ಪ್ರತಿದಿನದ ದಿನಪತ್ರಿಕೆಯಲ್ಲೂ ನಮ್ಮ ದೇವಸ್ಥಾನಗಳ ಬಗ್ಗೆ ಒಂದಲ್ಲ ಒಂದು ಸುದ್ದಿಯೋ ವಿವಾದಗಳೋ ಇದ್ದೇ ಇರುತ್ತವೆ. ಶಬರಿಮಲೆ ದೇವಸ್ಥಾನದ ಮಹಿಳಾ ಪ್ರವೇಶ ಪರ್ವ ಮುಗಿದ ಕೂಡಲೆ ಈಗ ರಾಮಭಕ್ತ ಹನುಮಂತ ಜನಿಸಿದ ಸ್ಥಳ ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಕುರಿತಾದ ವರದಿಗಳು ಇಂದಿನ ಎಲ್ಲಾ ಪತ್ರಿಕೆಗಳಲ್ಲೂ ವರದಿಯಾಗಿವೆ. ದೇವಸ್ಥಾನಗಳು ನಮ್ಮ ಅತ್ಯುನ್ನತ ಶ್ರದ್ಧಾಕೇಂದ್ರಗಳಾದ್ದರಿಂದ ಸಹಜವಾಗಿಯೇ ಸುದ್ದಿಯಲ್ಲಿರುತ್ತವೆ. ಈ ಹೊತ್ತಿನ ನಮ್ಮ ಸಾಮಾಜಿಕ ಪರಿಸ್ಥಿತಿಗೆ ಹೊಂದಿಕೊಳ್ಳಲು ಬದಲಾವಣೆಯ ಮಾರ್ಗ ಹಿಡಿದಿವೆ. ನಮ್ಮನ್ನಾಳಿದ ರಾಜರೆಲ್ಲರೂ ಧಾರ್ಮಿಕ ಶ್ರದ್ಧಾಳುಗಳೆ ಆಗಿದ್ದರಿಂದ ಧಾರಾಳವಾಗಿ ದತ್ತಿ ಉಂಬಳಿಗಳನ್ನು ಪಡೆದುಕೊಂಡು ಶ್ರೀಮಂತವಾಗಿದ್ದ ದೇವಸ್ಥಾನಗಳು ಭೂ ಸುಧಾರಣೆಯಂಥ ಕಾಯ್ದೆಗೆ ಸಿಕ್ಕಿ ನಿತ್ಯದ ದೀಪದೆಣ್ಣೆಗೂ ಪರದಾಡುವಂತಾದದ್ದು ಎಲ್ಲರಿಗೂ ಗೊತ್ತಿರುವ ಸತ್ಯ. ಅನೇಕ ಧಾಳಿಗಳಿಗೆ ತುತ್ತಾದರೂ ಇಂದಿಗೂ ತಮ್ಮ ಮಾಸದ ಸೌಂದರ್ಯದಿಂದ ಕಂಗೊಳಿಸುತ್ತಿರುವ ಹಲವಾರು ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ಇವುಗಳೆಲ್ಲ ಜೀವಂತ ಸಾಂಸ್ಕೃತಿಕ ಕೇಂದ್ರಗಳಾಗಿದ್ದುದು ಮಾತ್ರವಲ್ಲದೆ, ಒಬ್ಬ ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸುವ ಮಾಹಿತಿ ಕೇಂದ್ರಗಳೂ ಆಗಿದ್ದವು. ಉದಾಹರಣೆಗೆ ನಮ್ಮ ಬೇಲೂರು ಹಳೆಬೀಡುಗಳನ್ನು ತೆಗೆದುಕೊಂಡರೆ ಇದು ಹೆಚ್ಚು ಅರ್ಥವಾಗುತ್ತದೆ. ಇಲ್ಲಿ ಕಲ್ಲುಗಳು ಮಾತಾಡುತ್ತವೆ ಎಂದು ಉತ್ಪ್ರೇಕ್ಷೆಯಾಗಿ ಹೇಳುವುದುಂಟು. ಸುಮ್ಮನೆ ಕೆತ್ತಿದರೇ ಅಷ್ಟು ವಿಷಯಗಳನ್ನು ಕಲ್ಲಿನಲಿ? ಎಂದು ಕೇಳಿದರೆ ಖಂಡಿತ ಇಲ್ಲ ಎಂದು ತಟ್ಟನೆ ಹೇಳಿಬಿಡಬಹುದು. ಸೌಂದರ್ಯ ಪ್ರಜ್ಞೆಯನ್ನು ಮನದಲ್ಲಿಟ್ಟುಕೊಂಡು ಮಾಡಿದ ಈ ಕೆತ್ತನೆಗಳು ಮಾಹಿತಿಯನ್ನೂ ಏಕಕಾಲಕ್ಕೆ ಒದಗಿಸಿಕೊಡುವುದು ಒಂದು ಸೋಜಿಗವೇ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ನಾಟ್ಯಶಾಸ್ತ್ರ, ಪುರಾಣಗಳು, ಮಹಾಕಾವ್ಯಗಳ ಪ್ರಸಂಗಗಳನ್ನು ತಿಳಿಸುವ ಪಟ್ಟಿಕೆಗಳ ಕೆತ್ತನೆಗಳಷ್ಟೇ ಅಲ್ಲದೆ ನಾನಾ ಭಂಗಿಗಳಲ್ಲಿ ನಿಂತಿರುವ ಸಾಲಭಂಜಿಕೆಗಳು ಅಥವಾ ಮದನಿಕೆಗಳು, ಹಾಗೆಯೇ ದೇವ ದೇವಿಯರ ಮೂರ್ತಿಗಳ ದೇವ ಪ್ರಪಂಚ… ಒಂದೇ ಎರಡೇ ಎಲ್ಲವನ್ನು ತಿಳಿಸಿಬಿಡಬೇಕೆಂಬ ಆ ಹಪಹಪಿಯಿಂದ ಸೌಂದರ್ಯಕ್ಕೆ ಕಿಂಚಿತ್ತೂ ಊನವಾಗಿಲ್ಲ. ಇಲ್ಲಿನ ಪಟ್ಟಿಕೆಗಳಲ್ಲಿ ಕಾಣುವ ಹುಲಿ ಸಿಂಹ ಆನೆ ಕುದುರೆಗಳು ಭೂಚರಗಳನ್ನು, ಹಂಸ ಖೇಚರವನ್ನು, ಮೊಸಳೆ ಜಲಚರವನ್ನು, ಬಳ್ಳಿಯ ಜಾಲಂಧ್ರಗಳು ಸಸ್ಯ ಪ್ರಪಂಚವನ್ನು ಪ್ರತಿನಿಧಿಸುತ್ತವೆ ಎಂದು ಬಲ್ಲವರು ಹೇಳುತ್ತಾರೆ. ನಮ್ಮ ದೇವಾಲಯದ ಗೋಡೆಗಳು ಲೈಂಗಿಕ ವಿಜ್ಞಾನವನ್ನೂ ಜನಸಾಮಾನ್ಯರಿಗೆ ತಿಳಿಸಿಕೊಡುವುದು ಹೆಗ್ಗಳಿಕೆಯೇ ಅಲ್ಲವೆ? ಕೆಲವು ದೇಗುಲಗಳಲ್ಲಿ ಜ್ಯಾಮಿತಿಯ ಲೆಕ್ಕಾಚಾರಗಳನ್ನು ಬಳಸಿ ವರ್ಷದ ಇಂಥ ದಿನ ಇಂಥ ಕಡೆ ಸೂರ್ಯ ರಶ್ಮಿ ಬೀಳುವುದು ಎನ್ನುವ ನಿಖರವಾದ ಮಾಪನದ ನಿರ್ಮಾಣಗಳೂ ನಡೆದಿವೆ. ಕೋಣಾರ್ಕದ ಸೂರ್ಯ ದೇವಾಲಯದಲ್ಲಿ ಕಲ್ಲಿನಲ್ಲಿ ಕೆತ್ತಿದ ನೂರು ಅಡಿ ಎತ್ತರದ ಸೂರ್ಯ ದೇವರ ರಥ, ಏಳು ಕುದುರೆಗಳು ಹಾಗೂ ಹನ್ನೆರಡು ಜೊತೆ ರಥದ ಚಕ್ರಗಳನ್ನು ಕಾಣಬಹುದಿತ್ತು. ಅದರ ವೈಭವದ ದಿನಗಳಲ್ಲಿ ಗರ್ಭಗುಡಿಯೊಳಗಿನ ಸೂರ್ಯ ದೇವರ ಮೂರ್ತಿಯು ಗಾಳಿಯಲ್ಲಿ ತೇಲಿದಂತೆ ಇತ್ತು ಎಂದೂ, ಶಿಖರದ ಮೇಲೊಂದು ಅಯಸ್ಕಾಂತ ಹಾಗೂ ಮೂರ್ತಿಯ ಕೆಳಭಾಗದಲ್ಲಿ ಒಂದು ಅಯಸ್ಕಾಂತ ಇಟ್ಟು ಮಾಡಿದ ಒಂದು ರೀತಿಯ ತಂತ್ರಜ್ಞಾನವನ್ನು ಇದಕ್ಕೆ ಬಳಸಲಾಗಿತ್ತು ಎಂದೂ ಇತಿಹಾಸಜ್ಞರು ಹೇಳುತ್ತಾರೆ. ಏನೇ ಇರಲಿ, ಆಗಿನ ಜನರ ತಿಳುವಳಿಕೆಯ ಮಟ್ಟ ಆಶ್ಚರ್ಯವನ್ನು ಉಂಟುಮಾಡದೆ ಇರದು.
ನಮ್ಮ ದೇಶದಲ್ಲಿ ದೇವಾಲಯ ನಿರ್ಮಾಣಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿರಬಹುದು. ಮೊದಲು ಕಲ್ಲಿನ ಗುಹೆಗಳಲ್ಲಿ ದೇವಾಲಯಗಳ ರಚನೆಗಳು ಕಂಡುಬಂದರೆ, ನಂತರದಲ್ಲಿ ಇಟ್ಟಿಗೆ ಮರ ಮೊದಲಾದವುಗಳಿಂದ ನಿರ್ಮಿಸಿದ ದೇವಸ್ಥಾನಗಳು ನಿರ್ಮಾಣವಾದವು. ಅವು ಕಾಲನ ಧಾಳಿಗೆ ನಾಶ ಹೊಂದಿದ ಮೇಲೆ ಕಲ್ಲುಗಳಿಂದ ದೇವಾಲಯ ನಿರ್ಮಾಣ ಪ್ರಾರಂಭವಾಯಿತು. ಇಸ್ಲಾಂ ಧಾಳಿಯ ನಂತರವೂ ಇಂಥಾ ಎಷ್ಟೋ ದೇಗುಲಗಳು ಉಳಿದುಕೊಂಡವು. ಸಂಪತ್ತಿನ ಕೇಂದ್ರಗಳೂ ಆಗಿದ್ದ ಇವುಗಳನ್ನು ದೋಚಿದ ನಂತರವೂ ಮುಗಿಯದೆ ಉಳಿಸಿಕೊಂಡದ್ದು ಎಷ್ಟೋ ಇವೆ. ದೇಗುಲಗಳ ರಚನೆ ವಿಗ್ರಹ ಪ್ರತಿಷ್ಠೆ ಮೊದಲಾದವುಗಳನ್ನು ತಿಳಿಸುವ ಆಗಮಶಾಸ್ತ್ರದ ಬೆಳವಣಿಗೆಯೂ ಇಲ್ಲಿ ಆಯಿತು. ಒಟ್ಟಾರೆಯಾಗಿ, ಕೋರ್ಟ್‌ಗಳು ಸರಕಾರಗಳು ದೇವಾಲಯಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೂ, ಧಾರ್ಮಿಕ ದತ್ತಿ ಕಾಯ್ದೆಗಳು ಹುಟ್ಟಿಕೊಂಡರೂ, ಮುಜರಾಯಿ ಇಲಾಖೆಗಳು ದೇಗುಲಗಳನ್ನು ವಶಪಡಿಸಿಕೊಂಡರೂ ನಮ್ಮ ಜನ ಮಾನಸದಲ್ಲಿ ದೇಗುಲಗಳ ಮೇಲಿನ ನಂಬಿಕೆ ಶ್ರದ್ಧೆಗಳು ಕಿಂಚಿತ್ತೂ ಕಡಿಮೆಯಾಗಿಲ್ಲ, ಆಗುವುದೂ ಇಲ್ಲ. ಈ ಸಂದರ್ಭದಲ್ಲಿ ವಿದ್ವಾಂಸರಾದ ಶತಾವಧಾನಿ ಆರ್. ಗಣೇಶ್ ಅವರು ಹೇಳಿದ ’ದೇವಾಲಯಗಳು ಸಜೀವ ಸಾಂಸ್ಕೃತಿಕ ವಸ್ತು ಸಂಗ್ರಹಾಲಯಗಳು’ ಎಂಬ ಮಾತು ನೆನಪಾಗುತ್ತದೆ.
** ** **


ರೇಶ್ಮಾ ಭಟ್
