Thursday, February 13, 2025

ಅನತಿ-24- ಕಾದಂಬರಿಯೆಂಬ ಪುಟ್ಟ ಪ್ರಪಂಚ

ನಮ್ಮ ಬಾಲ್ಯದಲ್ಲಿ ನಮಗಿದ್ದ ಎರಡು ಮನರಂಜನೆಗಳೆಂದರೆ ಒಂದು ಸಿನೇಮಾ; ಇನ್ನೊಂದು ಕಾದಂಬರಿ. ಪಠ್ಯಪುಸ್ತಕದ ನಡುವೆ ಕಾದಂಬರಿ ಇಟ್ಟು ಓದುತ್ತಿದ್ದ ಕಾಲವದು. ಹಸಿವು ನಿದ್ದೆ ಹತ್ತಿರ ಸುಳಿಯದಂತೆ ಮಾಡಿ ನಮ್ಮನ್ನು ಅಗೋಚರ ಪ್ರಪಂಚದೊಳಗೆ ಕರೆದೊಯ್ಯುತ್ತಿದ್ದ ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದೆವು. ಪ್ರಜಾಮತ, ಸುಧಾ, ಕಸ್ತೂರಿ, ಮಲ್ಲಿಗೆ, ಮಯೂರ….ಮೊದಲಾದ ವಾರ/ಮಾಸಪತ್ರಿಕೆಗಳಲ್ಲಿ ಬರುತ್ತಿದ್ದ ಧಾರಾವಾಹಿಗಳಿಗಾಗಿ, ಮಿನಿಕಾದಂಬರಿಗಳಿಗಾಗಿ ಕಾತರದಿಂದ ಕಾಯುತ್ತಿದ್ದ ದಿನಗಳವು. ಧಾರಾವಾಹಿಗಳನ್ನೆಲ್ಲ ಸಂಗ್ರಹಿಸಿ ಹೊಲೆದು ಜೋಪಾನವಾಗಿ ಕಾಪಿಡುವ ಕೆಲಸವನ್ನೂ ಮನೆಯ ಕೆಲವು ಹೆಂಗಸರು ಮಾಡುತ್ತಿದ್ದರು. ಸಾರ್ವಜನಿಕ ಗ್ರಂಥಾಲಯದಿಂದ ಪುಸ್ತಕಗಳನ್ನು ತರಲೆಂದೇ ಐದಾರು ಮೈಲಿ ನಡೆದು ಹೋಗುವವರಿದ್ದರು. ತಂದ ನಂತರ ಅದು ಮನೆಯಿಂದ ಮನೆಗೆ ಹರಿದಾಡಿ ಬಂಧುಬಳಗಗಳು ಒಟ್ಟು ಸೇರುವ ಸಂದರ್ಭಗಳಲ್ಲಿ ಅದರ ಬಗ್ಗೆ ಚರ್ಚೆ ಸಂವಾದಗಳೂ ಏರ್ಪಡುತ್ತಿದ್ದವು. ಮೊದಲು ಓದಿದವರು ಚೆನ್ನಾಗಿಲ್ಲ ಎಂಬ ಅಭಿಪ್ರಾಯವನ್ನೇನಾದರೂ ಕೊಟ್ಟರೆ ಅಂಥಾ ಪುಸ್ತಕಗಳಿಗೆ ಗಿರಾಕಿಗಳು ದೊರೆಯದೆ ಬಹಳ ಬೇಗನೆ ಅವು ಪುನಃ ಗ್ರಂಥಾಲಯದ ಕಪಾಟನ್ನು ಸೇರಿಕೊಳ್ಳುತ್ತಿದ್ದವು. ಚೆನ್ನಾಗಿರುವ ಅಂದರೆ ಚೆನ್ನಾಗಿ ಓದಿಸಿಕೊಂಡು ಹೋಗುವ ಕಾದಂಬರಿಗಳನ್ನು ನೋಡುವಾಗ ಮೊದಲನೋಟಕ್ಕೇ ಅದು ಚೆನ್ನಾಗಿದೆ ಎಂದು ತಿಳಿದುಹೋಗುತ್ತಿತ್ತು. ಅದರ ಮುಖಪುಟವೂ ಆ ನಂತರದ ಒಂದೆರಡು ಪುಟಗಳೂ ಹರಿದು ಜೀರ್ಣಾವಸ್ಥೆಗೆ ತಲುಪಿ ಓದಿದ ಹತ್ತು ಹಲವು ಕೈಗಳ ಕೊಳೆಯನ್ನು ಮೆತ್ತಿಸಿಕೊಂಡು ಧನ್ಯತೆಯನ್ನು ಅನುಭವಿಸುತ್ತಿದ್ದವು. ಕೆಲವು ಪುಟಗಳು ಕಾಣೆಯಾಗಿ, ಕೆಲವನ್ನು ಗೋಂದು ಹಾಕಿ ಅಂಟಿಸಿದ್ದರಿಂದ ಪೂರ್ತಿ ಬಿಡಿಸಲು ಸಾಧ್ಯವಾಗದೆ, ಕೆಲವು ಪುಟಗಳಲ್ಲಿ ಏನೋ ಚೆಲ್ಲಿ ಅಕ್ಷರಗಳೇ ಮಸುಕಾಗಿ….ಹೀಗೆ ಮನಸ್ಸಿಗೆ ವಿಪರೀತ ನೋವನ್ನು ಉಂಟುಮಾಡುವ ಸನ್ನಿವೇಶವೂ ಈ ಜನಪ್ರಿಯ ಪುಸ್ತಕಗಳಿಂದ ನಿರ್ಮಾಣವಾಗುತ್ತಿದ್ದವು. ಲೈಬ್ರರಿಯಿಂದ ತಂದ ದಿನವೇ ನಾಳೆ ತಂದು ಕೊಡುತ್ತೇನೆಂದು ಹೇಳಿ ಒಯ್ದು ತಾರದೆ ಸತಾಯಿಸುತ್ತಿದ್ದ ಬೇಜವಾಬುದಾರರೂ ಇದ್ದರು. ಆ ಕಾಲದಲ್ಲಿ, ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು, ಎಂ.ಕೆ ಇಂದಿರಾ, ತ್ರಿವೇಣಿಯವರ ಕಾದಂಬರಿಗಳು, ಎಸ್. ಎಲ್. ಭೈರಪ್ಪ, ಅನಕೃ ಅವರ ಜನಪ್ರಿಯ ಕಾದಂಬರಿಗಳು, ತರಾಸು, ಮಾಸ್ತಿ ಅವರ ಐತಿಹಾಸಿಕ, ದೇವುಡು ಅವರ ಪೌರಾಣಿಕ ಕಾದಂಬರಿಗಳು, ಯಂಡಮೂರಿಯವರ ತುಳಸಿ, ತುಳಸೀದಳದಂತಹ ಕಾದಂಬರಿಗಳು…. ಇವೆಲ್ಲ ಟಾಪ್ ಟೆನ್‌ನ ಒಳಗೆ ಬರುವಂಥದ್ದಾಗಿದ್ದವು. ಅದರಲ್ಲೂ ಚಲನಚಿತ್ರವಾದ ಕಾದಂಬರಿ ಪುಸ್ತಕಗಳಿಗೆ ಬೇಡಿಕೆ ಹೆಚ್ಚು ಇತ್ತು.
ನಮ್ಮ ನೆಲದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆದುಕೊಂಡ ಈ ಸಾಹಿತ್ಯ ಪ್ರಕಾರವು ಪಾಶ್ಚಾತ್ಯ ಮೂಲದ ’ನಾವೆಲ್’ನಿಂದ ಬಂದಿತೆಂದು ಹೇಳುತ್ತಾರೆ. ಆದರೆ ಸಂಸ್ಕೃತದಲ್ಲಿ ಬಾಣಭಟ್ಟನು ರಚಿಸಿದ ಕಾದಂಬರಿ ಎನ್ನುವ ಗದ್ಯಗ್ರಂಥವೊಂದಿತ್ತು. ಇದರ ಕಾಲ ಸಮಾರು ಏಳನೇ ಶತಮಾನ. ಇದರಲ್ಲಿ ಚಂದ್ರಾಪೀಡ ಹಾಗೂ ಪುಂಡರೀಕ ಎಂಬಿಬ್ಬರ ಮೂರು ಜನ್ಮಗಳ ಕಥೆಯಿದೆ. ಒಂದು ಗಿಣಿ ಮನುಷ್ಯರಂತೆ ಮಾತಾಡಿ ಕಥೆಯನ್ನು ಆರಂಭಿಸುತ್ತದೆ. ಸುದೀರ್ಘವಾದ ಈ ಗದ್ಯದಲ್ಲಿ ಮಹಾಶ್ವೇತೆ-ಪುಂಡರೀಕ, ಕಾದಂಬರಿ-ಚಂದ್ರಾಪೀಡರ ಪ್ರೇಮಕಥೆಯಿದೆ. ಕಾದಂಬರಿ ಎನ್ನುವುದು ಬಾಣಭಟ್ಟ ತನ್ನ ಗದ್ಯಕಥೆಯಲ್ಲಿ ಬರುವ ಒಂದು ಸ್ತ್ರೀ ಪಾತ್ರಕ್ಕೆ ಕೊಟ್ಟ ಹೆಸರು. ಹಾಗಾಗಿ ಕಾದಂಬರಿ ಎನ್ನುವ ಹೆಸರು ನಮಗೆ ಪರಿಚಿತವಾದುದೇ ಆಗಿತ್ತು. ಆದರೆ ಈಗಿನ ರೂಪದ ಕಾದಂಬರಿ ಸಾಹಿತ್ಯ ಪ್ರಕಾರ ಇಂಗ್ಲಿಶ್ ಸಾಹಿತ್ಯದ ಪರಿಚಯದಿಂದ ಆಯಿತು ಎಂದು ಹೇಳಬಹುದು.
ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ ಕನ್ನಡದ ಮೊತ್ತ ಮೊದಲ ಕಾದಂಬರಿ. 1899ರಲ್ಲಿ ಇದು ಪ್ರಕಟವಾಯಿತು. ದಕ್ಷಿಣ ಕನ್ನಡದ ಕಲೆಕ್ಟರಾಗಿದ್ದ ಕೌಚ್ಮನ್ ಎಂಬುವವನು ಪ್ರಕಟವಾದ ವರ್ಷವೇ ಇದನ್ನು ಇಂಗ್ಲೀಶಿಗೆ ಅನುವಾದವನ್ನೂ ಮಾಡಿದನು. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಿನಲ್ಲಿ ಇದು ಮೊದಲ ಮುದ್ರಣವನ್ನು ಕಂಡಿತು. 1962ರಲ್ಲಿ ಮರುಮುದ್ರಣವೂ ಆಯಿತು. ಉಡುಪಿ ಜಿಲ್ಲೆಯ ಕುಂದಾಪುರದ ಗುಲ್ವಾಡಿ, ವೆಂಕಟರಾವ್ ಅವರ ಹುಟ್ಟೂರು. ಭಾರತೀಯ ಸಮಾಜ ಹಳತರಿಂದ ಹೊಸತರ ಕಡೆಗೆ ಸಾಗುತ್ತಿದ್ದ ಕಾಲವದು. ಸಹಜವಾಗಿಯೇ ಇವೆರಡರ ನಡುವೆ ಸಂಘರ್ಷ ಇಂದಿರಾಬಾಯಿ ಕಾದಂಬರಿಯ ವಸ್ತುವಾಯಿತು. ವಿಧವಾ ಮರುವಿವಾಹ ನಡೆದು ಕೊನೆಗೆ ಸದ್ಧರ್ಮಕ್ಕೆ ಜಯವಾಗುವುದು ಈ ಕಾದಂಬರಿಯ ವಸ್ತು.
ಇಂದಿರಾಬಾಯಿಯಿಂದ ಪ್ರಾರಂಭವಾದ ಈ ಪ್ರಯಾಣವು ಇಂದು ಹಲವಾರು ಯೋಜನದೂರವನ್ನು ಕ್ರಮಿಸಿದೆ. ದಿನಕ್ಕೆ ಸರಾಸರಿ ಹತ್ತಕ್ಕಿಂತಲೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗುವ ಕಾಲ ಇದು. ಅವುಗಳಲ್ಲಿ ಕಾದಂಬರಿಗಳ ಪಾಲು ಶೇಕಡಾ ಹತ್ತಾದರೂ ಇರಬಹುದು. ಆದರೆ ಕಾಲದ ಓಟದಲ್ಲಿ ಗಟ್ಟಿಯಾದುದು ಮಾತ್ರ ನಿಂತು ಉಳಿದುದೆಲ್ಲ ಅಳಿದುಹೋಗುವ ಸಾಲಿಗೆ ಸೇರುತ್ತಿದೆ. ಹೊಸ ಹೊಸ ಪ್ರಯೋಗಗಳೂ ಇಲ್ಲಿ ನಡೆಯುತ್ತಿವೆ, ಪುಸ್ತಕ ಖರೀದಿಸದೆ ಇ-ಪುಸ್ತಕಗಳ ಮೂಲಕವೂ ಇಂದು ಕಾದಂಬರಿಗಳನ್ನು ಓದಬಹುದು. ಕಾದಂಬರಿ ಸಾಹಿತ್ಯವನ್ನು ಆಧರಿಸಿ ವಿಮರ್ಶಾ ಸಾಹಿತ್ಯವೂ ಸಾಕಷ್ಟು ಬೆಳೆದಿದೆ. ಕಾದಂಬರಿ ಪ್ರಕಾರವು ಮೊದಲಿನ ಆಕರ್ಷಣೆಯನ್ನು ಕಳೆದುಕೊಂಡಿದ್ದರೂ ಇಂದಿನ ಧಾವಂತದ ಯುಗದಲ್ಲೂ ತನ್ನ ಓದುಗ ಬಳಗವನ್ನು ಉಳಿಸಿಕೊಂಡಿದೆ ಎಂಬುದು ಅಚ್ಚರಿಹುಟ್ಟಿಸುವ ಸತ್ಯವಾಗಿದೆ.

 

  • ರೇಶ್ಮಾ ಭಟ್

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...