Saturday, June 28, 2025

ಸಂಬಂಧಗಳ ಪಥ

ಲೇಖನ : ರಮೇಶ ಎಂ. ಬಾಯಾರು ಎಂ.ಎ; ಬಿಎಡ್
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು

ಕುಟುಂಬ, ಸಮಾಜ ಅಥವಾ ಸಮುದಾಯದೊಳಗಿನ ಸಂಬಂಧಗಳು ಹೇಗಿರಬೇಕೆಂಬುದರ ಬಗ್ಗೆ ಬೆಳಕು ಚೆಲ್ಲುವ ಸಣ್ಣದಾದ ಪ್ರಯತ್ನದ ಫಲವಾಗಿಯೇ ಈ ಲೇಖನ. ಸಂಬಂಧಗಳು ನಾಯಕತ್ವದ ಗುಣವನ್ನಾಧರಿಸಿದೆ, ಉತ್ತಮ ನಾಯಕನಾಗಬಲ್ಲವನು ಸಂಬಂಧಗಳನ್ನು ಬಲಗೊಳಿಸುವುದರಲ್ಲಿ ಸೋಲುವುದಿಲ್ಲ ಎಂಬ ಮಾತು ನಗು ತರಬಹುದಾದರೂ ಸಂಪೂರ್ಣವಾಗಿ ಸತ್ಯವೆಂಬುದನ್ನು ಅಲ್ಲಗಳೆಯಲಾಗದು. ಹಾಗಾದರೆ ಇಲ್ಲಿ ಉಲ್ಲೇಖಿಸುವ ನಾಯಕರೆಂದರೆ ಯಾರು? ಆ ನಾಯಕನು ಹೇಗಿರಬೇಕು? ಅವನಲ್ಲಿರಬೇಕಾದ ಗುಣಲಕ್ಷಣಗಳೇನು? ಆ ಗುಣ ಲಕ್ಷಣಗಳು ಮತ್ತು ಸ್ವಭಾವಗಳು ಸಂಬಂಧವನ್ನು ಬೆಳೆಸುವಲ್ಲಿ ಹೇಗೆ ಫಲಕಾರಿಯಾಗುತ್ತವೆ ಅಥವಾ ಸಹಕಾರಿಯಾಗುತ್ತವೆ ಎಂಬ ಚರ್ಚೆ ಅಗತ್ಯವಿದೆಯಲ್ಲವೇ?
ಸಮಾಜದಲ್ಲಿ ಅತ್ಯಂತ ಸಣ್ಣ ಅಂಗ ಎಂದರೆ ವ್ಯಕ್ತಿ. ಏಕ ವ್ಯಕ್ತಿ ಕುಟುಂಬದಲ್ಲಿ ಸಂಬಂಧಗಳು ಮುರಿದು ಬೀಳುವ ಘಟನೆಗಳು ನಡೆಯವು. ಅವನನ್ನು ನಿಯಂತ್ರಿಸ ಬೇಕೆಂದು ಬಯಸುವವರು ಅಥವಾ ಅವನ ನಿಯಂತ್ರಣದೊಳಗಿರಬೇಕಲ್ಲಾ ಎಂಬ ವ್ಯಾಕುಲತೆ ಉಳ್ಳವರು ಆ ಮನೆಯೊಳಗೆ ಯಾರೂ ಇರುವುದಿಲ್ಲ. ಆದರೆ ಸಮಾಜದ ಅಂಗವಾಗಿ ಅವನ ನಾಯಕತ್ವದ ಗುಣಗಳು ಪರಿಗಣನೀಯವೇ ಸರಿ. ಆತನಿಗೆ ಮದುವೆಯಾಯಿತು, ಸಂಸಾರದ ವಿಸ್ತಾರ ಆರಂಭವಾಯಿತು ಎಂದೆನ್ನುವಾಗ ನಾಯಕತ್ವದ ಪ್ರಶ್ನೆಗಳು ಉದ್ಭವಿಸಲಾರಂಭಿಸುತ್ತವೆ. ಮಕ್ಕಳು ಮರಿಗಳು ಬೆಳೆದಂತೆ ನಾಯಕತ್ವವು ಸವಾಲಿನ ಸಂಗತಿಯೇ ಆಗುತ್ತದೆ.
ಕುಟುಂದಲ್ಲಿ ನಾಯಕನಾರು? ಅನುಚರರು ಯಾರು? ಎಂಬ ಪ್ರಶ್ನೆ ಸಹಜ. ಭಾರತೀಯ ಪದ್ಧತಿಯಲ್ಲಿ ಅಳಿಯ ಕಟ್ಟು ಮತ್ತು ಮಕ್ಕಳ ಕಟ್ಟು ಎಂದರೆ ಮಾತೃ ಪ್ರಧಾನ ಕುಟುಂಬ ಪದ್ಧತಿ ಮತ್ತು ಪಿತೃ ಪ್ರಧಾನ ಕುಟುಂಬಗಳಿದ್ದಾಗ ಯಜಮಾನಿಕೆಯೆಂಬುದು ಒಂದು “ದೌಲತ್ತು” ಆಗಿತ್ತು. ಆಂದು ಇದ್ದುದುದು ಕೂಡು ಕುಟುಂಬ. ಇಂದು ಎಲ್ಲರೂ ಅಣು ಕುಟುಂಬ ಪದ್ಧತಿಯೊಳಗೆ ಸಿಲುಕಿದ್ದಾರೆ. ಇಂದಿನ ಸಾಮಾಜಿಕ ವ್ಯವಸ್ಥೆಯೊಳಗೆ ಪಡಿತರ ಚೀಟಿಯಲ್ಲಿ ಕುಟುಂದ ಯಜಮಾನನ ಹೆಸರು ಮಹಿಳೆಯೇ ಆಗಿರಬೇಕೆಂಬ ನಿಯಮವಿದೆ. ಹಾಗಾದರೆ ಮನೆಯೊಡತಿ ಆಕೆಯೇ ಆಗಿರುವಳೇ? ಪುರುಷನೊಬ್ಬನು ದುಡಿದು ಮನೆಯವರನ್ನು ಸಾಕುವ ಕೆಲಸವನ್ನು ನಿರ್ವಹಿಸುವಂತಿದ್ದರೆ ಆತನೇ ಯಜಮಾನನೇ? ಇದೊಂದು ಯಕ್ಷ ಪ್ರಶ್ನೆಯೇ ಆಗಿದೆ. ಆದರೆ ಯಜಮಾನಿಕೆ ಎಂಬುದನ್ನು ಮುಖ್ಯಸ್ಥ ಎಂಬ ದೃಷ್ಟಿ ಕೋನದಿಂದ ನೋಡದೆ ಅದೊಂದು ಜವಾಬ್ದಾರಿ, ಅದೊಂದು ಬದ್ಧತೆ ಅಥವಾ ಕರ್ತವ್ಯ ಎಂಬುದಾಗಿ ವ್ಯಾಖ್ಯಾನ ಮಾಡಿದಾಗ ಪ್ರಶ್ನೆಗೆ ಉತ್ತರ ಸಿಗುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಯಾರು ಜವಾಬ್ದಾರರು ಎಂಬ ಪ್ರಶ್ನೆಗೆ ಸಿಗುವ ಉತ್ತರ ಸಾಮೂಹಿಕ ನಾಯಕತ್ವ; ಎಂದರೆ ಕುಟುಂಬದ ಪ್ರತಿಯೊಬ್ಬರೂ ಪ್ರಧಾನರೇ ಆಗುವುದಲ್ಲವೇ? ಹಾಗಾದರೆ ಪ್ರತಿಯೊಬ್ಬರೂ ನಾಯಕ ಎಂದೆನ್ನುವಾಗ ಕುಟುಂಬದ ನಿರ್ವಹಣೆ ಸಾಧ್ಯವೇ ಎಂಬ ಸಂದೇಹವೂ ಸಹಜ. ಈ ಸಂದೇಹಕ್ಕೆ ಒಂದೇ ಉತ್ತರ; ಅದುವೇ ಪ್ರಜಾಪ್ರಭುತ್ವ ಕುಟುಂಬ. ಹಾಗಾದರೆ ಕುಟುಂಬದೊಳಗೆ ಸಂವಿಧಾನ, ಚುನಾವಣೆ ಎಲ್ಲ ಬೇಕೇ? ಹೌದು, ಬೇಕು.
ಕುಟುಂಬವು ಒಂದು ಪಂಚಾಯಿತಿಯಂತೆ ಕೆಲಸ ಮಾಡಲೇ ಬೇಕು. ಹಿಂದೂ ಪದ್ಧತಿಯಲ್ಲಿ ಹಿರಿಯರ ಮಾತನ್ನು ಗೌರವಿಸುವ ಸಂಸ್ಕಾರ ಸಜ್ಜನರಲ್ಲಿ ಇನ್ನೂ ಉಳಿದಿದೆ, ಅದು ಉಳಿಯಲೂ ಬೇಕು. ಹಾಗೆಂದು ಕಿರಿಯ ತಲೆಗಳು ಗೌಣವೆಂದು ಹಿರಿಯರೂ ತಿಳಿಯಬಾರದು. ಮನೆಯೊಳಗೆ ಜರಗುವ ಅಥವಾ ಕೈಗೆತ್ತಿಕೊಳ್ಳುವ ಯಾವುದೇ ಹೊಸ ಕ್ರಮಗಳು ಅನುಷ್ಠಾನ ಪೂರ್ವದಲ್ಲಿ ಎಲ್ಲರ ಮುಂದೆ ಮಂಡಿಸಲ್ಪಟ್ಟು ಮಥನಕ್ಕೊಳಗಾಗಿ ಅಂಗೀಕಾರವಾದರೆ ಸಮಸ್ಯೆ ಏಳದು. ಒಬ್ಬನೇ ಯೋಜನೆ ರೂಪಿಸಿ ಅನುಷ್ಠಾನ ಮಾಡ ಹೊರಟರೆ ಅಥವಾ ಮನೆಯವರ ಮೇಲೆ ಹೇರಲು ಹೊರಟರೆ ಸಮಸ್ಯೆಗಳು ಹುಟ್ಟತೊಡಗುತ್ತವೆ. ಸಂಬಂಧ ಕೆಡಲಾರಂಭವಾಗುತ್ತದೆ. ಹಾಗೆಂದು ಒಬ್ಬಿಬ್ಬರು ಮಾತ್ರವೇ ಸೇರಿ ಮಥನ ಮಾಡಿ ಅನುಷ್ಠಾನ ಮಾಡಹೊರಟರೂ ಸಂಬಂಧ ಬಿಗಡಾಯಿಸದೇ ಉಳಿಯದು. ಸಾಮೂಹಿಕ ನಾಯಕತ್ವಕ್ಕೆ ಮನ್ನಣೆಯಿಲ್ಲದೇ ಹೋದರೆ ಸಂಬಂಧಗಳು ಮುರಿದೇ ಹೋಗುತ್ತವೆ.
ಸಾಮೂಹಿಕ ನಾಯಕತ್ವವನ್ನು ವೈಯಕ್ತಿಕವಾಗಿ ಕೆಲವರು ಅಂಗೀಕರಿಸದೇ ಇರಲು ಕಾರಣ ಅವರಲ್ಲಿರುವ ಮನೋಜಾಢ್ಯಗಳು. ಮೊದಲನೆಯ ಜಾಢ್ಯ, “ನಾನು” ಅಥವಾ “ನನ್ನಿಂದಲೇ” ಎಂಬ “ಅಹಂ”. ಕುಟುಂಬದ ಆಸ್ತಿ ಪತ್ರಗಳು ತನ್ನ ಹೆಸರಿನಲ್ಲಿದೆ, ಈ ಮನೆಯೊಳಗೆ ಹೆಚ್ಚು ಸಂಪಾದನೆ ನನಗೆ ಮಾತ್ರ, ಮನೆಯಲ್ಲಿ ಹೆಚ್ಚು ಓದಿದವನು ನಾನು ಮಾತ್ರ.. ಹೀಗೆ ಅಹಂಗಳ ಪಟ್ಟಿಯು ಸಾಗುತ್ತದೆ. ಒಟ್ಟಿನಲ್ಲಿ ನಾನೇ ಹೇಳಿದಂತಾಗ ಬೇಕೆಂಬ ಹಟ, ತನಗೆ ಮೀರಿದ್ದೇನೂ ಇರಬಾರದೆಂಬ ಚಿಂತನೆಯ ನಾಯಕತ್ವ ಸಂಬಂಧವನ್ನು ಕೆಡಿಸುತ್ತದೆ. ನಿರಂಕುಶತೆಗೆ ಬಾಳ್ವೆ ಇಲ್ಲವೆಂಬುದು ಐತಿಹಾಸಿಕ ಸತ್ಯ. ತನ್ನವರೆಂಬ ಪ್ರೀತಿಯ ಭಾವದ ಒರತೆ ಬತ್ತಿದವರೂ ನಾಯಕರಾಗಲು ಯೋಗ್ಯರಲ್ಲ. ಹೊಂದಾಣಿಕೆಯ ಮನೋಭಾವ, ಪರಸ್ಪರರ ಬಗ್ಗೆ ವಿಶ್ವಾಸ ಇರಿಸಿಕೊಂಡಾಗ ನಾಯಕತ್ವದ ಅಂದ ಹೆಚ್ಚುತ್ತದೆ. ಅನುಭವವೂ ನಾಯಕತ್ವದ ಒರೆಗಲ್ಲು. ನಿಸ್ವಾರ್ಥಿಯಾದವನು ಮಾತ್ರವೇ ಯಾವುದೇ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ಮತ್ತು ಸಮರ್ಪಕವಾಗಿ ನಿಭಾಯಿಸ ಬಲ್ಲ. ಈ ಲಕ್ಷಣಗಳೆಲ್ಲವೂ ಪುರಷ ಮತ್ತು ಮಹಿಳೆ ಇಬ್ಬರಲ್ಲೂ ಇರಬೇಕು.
ಸಂಬಂಧಗಳ ಪಥ ವಕ್ರವಾಗಿರಬಾರದೆಂಬುದು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ. ಕಛೇರಿಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಮಿತಿಗಳು, ಕುಟುಂಬಗಳ ಒಕ್ಕೂಟ ಅಥವಾ ತರವಾಡು, ಕ್ಲಬ್ ಗಳು, ಸರಕಾರಗಳು ಮುಂತಾದುವು ಉತ್ತಮವಾಗಿ ಸಾಗಬೇಕಾದರೆ ಅದರೊಳಗಿನ ಪ್ರತಿಯೊಬ್ಬರೂ ನಾಯಕತ್ವದ ಗುಣಗಳ ಖನಿಯಾಗಬೇಕು. ತಮ್ಮ ಜವಾಬ್ದಾರಿಯೆಂದರಿತು ನಾಯಕನ ಸ್ಥಾನವನ್ನು ನಿಭಾಯಿಸಬೇಕು. ಆಂತಹವರೇ ಸಂಬಂಧಗಳನ್ನು ಬಲಗೊಳಿಸುವ ಮತ್ತು ಬೆಳೆಸುವ ಪಥಿಕರಾಗುತ್ತಾರೆ.

 

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

Bantwal : ಬಂಟ್ವಾಳ ಪುರಸಭೆಯ ವಿಶೇಷ ಸಭೆ : ಪೌರಕಾರ್ಮಿಕರ ವೇತನ ಕುರಿತು ಚರ್ಚೆ..

ಬಂಟ್ವಾಳ : ಪೌರಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭಾ ವಿಶೇಷ ಸಭೆ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಪುರಸಭೆಯ ಪೌರಕಾರ್ಮಿಕರ ವಿಶೇಷ ನೇಮಕಾತಿ ಹಾಗೂ...

ಇಂದಿನಿಂದ ಮುಹರ್ರಮ್ ತಿಂಗಳು ಪ್ರಾರಂಭ : ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ..

ಮಾಣಿ: ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ...

Kempegowda Jayanti : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ..

ಬಂಟ್ವಾಳ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶಿಲ್ದಾರ್ ಅರ್ಚನಾ ಭಟ್ ಮಾತನಾಡಿ, ದೂರದೃಷ್ಟಿಯ ಚಿಂತನೆಯ ವ್ಯಕ್ತಿಯಾಗಿದ್ದ...