ಲಾಕ್ ಡೌನ್ ಓಪನ್ ಆಯ್ತಲ್ಲ ಮೊನ್ನೆ? ಮೂರು ತಿಂಗಳಾಗಿತ್ತು ಹೊರಹೋಗದೆ! ಸಿಕ್ಕಿದ ಅವಕಾಶವನ್ನು ಬಿಡದೆ ಸಮಾರಂಭವೊಂದಕ್ಕೆ ಒಬ್ಬರ ಮನೆಗೆ ಹೋಗಿದ್ದೆ, ಅಪರೂಪವಾಗಿ ಹೋದದ್ದಲ್ವೆ? ಐದಾರು ಮಂದಿ ಮಕ್ಕಳು ಸುತ್ತ ಮುತ್ತ ಸೇರಿ ಹಾಯ್ ಹಾಯ್ ಅಂದದ್ದೇ ಅಂದದ್ದು, ಕೆಲವರು ಶೇಕ್ ಹ್ಯಾಂಡ್ ಕೊಟ್ರು. ಒಳಹೋದ ತಕ್ಷಣ ಅರ್ಜಂಟ್ ಬಾಯಾರಿಕೆ ಏನಾದರೂ ಬೇಕ ಅಂದ್ರು, ಬೇಡವೆಂದೆ. ಫ್ರಿಜ್ಜಲ್ಲಿದ್ದ ಯಾವುದೋ ಲೋಕಲ್ ಮೇಡ್ ತಂಪು ಪಾನೀಯ ಕೊಟ್ರು, ಬೇಡವೆಂದ್ರೆ ಶಿಷ್ಟಾಚಾರಕ್ಕೆ ಹೊಡೆತ, ಕುಡಿದೆ. ಊಟದ ಹೊತ್ತು, ನಾಲ್ಕೈದು ಡೈನಿಂಗ್ ಟೇಬಲ್ ಬಂತು; ಕುರ್ಚಿ ಎಳೆದು ಅವರವರ ಸ್ಥಾನ ಭದ್ರಪಡಿಸಿಕೊಂಡು, ಅವರವರೇ ಬಡಿಸಿಕೊಂಡ್ರು. ನನಗೆ ಸ್ವಲ್ಪ ಟೇಬಲ್ ಎತ್ತರವೇ ಆಯಿತು, ಅದಕ್ಕೆ ಪರಿಹಾರವೇ ಇಲ್ಲ, ಊಟ ಮಾಡಲೇ ಬೇಕಾಗಿತ್ತು. ನಿಜ ಹೇಳಬೇಕೆಂದರೆ, ನನಗೆ ನೆಲದ ಮೇಲೆ ಕೂತು ಬೇರೆಯವರು ಬಡಿಸಿದ್ದನ್ನು ಊಟಮಾಡಿಯೇ ಗೊತ್ತು. (ಮನೆಯವರನ್ನೆಲ್ಲಾ ಒಟ್ಟು ಸೇರಿಸಿ ಬಹಳ ಶಿಸ್ತುಬದ್ಧವಾಗಿ ಬಡಿಸುವ ಆ ಅಮ್ಮನ ಕೈಯ ಸಾಮರ್ಥ್ಯವಾದರೂ ಎಂತಹದ್ದು! ಈಗ ನೋಡಿ, ಆರು ಮಂದಿ ಇದ್ದರೆ ಆರು ಪಂಙ್ತಿ. ಕೊರೊನ ಆ ಹಿಂದಿನ ಪದ್ಧತಿಯನ್ನು ನಮಗೆ ಮತ್ತೆ ನೆನಪಿಸಿಕೊಟ್ಟಿದೆ ಬಿಡಿ.)
ಹೊಂದಾಣಿಕೆ ಮಾಡಿಕೊಂಡೆ. ಆ ತಟ್ಟೆ ಹಿಡಿದುಕೊಂಡು ಬೇರೆ ಬೇರೆ ಕಡೆಗೆ ಸುತ್ತಾಡಿಕೊಂಡು ಒಂದರ ಮೇಲೆ ಇನ್ನೊಂದು ಹಾಕಿಕೊಂಡು(ಯಾವುದರ ರುಚಿ ಯಾವುದಕ್ಕೋ ಏನೊ)ಮುಕ್ಕುವುದಕ್ಕಿಂತ ಡೈನಿಂಗ್ ಟೇಬಲ್ ವಾಸಿ. ಊಟ ಮುಗಿಯಿತು, ಹೆಚ್ಚಿನವರು ಟಿಶ್ಯೂಪೇಪರ್ ಗೆ ಶರಣಾದರು, ನನಗೆ ಊಟದ ಮೊದಲು ಹಾಗೂ ನಂತರ ಕೈತೊಳೆಯುವ ಅಭ್ಯಾಸ. ಅಲ್ಲೇ ಪಕ್ಕದಲ್ಲಿದ್ದ ನಳ್ಳಿ ನೀರಲ್ಲಿ ಕೈ ತೊಳೆದೆ.
ಅಂದು ನೆಲದಲ್ಲಿ ಕೂತು ಎಲ್ಲರನ್ನು ಒಂದುಗೂಡಿಸಿ ಭಾವ ಶುದ್ಧಿಯಲಿ ತಾಯಿ ಅಕ್ಕರೆಯಿಂದ ಕೊಡುತ್ತಿದ್ದ ಆ ಕೈತುತ್ತು ಬಾಯಿತುತ್ತು ಎಲ್ಲಿ ಹೋಯಿತು ಈ ಹೊತ್ತು? ವೃದ್ಧಾಶ್ರಮಕ್ಕೇ ಹೋಗಬೇಕಾಗಿರುವ ಆಕೆಯ ನೆನಪು ಯಾಕಾದರೂ ಬರಬೇಕು ಅಲ್ವೆ?
ನನ್ನಲ್ಲಿ ನಿಮ್ಮನ್ನು ನಿಮ್ಮಲ್ಲಿ ನನ್ನನ್ನು ಕಂಡುಕೊಂಡು ಶಿರಬಾಗಿ ಕೈಮುಗಿಯುವ ಸಂಸ್ಕೃತಿ ವಿಕೃತಿಹೊಂದಿ ಶೇಕ್ ಹ್ಯಾಂಡಿಗೆ ಸೀಮಿತಗೊಂಡಿತು. ಸಂಬಂಧ, ವಯಸ್ಸು ಇವೆಲ್ಲವನ್ನೂ ಏಕ ಕಾಲದಲ್ಲಿ ಗರ್ಭೀಕರಿಸಿಕೊಂಡಿರುವ ಚಿಕ್ಕಪ್ಪ ದೊಡ್ಡಪ್ಪ, ಚಿಕ್ಕಮ್ಮ ದೊಡ್ಡಮ್ಮ, ಅತ್ತೆ ಮಾವ, ಅಕ್ಕ ತಂಗಿ ಇವೆಲ್ಲವನ್ನೂ ಅರ್ಥ ಗೋಚರವಾಗದ ಅಂಕಲ್, ಆಂಟಿ, ಮಮ್ಮಿ, ಡ್ಯಾಡಿ, ಕಸಿನ್ ನುಂಗಿಹಾಕಿತು. ಎಲ್ಲಿದೆ ಮಣ್ಣಿನ ವಾಸನೆ ಹೇಳಿ?
ಬಿಸಿಲೇರಿ ಬಾಯಾರಿ ಒಣಗಿಹೋದ ಗಂಟಲಿಗೆ ಬೆಲ್ಲನೀರು ಆಸರೆ, ಅದು ನಮ್ಮ ಸಂಸ್ಕೃತಿ, ಅಲ್ಲಿ ಏಕಕಾಲದಲ್ಲಿ ಆಯಾಸ ಮತ್ತು ಬಾಯಾರಿಕೆಯನ್ನು ನೀಗಿಸುವ ವೈಜ್ಞಾನಿಕತೆಯಿದೆ. ತಂಪೇರಿದ ಏನೇನೋ ಕೋಲಗಳಿಗೆ ಅಲ್ಲಿ ಸ್ಥಾನವೇ ಇಲ್ಲ.
ಶುದ್ಧೀಕರಣಕ್ಕೆ ಟಿಶ್ಯೂ ಪೇಪರ್ ಮದ್ದಲ್ಲ, ಅದು ರೋಗರುಜಿನಾದಿಗಳಿಗೆ ಕಾರಣವಾಗುತ್ತೆ, ಅದಕ್ಕೆಲ್ಲ ಕೈತೊಳೆಯುವುದೇ ಮೂಲ ಪರಿಹಾರ ಅನ್ನುವುದು ಈ ಮಣ್ಣಿನ ಸಿದ್ಧಾಂತ.
ಆಶ್ಚರ್ಯ ನೋಡಿ, ಜಗತ್ತನ್ನೇ ಅಡ್ಡಡ್ಡ ಮಲಗಿಸಿದ ಕಣ್ಣಿಗೆ ಕಾಣದ ಆ ಸಣ್ಣ ವೈರಸ್ ಈ ಮಣ್ಣಿನ ವೈಜ್ಞಾನಿಕ ಹಿನ್ನೆಲೆಯ ಸಾಂಸ್ಕೃತಿಕ ಲೋಕವನ್ನು ಮತ್ತೆ ಕಣ್ತೆರೆದು ನೋಡಿ ಆಚಣೆಗೆ ತರುವಂತೆ ಮಾಡಿದ್ದು ಸಾಮಾನ್ಯವೆ? ನಮಗೆ ಮಾತ್ರವಲ್ಲ, ಇಂದು ವಿದೇಶೀಯರೂ ಕೂಡಾ ಇದನ್ನೇ ಅನುಸರಿಸಲು ಯತ್ನಿಸುವುದನ್ನು ಕಾಣಬಹುದಾಗಿದೆ.
ನಾವು ನಾವಾಗಿದ್ದುಕೊಂಡು ಆತ್ಮನಿರ್ಭರತ್ವಕ್ಕೆ ತೊಡಗಿಕೊಂಡಿದ್ದಲ್ಲಿ ಈ ಸಮಸ್ಯೇಯೇ ಇರಲಿಲ್ಲ.

✍️ ರಾಜಮಣಿ ರಾಮಕುಂಜ


