ ಊರು ಹೀಗೆ ಹುಡುಗನ ಬಗ್ಗೆ ಎಲ್ಲಾ ವಿಚಾರಿಸಿ ತಿಳಿದುಕೊಂಡ. ಹುಡುಗ ಅದಾಗಲೇ ಅವನ ಬಲೆಗೆ ಬಿದ್ದಿದ್ದ ಕಾರಣ ಇರುವ ವಿಷಯವೆಲ್ಲಾ ಇದ್ದಂತೆ ಹೇಳಿದ.
“ಲೋ, ನಂದೇ ನೂರು ಹೋಟೆಲ್ ಇದೆ ಕಣೋ”
“ಹೌದಾ ಅಣ್ಣ, ನಿಜವಾಗಲೂ??”
“ಹೌದು ಕಣೋ ನಿನಗೆ ನಾಲ್ಕು ಹೊತ್ತು ಹೊಟ್ಟೆ ತುಂಬಾ ಊಟ, ಇರೋಕೆ ಜಾಗ, ಕೈ ತುಂಬಾ ಸಂಬಳ ಕೊಡಸತೀನಿ. ಕೆಲಸ ಮಾಡತೀಯಾ?”
“ಅಣ್ಣ ನನಗೆ ಕೆಲಸ ಬರಲ್ಲ, ಆದರೆ ಕಲಿತುಕೊಂಡು ಮಾಡತೀನಿ ಅಣ್ಣ”
“ಸರಿ ಕಣೋ, ಹಾಗಿದ್ದರೆ ಇರು. ಇವಾಗಲೇ ಒಬ್ಬರು ಜೊತೆ ಕಳಿಸಿ ಕೊಡತೀನಿ.. ಕೆಲಸ ಮಾಡುವಂತೆ” ಅಂತ ಫೋನ್ ತೆಗೆದುಕೊಂಡು ಆ ದಿನ ಕೆಲಸಕ್ಕೆ ಜನ ಬೇಕೆಂದು ಹುಡುಕಿಕೊಂಡು ಬಂದಿದ್ದ ದರ್ಶಿನಿ ಹೋಟೆಲವೊಂದರ ಮ್ಯಾನೇಜರಗೆ ಕರೆ ಮಾಡಿ ಐದೇ ನಿಮಿಷದಲ್ಲಿ ಅಲ್ಲಿಗೆ ಕರೆಸಿಕೊಂಡ.
“ನೋಡಿ ಸರ್, ಹೆಂಗ ಇದಾನೆ?? ನಮ್ಮ ಹುಡುಗ! ಕೆಲಸ ಎಲ್ಲಾ ಬೊಂಬಾಟ್ ಆಗಿ ಮಾಡತಾನೆ ಕಣ್ರೀ”
“ಓಹೋ, ಹೌದಾ”
“ಹೌದೌದು, ನನಗೆ ಬರಬೇಕಾದ ಕಮೀಷನ್ ಎರಡು ಸಾವಿರ ಕೊಟ್ಟು ಕರಕೊಂಡು ಹೋಗ್ತಾ ಇರಿ” ಎಂದು ದುಡ್ಡು ತಗೊಂಡು ಹುಡುಗನ ಕಳಿಸಿದ. ತನ್ನ ಹೋಟೆಲಗೆ ಕರೆದುಕೊಂಡು ಹೋದ ಹುಡುಗನಿಗೆ ಕ್ಲೀನ್ ಮಾಡುವ ಕೆಲಸ ಕೊಟ್ಟ. ಹುಡುಗನಿಗೆ ಆರಂಭದಲ್ಲೇ ತೊಂದರೆ ಕೊಟ್ಟರೆ ಕೆಲಸ ಬಿಟ್ಟು ಓಡಿ ಹೋಗ್ತಾನೆ, ಮತ್ತೆಲ್ಲಿ ಇನ್ನೊಬ್ಬನ ಹುಡುಕುವುದೆಂದು ಸರಿಯಾಗಿ ನಡೆಸಿಕೊಂಡ. ಆದರೆ ದಿನ ಕಳೆದಂತೆ “ತಿಂದ ಪ್ಲೇಟ್ ನೀಟ್ ಆಗಿ ಎತ್ತೋಕ್ಕೆ ಬರಲ್ಲವೇನೋ ಕತ್ತೆ, ಎಮ್ಮೆ ತರಹ ತಿನ್ನೋಕ್ಕೆ ಮಾತ್ರ ಬರುತ್ತಾ???” ಎಂದು ವಿಧ ವಿಧವಾದ ಬೈಗುಳದಿಂದ ಹೊಡೆದು ಜಾಸ್ತಿ ಕೆಲಸ ಮಾಡಿಸುತ್ತಿದ್ದರು. ತಿಂಗಳು ಆದರೂ ಇನ್ನೂ ಸಂಬಳ ಕೊಟ್ಟಿಲ್ಲ ಅಂತ ಹೋಗಿಕೇಳಿದರೆ “ನೆಟ್ಟಗೆ ಕೆಲಸ ಮಾಡೋಕೆ ಬರಲ್ಲ ನಿನಗೆ, ಸಂಬಳ ಬೇಕೇನೋ ಸಂಬಳ” ಎಂದು ಆ ರಾತ್ರಿ ಹಿಡಿದು ಮೈಮೇಲೆ ಬಾಸುಂಡೆ ಬರುವಂತೆ ಚೆನ್ನಾಗಿ ಬಾರಿಸಿದರು. ತುಂಬಾ ನೋವಿನಿಂದ ಎದ್ದು ಬಿದ್ದು ಒದ್ದಾಡಿದ ಹುಡುಗನಿಗೆ ಅಲ್ಲಿಯೇ ಕೆಲಸ ಮಾಡುವ ಯಾರು ಕೂಡ ಸಹಾಯ ಮಾಡಲಿಲ್ಲ.
ಸಮಯ ಮಧ್ಯರಾತ್ರಿ ಪ್ಲೇಟ್ ತೊಳೆಯುತ್ತಿದ್ದ ಹುಡುಗ ಹತ್ತಿರ ಬಂದು “ನೋವು ಆಗ್ತಾ ಇದೀಯಾ” ಆತನಿಂದ ಮಾತಿಲ್ಲ. ಈತನೇ ಮುಂದುವರಿದು “ಇಲ್ಲಿ ಇದು ಕಾಮನ್, ಇಂತಹ ಒದೆಗಳನ್ನು ನಾನಿಲ್ಲಿ ಎಷ್ಟು ತಿಂದಿದೀನೋ” ಈಗಲೂ ಅವನಿಂದ ಮಾತಿಲ್ಲ. “ನಿನಗೆ ಮಾತ್ರ ಅಲ್ಲ, ನನಗೂ ಕೂಡ ಇಲ್ಲಿ ಆರು ತಿಂಗಳಿಂದ ಸಂಬಳ ಕೊಟ್ಟಿಲ್ಲ.. ಕೇಳಿದರೆ ಮುಂದಿನ ತಿಂಗಳು ತಗೊಳ್ಳೋ ಅಂತ ಆಗಾಗ ಭಿಕ್ಷೆ ಹಾಕಿದಂಗೆ ಖರ್ಚಿಗೆ ನೂರು ಇನ್ನೂರು ಕೊಡತಾರೆ ಅಷ್ಟೇ” ಈಗ ಅವನು ಆತಂಕ ಆಶ್ಚರ್ಯಗಳಿಂದ ನೋಡತೊಡಗಿದ. “ಬೇರೆ ಒಳ್ಳೆಯ ಕಡೆ ಎಲ್ಲಾದರೂ ಕೆಲಸ ಮಾಡೋದು ಬಿಟ್ಟು ಇಲ್ಲಿಗೆ ಯಾಕೆ ಬಂದು ಸಿಕ್ಕಾಕೊಂಡೆ?? ಬ್ರೋಕರ್ ಕರಕೊಂಡು ಬಂದು ಬಿಟ್ಟಾನಾ” ಹುಡುಗ ಈಗ ಮೆಲ್ಲಗೆ ಎದ್ದು ತಲೆ ಅಲ್ಲಾಡಿಸಿದ. “ನನ್ನನ್ನು ಬ್ರೋಕರೆ ಕರೆದುಕೊಂಡು ಬಂದು ಬಿಟ್ಟ, ಪಾಸ್ಟ್ ಇಬ್ಬರೂ ಇಲ್ಲಿಂದ ಓಡಿ ಹೋಗೋಣ ಐದು ಗಂಟೆಗೆ” ಅಂತ ಅಂದ.
ಸರಿ ಇನ್ನೇನು ಸಮಯ ಬೆಳಗಿನ ಜಾವ ಐದು, ಇಬ್ಬರು ಮೆಲ್ಲಗೆ ಬಾಗಿಲು ತೆಗೆದು ಹೊರ ಹೋಗಿ ಇನ್ನೇನು ಗೇಟ್ ಹಾರಬೇಕು ಎನ್ನುವಷ್ಟರಲ್ಲಿ ಅಲ್ಲಿ ಕೆಲಸ ಮಾಡುವವರು ಕೂಗುತ್ತಾ ಓಡಿ ಬಂದು ಹಿಡಕೊಂಡರು. ಆದರೂ ಹೇಗೋ ಮಾಡಿ ಆ ಇನ್ನೊಬ್ಬ ತಪ್ಪಿಸಿಕೊಂಡು ಬಿಟ್ಟ. ಇವನನ್ನು ಹಿಡಿದು ಎಳಕೊಂಡು ಬಂದು ಅವರು ಎಲ್ಲರೂ ಸೇರಿಸಿ ಮತ್ತೊಂದು ನಾಲ್ಕು ಹೊಡೆದರು. ಬೆಳಿಗ್ಗೆ ಎದ್ದು ಬಂದ ಮ್ಯಾನೇಜರ್ “ತಪ್ಪಿಸಿಕೊಂಡು ಹೋಗತಿಯೇನೋ ನಾಯಿ” ಎಂದು ಕೋಲು ಮತ್ತೊಂದು ನಾಲ್ಕು ಜೋರಾಗಿ ಕೊಟ್ಟ. ಹುಡುಗನಿಗೆ ಮೇಲೆ ಏಳೋದಕ್ಕೂ ಆಗದೆ ಮಾತಾಡೋದಕ್ಕೂ ಆಗದೆ ಬಿದ್ದಲ್ಲೇ ಚಿತ್ರಹಿಂಸೆ ಅನುಭವಿಸುತ್ತಾ ನರಳಾಡಿದ.
“ಇವನನ್ನು ಹೊರಗೆ ಕ್ಲೀನ್ ಮಾಡೋಕೆ ಬಿಟ್ಟರೆ ಮತ್ತೆ ಓಡಿ ಹೋಗತಾನೆ, ಒಳಗೆ ಪಾತ್ರೆ ತೊಳೆಯೋಕೆ ಬಿಡ್ರೋ, ಮತ್ತೆ ಏನಾದರೂ ಹೊರಗೆ ಹೋಗೋಕ್ಕೆ ನೋಡಿದರೆ ಅಲ್ಲಿಯೇ ಕೆಳಗೆ ಹಾಕೊಂಡ ರುಬ್ಬರೋ ಇವನ” ಅಂತೆಲ್ಲಾ ಕೂಗಾಡಿ ಆತನಿಗೆ ಏಳಕ್ಕಾಗದೆ ಇದ್ದರೂ ಹೆದರಿಸಿ ಬೆದರಿಸಿ ಹೊಡೆದು ಕೆಲಸ ಮಾಡಿಕೊಂಡರು. ಇದು ದಿನವೂ ಹೀಗೆ ಸಾಗಿತ್ತು. ಬಿದ್ದ ಪೆಟ್ಟುಗಳ ನೋವಿನಿಂದ ಸ್ವಲ್ಪ ಸುಧಾರಿಸಿಕೊಂಡರೂ ಈಗ ಆತನ ಕೈಕಾಲುಗಳಲ್ಲಿ ಬೊಬ್ಬೆ ಎದ್ದು ಮತ್ತೊಂದು ನರಕ ಕಂಡ. ಇಲ್ಲಿಂದ ಹೇಗಾದರೂ ಮಾಡಿ ಹೊರಗೆ ಹೋಗಬೇಕು ಎನ್ನುವುದೇ ಈಗ ಆತನ ಮಹಾದಾಸೆ ಆಗಿತ್ತು.
ನಾಲ್ಕು ತಿಂಗಳ ನಂತರ ಒಂದು ಸಂಜೆ ಹೇಗೋ ಎಲ್ಲರ ಕಣ್ತಪ್ಪಿಸಿ ಅಲ್ಲಿಂದ ಓಡಿ ಹೋದ. ಮತ್ತದೇ ಮೆಜೆಸ್ಟಿಕ್, ಗಾಂಧಿ ನಗರ, ಕಬ್ಬನ್ ಪಾರ್ಕನ ಅಲೆದಾಟ, ಹಸಿವಿನಿಂದ ನರಳಾಟ. ಎರಡು ದಿನ ಆಗುತ್ತಿದ್ದಂತೆ. ಅಗೋ! ಆತ ಅಲ್ಲಿ ತುಳಸಿ ಪಾರ್ಕನ ಹತ್ತಿರ ಬರತಾ ಇದ್ದಾನೆ!! ಅದೇ, ಅವನೇ ಹುಡುಗರನ್ನು ಪಳಗಿಸಿ ದುಡ್ಡು ಮಾಡುವ ಬ್ರೋಕರ್!!!
“ಓಹೋ ಈ ನನ್ನ ಮಗ ಇಲ್ಲಿ ಇದಾನಾ? ಇರು ಮಾಡತೀನಿ ಇವನಿಗೆ” ಅಂದುಕೊಂಡು ಅವನ ಹತ್ತಿರ ಬಂದ ಬ್ರೋಕರ್ “ಏನೋ ಶಿಷ್ಯ, ಅಲ್ಲಿ ಕೆಲಸ ಬಿಟ್ಟಾ ಅಥವಾ ಓಡಿ ಬಂದಾ?”
“ಏನಣ್ಣ ನೀನು, ನಿನ್ನ ನಂಬಿ ಬಂದರೆ ಎಂತಹ ಕಡೆ ಕಳಿಸಿದ್ದೀಯಾ? ನಿನ್ನ ಸಹವಾಸ ಬೇಡ. ನಾನೇ ಹುಡುಕೊಂತೀನಿ ಕೆಲಸ” ಅಂತ ಅಲ್ಲಿ ನಡೆದಿದ್ದೆಲ್ಲಾ ಹೇಳಿದ
“ಹಾಗಾಯಿತಾ!!! ಈ ಸಲ ಹಾಗಾಗಲ್ಲ!!! ಒಳ್ಳೆಯ ಕಡೆ ಕಳಿಸಿ ಕೊಡತೀನಿ. ಅಲ್ಲಿ ನೀನೇ ರಾಜ… ಹೋಗಿ ಆರಾಮಾಗಿ ಮಾಡಕೊಂಡು ಇರು” ಅಂತ ಹಾಗೂ ಹೀಗೂ ಹುಡುಗನ ಪುಸಲಾಯಿಸಿ ಇನ್ನೊಂದು ಕಡೆ ಕಳಿಸಿ ಕೊಟ್ಟ. ಮತ್ತೆ ಅಲ್ಲಿಯೂ ಅದೇ ನರಕ ಯಾತನೆ. ಸ್ವಲ್ಪ ದಿನ ಕೆಲಸ ಮಾಡಿ ಮತ್ತೆ ಅಲ್ಲಿಂದನೂ ಎಸ್ಕೇಪ್.
ಮತ್ತದೇ ಮೆಜೆಸ್ಟಿಕ್, ಅದೇ ತುಳಸಿ ಪಾರ್ಕ್, ಅವನಂತೆಯೇ ಚಿತ್ರ ವಿಚಿತ್ರ ಆಗಿರುವ ಬ್ರೋಕರಗಳು… ಅದರಲ್ಲಿ ಒಬ್ಬ ಇವನನ್ನು ಮತ್ತೆ ಪುಸಲಾಯಿಸಿ ಮತ್ತೊಂದು ಹೋಟೆಲಗೆ ಕಳಿಸಿ ಕೊಟ್ಟ. ಪದೇ ಪದೇ ಇದೇ ಪುನರಾವರ್ತಿತ ಆಗಿ ಹುಡುಗನಿಗೆ ಈಗ ಅನೇಕ ಅನುಭವಗಳಾಗಿ ಪಾಠ ಕಲಿತಿದ್ದಾನೆ, ಅದಕ್ಕೆ ಈಗ ಅವನು ಅಮಾಯಕನಲ್ಲ… ಚಿಗುರುತ್ತಿರುವ ಕಿಲಾಡಿ. ಹುಡುಗ ಈಗ ಅದೇ ಬ್ರೋಕರಗಳೊಂದಿಗೆ ಮಾತಾಡಿ ಒಪ್ಪಂದ ಮಾಡಿಕೊಂಡು ಹೊಸದೊಂದು ವ್ಯವಹಾರ ಮಾಡತಾ ಇದಾನೆ. ಇದು ಅವನಿಗೆ ಒಂದಿಷ್ಟು ದರ್ಶಿನಿ ಹೋಟೆಲಗಳ ಮೋಸದ ವಿರುದ್ಧದ ಹೋರಾಟ ಮತ್ತು ಪ್ರತಿಕಾರ ಎಂದು ಸಮರ್ಥಿಸಿಕೊಂಡಿದ್ದ. ಏನಪಾ ಅದು ವ್ಯವಹಾರ ಅಂದರೆ ಆತ ದಿನ ಯಾವ ಬ್ರೋಕರ್ ಯಾವ ಹೋಟೆಲಗೋ ಕಳಿಸತಾನೋ ದಿನ ಅಲ್ಲಿಗೆ ಹೋಗಿ ಒಂದಿಷ್ಟು ಕೆಲಸ ಮಾಡಿದ ಹಾಗೆ ಮಾಡಿ ತಿಂಡಿ ಊಟ ಮಾಡಕೊಂಡು ಮಾಲೀಕನಿಗೆ ಏನಾದರೂ ಸುಳ್ಳು ಹೇಳಿ ನೂರೋ ಇನ್ನೂರೋ ಕೊಟ್ಟಷ್ಟು ತಗೊಂಡು ಮೆಲ್ಲಗೆ ಅಲ್ಲಿಂದ ಎಸ್ಕೇಪ್ ಆಗಿ ಆ ಬ್ರೋಕರ್ ಹತ್ತಿರ ಬಂದು ಅವನಿಗೆ ಬರುವ ಕಮೀಷನ್ ಅಲ್ಲಿ ಇವನಿಗೆ ಶೇ ೨೫% ರಷ್ಟು ಪಡೆಯುತ್ತಿದ್ದ. ಈಗ ಪ್ರತಿ ದಿನವೂ ಹುಡುಗನದು ಇದೇ ಕೆಲಸ.
ಆ ಹುಡುಗ ಈಗ ಕೆಳಮಟ್ಟದ ಎಲ್ಲಾ ಪಟ್ಟುಗಳನ್ನು ಕಲಿತು ದೊಡ್ಡವನಾಗಿದ್ದಾನೆ. ಅಂದು ಇದ್ದ ಬ್ರೋಕರಗಳು ಇಂದು ಇಲ್ಲ. ಆದರೆ ಅದೇ ತುಳಸಿ ಪಾರ್ಕ್ ಹತ್ತಿರ ಇಂದು ಈ ಹುಡುಗನೇ ದೊಡ್ಡ ಬ್ರೋಕರ್. ಬೆಂಗಳೂರಿಗೆ ಬರುವ ಹೊಸ ಹೊಸ ಹುಡುಗರನ್ನು ಪುಸಲಾಯಿಸಿ ಕರೆದುಕೊಂಡು ಬಂದು ಕಳಿಸಿ ಕಮೀಷನ್ ದುಡ್ಡು ಪಡೆದು ಜೀವನ ಮಾಡ್ತಾ ಇದಾನೆ.
“ಅವತ್ತು ಎಲ್ಲಾ ಕಷ್ಟ ನೋವುಗಳನ್ನು ಅನುಭವಿಸಿ ಆ ಹಂತ ದಾಟಿ ಇನ್ನೇನೋ ಮಾಡಿ ಹೋರಾಟ, ಪ್ರತಿಕಾರ ಅಂದವನು, ಇವತ್ತು ಅದೇ ಖೆಡ್ಡಾ ಬೇರೆಯವರಿಗೆ ತೋಡಿ ತಲೆ ಹಿಡಿದು ಅವರ ಜೀವನ ಹಾಳು ಮಾಡತಾ ಇದೀಯಾ ಅಲ್ವಾ, ಇದು ಸರೀನಾ” ಎಂದೊಮ್ಮೆ ಯಾರೋ ಕೇಳಿದರು. ಆತ ಅದಕ್ಕೆ ಎಂದ ಅವನ ಪ್ರಕಾರ ಆತ ಮಾಡತಾ ಇರೋದೇ ಸರಿ ಯಾಕೆ ಅಂದರೆ ಅದು ಈಗ ಅವನ ಜೀವನದ ಹೊಟ್ಟೆ ಪಾಡು ಅಂತೆ. ಅನುಭವಗಳು ಒಬ್ಬ ವ್ಯಕ್ತಿಯನ್ನು ಸಕರಾತ್ಮಕವಾಗಿ ಬದಲಾಯಿಸಿದರೆ ಅದಕ್ಕೆ ಅರ್ಥ ಮತ್ತು ಸಾರ್ಥಕ ಭಾವವನ್ನು ಪಡೆಯುತ್ತವೆ.
“ಏನು ಅದು ಅಲ್ಲಲ್ಲಿ ಗಾಯ?”
“ಅದಾ, ಹೀಗೆ ಒಬ್ಬ ಹುಡುಗನಿಗೆ ಕಳಿಸಿದ್ದೆ ಅವನಿಗೆ ಅದೇನೋ ಆಗಿ ಅದು ಅವರ ಮನೆಗೆ ಗೊತ್ತಾಗಿ ಹುಡುಕಾಡಕೊಂಡು ಬಂದು ಹೊಡೆದು ಪೋಲೀಸ ಕೇಸ್ ಆಗಿ ಏನೇನೋ ರಾದ್ಧಾಂತ ಆಯಿತು. ಆದರೆ ಇವೆಲ್ಲಾ ಕಾಮನ್ ಬಿಡಪಾ, ಒಂಥರಾ ಪ್ರಮೋಷನ್ ಇದ್ದ ಹಂಗೆ. ಜನರಲ್ಲಿ ನಮ್ಮ ಬಗ್ಗೆ ಒಂದು ಭಯ ಹುಟ್ಟು ಬಿಡುತ್ತೆ” ಕೆಟ್ಟದ್ದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಇನ್ನೂ ಕೆಲವರು ಹೀಗೆ ನಕರಾತ್ಮಕವಾಗಿ ಬೆಳೆದು ಅದೇ ಜೀವನ ಅದೇ ಸರಿ ಎಂದು ನಕರಾತ್ಮಕವಾಗಿ ಬೆಳಿತಾರೆ. ಅಲ್ಲಿ ಆಗಿ ಹೋದ ಹೆಚ್ಚಿನ ಹೋಟೆಲ್ ಬ್ರೋಕರಗಳು ಬೆಳೆದು ಬಂದ ರೀತಿಯೇ ಹೀಗೆ ಅಂತೆ. ಆದರೆ ತುಳಸಿ ಪಾರ್ಕ್ ಸಹವಾಸ ಮಾಡಿದವರ ಯಾರ ಜೀವನವೋ ಇಲ್ಲಿತನಕ ಹಸನಾಗಿಲ್ಲ. ಹೌದು ಅಲ್ಲಿ ಅದೇ ಪಾರ್ಕ್ ಹತ್ತಿರ ಮೊನ್ನೆ ಯಾರದೋ ಶವ ಸಿಕ್ಕಿತಂತೆ.. ಅಂದಿನಿಂದ ಅವನು ಅಲ್ಲಿ ಯಾರಿಗೂ ಕಂಡಿಲ್ಲ. ಹಾಗಾದರೆ ಅದು ಅವನೇ ಆಗಿರಬಹುದಾ???” ಇನ್ನೂ ವಯಸ್ಸಿರುವಾಗ ಹೀಗೆ ಕಳೆದು ಹೋದವರೆ ಕಥೆಗಳೇ ಹೆಚ್ಚು ಅಲ್ಲಿ.
#ಬಸವರಾಜ_ಕಾಸೆ