Thursday, February 13, 2025

ನಿಜವಾದ ಸುಖವಿರುವುದು ನಮ್ಮ ನದಿ ಸಂಸ್ಕೃತಿ ಪೂರ್ವಜರು ನಮಗೆ ಕೊಟ್ಟ ಜೀವನ ವಿಧಾನದಲ್ಲಿ

ಮಾತಾ ಭೂಮಿಃ| ಪುತ್ರೋಹಂ ಪೃಥಿವ್ಯಾಃ|
’ದುಷ್ಟ ಶಿಕ್ಷಣ ಶಿಷ್ಟ ರಕ್ಷಣ’ ಸಣ್ಣವರಿರುವಾಗ ಪುರಾಣದ ಕಥೆಗಳಲ್ಲಿ, ಮಹಾಭಾರತ ರಾಮಾಯಣ ಮಹಾಕಾವ್ಯಗಳಲ್ಲಿ ಕೇಳಿ ಬೆಳೆದವರು ನಾವು. ’….ಸಂಭವಾಮಿ ಯುಗೇ ಯುಗೇ’ ಎಂದು ಭಗವಂತ ಹೇಳುವ ಮಾತನ್ನೂ ಕೇಳಿದವರು. ಪ್ರಜ್ಞೆ ಬೆಳೆಯುತ್ತಾ ಬಂದಂತೆ ಇದರ ಬಗ್ಗೆ ಸಣ್ಣ ಜಿಜ್ಞಾಸೆಯೂ ಮನಸ್ಸಿನೊಳಗೆ ನಡೆಯುತ್ತಿತ್ತು. ಅಮಾಯಕರ ಸಾವು, ಕಷ್ಟಗಳು ಈ ರೀತಿಯ ಜಿಜ್ಞಾಸೆಗಳಿಗೆ ಚಾಲನೆ ಕೊಡುತ್ತಿತ್ತು. ಇದೆಲ್ಲ ಈಗ ಮತ್ತೆ ನೆನಪಾಗಲು ಕಾರಣವಿದೆ. ಬಾಲ್ಯದ ಈ ನೆನಪುಗಳೊಂದಿಗೆ ಕಣ್ಣೆದುರಿಗೆ ಬರುವ, ಕರ್ನಾಟಕದ ಕಾಶ್ಮೀರ ಅಂತೆಲ್ಲ ಹೊಗಳಿಸಿಕೊಳ್ಳುತ್ತಿದ್ದ ಪುಟ್ಟ ಜಿಲ್ಲೆ ಕೊಡಗು ಇಂದಿನ ಕಾಶ್ಮೀರದಂತೆ ಪ್ರಕ್ಷುಬ್ಧವಾಗಿ ಹೋಗಿದೆ. ಕಾವೇರಿ ತಾಯಿಯ ನೀರು ಕುಡಿದವರು ಜೀವನದಲ್ಲಿ ಏಳಿಗೆಯನ್ನು ಮಾತ್ರ ಕಾಣುತ್ತಾರೆ ಅನ್ನುವುದು ಕೊಡಗಿನ ಹಿರಿಯರು ತಮ್ಮ ನಾಡಿನ ಬಗ್ಗೆ ಇಟ್ಟುಕೊಂಡ ನಂಬಿಕೆ. ಯಾವುದೇ ವಿವಾದಗಳಿಲ್ಲದೆ, ಬದುಕಲು ಯಾವ ಅಡಚಣೆಯೂ ಇಲ್ಲದೆ, ಪ್ರಕೃತಿ ತನ್ನಲ್ಲಿರುವ ಎಲ್ಲವನ್ನೂ ಬಾಚಿ ಬಾಚಿ ಕೊಟ್ಟು ತನ್ನ ಮಕ್ಕಳಿಗೆ ಯಾವ ತೊಂದರೆಯೂ ಆಗದಂತೆ ಜತನದಿಂದ ಕಾಪಾಡಿಕೊಳ್ಳುತ್ತಿದ್ದ ಸ್ಥಳ ಅದು. ಈಗ ವಲಸಿಗರಿಂದಾಗಿ ಸ್ವಲ್ಪ ಜನರು ಕಾಣಸಿಗುತ್ತಾರಲ್ಲದೆ ಜನಸಂಖ್ಯಾ ಸಾಂದ್ರತೆಯಲ್ಲೂ ಬಹಳ ಹಿಂದೆ ಬೀಳುವ ಜಿಲ್ಲೆ ಅದು. ದೊಡ್ಡ ದೊಡ್ಡ ಕಾಫಿ ಎಸ್ಟೇಟ್‌ಗಳು ತಮ್ಮಷ್ಟಕ್ಕೆ ತಾವು ಆಲಸಿಗಳಂತೆ ಬಿದ್ದುಕೊಂಡು ಬೆಳಗ್ಗೆ ಹತ್ತಕ್ಕೆ ಎದ್ದು ಮೈಮುರಿದು ರಾತ್ರಿ ಐದಕ್ಕೆಲ್ಲ ಆಕಳಿಸಿ ನಿದ್ದೆಗೆ ಜಾರಿಬಿಡುತ್ತಿದ್ದ ಈ ಜಲ್ಲೆಯಲ್ಲಿ ಈಗ ಯಾರಿಗೂ ನೆಮ್ಮದಿಯಿಂದ ನಿದ್ದೆ ಮಾಡಲಾಗದ ಪರಿಸ್ಥಿತಿ.


ಎಲ್ಲರಿಗೂ ಅವರವರ ಹುಟ್ಟಿದ ಊರಿನ ಬಗ್ಗೆ ಹೆಮ್ಮೆ ಇದ್ದೆ ಇರುತ್ತದೆ. ಕೊಡಗನ್ನು ಕಾಡಿದ ಅತಿವೃಷ್ಟಿ ನನ್ನ ಹಾಗೆ ಊರು ಬಿಟ್ಟು ಬಂದಿರುವ ಎಲ್ಲರನ್ನೂ ಕಾಡಿರಬಹುದು. ಆದರೆ ಇತ್ತೀಚೆಗಿನ ಕೊಡಗು ಬಾಲ್ಯದಲ್ಲಿ ನಾನು ಕಂಡ ಆಲಸಿ ಕೊಡಗು ಆಗಿರಲಿಲ್ಲ. ಬದಲಿಗೆ ಪ್ರವಾಸಿಗರಿಂದ ಗಿಜಿಗುಟ್ಟುವ, ಹೊಸ ಹೊಸ ವ್ಯಾಪಾರಗಳಿಂದ ಕಳೆಯೇರಿಸಿಕೊಂಡ, ಸುಳ್ಳುಗಳಿಂದ ಮೋಸಮಾಡುವ ಜನರಿಂದ ತುಂಬಿ ತುಳುಕುವ ಒಂದು ವ್ಯಾಪಾರಿ ಕೇಂದ್ರವಾಗಿತ್ತು. ಈ ಕ್ಷಿಪ್ರಕ್ರಾಂತಿಯಿಂದ ಕೊಡಗು ತನ್ನ ಸ್ನಿಗ್ಧ ಸೌಂದರ್ಯವನ್ನು ಕಳೆದುಕೊಂಡಿತ್ತು. ಯಾವತ್ತೂ ಬದಲಾವಣೆ ನಿಧಾನಕ್ಕೆ ತನ್ನಿಂದ ತಾನೇ ಆಗಬೇಕು. ಆದರೆ ಇಲ್ಲಿ ನಾನು ನೋಡಿದ ಬದಲಾವಣೆ ಬಲವಂತದಿಂದ ಆದದ್ದು ಎಂಬಂತೆ ಕಾಣುತ್ತಿತ್ತು. ಚರಿತ್ರೆಯನ್ನು ಗಮನಿಸಿದರೆ ಕ್ಷಿಪ್ರಕ್ರಾಂತಿಗಳಿಂದ ಆದ ಅನಾಹುತಗಳಿಗೆ ದಾಖಲೆ ಸಿಗಬಹುದು. ಇಲ್ಲಿ ಪ್ರಕೃತಿಯ ಮೇಲೆ ಮಾನವನಿಂದ ಆದ ಈ ಕ್ಷಿಪ್ರಕ್ರಾಂತಿಯನ್ನು ತಡೆದುಕೊಳ್ಳುವ ಶಕ್ತಿ ಈ ಮಣ್ಣಿಗೆ ಇರಲಿಲ್ಲವೋ ಏನೋ? ಹಿಂದೊಮ್ಮೆ ಉತ್ತರಾಖಂಡ ಇದೇ ರೀತಿಯ ಅನಾಹುತದಿಂದ ತತ್ತರಿಸಿದ್ದು ನೆನಪಿಸಿಕೊಳ್ಳಬಹುದು. ಆಣೆಕಟ್ಟಿನ ಕೆಳಭಾಗದ ನೀರಿಲ್ಲದ ನದಿಪಾತ್ರಗಳ ದಂಡೆಗಳಲ್ಲಿ ಮನೆ ಕಟ್ಟಿಕೊಂಡು ಅಂತ್ಯ ಕಂಡದ್ದು ಇನ್ನೊಂದು ಭಾಗದ ಜನರ ದುರಂತ ಕಥೆ.
ನದಿ ದಂಡೆಗಳಲ್ಲಿ ಬೆಳೆದು ಬಂದ ಸಂಸೃತಿ ನಮ್ಮದು, ಸದಾ ಕೃತಜ್ಞತೆ ಈ ಸಂಸೃತಿಯ ಭಾಗ. ಯಾವಾಗ ದೇವರ ಹುಂಡಿಗೆ ಕೃತಜ್ಞತೆಯ ರೂಪದಲ್ಲಿ ಕದ್ದ ಕಾಸು ಬೀಳತೊಡಗಿತೋ ಅಲ್ಲಿಗೆ ನಮ್ಮ ಉನ್ನತ ಸಂಸೃತಿಯೂ ಕೊನೆಗೊಂಡಿತು. ಅದರ ಪರಿಣಾಮವೇ ಈ ರೀತಿಯ ವಿಕೋಪಗಳು. ಹಾಗಿದ್ದರೆ ಹಿಂದೆ ಪ್ರಕೃತಿಯಲ್ಲಿ ಈ ರೀತಿಯ ಕೋಪ ವಿಕೋಪಗಳು ಇರಲಿಲ್ಲವೇ ಎಂದರೆ ಹಿಂದೆಯೂ ಇತ್ತು. ಸಾವು, ನೋವು, ನಷ್ಟ, ಕಾರ್ಪಣ್ಯಗಳು ಎಲ್ಲ ಕಾಲಕ್ಕೂ ಇದ್ದೇ ಇತ್ತು. ಆದರೆ ಅದನ್ನು ಮನುಷ್ಯ ಸಹಜವಾಗಿ ಸ್ವೀಕರಿಸಿ ಬಹಳ ಬೇಗ ಚೇತರಿಸಿಕೊಳ್ಳುತ್ತಿದ್ದ. ಇಂದು ಈ ರೀತಿಯ ಆಘಾತಗಳಿಂದ ಚೇತರಿಸಿಕೊಳ್ಳಲು ಅನೇಕ ವರ್ಷಗಳೆ ಬೇಕು. ಏಕೆಂದರೆ ತಲೆಮಾರುಗಳಿಗೆ ಕೂಡಿಡುವ ಪದ್ಧತಿ ನಮ್ಮದು. ಹೋದರೆ ಎಷ್ಟೋ ತಲೆಮಾರಿನದ್ದು ಒಟ್ಟಿಗೆ ಹೋಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಅಸಹಜ ರೀತಿಯ ಬದುಕನ್ನು ಇಂದು ನಾವೆಲ್ಲ ಬದುಕುತ್ತಿದ್ದೇವೆ. ಸುಖ ಇದೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಆದರೆ ನಿಜವಾದ ಸುಖವಿರುವುದು ನಮ್ಮ ನದಿ ಸಂಸ್ಕೃತಿ ಪೂರ್ವಜರು ನಮಗೆ ಕೊಟ್ಟ ಜೀವನ ವಿಧಾನದಲ್ಲಿ. ಅದನ್ನು ನಾವು ಮರೆತು ಶತಮಾನ ಉರುಳಿಹೋಗಿದೆ.

* ರೇಶ್ಮಾ ಭಟ್

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...