Thursday, February 13, 2025

ಸುಂಕದ ಬೇಲಿ

ಕಳೆದ ಸಂಚಿಕೆಯಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿದ್ದ ಸಾರ್ಥದ ಗುಂಪುಗಳು ಹಾಗೆಯೇ ಸಿಲ್ಕ್ ರೋಡ್ ಎನ್ನುವ ಪ್ರಾಚೀನ ವಾಣಿಜ್ಯ ವಹಿವಾಟಿನ ದಾರಿ ಇವುಗಳ ಬಗ್ಗೆ ಕೆಲವು ಮಾಹಿತಿಗಳನ್ನು ಅನತಿಯಲ್ಲಿ ಹಂಚಿಕೊಂಡಿದ್ದೆ. ಅಲ್ಲಿ ಒಂದು ವಿಷಯ ಹೇಳಲು ಮರೆತಿದ್ದೆ. ಅದೆಂದರೆ ಈ ವಾಣಿಜ್ಯ ಗುಂಪುಗಳು ಸಾಗುತ್ತಿದ್ದ ದಾರಿಗಳಲ್ಲಿದ್ದ ತೆರಿಗೆ ವಸೂಲಿ ಕೇಂದ್ರಗಳ ಬಗ್ಗೆ. ಹೆದ್ದಾರಿಗಳ ಟೋಲ್ ಗೇಟ್ ಗಳನ್ನು ರದ್ದುಪಡಿಸಬೇಕೆಂದು ಮುಷ್ಕರಗಳಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ಸಂಗತಿ. ಆದರೆ ಈ ಟೋಲ್ ಗೇಟ್ ಗಳ ಕಲ್ಪನೆ ತುಂಬಾ ಹಿಂದಿನದು ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಹಿಂದೆ ಅಂದರೆ ಸುಮಾರು ಏಳು- ಎಂಟನೇ ಶತಮಾನದಲ್ಲಿ ಸಾರ್ಥದ ಗುಂಪುಗಳ ಕ್ರಮಬದ್ಧವಾದ ಚಲನೆ ಇದ್ದ ಕಾಲದಲ್ಲಿ ಇಂಥಾ ಸುಂಕದ ಕಟ್ಟೆಗಳು ನಮ್ಮ ದೇಶದಲ್ಲಿ ಇದ್ದ ಮಾಹಿತಿ ಸಿಕ್ಕುತ್ತದೆ. ಒಂದು ರಾಜ್ಯದ ಸಾರ್ಥದ ಗುಂಪುಗಳು ಬೇರೆ ರಾಜ್ಯಗಳನ್ನು ಪಟ್ಟಣಗಳನ್ನು ಪ್ರವೇಶ ಮಾಡುವಾಗ ಅಲ್ಲಿನ ಆಢಳಿತಾಧಿಕಾರಿಗಳಿಗೆ ಸರಕಿನ ಲೆಕ್ಕಗಳನ್ನು ಕೊಟ್ಟು ಸುಂಕ ಪಾವತಿ ಮಾಡಿ ಮುಂದುವರಿಯಬೇಕಿತ್ತು. ಆದರೆ ಈ ಸುಂಕ ವಸೂಲಿ ಮಾಡುವ ರಾಜ್ಯದ ರಾಜರಾಗಲೀ ಅಲ್ಲಿನ ಆಢಳಿತಾಧಿಕಾರಿಗಳಾಗಲಿ ಈ ವಣಿಜರ ಗುಂಪುಗಳಿಗೆ ರಕ್ಷಣೆಯನ್ನು ಒದಗಿಸುವ ಯಾ ಅವರು ಸಾಗುವ ರಸ್ತೆಗಳನ್ನು ದುರಸ್ತಿಪಡಿಸುವ ಯಾ ಹವಾಮಾನ ವೈಪರಿತ್ಯದಂತಹ ಗಂಡಾಂತರಗಳಿಂದ ರಕ್ಷಿಸುವ ಯಾವ ಹೊಣೆಯನ್ನೂ ಹೊತ್ತುಕೊಳ್ಳುತ್ತಿರಲಿಲ್ಲ. ಸುಮ್ಮನೆ ಒಂದು ರಾಜ್ಯದ ಒಳಗಡೆ ಪ್ರವೇಶ ಕಲ್ಪಿಸುವುದಕ್ಕಾಗಿ ಮಾತ್ರ ಸುಂಕ ವಸೂಲಿ ಮಾಡುತ್ತಿದ್ದುದು ಕಂಡುಬರುತ್ತದೆ. ಇನ್ನು ಸಿಲ್ಕ್ ರೋಡಿನಲ್ಲೂ ಪ್ರಾಚೀನ ಕಾಲದಲ್ಲಿ ಸುಂಕ ವಸೂಲಿ ಕೇಂದ್ರಗಳಿದ್ದುದು ಹಾಗೂ ಅಲ್ಲಿ ಲಂಚ ವಶೀಲಿಗಳಂತಹ ಅವ್ಯವಹಾರಗಳು ನಡೆಯುತ್ತಿದ್ದುದು ಮುಂತಾದ ಉಲ್ಲೇಖಗಳು ನಮಗೆ ಸಿಗುತ್ತವೆ. ಮಂಗೋಲಿಯನ್ ದೊರೆಯೊಬ್ಬ ಈ ದಾರಿಯಲ್ಲಿ ಸಾಗಿ ತನ್ನ ರಾಜ್ಯವನ್ನು ಸಂದರ್ಶಿಸುವ ವಿದೇಶೀ ಪ್ರವಾಸಿಗರಿಗೆ ಗೋಲ್ಡ್ ಕಾರ್ಡ್ ಗಳನ್ನು ವಿತರಿಸುವ ಪದ್ಧತಿ ಇರಿಸಿಕೊಂಡಿದ್ದ ಎಂದೂ, ಈ ಗೋಲ್ಡ್ ಕಾರ್ಡ್ ಹೊಂದಿರುವವರು ಸುಂಕದಿಂದ ವಿನಾಯಿತಿಯೇ ಮೊದಲಾಗಿ ಅನೇಕ ಸೌಲಭ್ಯ ಸವಲತ್ತುಗಳನ್ನು ಪಡೆಯತ್ತಿದ್ದರೆಂದೂ ತಿಳಿದುಬರುತ್ತದೆ. ಒಟ್ಟಿನಲ್ಲಿ ಈ ಸುಂಕ ವಸೂಲಿಯೆಂಬುದು ಆಧುನಿಕ ಜಗತ್ತಿನ ಉತ್ಪನ್ನ ಎಂದು ನಾವು ತಿಳಿದುಕೊಂಡರೆ ತಪ್ಪಾಗುತ್ತದೆ.
ಬ್ರಿಟೀಷರು ನಮ್ಮ ದೇಶವನ್ನು ವಸಾಹತು ಮಾಡಿಕೊಂಡು ಆಳ್ವಿಕೆ ನಡೆಸಿ ಭಾರತೀಯರಿಂದ ವಸೂಲಿ ಮಾಡುತ್ತಿದ್ದ ಅನೇಕ ಅನಗತ್ಯ ಸುಂಕಗಳ ಬಗ್ಗೆ ನಾವು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೇವೆ. ಈಗ ನಾನು ಹೇಳಲು ಹೊರಟಿರುವುದು ಸುಮಾರು ಮೂರೂವರೆ ಶತಮಾನಗಳಷ್ಟು ಕಾಲ ಭಾರತದಲ್ಲಿದ್ದ ಬ್ರಿಟೀಷರು ನಿರ್ಮಿಸಿದ ಬೃಹತ್ ಸುಂಕದ ಬೇಲಿಯ ಕಥೆಯನ್ನು. ಈಸ್ಟ್ ಇಂಡಿಯಾ ಕಂಪೆನಿಗೆ ಭಾರತವನ್ನು ವಶಪಡಿಸಿಕೊಳ್ಳಬೇಕೆಂಬ ಯಾವ ಇರಾದೆಯೂ ಮೊದಲಿಗೆ ಇರಲಿಲ್ಲ, ಅದರ ಉದ್ದೇಶ ವ್ಯಾಪಾರ. ಅವರ ವ್ಯಾಪಾರ ವಹಿವಾಟಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನೂ ಅವರು ಒಂದೊಂದಾಗಿ ವಿಸ್ತರಿಸಿಕೊಳ್ಳುತ್ತಾ ಬಂದದ್ದು…. ಇದೆಲ್ಲ ನಮಗೆ ತಿಳಿದಿರುವ ವಿಚಾರ. ಈಸ್ಟ್ ಇಂಡಿಯಾ ಕಂಪೆನಿಯ ವಹಿವಾಟುಗಳು, ಅವರು ತಮ್ಮ ವ್ಯಾಪಾರದ ವಿವರಗಳ ಬಗ್ಗೆ ಇಂಗ್ಲೆಂಡಿಗೆ ಕಳುಹಿಸಿದ ವರದಿಗಳು, ದಾಖಲೆಗಳು, ಅಧಿಕಾರಿಗಳ ಬರಹಗಳು ಹೀಗೆ ಎಲ್ಲೋ ಒಂದು ಕಡೆ ದೊರೆತ ಸಣ್ಣ ಮಾಹಿತಿಯ ಜಾಡು ಹಿಡಿದು ಹುಡುಕಾಡಿದ್ದರ ಪರಿಣಾಮವಾಗಿ ಈ ಸುಂಕದ ಬೇಲಿಯ ಕಥೆ ಬೆಳಕಿಗೆ ಬಂತು. ಈ ಕೆಲಸವನ್ನು ಮಾಡಿದವರು ರಾಯ್ ಮ್ಯಾಕ್ಸ್ಹ್ಯಾಮ್ ಎನ್ನುವ ಬ್ರಿಟೀಷ್ ಪ್ರಜೆ. ಅವರ ಈ ಪ್ರಯತ್ನದಿಂದ ಬ್ರಿಟೀಷರ ದಬ್ಬಾಳಿಕೆಯ ಸಂಕೋಲೆಗೆ ಇನ್ನೊಂದು ಕೊಂಡಿ ಸೇರಿದಂತಾಯಿತು. ಮ್ಯಾಕ್ಸ್ ಹ್ಯಾಮ್ ಈ ಬೇಲಿಯ ಹುಡುಕಾಟಕ್ಕಾಗಿ ಅನೇಕ ಸಲ ಭಾರತಕ್ಕೆ ಬಂದು, ಎಲ್ಲೂ ಅದರ ಕುರುಹುಗಳು ಕಾಣದೆ ನಿರಾಶರಾಗಿ ಹಿಂತಿರುಗಿದ್ದರು. ಲಂಡನ್ನಿನ ಹಳೆಯ ಪುಸ್ತಕದ ಅಂಗಡಿ ‘ಕ್ವಿಂಟೋ’ ಹಾಗೂ ಬ್ರಿಟೀಷ್ ಲೈಬ್ರರಿಗಳಲ್ಲಿ ದೊರೆತ ನಕಾಶೆಗಳನ್ನು ಹಿಡಿದುಕೊಂಡು ವಿದ್ಯುತ್ಚಾಲಿತ ಜಿಪಿಎಸ್ ಗಳ ಸಹಾಯದಿಂದ ಅವರು ಈ 2500 ಮೈಲು ಉದ್ದದ ಬೇಲಿಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಯಶ ಕಂಡರು. (ರಾಯ್ ಮ್ಯಾಕ್ಸ್ ಹ್ಯಾಮ್ ಅವರು ತಮ್ಮ ಈ ಅನುಭವಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಇದನ್ನು ಎಸ್. ಎಸ್. ನರೇಂದ್ರ ಕುಮಾರ್ ಅವರು ಕನ್ನಡಕ್ಕೆ ತಂದು ‘ಭಾರತದಲ್ಲೊಂದು ಸುಂಕದ ಬೇಲಿ’ ಎಂಬ ಹೆಸರಿನಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ.)
ಭಾರತದಲ್ಲಿ ಬರ-ಕ್ಷಾಮಗಳಿದ್ದಾಗಲೂ ಕರುಣೆ ತೋರಿಸದ ಬ್ರಿಟೀಷರು, ನಿರ್ದಾಕ್ಷಿಣ್ಯವಾಗಿ ಕರ ವಸೂಲು ಮಾಡಲು ತೊಡಗಿದಾಗ ಜನರಿಗೆ ಬೇರೆ ದಾರಿ ಇಲ್ಲದಾಗಿ ಅಧಿಕಾರಿಗಳ ಕಣ್ತಪ್ಪಿಸಿ ಅಗತ್ಯವಸ್ತುಗಳ ಸಾಗಣಿಕೆಯನ್ನು ಪ್ರಾರಂಭಿಸಬೇಕಾಯಿತು. ತಮ್ಮ ಪ್ರಾಂತ್ಯದಲ್ಲಿ ತಯಾರಾದ ಉಪ್ಪಿನ ಜೊತೆಗೆ ಬೇರೆ ಕಡೆಗಳಲ್ಲಿ ಕಡಿಮೆ ಬೆಲೆಗೆ ದೊರೆಯತ್ತಿದ್ದ ಉಪ್ಪು ಹಾಗೂ ಇತರ ಅಗತ್ಯ ವಸ್ತುಗಳನ್ನು ಸುಂಕ ತಪ್ಪಿಸಿ ಸಾಗಾಟಮಾಡತೊಡಗಿದರು. ಹೀಗೆ ಗುಪ್ತವಾಗಿ ನಡೆಯುತ್ತಿದ್ದ ಈ ಸಾಗಾಟದಿಂದಾಗಿ ಈಸ್ಟ್ ಇಂಡಿಯಾ ಕಂಪೆನಿಯ ಆದಾಯ ಕುಸಿತವಾಗಿ ಅದು ಎಲ್ಲಾ ಕಡೆ ತನ್ನ ಕರ ಸಂಗ್ರಹ ಕೇಂದ್ರಗಳನ್ನು ತೆರೆಯುವಂತೆ ಮಾಡಿತು. ನಂತರದಲ್ಲಿ ಅಂದರೆ ಸುಮಾರು 1820ರ ಆಸುಪಾಸಿನಲ್ಲಿ ಈ ಸುಂಕದ ಕೇಂದ್ರಗಳನ್ನೆಲ್ಲ ಜೋಡಿಸಿ ಒಂದು ಸ್ಪಷ್ಟವಾದ ‘ಸುಂಕದ ರೇಖೆ’ಯನ್ನು ನಿರ್ಮಿಸಲಾಯಿತು. ಕರಸಂಗ್ರಹ ಕೇಂದ್ರಗಳ ನಡುವೆ ಅಂದರೆ ಚೌಕಿಯಿಂದ ಚೌಕಿಗೆ ಬಿದಿರು ಬೊಂಬುಗಳನ್ನು, ಕ್ಯಾಕ್ಟಸ್ ಕಳ್ಳಿಗಳಂತಹ ಮುಳ್ಳುಕಂಠಿಗಳನ್ನು ಹಸಿರು ಗಿಡಗಳನ್ನು ಬಳಸಿ ಪ್ರಬಲವಾದ ಬೇಲಿಯನ್ನು ನಿರ್ಮಿಸಿ, ‘ಸುಂಕದ ರೇಖೆ’ಯನ್ನು ‘ಸುಂಕದ ಬೇಲಿ’ಯನ್ನಾಗಿ ಪರಿವರ್ತಿಸಿದರು. ಇದು ಮೊದಲು ಮಿರ್ಜಾಪುರದಿಂದ ಅಲಹಾಬಾದ್ನವರೆಗೆ ಗಂಗೆಯ ದಕ್ಷಿಣ ದಡದಲ್ಲಿ ಸಾಗಿ, ಆಗ್ರಾದಿಂದ ಮುಂದೆ ಯಮುನೆಯನ್ನು ಅನುಸರಿಸಿ ದೆಹಲಿಯ ವಾಯುವ್ಯ ಬಾಗದಲ್ಲಿ ಕೊನೆಯಾಗುವಂತೆ ಇತ್ತು. ಇದನ್ನು ಯಾರೂ ದಾಟುವಂತಿರಲಿಲ್ಲ. ಆ ಪ್ರದೇಶದ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಸುತ್ತಿಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದಿನದಿಂದ ದಿನಕ್ಕೆ ಇದು ಎಲ್ಲಾ ಚಟುವಟಿಕೆಗಳಿಗೂ ಒಂದು ತಡೆಯಾಗಿ ಪರಿಣಮಿಸಿತು. ಜೊತೆಗೆ ಇದರ ನಿರ್ವಹಣಾ ವೆಚ್ಚವೂ ದೊಡ್ಡ ತಲೆನೋವಿನ ವಿಷಯವಾಯಿತು. ಇದರ ನಿರ್ವಹಣೆಗೆ 136 ಅಧಿಕಾರಿಗಳೂ, 2499 ಸಹಾಯಕ ಕಿರಿಯ ಅಧಿಕಾರಿಗಳೂ, 11,288 ಕಾವಲುಗಾರರೂ, ಹೀಗೆ ಒಟ್ಟು 13,923 ಜನ ಬೇಲಿಯ ವ್ಯವಸ್ಥೆಗೆ ನೇಮಕಗೊಂಡಿದ್ದರು. ಅಷ್ಟೇ ಅಲ್ಲದೆ ಸುಂಕದ ಅಧಿಕಾರಿಗಳ ಲಂಚ ರುಷುವತ್ತುಗಳನ್ನು, ಹಿಂಸೆ ಅನಾಚಾರಗಳನ್ನು ನಿಯಂತ್ರಿಸುವುದು ಬ್ರಿಟೀಷರಿಗೆ ಒಂದು ಸವಾಲಾಗಿ ಪರಿಣಮಿಸಿತು. ಈ ಎಲ್ಲಾ ಕಾರಣಗಳಿಂದ ಸುಂಕದ ಬೇಲಿಯ ವ್ಯವಸ್ಥೆಯನ್ನು ಬ್ರಿಟೀಷ್ ಸರ್ಕಾರ 1879 ಏಪ್ರಿಲ್ ಒಂದರಂದು ರದ್ದುಗೊಳಿಸಿತು. ರಾಷ್ಟ್ರೀಯ ಸ್ಮಾರಕವಾಗಿ, ಬ್ರಿಟೀಷರ ದೌರ್ಜನ್ಯಕ್ಕೆ ಸಾಕ್ಷಿಯಾಗಿ ಇರಬೇಕಿದ್ದ ಈ ಬೇಲಿ ಇಂದು ಕುರುಹುಗಳಿಲ್ಲದೆ ನಾಶವಾಗಿಹೋಗಿದೆ. ಇಂಥಾ ಎಷ್ಟು ವಿಷಯಗಳು ಈ ಮಣ್ಣ ಗರ್ಭದಲ್ಲಿ ಹೂತುಹೋಗಿದೆಯೋ ಬಲ್ಲವರಾರು…?





More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...