Thursday, February 13, 2025

ಕಲ್ಪನಾ ವಿಲಾಸವೇ ಕವನ

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅಂದರೆ ಲಘು ಪ್ರಬಂಧ, ಸಣ್ಣ ಕಥೆ ಇತ್ಯಾದಿಗಳಿಗೆ ಪ್ರತ್ಯೇಕ ಗೋಷ್ಠಿಗಳು ಆಯೋಜನೆಗೊಳ್ಳದಿದ್ದರೂ ಕವನವೆಂಬ ಒಂದು ಪ್ರಕಾರಕ್ಕೆ ಮಾತ್ರ ಒಂದಕ್ಕಿಂತ ಹೆಚ್ಚು ಗೋಷ್ಠಿಗಳನ್ನು ಮೀಸಲಿಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಕವಿಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಅವರ ಬೇಡಿಕೆಯನ್ನು ಈಡೇರಿಸಲು ಈ ರೀತಿ ಒಂದಕ್ಕಿಂತ ಹೆಚ್ಚು ಗೋಷ್ಠಿಗಳನ್ನು ಆಯೋಜಿಸಿ ಅದರಲ್ಲಿ ಐವತ್ತಕ್ಕಿಂತಲೂ ಹೆಚ್ಚು ಕವಿಗಳನ್ನು ತುರುಕಿ, ಅವರಲ್ಲಿ ಪ್ರತಿಯೊಬ್ಬರ ಉದ್ದುದ್ದದ ಬಯೋಡಾಟಾವನ್ನು ಓದಿ, ನಂತರ ಕವನ ವಾಚನವಾಗಿ ಅದು ಮುಗಿಯುವ ಹೊತ್ತಿಗೆ ಎದುರಲ್ಲಿ ಕುಳಿತ ಪ್ರೇಕ್ಷಕನೂ, ವೇದಿಕೆಯ ಕಣ್ಣು ಕೋರೈಸುವ ಬೆಳಕಿನಲ್ಲಿ ಕುಳಿತ ಕವಿಯೂ ಹೈರಾಣಾಗಿಹೋಗುವುದು ಸಮ್ಮೇಳನಗಳಲ್ಲಿ ಭಾಗವಹಿಸುವವರಿಗೆ ತಿಳಿದಿರುವ ಕಟುಸತ್ಯ. ಯಾಕೆ ಹೀಗೆ ಕವಿಗಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ? ಬೇರೆ ಪ್ರಕಾರಗಳಲ್ಲಿ ಈ ರೀತಿಯ ನೂಕುನುಗ್ಗಲು ಯಾಕಿಲ್ಲ..? ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಬದಲು ‘ಸಾಹಿತ್ಯ ಪ್ರಸ್ತುತಿ’ ಅನ್ನುವ ಹೊಸ ಕಲ್ಪನೆಯ ಒಂದು ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಸಾಹಿತ್ಯದ ಎಲ್ಲಾ ಒಂದೊಂದು ಪ್ರಕಾರಗಳ ಪ್ರಸ್ತುತಿಗೆ ಅವಕಾಶವಿದ್ದರೂ ಅಲ್ಲೂ ಕವಿತೆಗಳನ್ನು ಓದಲು ಹಾತೊರೆಯುವವರ ಸರತಿಯೇ ಹೆಚ್ಚಿತ್ತು. ಹಾಸ್ಯ ಪ್ರಬಂಧ ಮುಂತಾದ ಪ್ರಕಾರಗಳನ್ನು ಪ್ರಸ್ತುತಪಡಿಸುವವರ ಕೊರತೆಯೂ ಇತ್ತು. ಇಂದು ಪತ್ರಿಕೆಗಳ ಭಾನುವಾರದ ಪುರವಣಿಗಳಿಗೂ ಕವನಗಳ ಬರವಿರಲಾರದು. ಅದನ್ನು ಪ್ರಕಟಿಸಲು ಮಾಡುವ ವಶೀಲಿಬಾಜಿಗಳೂ ಹೆಚ್ಚಿರಬಹುದು. ಇದಕ್ಕೆ ಉತ್ತರ ಎಲ್ಲರಿಗೂ ತಿಳಿದಿರುವಂಥದ್ದೇ. ಕವನವೆಂಬ ಈ ಪ್ರಕಾರ ತನ್ನ ಹಳೆಯ ಗುಣಗಳನ್ನೆಲ್ಲ ಕಳೆದುಕೊಂಡು ವಾಚ್ಯವಾಗಿ ಗದ್ಯರೂಪಕ್ಕಿಳಿದದ್ದು. ಶಾಲಾ ಕಾಲೇಜುಗಳಲ್ಲಿ ನಡೆಯುವ ಕವನ ಸ್ಪರ್ಧೆಗಳಲ್ಲು ಇಂಥದ್ದೇ ಕವನಗಳು ರಚನೆಗೊಳ್ಳುತ್ತವೆ. (ಕನ್ನಡ ಭಾಷಾ ಪಠ್ಯಗಳಲ್ಲೂ ಇದೇ ರೀತಿಯ ಕವನಗಳಿರುವುದರಿಂದ ಇದು ಸಹಜ) ಇತ್ತೀಚಿನ ವರ್ಷಗಳಲ್ಲಿ ಬುಲೆಟ್ ಹಾಕಿ ಟೈಪಿಸಿದರೆ ಕವನ, ಬುಲೆಟ್ ಹಾಕದಿದ್ದರೆ ಗದ್ಯ ಎಂದು ಅಂದುಕೊಳ್ಳುವಷ್ಟು ಇದು ವಾಚ್ಯವಾಗಿದೆ.
ಹಾಗಿದ್ದರೆ ಕವನ ಎಂದರೆ ಏನು? ಅದರ ಗುಣ ಲಕ್ಷಣಗಳು ಹೇಗಿರಬೇಕು? ಸರಳವಾಗಿ ಉತ್ತರಿಸುವುದಾದರೆ ಕವನವೆಂದರೆ ಗೇಯಪ್ರಧಾನವಾದ ಒಂದು ಸಾಹಿತ್ಯಪ್ರಕಾರ. ಗೇಯತೆಯೇ ಅದರ ಜೀವಾಳ, ಛಂದಸ್ಸು ಪ್ರಾಸ ಇವೆಲ್ಲ ಈ ಗೇಯತೆಯನ್ನು ಸಾಧಿಸಲು ಒದಗಿಬರುವ ಅಂಶಗಳು. ಕನ್ನಡ ಸಾಹಿತ್ಯಲೋಕದಲ್ಲಿ ನಡೆದ ನವ್ಯಪಂಥದ ಚಳುವಳಿಯ ನಂತರ ಕಾವ್ಯವೆಂದರೆ ಅದು ಸಾಮಾಜಿಕ ಸಮಸ್ಯೆಗಳನ್ನು ಹೇಳಬೇಕು; ಬಡವರ ಕಣ್ಣೀರು ಒರೆಸಬೇಕು; ಅದನ್ನುಳಿದು ಬರೀ ಹಾಡಲು ಅನುಕೂಲವಾಗಿರುವ ಕಾವ್ಯ ಕಾವ್ಯವೇ ಅಲ್ಲ ಎಂಬ ಭಾವನೆ ಬಂದುದರ ಫಲವಾಗಿ ಕವನವೆಂಬುದು ಒಂದು ಸ್ಟೇಟ್ಮೆಂಟ್ ಆಗಿ, ಪ್ರಣಾಳಿಕೆಯಾಗಿ ಬದಲಾಗತೊಡಗಿತು. ಅದರ ಮೂಲಗುಣವಾದ ಗೇಯತೆಯನ್ನು ಕಳೆದುಕೊಂಡು ಪೂರ್ತಿಯಾಗಿ ವಾಚ್ಯವಾಗಿ ಬದಲಾಗತೊಡಗಿತು. ಇಂದು ಇದು ಪ್ರಚಲಿತ ಸಮಸ್ಯೆಗಳನ್ನು ಹೇಳಲು ಬಳಕೆಯಾಗತೊಡಗಿದೆ. ನಮ್ಮ ಜಾನಪದರು ತಮ್ಮ ಶ್ರಮವನ್ನು ಕಳೆಯಲು ಮೂರುಸಾಲಿನ ತ್ರಿಪದಿಗಳನ್ನು ರಚಿಸಿ ಹಾಡಿದ್ದು ನಮಗೆ ಗೊತ್ತಿರುವ ಸಂಗತಿ. ಗೇಯತೆಯೊಂದಿಗೆ ಜೀವನದ ಅಪಾರ ಅನುಭವ ಅದರೊಂದಿಗೆ ಸೇರಿರುತ್ತಿತ್ತು. ಕಠಿಣವಾದ ವಿಷಯಗಳನ್ನು ಸರಳವಾಗಿ ಪದ್ಯರೂಪದಲ್ಲಿ ನೇಯ್ದುಕೊಡುತ್ತಿದ್ದ ಅವರ ಜಾಣ್ಮೆ ಇಂದಿನ ಕವಿಗಳಲ್ಲಿ ಯಾಕಿಲ್ಲ? ಪತ್ರಿಕೆಗಳು ನಡೆಸುವ ಕವನ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆಯುವ ಕವನಗಳು ಮತ್ತೆ ಕಾಲನೆದುರು ನಿಂತು ಸೆಣಸಿ ಗೆಲ್ಲುತ್ತವೆಯೇ? ಅಥವಾ ಹಾಗೆಯೇ ಮರೆಯಾಗಿಹೋಗುತ್ತವೆಯೇ? ತರಗತಿಗಳಲ್ಲಿ ಅಡಿಗರ ಒಂದು ಕವನ ಉದಾಹರಿಸಿ ಎಂದರೆ ವಿದ್ಯಾರ್ಥಿಗಳಿಂದ ಬರುವ ಉತ್ತರ ‘ಯಾವ ಮೋಹನ ಮುರಲಿ ಕರೆಯಿತು..’ಎಂಬುದು. ಇಷ್ಟೆಲ್ಲ ಇದ್ದರೂ ನಾವ್ಯಾಕೆ ಸುಲಭದ ದಾರಿಯನ್ನೇ ಆಯ್ದುಕೊಳ್ಳುತ್ತಿದ್ದೇವೆ. ಮೂರು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದರೂ ನಮ್ಮನ್ನು ಯಾರೂ ಗುರುತಿಸುವುದಿಲ್ಲ ಎಂದು ಕವಿಗಳು ಅಲವತ್ತುಕೊಳ್ಳುವುದು ಯಾಕೆ? ಜಯದೇವ ಕವಿಯ ಗೀತಗೋವಿಂದ ಇಂದಿಗೂ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಒದಗಿಬರುವುದು ಅದರೊಳಗಿರುವ ಯಾವ ಗುಣಗಳಿಂದ? ಇಂದಿಗೂ ಷಟ್ಪದಿ, ಕಂದ, ವೃತ್ತಗಳಲ್ಲಿ ಕಾವ್ಯರಚನೆ ಮಾಡುವವರು ಇದ್ದಾರೆ. ಆದರೆ ಬರಿಯ ಛಂದಸ್ಸಿನಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಗೇಯತೆಯೊಂದಿಗೆ ಕಲ್ಪನೆ, ಜೀವನಾನುಭವ, ನಮ್ಮ ಪ್ರಾಚೀನ ಕಾವ್ಯ ಪುರಾಣಗಳ ತಿಳುವಳಿಕೆ ಜೊತೆಗೆ ಪದಗಳ ಔಚಿತ್ಯಪೂರ್ಣ ಬಳಕೆ ಇವಿಷ್ಟು ಮಿಳಿತವಾದರೆ ಮಾತ್ರ ಒಳ್ಳೆಯ ಕವನ ಜೀವತಳೆಯಲು ಸಾಧ್ಯ. ಪ್ರತಿಮೆ, ರೂಪಕಗಳು ಕವನದ ಆಶಯವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತವೆ. ಇವೆಲ್ಲ ಇಲ್ಲದೆ ಹುಟ್ಟಿದ ಯಾವ ಕವನವೂ ಕಾಲನ ಮುಂದೆ ನಿಲ್ಲಲಾರದು. ನಮ್ಮ ಶಬ್ದ ಗಾರುಡಿಗ ಬೇಂದ್ರೆಯವರು ತಮ್ಮ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬ ಪದ್ಯದಲ್ಲಿ ಕವಿತೆ ಹುಟ್ಟುವ ಹಂತಗಳನ್ನು ವಿವರಿಸಿದ್ದಾರೆ. ಕವಿಗಳಾಗ ಬಯಸುವವರಿಗೆ ಇದೊಂದು ಪಥದೀಪಿಕೆಯಾಗಬಹುದು. ತುಂಬಿಯ ಝೇಂಕಾರದಂತಹ ಒಂದು ಗುಂಗು ಮನಸ್ಸನ್ನು ಆವರಿಸಿಕೊಳ್ಳುತ್ತಿದೆಯೆಂದರೆ ಅದನ್ನು ಕವನಪ್ರಸವವೇದನೆ ಎಂದೇ ತಿಳಿದುಕೊಳ್ಳಬೇಕು. ಆನಂತರ ನಮ್ಮ ಮಿತಿ ಶಕ್ತಿಗಳಿಗೆ ಅನುಗುಣವಾಗಿ ನಮ್ಮ ಕವನದ ಜನನವಾಗುತ್ತದೆ. ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ ಎನ್ನುವ ಒಂದೇ ಸಾಲಿನಲ್ಲಿ ಬೇಂದ್ರೆಯವರು ಕವನದ ಲಕ್ಷಣಗಳನ್ನೆಲ್ಲ ಹೇಳಿಬಿಟ್ಟಿದ್ದಾರೆ. ಪದಗಳ ಬಳಕೆಯಲ್ಲಿ ಕವಿ ಜಿಪುಣನಾಗಿದ್ದಷ್ಟು ಕವಿತೆ ಉದಾರಿಯಾಗುತ್ತದೆ. ಪ್ರಾಸಗಳನ್ನು ನಾವು ಮತ್ತೆ ಜೋಡಿಸಿದರೆ ಅದು ಅಂಗಿಯ ಮೇಲೆ ಪ್ಯಾಚ್ವರ್ಕ್ ಮಾಡಿದಂತಿರುತ್ತದೆ. ಅದು ಕವಿತೆಯೊಡನೆಯೇ ಸಹಜವಾಗಿ ಹುಟ್ಟಿಬರಬೇಕು. ಇಷ್ಟೆಲ್ಲ ಆಗಿ ಹುಟ್ಟಿದ ಕವನವನ್ನು ಅರ್ಥಮಾಡಿಕೊಳ್ಳಲು ಸಹೃದಯನಾದ ಓದುಗನಲ್ಲೂ ಒಂದು ಶಕ್ತಿ ಬೇಕಾಗುತ್ತದೆ. ಅಸಮರ್ಥರ ಎದುರಲ್ಲಿ ಕವಿತೆಯನ್ನು ಒರೆಯುವ ಭಾಗ್ಯವನ್ನು ನನಗೆ ಕರುಣಿಸಬೇಡ ಎಂದು ಒಬ್ಬ ಪ್ರಾಚೀನ ಕವಿ ಭಗವಂತನಲ್ಲಿ ಆರ್ತವಾಗಿ ಮೊರೆಯಿಡುವ ಒಂದು ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಮಾಜದ ಸಮಸ್ಯೆಗಳನ್ನು ಹೇಳಲು ಕವನ ಪ್ರಕಾರವನ್ನು ಬಳಸಿಕೊಳ್ಳುವುದಾದರೆ ಅದನ್ನು ಕೊಂಚ ಕಲಾತ್ಮಕವಾಗಿ ಹೇಳಿದರೆ ಪರಿಣಾಮ ಹೆಚ್ಚಾಗಬಹುದು. ‘ಮರ ಕಡಿಯಬೇಡಿ’ ‘ನೀರು ಉಳಿಸಿ’ ‘ಸೇಂದಿ ಕುಡಿಯಬೇಡಿ’ ‘ಬೀಡಿ ಸೇದಬೇಡಿ’ ಎಂದು ವಾಚ್ಯವಾಗಿ ಅಥವಾ ಘೋಷಣೆಯ ರೂಪದಲ್ಲಿ ಹೇಳುವುದರಲ್ಲಿ ಕವನದ ಯಾವ ಅಂಶವನ್ನು ಗುರುತಿಸಲು ಸಾಧ್ಯವಿದೆ? ಸ್ತ್ರೀ ಸಮಾನತೆ, ಶೋಷಣೆ, ಮುಂತಾದ ಅದೇ ಅದೇ ವಿಷಯಗಳು ಪುನರಾವರ್ತನೆಗೊಳ್ಳುವುದರಿಂದ ಕವನದ ವಸ್ತುಗಳಲ್ಲೂ ಹೊಸತನವಿಲ್ಲ. ಉತ್ತರ ಭಾರತದ ಕಡೆಗಳಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಕವನಗಳನ್ನು ಓದುವುದಿಲ್ಲ, ಹಾಡುತ್ತಾರೆ. ಪ್ರೇಕ್ಷಕರೂ ಕೈಯಲ್ಲಿ ತಾಳ ಹಾಕುತ್ತಾ ಹಾಡನ್ನು ಅನುಭವಿಸುತ್ತಿರುತ್ತಾರೆ. ಲವಲವಿಕೆಯಿಂದ ಕೂಡಿದ ಇಂಥಾ ಕವಿಗೋಷ್ಠಿಗಳು ಯಾರಿಗೂ ಬೋರ್ ಎನಿಸುವುದಿಲ್ಲ. ಕೊನೆಯದಾಗಿ, ಕವನ ಬರೆಯಲು ಹೊರಡುವ ಹೊಸ ಕವಿಗಳೆಲ್ಲರೂ ಹಳೆಯ ಕವಿಗಳನ್ನು ಕಡ್ಡಾಯವಾಗಿ ಓದಿಕೊಂಡಿರಬೇಕು. ಅವರ ರಚನೆಗಳನ್ನೆಲ್ಲ ಓದಿದ ನಂತರ ಮತ್ತೆ ಹೊಸತು ಹೇಳಲು ಏನಾದರು ಇದೆ ಎಂದಾದರೆ ಮಾತ್ರ ಕವನ ರಚನೆಯ ಕಾಯಕಕ್ಕೆ ಇಳಿಯಬೇಕು. ಒಂದೇ ವಿಷಯವನ್ನು ಮತ್ತೆ ಪುನರಾವರ್ತಿಸುವುದಾದರೂ ಅದರಲ್ಲಿ ಹೊಸತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಬೇಕು. ಇದಕ್ಕೆಲ್ಲ ಒಂದು ಮಟ್ಟಿನ ಪ್ರತಿಭೆ ಬೇಕು. ಅದಿಲ್ಲದಿದ್ದರೆ ಉಳಿದ ಯಾವುದೂ ಸಹಕರಿಸಲಾರದು.
**********

 

-ರೇಶ್ಮಾ ಭಟ್

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...