Wednesday, February 12, 2025

ದುಃಖ ಪ್ರಯಾಣ

ಲೇ: ರಮೇಶ ಎಂ ಬಾಯಾರು ನಂದನ ಕೇಪು
ಎಂ.ಎ. ಬಿ.ಇಡಿ
ರಾಜ್ಯಪ್ರಶಸ್ತಿ ಪುರಸ್ಕೃತ ಅಧ್ಯಾಪಕರು, ಆಡಳಿತಾಧಿಕಾರಿ
ಜನತಾ ಎಜುಕೇಷನ್ ಸೊಸೈಟಿ ಅಡ್ಯನಡ್ಕ

ಪ್ರಯಾಣಗಳು ಎಂದೆಂದಿಗೂ ಅನಿವಾರ್ಯವೇ ಸರಿ. ಹುಟ್ಟಿದ ಯಾವುದೇ ಪ್ರಾಣಿಯೂ ಪ್ರಯಾಣ ಮಾಡಲೇ ಬೇಕಾಗುತ್ತದೆ. ಕಾಲ್ನಡಿಗೆಯ ಪ್ರಯಾಣದ ಕಷ್ಟ ಈಗ ಕಡಿಮೆಯಾಗಿದೆ. ನಡಿಗೆಯ ಆಯಾಸವನ್ನು ವಾಹನಗಳು ಬಹಳ ಇಳಿಸಿವೆ. ವಾಹನ ಪ್ರಯಾಣದ ಈ ಕಾಲದಲ್ಲೂ ದುಃಖ ಪ್ರಯಾಣ ಎಂದರೆ ಆಶ್ಚರ್ಯವಾಗುವುದಲ್ಲವೇ? ಹೌದು ವಾಹನ ಪ್ರಯಾಣಗಳೂ ಪ್ರಯಾಸಕರವೆನಿಸಿರುವ ಅಥವಾ ಯಾತನಾಮಯವೆನಿಸಿರುವ ಹಲವಾರು ಅನುಭವಗಳು ಈ ಲೇಖನಕ್ಕೆ ಹಿನ್ನೆಲೆಯಾಗಿವೆ.
ವಾಹನಗಳಲ್ಲಿ ಅದರಲ್ಲೂ ವಿಶೇಷವಾಗಿ ಬಸ್ಸು ಟ್ರೈನುಗಳಲ್ಲಿ ಸೀಟು ಸಿಗದೇ ಇದ್ದರೂ ಬಲುದೂರ ಸುಖ ಪ್ರಯಾಣ ಮಾಡಬಹುದು. ಆದರೆ ಸೀಟಿನಲ್ಲಿ ಆಸೀನರಾಗಿದ್ದರೂ ದುಃಖಪ್ರಯಾಣ ಮಾಡಿದ್ದೇವೆ ಎಂದು ಹೇಳಿದರೆ ಹುಬ್ಬೇರುವುದು ಸಹಜ. ಕೆಲವರಿಗೆ ಬಸ್ಸಿನ ಸೀಟು ಮೂಸಿದರೆ ಸಾಕು, ಅವರು ನಿದ್ರಾಂಗನೆಯ ವಶವಾಗುತ್ತಾರೆ. ಅವರು ಕೇವಲ ನಿದ್ದೆಯನ್ನಷ್ಟೇ ಮಾಡುವುದಾದರೂ ಜತೆ ಕುಳಿತ ಪ್ರಯಾಣಿಕರಿಗೆ sಸಮಸ್ಯೆಯಿರದು. ಅವರು ತಮ್ಮ ತಲೆ ಮತ್ತು ದೇಹವನ್ನು ಹಿಂದಕ್ಕೆ ಮುಂದಕ್ಕೆ ಹಾಗೂ ಪಕ್ಕಕ್ಕೆ ವಾಲಿಸುತ್ತಾ ಕೊನೆಗೆ ನಮ್ಮ ಭುಜದ ಯಾ ದೇಹದ ಮೇಲೆ ಅವರನ್ನೇ ಅಥವಾ ಅವರ ತಲೆಯನ್ನು ಸ್ಥಾಯಿಗೊಳಿಸಿದಾಗ ಆಗುವ ಹಿಂಸೆಯು ಅವರ್ಣನೀಯವಾಗಿದೆ.
ವಾಹನಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂಬ ಫಲಕವಿದೆ. ಬಸ್ಸು ಹತ್ತುವ ಕೊನೆಯ ಕ್ಷಣದಲ್ಲಿ ಸೇದುತ್ತಿದ್ದ ಬೀಡಿ ಯಾ ತಂಬಾಕಿನ ಹೊಗೆಯನ್ನು ಬಸ್ಸಿನೊಳಗೆ ಉಗುಳಿ ನಿಯಮ ಪಾಲಿಸುವ ಉದಾರಿಗಳಿದ್ದಾರೆ. ನಿರ್ವಾಹಕರು ಕಣ್ಣು ಕೆಂಪು ಮಾಡಿದರೆ ಈ ಅಸ್ಸಾಮಿ ಧೂಮಪಾನ ಮಾಡಿಲ್ಲವೆಂದು ಪ್ರಮಾಣ ಮಾಡಲು ಅರ್ಹತೆಗಳಿಸಿರುತ್ತಾನೆ. ಕೆಲವರಿಗೆ ಮೆಲುಕು ಹಾಕದೆ ಅವರ ಪ್ರಯಾಣ ಹಿತಕರವೆನಿಸದು. ಪಾನ್ ಬೀಡಾ, ಜರ್ದಾ, ವೀಳ್ಯದೆಲೆ ಜಗಿಯುತ್ತಾ ಬಸ್ಸು ನಿಧಾನಿಸಿದಾಗ ಕಿಟಿಕಿಯಲ್ಲಿ ಉಗುಳುವ ಜಾಣರಿವರು. ಉಗುಳುವಾಗ ಕಿಟಿಕಿಯಂಚಿಗೆ ಉಗುಳು ಬೀಳುವುದೂ ಇದೆ. ಇದರಿಂದಾಗಿ ಇವರು ಇಳಿದ ನಂತರ ಅವರ ಸ್ಥಾನವನ್ನಲಂಕರಿಸುವ ಪ್ರಯಾಣಿಕರಿಗೆ ತೊಂದರೆ. ಇನ್ನು ಇವರು ಉಗುಳಿದಾಗ ಗಾಳಿಗೆ ತೂರಿ ಒಳ ಬಂದ ಎಂಜಲಿನ ರಾಡಿ ಬಸ್ಸಿನೊಳಗೆ ಕುಳಿತ ಪ್ರಯಾಣಿಕರ ಬಟ್ಟೆ ಬರೆಗಳನ್ನು ವರ್ಣಮಯಗೊಳಿಸುತ್ತದೆ. ಜತೆಗೆ ತಲೆ ಮತ್ತು ಮುಖ ಓಕುಳಿಗೊಳಗಾಗುತ್ತದೆ. ಜರ್ದಾದ ಪರಿಮಳವೆಂದರೆ ಸೀನುವವರಿದ್ದಾರೆ. ಜರ್ದಾಪ್ರಿಯಯರಿಂದಾಗುವ ಈ ಎಲ್ಲ ಹಿಂಸೆಗಳನ್ನು ಅನುಭವಿಸಿದವರಿಗೇ ಗೊತ್ತು ಪ್ರಯಾಣವೆಷ್ಟು ದುಃಖದಾಯಕವೆಂದು. ಬಸುಗಳಲ್ಲಿರುವ ‘ಬಾರದು’ಗಳ ಪಟ್ಟಿಯನ್ನು ಅರ್ಥೈಸುವ ಗುಣ ಇಲ್ಲದವರಿಂದಾಗಿ ನಾವು ದು:ಖ ಪ್ರಯಾಣವನ್ನು ಅನುಭವಿಸುತ್ತೇವೆ.
ಲಾಲಿ, ಕೇಂಡಿಗಳನ್ನು ಚೀಪುವ; ಕಿತ್ತಳೆ, ಮೂಸಂಬಿ, ಚಕ್ಕುಲಿ, ಬಿಸ್ಕೇಟು ತಿನ್ನುವ; ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಕುಡಿಯುವ ಪ್ರಯಾಣಿಕರ ಪರಿಪಾಠವೂ ಪ್ರಯಾಣವನ್ನು ದುಃಖಮಯಗೊಳಿಸುತ್ತದೆ. ಇಬ್ಬರು ಕುಳಿತುಕೊಳ್ಳಬಹುದಾದ ಸೀಟಿನಲ್ಲಿ ಶೇಕಡಾ ಎಂಭತ್ತ ಐದು ಭಾಗವನ್ನೂ ಬಳಸಿ ಆಸೀನರಾಗುವ ಕೆಲವರಿಗೆ ಸಹಯಾತ್ರಿ ಅನುಭವಿಸುವ ಯಾತನೆ ಗಮನಕ್ಕೆ ಬಂದರೂ ಆತ ನಿರಾಳತೆಯಿಂದಿರುವುದು ನೋವು ತರುತ್ತದೆ. ಬ್ಯಾಗ್, ಗರಗಸವಿರುವ ಚೀಲ, ಸಾರಣೆಯ ಸಾಮಗ್ರಿಯಿರುವ ಪೊಟ್ಟಣ, ಕೊಡಲಿ, ಗುದ್ದಲಿಗಳಂತಹ ಪರಿಕರಗಳನ್ನು ಹಿಡಿದುಕೊಂಡು ಬರುವ ಪ್ರಯಾಣಿಕರ ಪಕ್ಕದಲ್ಲಿ ಕುಳಿತವರಿಗೆ ತಿವಿಯುವಿಕೆಯೂ ನಡೆಯುವುದಿದೆ. ಈ ಉಪಕರಣಗಳು ಜತೆ-ಪ್ರಯಾಣಿಕರಿಗೆ ಗಾಯಗಳನ್ನುಂಟುಮಾಡುವುದೂ ಇದೆ. ಸಹಪ್ರಯಾಣಿಕರಿಗೆ ನಮ್ಮಿಂದ ತೊಂದರೆಯಾಗದಿರಲಿ ಎಂಬ ಕನಿಷ್ಠ ಪ್ರಜ್ಞೆಯಾದರೂ ನಮ್ಮಲ್ಲಿ ಬೇಡವೇ?
ಪ್ರಯಾಣ ಸುಖಕರವಾಗಿರಬೇಕು ಎಂಬುದು ಎಲ್ಲರ ಆಶಯ. ಆದರೆ ಕೆಲವರ ಅಮಾನವೀಯ ಅಭ್ಯಾಸ ಮತ್ತು ವರ್ತನೆಗಳು ಸಹ-ಪ್ರಯಾಣಿಕರನ್ನು ದುಃಖಿಗಳನ್ನಾಗಿಸುತ್ತದೆ. ನಮ್ಮೊಂದಿಗೆ ಪ್ರಯಾಣಿಸುವ ಇತರರೂ ಸುಖಪ್ರಯಾಣ ಅನುಭವಿಸುವಂತೆ ಸಹಕರಿಸುವ ಗುಣ ನಮ್ಮದಾಗಿರಲಿ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...