Monday, January 26, 2026

ಜಲಾಮೃತ

ದೇಹದ ವಿಷವನ್ನು ನಾಶಗೊಳಿಸುವ ಅಮೃತದ ಗುಣ ನೀರಿಗಿರುವುದರಿಂದಲೇ ಅದು ಜಲಾಮೃತ. ಹುಟ್ಟಿನಿಂದ ಸಾವಿನವರೆಗೆ ಮಾತ್ರವಲ್ಲದೆ ಸಾವಿನ ನಂತರದ ವಿಧಿಗಳಿಗೂ ನಮಗೆ ನೀರು ಬೇಕಲ್ಲವೇ? ಜಲಾಮೃತಕ್ಕೆ ಪೂರಕವಾಗಿ, ನಾನು ಹಲವಾರು ವಿಚಾರಗಳನ್ನು ಒಳಗೊಳಿಸಿದ ಈ ಲೇಖನದ ಮೂಲಕ ನೀರಿಂಗಿಸುವ, ನೀರನ್ನು ರಕ್ಷಿಸುವ, ನೀರನ್ನು ಮಿತವಾಗಿ ಬಳಸುವ ಮತ್ತು ನೀರಿನ ಪುನರ್ಬಳಕೆ ಮಾಡುವ ಕುರಿತಾದ ವಿಚಾರಗಳ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆಯುವ ಒಂದು ಪುಟ್ಟ ಪ್ರಯತ್ನ. ನಮ್ಮ ಸ್ವಾರ್ಥದ ಕಾರಣಗಳಿಂದ ನಶಿಸಿ ಹೋಗಿರುವ ಕೆರೆ ತೊರೆ ಮತ್ತು ಹಳ್ಳಗಳನ್ನು ಪುನರ್ರಚಿಸುವುದರ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ ಎಂದು ಭಾವಿಸಿದ್ದೇನೆ.
ಮೂರು ಜಗಳಾದ ಜಮೀನ್, ಜಂಗಲ್ ಮತ್ತು ಜಲ್ ಇವು ಮೂರೂ ಪರಸ್ಪರ ಸಂಬಂಧಿಗಳು. ಜಮೀನಿನ ಸ್ವಾಸ್ಥ್ಯ ಜಂಗಲ್ ಮತ್ತು ಜಲವನ್ನಾಧರಿಸಿದೆ. ಜಂಗಲ್, ಜಲ ಮತ್ತು ಜಮೀನು ಇಲ್ಲದೇ ಉಳಿಯದು. ಜಮೀನು ಮತ್ತು ಜಂಗಲ್ ಇಲ್ಲದೆ ನೀರು ಲಭಿಸದು. ಆದರೆ ಇಂದು ಜಂಗ್‌ಲ್ ಎಂದರೆ ಕಾಡು ನಾಶವಾಗಿದೆ, ನಾಶವಾಗುತ್ತಲೇ ಇದೆ. ಭೂಸ್ವಾಸ್ಥದಲ್ಲಿ ಏರುಪೇರಾಗಿದೆ. ಉಸಿರಾಟಕ್ಕೆ ದೊರೆಯುವ ನಿಸರ್ಗದತ್ತ ಶುದ್ಧ ಆಮ್ಲಜನಕದಲ್ಲಿ ಇಳಿತಾಯವಾಗುತ್ತಿದೆ. ವಾತಾವರಣದ ಶಾಖ ಏರುತ್ತಿದೆ. ವಾತವಾರಣ ವಿಷಾನಿಲಗಳಿಂದ ತುಂಬುತ್ತಿದೆ. ಭವಿಷ್ಯದಲ್ಲಿ ಜೀವ ಜಗತ್ತು ಬದುಕುಳಿಯ ಬಹುದೇ ಎಂಭ ಭಯಭೀತ ವಾತಾವರಣದಲ್ಲಿ ನಾವಿದ್ದೇವೆ. ಮಳೆಯ ನೀರು ನೆಲದ ಮೇಲೆ ರಭಸದಿಂದ ಹರಿಯುತ್ತಾ ಪರಿಸರದಲ್ಲಿ ನಾಶ ನಷ್ಟಗಳನ್ನು ಮಾಡುತ್ತಿದೆಯೇ ಹೊರತು ಮರಗಳಿರದೇ ಇರುವುದರಿಂದಾಗಿ ಭೂಮಿಗೆ ಇಂಗುತ್ತಿಲ್ಲ. ನಾವು ತಿಳಿದಿರಲೇಬೇಕಾದ ಅಮೂಲ್ಯ ವಿಚಾರವೇನೆಂದರೆ ಒಂದು ಬೃಹದಾಕಾರದ ಹಲಸಿನ ಮರವು ಮಳೆಗಾಲವೊಂದರಲ್ಲಿ ಒಂದು ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಭೂಗರ್ಭಕ್ಕೆ ಸೇರಿಸುತ್ತದೆ. ಒಂದು ವಿಶಾಲವಾದ ಅಶ್ವತ್ಥ ವೃಕ್ಷವು ಮೂರು ಲಕ್ಷ ಲೀಟರ್‌ಗೂ ಅಧಿಕ ನೀರನ್ನು ಭೂಗರ್ಭದ ಜಲನಿಧಿಗೆ ಜಮೆ ಮಾಡುತ್ತದೆ. ಆದರೆ ತರಗೆಲೆಗಳನ್ನು ಬೆಳ್ಳಿ ಬಂಗಾರಗಳಂತೆ, ಭದ್ರವಾಗಿ ಮರದಡಿಯಲ್ಲೇ ಉಳಿಸುತ್ತಿರಬೇಕೆಂಬುದೂ ನೆನಪಿನಲ್ಲಿಡಲೇ ಬೇಕಾದ ಅತ್ಯಂತ ಮಹತ್ವದ ಸಂಗತಿಯಾಗಿದೆ.
ನಾವು ಜಲಪಾತ್ರೆಗಳಾದ ಕೆರೆ, ತೊರೆ, ಹಳ್ಳ, ತೋಡು, ನದಿ ಹೆಚ್ಚೇಕೆ ಸಮುದ್ರಗಳನ್ನು ಕೂಡಾ ಕಸದ ತೊಟ್ಟಿಗಳನ್ನಾಗಿ ಮಾಡುವುದರ ಮೂಲಕ ಅಮೃತ ಸದೃಷ ಜಲವನ್ನು ವಿಷಯುಕ್ತ ಮಾಡುತ್ತಿರುವುದು ನಮ್ಮ ಹೃದಯ ಶೂನ್ಯತೆ ಮತ್ತು ವ್ಯಕ್ತಿತ್ವ ಶೂನ್ಯತೆ ಅಲ್ಲವೇ? ಸಾವಯವ ಇರಲಿ, ಅಸಾವಯವ ಇರಲಿ, ಪ್ರಾಣಿಜನ್ಯಗಳಿರಲಿ, ವಿದ್ಯುನ್ಮಾನ ಸಂಬಂಧಿತವಿರಲಿ, ಕಾರ್ಖಾನೆಗಳ ಮಲಿನ ತ್ಯಾಜ್ಯವಿರಲಿ- ನಾವು ಈ ಎಲ್ಲ ರೀತಿಯ ನಮ್ಮ ತ್ಯಾಜ್ಯಗಳು ನೀರನ್ನು ಸೇರದಂತೆ ಶ್ರದ್ಧೆ ವಹಿಸುವ ಸದಾ ಬದ್ಧತೆಯುಳ್ಳ ಜಾಗೃತ, ಪ್ರಜ್ಞಾವಂತ ಪರಿಸರ ಸ್ನೇಹೀ ನಾಗರಿಕರಾಗಬೇಕು ಎಂಬುದನ್ನು ಒತ್ತಿ ಒತ್ತಿ ಹೇಳುತ್ತೇನೆ.
ಮಾಯಾಜಾಲದಿಂದ ನೀರನ್ನು ಸೃಷ್ಟಿಸಲು ಅಸಾಧ್ಯ. ನೀರೆಂಬುದು ದೈವಿಕ ಶಕ್ತಿ. ಅದು ಮಾಯೆ. ಅದಕ್ಕಾಗಿಯೇ ಮಾಯಾಜಲ ಎನ್ನುತ್ತೇವೆ. ವಿಜ್ಞಾನದಿಂದಲೂ ವೆಚ್ಚರಹಿತವಾಗಿ ನಮಗೆ ಯಥೇಷ್ಟ ನೀರನ್ನು ಪೂರೈಸಲು ಸಾಧ್ಯವೇ? ಅದಕ್ಕೆ ಭೂಮಿಯೇ ಬೇಕು. ಅರಣ್ಯನಾಶಗೊಂಡ ಇಂದಿನ ಪರಿಸರದ ಇತಿಮಿತಿಯಲ್ಲಿ ಭೂಮಿಯೊಳಗಿನಿಂದ ಮಾಯಾಜಲವು ನಮಗೊದಗುತ್ತಿರಲು ಜಲಮರುಪೂರಣ ಅನಿವಾರ್ಯವಾಗಿದೆ. ಜಲ ಮರುಪೂರಣ ಎಂದರೆ ಭೂಗರ್ಭದ ಜಲಬ್ಯಾಂಕಿಗೆ ನೀರಿನ ಠೇವಣಿ. ನಾಳೆಯ ದಿನ ಬ್ಯಾಂಕಿನಿಂದ ಹಣ ಸಿಗಬೇಕಾದರೆ ಹಿಂದೆ ಠೇವಣಿಯಿಟ್ಟಿದ್ದರೆ ಮಾತ್ರವೇ ಸಾಧ್ಯ. ಅಂತೆಯೇ ಇಂದು ನಾವು ಭೂಮಿಗಿಳಿಸಿದ ನೀರು ಬೇಸಗೆಯಲ್ಲಿ ನಮಗೊದಗುತ್ತದೆ. ನಮ್ಮ ಹಿರಿಯರು ಠೇವಣಿಯಿಟ್ಟ ನೀರೆಲ್ಲವೂ ಭೂಗರ್ಭದಿಂದ ಖಾಲಿಯಾಗಿದೆ. ನೀರಿನ ಹೊಸ ಠೇವಣಿ ನಾನಾ ಕಾರಣಗಳಿಂದಾಗಿ ಅಲ್ಪವಾಗುತ್ತಿದೆ. ಭೂಮಿಗೆ ನಾವು ನೀರಿನ ಸಾಲಗಾರರು. ಸಾಲ ತೀರಿಸ ಬೇಡವೇ? ಅದಕ್ಕಾಗಿ ಇನ್ನಾದರೂ ಓಡುವ ಮಳೆ ನೀರನ್ನು ತೆವಳಿಸುವ, ತೆವಳುತ್ತಿರುವುದನ್ನು ನಿಲ್ಲಿಸುವ, ನಿಂತುದನ್ನು ಭೂಮಿಗಿಳಿಸುವ ಪ್ರಕ್ರ್ರಿಯೆ ಹಗಲಿರುಳೆನ್ನದೆ ನಡೆಯುತ್ತಿರಲೇ ಬೇಕು. ನಮ್ಮ ಅಂಗಳದ ಬಾವಿ, ಜಲ ಮರುಪೂರಣದಲ್ಲಿ ನಮಗೆ ಸಹಕರಿಸುವ ಮೊದಲ ಮಿತ್ರ. ನಂತರದಲ್ಲಿ ಕೆರೆಗಳು, ಕೊಳವೆಬಾವಿಗಳು, ಗದ್ದೆಗಳು, ಹೊಲಗಳು, ತೋಟಗಳು, ಮರಗಿಡ ಬಳ್ಳಿಗಳು, ಪೊದರುಗಳು, ಹುಲ್ಲಿನ ಹಾಸುಗಳು, ಇಂಗು ಗುಂಡಿಗಳು, ಬಿಲಗಳು, ಹುತ್ತಗಳು, ಇತ್ಯಾದಿ.
ಬಾವಿಗೆ ಜಲಮರುಪೂರಣ: ಕಟ್ಟಡಗಳ ಛಾವಣಿಯ ಮೇಲೆ ಬೀಳುವ ಮಳೆಯ ನೀರನ್ನು ದಂಬೆಗಳ ಮೂಲಕ ಅನುಕೂಲಿತ ಕೇಂದ್ರವೊದಂದಕ್ಕೆ ಒಡ್ಡಿ, ಶುದ್ಧೀಕರಣಗೊಳಿಸಿ ಬಾವಿಗೋ, ಲೊಳವೆ ಬಾವಿಗೋ ಕಳುಹಿಸಬೇಕು. ಆದರೆ ಬಾವಿಗೆ ನಾವು ಕಳುಹಿಸುವ ಛಾವಣಿಯ ನೀರನ್ನು ಸಂಪೂರ್ಣ ಯಾ ಗರಿಷ್ಠ ಪ್ರಮಾಣದಲ್ಲಿ ನಮ್ಮ ಬಾವಿ ಅಥವಾ ಕೊಳವೆ ಬಾವಿ ಸ್ವೀಕರಿಸುತ್ತದೆದೆಯೋ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕು. ಒಂದು ವಾರ ಬಿದ್ದ ಮಳೆಯಿಂದಲೇ ಬಾವಿ ತುಂಬಿ ಅಂಗಳ ಮಟ್ಟಕ್ಕೆ ನೀರು ಬರುವಂತಿದ್ದರೆ ಅಂತಹ ಬಾವಿಗೆ ಜಲ ಮರುಪೂರಣ ಸಾಧ್ಯವಿಲ್ಲ.
ಮಳೆನೀರನ್ನು ಶುದ್ಧಗೊಳಿಸುವ ವಿಧಾನ: ಮಳೆ ನೀರಿನ ಶುದ್ಧೀಕರಣಕ್ಕೆ ಅನೇಕ ವಿಧಾನಗಳಿವೆ. ನಾನಿಲ್ಲಿ ವಿವರಿಸುತ್ತಿರುವುದು ಸರಳ ಮತ್ತು ಲಘು ವೆಚ್ಚದ ವಿಧಾನ. ಫೈಬರ್ ತೊಟ್ಟಿಗೆ ಪಾರ್ಶ್ವ ಭಾಗದಿಂದ ಅಗತ್ಯವಿರುವಷ್ಟು ಪ್ರಮಾಣದ ವ್ಯಾಸವಿರುವಂತೆ ಪೈಪು ಜೋಡಿಸಲು ರಂಧ್ರ ಮಾಡಿ ನೀರಿನ ಔಟ್ ಲೆಟ್‌ನ ವ್ಯವಸ್ಥೆ ಮಾಡಬೇಕು. ತೊಟ್ಟಿಯೊಳಗೆ ದೊಡ್ಡ ಬೋಲ್ಡರ್‍ಸ್, ಅದರ ಮೇಲೆ ಚಿಕ್ಕ ಬೋಲ್ಡರ್‍ಸ್, ಅದರ ಮೇಲೆ ಕಲ್ಲಿದ್ದಲು ಯಾ ಮಸಿ, ಪುನಹ ಪುಟ್ಟ ಜಲ್ಲಿಗಳನ್ನು ಪದರಗಳಾಗಿ ಹಾಸಿ ತೊಟ್ಟಿಯ ಮುಕ್ಕಾಲು ಭಾಗ ತುಂಬಿಸ ಬೇಕು. ಕೊನೆಯ ಜಲ್ಲಿ ಲೇಯರ್‌ನ ಮೇಲೆ ಫೈಬರ್ ನೆಟ್ ಅಥವಾ ಹತ್ತಿಯ ಹಳೆಯ ಸೋಸುವ ಬಟ್ಟೆಯನ್ನು ಹರಡಬೇಕು. ಛಾವಣಿಯ ನೀರು ಮೇಲ್ಪದರದ ಹಾಸಿನ ಮೇಲೆ ಬಿದ್ದಾಗ ಸೋಸಲ್ಪಟ್ಟು ಶುದ್ಧಗೊಂಡು ಇಳಿದು ಬಾವಿಗೆ ಜೋಡಿಸಿದ ಪೈಪಿನ ಮೂಲಕ ಬಾವಿಯನ್ನು ಸೇರುತ್ತದೆ. ಮೇಲೆ ಹಾಸಿದ ಸೋಸುವ ಬಟ್ಟೆ ಯಾ ಫೈಬರ್ ಜಾಲರಿಯನ್ನು ಪ್ರತೀ ದಿನ ಶುಚಿಗೊಳಿಸಿ, ಪುನಹ ಹಾಸುತ್ತಿದ್ದರಾಯಿತು. ಕೊಳವೆ ಬಾವಿಗೆ ಒಂದು ಇಂಚಿನ ಪೈಪು ಮೂಲಕ ಇಳಿಸಿದರೆ ಸಾಕು. ಒಂದೇ ತೊಟ್ಟಿಯಲ್ಲಿ ಎರಡು ಔಟ್ ಲೆಟ್ ವ್ಯವಸ್ಥೆ ಅಳವಡಿಸಿದರೆ ಬಾವಿ ಮತ್ತು ಕೊಳವೆ ಬಾವಿಗಳಿಗೆ ಏಕ ಕಾಲದಲ್ಲಿ ಮಳೆ ನೀರಿಂಗಿಸಲು ಅನುಕೂಲವಾಗುತ್ತದೆ. ಕೊಳವೆ ಬಾವಿಗೆ ನೀರಿಂಗಿಸಲು ಬೇರೆ ವೆಚ್ಚದಾಯಕ ವಿಧಾನಗಳೂ ಇವೆ. ಇತ್ತೀಚೆಗೆ ನಾನಾ ತಂತ್ರಜ್ಞಾನಾಧಾರಿನ ಶುದ್ಧೀಕರಣ ಘಟಕಗಳು ಮಾರುಕಟ್ಟೆಯಲ್ಲಿವೆ. ಹಣವಿದ್ದರೆ ಅವುಗಳನ್ನೂ ಬಳಸ ಬಹುದು. ಆದರೆ ಪ್ರತೀ ದಿನ ಜಾಲರಿಯನ್ನು ಸ್ವಚ್ಚ ಮಾಡುವ ಪರಿಶ್ರಮ ಇದ್ದೇ ಇರುತ್ತದೆ. ಭೂಮಿಯ ಮೇಲಿನಿಂದ ಹರಿಯುವ ತಿಳಿಯಾದ ಮಳೆನೀರನ್ನೂ ಜಲಮರುಪೂರಣದಲ್ಲಿ ಬಳಸಬಹುದು.
ಒಂದು ಸಾವಿರ ಚದರಳತೆಯ ಛಾವಣಿ ಅಥವಾ ಟೆರೇಸಿನಿಂದ ಭೂಮಿಗೆ ಕರಾವಳಿ ಮತ್ತು ಮಲೆನಾಡುಗಳಲ್ಲಿ ಮೂರು ಲಕ್ಷ ಲೀಟರ್‌ಗೂ ಅಧಿಕ ಮಳೆ ನೀರು ಇಂಗಿಸಬಹುದು. ಒಂದು ಸೆಂಟ್ಸ್ ಜಮೀನಿನಲ್ಲಿ ಉದ್ದೇಶ ಪೂರ್ವಕ ಇಂಗಿಸುವುದಾದರೆ ಒಂದು ಲಕ್ಷ ಲೀಟರ್‌ಗೂ ಮೀರಿ ನೀರಿಂಗಿಸಬಹುದು.

ಇಂಗುಗುಂಡಿ: ಇಂಗು ಗುಂಡಿಗಳಿಗೆ ಅಳತೆ ಮತ್ತು ಸಂಖ್ಯೆಗಳ ನಿಗದಿಯಿಲ್ಲ, ಗುಡ್ಡೆಯಲ್ಲಿ ಮಾಡುವ ಸಣ್ಣ ಸಣ್ಣ ಗುಂಡಿಗಳೂ ಭೂಮಿಯ ಜಲಮಟ್ಟ ಎತ್ತರಿಸುವಲ್ಲಿ ಬಹಳ ಸಹಾಯಕ. ಆದರೆ ಗುಂಡಿಗಳಲ್ಲಿ ಕೆಸರು ನೀರು ತುಂಬದಂತೆ ಜಾಗ್ರತೆ ವಹಿಸಬೇಕು. ನೀರಿನ ಇಂಗುವಿಕೆಯನ್ನು ಕೆಸರು ತಡೆಯುತ್ತದೆ. ಜನ – ಜಾನುವಾರು ಸಂಚಾರಗಳಿರುವಲ್ಲಿ ಇಂಗುಗುಂಡಿಗಳನ್ನು ಮಾಡಿದರೆ ಪ್ರಾಣಾಪಾಯದ ಭೀತಿಯಿದೆ. ದಾರಿಗಳ ಯಾ ರಸ್ತೆಗಳ ಬದಿಗಳಲ್ಲಿ, ಮನೆಗಳ ಹತ್ತಿರ, ಬಾವಿಗಳ ಪಕ್ಕದಲ್ಲಿ, ಕ್ರೀಡಾಂಗಣಗಳ ಸಮೀಪಗಳಲ್ಲಿ ಇಂಗುಗುಂಡಿ ಮಾಡುವುದು ಶ್ರೇಯಸ್ಕರವಲ್ಲ. ಇಂಗು ಗುಂಡಿಗಳ ರಚನೆಗೆ ವಿಶಾಲವಾದ ಮೈದಾನ ರೀತಿಯ ಗುಡ್ಡಗಳು ಹೆಚ್ಚು ಸೂಕ್ತ. ಚಿಕ್ಕ ಚಿಕ್ಕ ಗಾತ್ರದ ಇಂಗು ಗುಂಡಿಗಳಾದರೆ ಉತ್ತಮ. ಗುಂಡಿಗಳ ಆಳ ಹೆಚ್ಚಿಸಿದಂತೆ ಪ್ರಾಣಾಪಾಯ ಹೆಚ್ಚು ಎಂಬ ಎಚ್ಚರಿಕೆಯೂ ಬೇಕು. ನೀಕ ತೆಗೆದಲ್ಲಿ, ಬಾವಿಯ ಪಕ್ಕದಲ್ಲಿ, ಗುಡ್ಡದ ಬದಿಯಲ್ಲಿ ಇಂಗು ಗುಂಡಿ ಮಾಡಿದರೆ ಭೂಕುಸಿತವಾಗಬಹುದಾದ ಅಪಾಯವಿದೆ.
ಹುತ್ತಗಳು ಮತ್ತು ಬಿಲಗಳಿಗೆ ತಿಳಿಯಾಗಿ ಹರಿಯುವ ಮಳೆ ನೀರನ್ನು ಒಡ್ಡುವುದರ ಮೂಲಕವೂ ಜಲಮರುಪೂರಣ ಮಾಡಲು ಸಾಧ್ಯ. ಬಿಲಗಳು, ಹೂವಿನ ಗಿಡಗಳು, ತರಕಾರಿ ಗಿಡಗಳು, ಸಮತಲ ನೆಲಗಳು, ಕಾಂಕ್ರೀಟು ಹಾಸದ ಮನೆಯಂಗಳಗಳು, ಹುಲ್ಲು ಹಾಸುಗಳು, ಭತ್ತದ ಗದ್ದೆಗಳು, ತೋಟಗಳು, ಹಳ್ಳಗಳು, ಕೆರೆಗಳು, ತೋಡುಗಳು, ತೋಡುಗಳಿಗೆ ನಿರ್ಮಿಸುವ ನಾನಾ ವಿಧದ ಕಟ್ಟಗಳು, ನದಿಗಳು, ನದೀ ಜಲಯೋಜನೆಗಳು ಭೂಗರ್ಭಕ್ಕೆ ನೀರುಣಿಸುವ ಕಾಯಕದಲ್ಲಿ ಅತ್ಯುತ್ತಮ ಕಾರ್ಯವೆಸಗುತ್ತವೆ. ಆದರೆ ಇಂದು ಹಳ್ಳಗಳು ಕೆರೆಗಳು ಮುಚ್ಚಲ್ಪಡುತ್ತಿವೆ. ಭತ್ತದ ಕೃಷಿಯೂ ಕಡಿಮೆಯಾಗುತ್ತಿದೆ, ಕಟ್ಟಗಳ ನಿರ್ಮಾಣ ನಿಂತೇ ಹೋದಂತಿದೆ. ಇವುಗಳನ್ನು ಮರುಸ್ಥಾಪನೆ ಮಾಡುವ ಅಗತ್ಯವಿದೆ.


ಕಣಿವೆಗಳು: ಸಮತಲ ಕಣಿವೆ ಮಾಡಿ ಆ ಕಣಿವೆಗಳಲ್ಲಿ ಅಲ್ಲಲ್ಲಿ ಗುಂಡಿ ಮಾಡುವುದರಿಂದಲೂ ನೀರಿಂಗಿಸಲು ಸಾಧ್ಯ. ಇಳಿಜಾರು ಜಮೀನಿನಲ್ಲಿ ಇಳಿವ ನೀರನ್ನು ಇಂಗಿಸಲು ತಟ್ಟುಗಳನ್ನು ಮಾಡ ಬಹುದು. ಈ ತಟ್ಟುಗಳನ್ನು ಪ್ರತೀ ವರ್ಷ ಅಗೆತ ಮಾಡುವುದರಿಂದ ಮಳೆ ಬಿದ್ದಾಗ ನೀರು ಇಂಗುತ್ತದೆ. ತಟ್ಟುಗಳಲ್ಲು ಹುಲ್ಲು ಹಾಸು ಇದ್ದರೂ ನೀರಿಂಗುತ್ತದೆ. ತರಕಾರಿ ಅಥವಾ ಹಣ್ಣುಗಳನ್ನು ಬೆಳೆಸುವ ಮೂಲಕವೂ ನೀರಿಂಗಿಸಲು ಅವಕಾಶ ಸೃಷ್ಟಿಸಬಹುದು. ಇಳಿಜಾರಿನಲ್ಲಿ ಹರಿಯುವ ನೀರನ್ನು ಕಣಿವೆಗಳ ಮೂಲಕ ಹರಿಯುವಂತೆ ಮಾಡಿ ಆ ಕಣಿವೆಯಲ್ಲಿ ಅಲ್ಲಲ್ಲ್ಲಿ ಕಲ್ಲು, ಮರದ ದಿಮ್ಮಿಗಳು, ಹೊಯಿಗೆ ತುಂಬಿದ ಅಥವಾ ಜಲ್ಲಿ ಯಾ ಮಣ್ಣು ತುಂಬಿದ ಗೋಣಿಗಳನ್ನು ಹಾಕಿದರೆ ನೀರಿನ ಹರಿವಿನ ವೇಗಕ್ಕೆ ತಡೆಯುಂಟಾಗಿ ನೀರಿಂಗುವುದು. ಇಳಿಜಾರು ಕಣಿವೆಗಳಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿಗಳನ್ನು ಮಾಡುವುದರಿಂದಲೂ ನೀರಿಂಗುತ್ತದೆ. ನಾವು ನೆಟ್ಟ ಗಿಡದ ಹತ್ತಿರ ನೀರಿನ ಇಳಿಕೆಗೆ ಪೂರಕವಾಗಿ ಚಿಕ್ಕ ತೊಟ್ಟಿಲು ಗುಂಡಿ ಮಾಡಿದರೆ ಆ ಗಿಡಕ್ಕೆ ನೀರ ಬಲ ಸಿಗುವುದರೊಂದಿಗೆ ಜಲ ಮರು ಪೂರಣವೂ ಆಗುತ್ತದೆ.


ಮಳೆಕೊಯ್ಲು: ಮಳೆ ಬರುತ್ತಿರುವಾಗ ಅದೇ ನೀರನ್ನು ಹಿಡಿದು ಬಳಸುವುದು ಅಥವಾ ಬೇಸಗೆಯ ಕಷ್ಟದ ದಿನಗಳಿಗಾಗಿ ದೊಡ್ಡ ದೊಡ್ಡ ಟಾಂಕಿಗಳಲ್ಲಿ ಶೋಧಿತ ಮಳೆನೀರನ್ನು ಸಂಗ್ರಹಿಸಿಡುವ ವಿಧಾನವೇ ಮಳೆಕೊಯ್ಲು. ಮಳೆಕೊಯ್ಲಿನ ಬಗ್ಗೆಯೂ ಯೋಚಿಸಬೇಕಾದ ದಿನಮಾನದಲ್ಲಿ ನಾವಿದ್ದೇವೆ.


ಮಿತಬಳಕೆ: ಒಬ್ಬನಿಗೆ ದಿನಕ್ಕೆ 140 ಲೀಟರ್ ನೀರಿನ ಅಗತ್ಯವಿದೆ. ಆರು ಜನರಿಗಾದರೆ ೮೪೦ಲೀಟರ್ ನೀರು ಬೇಕು. ಒಬ್ಬನಿಗೆ ವರ್ಷಕ್ಕೆ 50,000 ಲೀಟರ್ ನೀರು ಸಾಕು. ಆರು ಜನರಿಗೆ ಮೂರು ಲಕ್ಷ ಲೀಟರ್ ನೀರು ಬೇಕು. ಅಗತ್ಯದ ಇಮ್ಮಡಿ ನೀರನ್ನು ಆರ್ಥತ್ ಆರು ಲಕ್ಷ ಲೀಟರ್ ನೀರನ್ನು ಐದು ಸೆಂಟ್ಸ್ ಜಮಿನಿನಲ್ಲಿ ಭೂಮಿಗಿಳಿಸಲು ಸಾಧ್ಯ. ಮಳೆಗಾಲದಲ್ಲಿ ನಮ್ಮ ಬಳಕೆಯ ಬಹು ಪಾಲು ನೀರನ್ನು ಮಳೆಯಿಂದಲೇ ಪೂರೈಸಬಹುದು. ಇದರಿಂದ ಭೂಮಿಯಿಂದ ಎತ್ತುವ ನೀರಿನ ಪ್ರಮಾಣ ಮಿತಗೊಳ್ಳುತ್ತದೆ. ಭೂಮಿಗೆ ನೀರಿಳಿಸುವುದೆಷ್ಟು ಮುಖ್ಯವೋ ಅಷ್ಟೇ ಪ್ರಮುಖವಾದುದು ನೀರೆತ್ತುವುದನ್ನು ಮಿತಗೊಳಿಸುವುದು ಮತ್ತು ನೀರು ಪೋಲಾಗುವುದನ್ನು ತಪ್ಪಿಸುವುದು. ಬಿಂದು ಬಿಂದು ಜಿನುಗುವ ನಲ್ಲಿಯಲ್ಲಿ ಒಂದು ದಿನದಲ್ಲಿ ಪೋಲಾಗುವ ನೀರು ಐವತ್ತು ಲೀಟರ್ ಎಂದರೆ ಆಶ್ಚರ್ಯವಾಗುವುದಲ್ಲವೇ? ನೀರು ಜಿನುಗುವ ಟ್ಯಾಪ್‌ಗಳು, ಪೈಪು ಬಿರಿದು ಹಾರುವ ಕಾರಂಜಿಗಳು, ಸಾರ್ವಜನಿಕ ನಲ್ಲಿಯಡಿ ಇಟ್ಟ ಕೊಡ ತುಂಬಿ ಚೆಲ್ಲುತ್ತಿದ್ದರೂ ಕೊಡಪಾನದ ವಾರೀಸುದಾರರು ಶ್ರಧ್ಧೆ ವಹಿಸದಿರುವುದು ನಮ್ಮ ನಿತ್ಯ ನೋಟಗಳು, ಹತ್ತು ಲೀಟರ್ ನೀರಿನಲ್ಲಿ ಮಾಡಬಹುದಾದ ಸ್ನಾನಕ್ಕೆ ಅದಕ್ಕಿಂತ ಹೆಚ್ಚು ನೀರನ್ನು ಬಳಸಿ ಪೋಲು ಮಾಡುವುದು, ದಿನದ ಇಪ್ಪತ್ತನಾಲ್ಕು ಘಂಟೆಯೂ ತೋಟಕ್ಕೆ ನೀರು ಹಾಯಿಸುವ ವ್ಯವಸ್ಥೆ ಇವೆಲ್ಲವೂ ನಾವು ಜಲಾಮೃತಕ್ಕೆ ಮಾಡುವ ದ್ರೋಹ ಅಥವಾ ಪಾತಕ. ಜಲಮಾತೆ ನಮ್ಮನ್ನು ಕ್ಷಮಿಸಳು. ದಂತ ಮಾರ್ಜನದಲ್ಲಿ ಬ್ರಶ್ ಹಿಡಿದಾಗ ಟ್ಯಾಪ್ ಆನ್ ಆಗುತ್ತದೆ. ಆದರೆ ಟ್ಯಾಪ್ ಓಫ್ ಮಾಡುವುದು, ಬಾಯಿ ಮತ್ತು ಮುಖ ತೊಳೆದು ಕೈವಸ್ತ್ರದಿಂದ ಮುಖ ಒರೆಸಿದ ಮೇಲಾದರೆ ಇದಕ್ಕಿಂತ ಪಾಪದ ಕೆಲಸ ಬೇರೆ ಇಲ್ಲ. ವಾಷ್ ಬೇಸಿನ್ ಬಳಿ ಒಂದು ಪುಟ್ಟ ಮಗ್ ಇರಿಸಿ ಬಹಳಷ್ಟು ಲೀಟರ್ ನೀರನ್ನು ಪ್ರತೀ ದಿನ ಉಳಿಸಬಹುದೆಂದರೆ ನಂಬುವಿರಾ?. ವಾಷಿಂಗ್ ಮೆಷಿನ್ ಬಳಕೆ ಕಡಿಮೆಯಾದರೆ, ಬಾತ್ ಟಬ್ ಬಳಕೆ ಕಡಿಮೆಯಾದರೆ, ಶವರ್ ಬಾತ್ ಮಿತಿಗೊಂಡರೆ ನೀರಿನ ಉಳಿತಾಯವಾಗುತ್ತದೆ.


ನಮ್ಮ ಅಡುಗೆ, ಸ್ನಾನಗಳಿಗೆ ಬಳಕೆಯಾದ ನೀರನ್ನೂ ಇಂಗಿಸುವ, ಅಥವಾ ಗಿಡಗಳಿಗೆ ಹಾಯಿಸುವ ಮೂಲಕ ಪುನರ್ಬಳಕೆ ಮಾಡುವ ಮೂಲಕವೂ ಜಲಾಮೃತದ ರಕ್ಷಣೆಯಲ್ಲಿ ನಾವು ಭಾಗೇದಾರಿಗಳಾಗಲೇ ಬೇಕು. ಜಲ ಮರು ಪೂರಣ ಮಿತ ಬಳಕೆ ಮತ್ತು ಪುನರ್ಬಳಕೆ ಹಾಗೂ ಜಲ ಸಂರಕ್ಷಣೆ ವಿಶಾಲ ವ್ಯಾಪ್ತಿಯುಳ್ಳದ್ದು. ಇಲ್ಲಿ ನಾನು ಚರ್ಚಿಸಿರುವುದು ಅತ್ಯಂತ ಪುಟ್ಟ ಭಾಗ. ನಾವು ಜಲಾಮೃತ ಜ್ಞಾನದೊಳಗೆ ಇನ್ನೂ ಆಳಕ್ಕಿಳಿಯೋಣ, ಅನುಷ್ಠಾನಿಸೋಣ. ನಮಸ್ಕಾರ.

ಲೇ: ರಮೇಶ ಎಂ ಬಾಯಾರು

 

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...