Thursday, June 26, 2025

ಗಹನತತ್ತ್ವದ ಹುಡುಕಾಟದಲ್ಲಿ…

* ರೇಶ್ಮಾ ಭಟ್

ಜೀವ, ಜಗತ್ತು, ಈಶ್ವರ-ಇವುಗಳ ಸಂಬಂಧದ ಬಗ್ಗೆ ಉಪನಿಷತ್ತುಗಳ ಕಾಲದಿಂದಲೇ ಬಹಳಷ್ಟು ಚರ್ಚೆಗಳು ನಡೆದಿವೆ. ಈ ಸೃಷ್ಟಿಯ ರಹಸ್ಯಗಳನ್ನು ಬೇಧಿಸಿದಷ್ಟು ಇದರೊಳಗೆ ಏನೋ ಅಡಗಿದೆ ಎಂದೇ ಪುನಃ ಅದನ್ನು ಹುಡುಕಲು ಹೊರಡುವುದು, ಇದು ಮನುಷ್ಯನ ಕುತೂಹಲ ಇನ್ನೂ ತಣಿದಿಲ್ಲ ಎಂಬುದರ ದ್ಯೋತಕ. ಇದಕ್ಕೆ ಸಾಕ್ಷಿಯಾಗಿ ಡಿವಿಜಿಯವರ ’ಮಂಕುತಿಮ್ಮನ ಕಗ್ಗ’ದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಚೌಪದಿಗಳನ್ನು ನೋಡಬಹುದು.
ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕೆ ನಮಿಸೊ- ಮಂಕುತಿಮ್ಮ||
’ಯಾವುದೇ ಭಾವನೆಗಳಿಗೆ ನಿಲುಕದಂತಿರುವ, ಮನುಷ್ಯ ಜೀವನದ ಯಾವುದೇ ಅಳತೆ ಪ್ರಮಾಣಕ್ಕೆ ಸಿಕ್ಕದಂತಿರುವ ಆ ವಿಶೇಷಕ್ಕೆ’ ಎಂದು ಡಿವಿಜಿಯವರು ಇಲ್ಲಿ ಹೇಳುತ್ತಿದ್ದಾರೆ. ’ವಿಶೇಷ’ ಎಂದರೆ ಯಾವುದೋ ಒಂದು ಅಗೋಚರವಾದದ್ದು ಈ ಇಡೀ ಪ್ರಪಂಚವನ್ನು ಅವರಿಸಿಕೊಂಡು ಇರುವಂಥದ್ದು ಎಂದು ಅರ್ಥ. ಅವರವರ ಭಾವಕ್ಕೆ ಬಂದ ಹಾಗೆ ’ಅದನ್ನು’ ಗ್ರಹಿಸಿಕೊಳ್ಳಬೇಕಷ್ಟೆ.
ಅಧ್ಯಾತ್ಮ ಎಂದರೂ ಅದೇ ಅಲ್ಲವೇ? ಆತ್ಮನಿಗೆ ಸಂಬಂಧಿಸಿದ್ದು ಅಂದರೆ ಮನುಷ್ಯನಿಗೆ ಸಂಬಂಧಿಸಿದ್ದು, ಸಂಸ್ಕೃತದಲ್ಲಿ ಆತ್ಮ ಎಂದರೆ ವ್ಯಕ್ತಿ (ನಾನು,ನನ್ನ) ಎಂದರ್ಥ. ’ಆತ್ಮಜ’ ಎಂದರೆ ಮಗ ಎಂಬ ಅರ್ಥದಲ್ಲಿ ಇದನ್ನು ಕಾಣಬಹುದು. ಈ ಅರ್ಥದಲ್ಲಿ ನೋಡಿದರೆ ಅಧ್ಯಾತ್ಮ ಎಂದರೆ ಮನುಷ್ಯನ ಅತ್ಯಂತ ಖಾಸಗಿಯಾದ ಅನುಭವ ಎಂದರ್ಥ. ಇದನ್ನು ಡಿವಿಜಿಯವರು ’ಭಾವಕ್ಕೊಳಪಡದಂತೆ ಅಳತೆಗಳವಡದಂತೆ’ ಎಂದರೂ ಇದು ಯಾವುದೋ ಒಂದು ರೀತಿಯಲ್ಲಿ, ಅಂದರೆ ಪ್ರಕೃತಿಯಾಗಿಯೋ, ಭಗವಂತನಾಗಿಯೋ ಮಾನವನ ಅನುಭವಕ್ಕೆ ಒದಗಿಬಂದರೆ ಆಗ ಅದನ್ನೆ ನಮ್ಮ ನಮ್ಮ ಆಧ್ಯಾತ್ಮಿಕ ಅನುಭವವಾಗಿ ಒಪ್ಪಿಕೊಳ್ಳಬೇಕು ಎಂಬ ಭಾವ. ಇಂಥಹುದೇ ಇನ್ನೊಂದು ಕಗ್ಗವನ್ನು ನೋಡೋಣ.
ಶ್ರೀ ವಿಷ್ಣುವಿಶ್ವಾದಿಮೂಲ ಮಾಯಾಲೋಲ|
ದೇವ ಸರ್ವೇಶ ಪರಬೊಮ್ಮನೆಂದು ಜನಂ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
ಆ ವಿಚಿತ್ರಕೆ ನಮಿಸೊ- ಮಂಕುತಿಮ್ಮ||
ಕಣ್ಣಿಗೆ ಕಾಣದಿದ್ದರೂ ಜನ ಪ್ರೀತಿಯಿಂದ ಆ ಶಕ್ತಿಗೆ ಒಂದೊಂದು ಹೆಸರಿಟ್ಟು ನಂಬುತ್ತಾ ಬಂದಿರುವಾಗ ಅದನ್ನು ನಾವೂ ಒಪ್ಪಿ ಆದರಿಸೋಣ ಎಂಬ ಭಾವ ಇಲ್ಲಿದೆ. ಮೊದಲು ’ವಿಶೇಷ’ ಎಂದದ್ದನ್ನೇ ಇಲ್ಲಿ ’ವಿಚಿತ್ರ’ ಎಂದಿದ್ದಾರೆ ಡಿವಿಜಿಯವರು. ಇದನ್ನೇ ಇನ್ನೊಂದು ಕಗ್ಗದಲ್ಲಿ ’ಗಹನ’ ಎಂದೂ ಕರೆದಿದ್ದಾರೆ. ’ಗಹನ’ ಎಂದರೆ ’ಸುಲಭವಲ್ಲದುದು’ ’ದಟ್ಟವಾದುದು’ ಎಂಬೆಲ್ಲಾ ಅರ್ಥಗಳನ್ನು ಪಡೆದುಕೊಳ್ಳುತ್ತದೆ.(ಕೆಲವೊಮ್ಮೆ ಅನುಭವಕ್ಕೆ ನಿಲುಕಿದರೂ ವಿವರಣೆಗೆ ಸುಲಭವಾಗಿ ನಿಲುಕ್ಕದ್ದು.)
ಇಹುದೊ ಇಲ್ಲವೊ ತಿಳಿಗೊಡದೊಂದು ವಸ್ತು ನಿಜ|
ಮಹಿಮೆಯಿಂ ಜಗವಾಗಿ ಜೀವವೇಷದಲಿ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
ಗಹನ ತತ್ತ್ವಕೆ ಶರಣೊ- ಮಂಕುತಿಮ್ಮ||
ಸಂಶಯಗಳು ಹಲವಿದ್ದರೂ ಕಣ್ಣಿಗೆ ಕಾಣುವ ಈ ಜಗತ್ತು ಎಂಬುದೊಂದು ನಮ್ಮೆದುರಿಗಿದೆ. ಇಲ್ಲಿ ಕೆಲವು ವಿಷಯಗಳು ಅದರಷ್ಟಕ್ಕೆ ನಡೆದುಕೊಂಡು ಹೋಗುತ್ತಿವೆ. ಇದನ್ನು ಎಂಥಾ ನಾಸ್ತಿಕನೂ ಒಪ್ಪಿಕೊಳ್ಳಲೇಬೇಕು. ಕಣ್ಣಿಗೆ ಕಾಣುವುದಷ್ಟು ಸತ್ಯ ಎಂಬುದನ್ನು ಚಾರ್ವಾಕರೂ ಒಪ್ಪುತ್ತಾರೆ. ಈ ನಿಟ್ಟಿನಲ್ಲಿ ನೋಡಿದರೆ ಮೇಲಿನ ಮೂರು ಕಗ್ಗಗಳೂ ಕೂಡ ಆ ಅಗೋಚರವನ್ನು ಹೇಳಲು ಪ್ರಯತ್ನಿಸಿವೆ ಎಂಬುದು ತಿಳಿಯುತ್ತದೆ. ಒಂದು ರೀತಿಯಲ್ಲಿ ನೀರಿನ ಆಕಾರವನ್ನು ವಿವರಿಸಿದಂತೆ. ಕೊನೆಗೆ ಅದು ನಮ್ಮ ನಮ್ಮ ಅನುಭವಕ್ಕೆ ದಕ್ಕಿದಂತೆ ಏನೋ ಒಂದು ಆಗಿರುತ್ತದೆ. ಅದುವೇ ಅಧ್ಯಾತ್ಮ ಎನಿಕೊಳ್ಳುತ್ತದೆ ಎಂಬುದೇ ಒಟ್ಟಾರೆಯಾದ ತಾತ್ಪರ್ಯ. ಇಂಥಾ ಹುಡುಕಾಟಗಳಿಂದಲೇ ಭಾರತೀಯರ ದೃಷ್ಟಿ ವಿಶ್ವಾತ್ಮಕವಾಯಿತು. ಏನೇ ಆದರೂ ಮನುಷ್ಯನ ಮನಸ್ಸು ಮತ್ತೆ ಮತ್ತೆ ಇಂಥದರ ಹುಡುಕಾಟಕ್ಕೆ ತುಡಿಯುತ್ತಿರುತ್ತದೆ ಎಂಬುದು ಸತ್ಯ.
ಏನು ಜೀವನರ್ಥ ಏನು ಪ್ರಪಂಚಾರ್ಥ?|
ಏನು ಜೀವ ಪ್ರಪಂಚಗಳ ಸಂಬಂಧ?||
ಕಾಣದಿಲ್ಲಿರ್ಪುದೇನಾನುಮುಂಟೇ?| ಅದೇನು?|
ಜ್ಞಾನ ಪ್ರಮಾಣವೇಂ?_ಮಂಕುತಿಮ್ಮ||
ಡಿವಿಜಿಯಂಥವರ ಮನಸ್ಸೂ ಇಂಥ ಹುಡುಕಾಟಕ್ಕೆ ಹೊರಟು ತೊಯ್ದಾಡಿತ್ತು ಎಂಬುದು ಇಲ್ಲಿ ವೇದ್ಯವಾಗುತ್ತದೆ.
** ** **

More from the blog

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...