Friday, July 11, 2025

ಲೇಖನದ ಲಕ್ಷಣಗಳು

ಲೇ: ರಮೇಶ ಎಂ ಬಾಯಾರು

ಒಂದು ವಿಚಾರವನ್ನು ಸಂವಹನದ ಮೂಲಕ ಇತರರಿಗೆ ಅರ್ಥೈಸುವುದು ಮಾತಿನ ಕಲೆ. ಈ ಕಲೆಯು ಸಿದ್ಧಿಸಿದವನು ವಾಗ್ಮಿ ಅಥವಾ ಭಾಷಣಗಾರ ಎಂದು ಕರೆಯಲ್ಪಡುತ್ತಾನೆ. ಭಾಷಣವೂ ಮೌಖಿಕ ರೂಪದ ಸಾಹಿತ್ಯವೇ ಅಲ್ಲವೇ? ಮಾತನಾಡುವಾಗ ಎಡರು ತೊಡರುಗಳು, ನಾಲಗೆ ಜಾರುವುದು, ಮಾತು ಹೇಳಿದ ನಂತರ ನಾಲಗೆ ಕಚ್ಚುವ ಅಗತ್ಯವುಂಟಾಗುವುದು ಸಹಜ. ಆದರೆ ಬರವಣಿಗೆ ಸಾಹಿತ್ಯದಲ್ಲಿ ಇಂತಹ ಜಾರುವಿಕೆಯಾಗದಂತೆ ಸಾಕಷ್ಟು ಎಚ್ಚರ ವಹಿಸಬಹುದಾಗಿದೆ. ಒಂದೇ ವಿಷಯದ ಮರುಕಳಿಸದಂತೆ, ಸಂದೇಶಗಳು ತಪ್ಪಾಗಿ ಹೋಗದಂತೆ, ಸಾರ್ವಜನಿಕ ಶಾಂತಿಗೆ ಭಂಗವಾಗದಂತೆ ಸಮತೂಲಿತ ಹೆಜ್ಜೆಗಳನ್ನಿಡಲು ಲೇಖನದ ಮೂಲಕ ಸಾಧ್ಯವಿದೆ. ಲೇಖನ ಸಾಹಿತ್ಯದಲ್ಲಿ ಕವನ ಲೇಖನ, ಚುಟುಕ ಲೇಖನ, ಕಥಾ ಲೇಖನ, ನಾಟಕ ಲೇಖನ ಮುಂತಾದ ಹಲವು ಪ್ರಕಾರಗಳಿವೆ. ಗದ್ಯ ಲೇಖನ, ಪ್ರಬಂಧ ಲೇಖನ ಅಥವಾ ಮಹಾ ಪ್ರಬಂಧ ಲೇಖನದ ಹಲವಾರು ಮಾರ್ಗದರ್ಶೀ ಸೂತ್ರಗಳಲ್ಲಿ ಅಥವಾ ಲಕ್ಷಣಗಳಲ್ಲಿ ಕೆಲವನ್ನು ಮಾತ್ರವೇ ಇಲ್ಲಿ ಉಲ್ಲೇಖಿಸುತ್ತೇನೆ.
ಯಾವುದೇ ಲೇಖನ ಅದರ ಶಿರೋನಾಮೆಯಿಂದಲೇ ಜಗಮಗಿಸಬೇಕು. ವನಿತೆಯರ ಅಲಂಕಾರವನ್ನು ಹೆಚ್ಚಿಸುವ ಕಂಠಾಭರಣಕ್ಕಿಂತಲೂ ಮೇರು ಸ್ಥಾನ ಶಿರೋನಾಮೆಗಿದೆ. ಶಿರೋನಾಮೆಗೆ ತಲೆಬರಹವೆಂದು ಪರ್ಯಾಯ ಪದವಿದೆ. ತಲೆ ಬರಹ ಎನ್ನುವಾಗಲೇ ಅದು ಬರವಣಿಗೆಯ ಸಾರಸ್ವರೂಪವೆಂದು ಅರ್ಥವಾಗುತ್ತದೆ. ಯಾವುದೇ ಲೇಖನಕ್ಕೆ ತಲೆ ಬರಹ ಕೊಡುವುದು ಸುಲಭವಲ್ಲ. ಲೇಖನ ಪುಟ್ಟದಿರಲಿ, ಬೃಹದಾಗಿರಲಿ, ಲೇಖನದ ಮುನ್ನೋಟ ಶಿರೋನಾಮೆಯಲ್ಲೇ ಎದ್ದು ಕಾಣಬೇಕು. ಲೇಖನದ ಒಳ ಹರಿವನ್ನು ಶಿರೋನಾಮೆಯೇ ಧ್ವನಿಸಬೇಕು. ಶಿರೋನಾಮೆ ಮತ್ತು ಲೇಖನ ಪರಸ್ಪರ ಸರಪಣಿಯ ಕೊಂಡಿಗಳಂತಿರಬೇಕು. ಶಿರೋನಾಮೆಯು ಆಕರ್ಷಕವಾಗಿರಬೇಕು ಮತ್ತು ಆರ್ಥವತ್ತಾಗಿರಬೇಕು, ಅಲ್ಲದೇ ಅತ್ಯಂತ ಚಿಕ್ಕದಾಗಿರಬೇಕು. ಒಂದು ಪದದಲ್ಲಿದ್ದರೆ ಉತ್ತಮ, ಪದಗಳು ಹೆಚ್ಚಿದರೆ ಮಧ್ಯಮ ಹಾಗೂ ವಾಕ್ಯದಂತಿದ್ದರೆ ಅದು ಅಸಮರ್ಪಕ ತಲೆಬರಹ ಅನಿಸುತ್ತದೆ. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದು ಎಂಬುದಾಗಿ ಶಿರೋನಾಮೆಯಿದ್ದರೆ ಆ ಶಿರೋನಾಮೆಯು ಗಂಭೀರವಾಗದು.ಹಾಗಾದರೆ ಈಲ್ಲಿ ಸೂಕ್ತವೆನಿಸುವ ಶಿರೋನಾಮೆ ಹೇಗಿದ್ದರೆ ಚಂದ ಎಂಬ ಸಂಶಯವನ್ನು ಪರಿಹರಿಸೋಣ. ಮಗುವಿನ ಸಂರಕ್ಷಣೆ, ಮಗುವಿನ ಪೋಷಣೆ, ಶಿಶು ಪೋಷಣೆ, ಶಿಶು ರಕ್ಷಣೆ, ಶಿಶು ಸಂರಕ್ಷಣೆ, ಶಿಶು ಆರೋಗ್ಯ, ಮಕ್ಕಳ ಆರೋಗ್ಯ ಮುಂತಾಗಿ ಶೀರ್ಷಿಕೆಯಿದ್ದರೆ ಅರ್ಥ ಮತ್ತು ಅಂದ ಹೆಚ್ಚುವುದಲ್ಲವೇ? ಕೇವಲ ಒಂದೇ ಪದದ ಶಿರೋನಾಮೆಯಿರಲಿ ಎಂದು, ಆರೋಗ್ಯ ಎಂಬ ಶಿರೋನಾಮೆ ಕೊಟ್ಟರೆ ಅದು ಮುಕ್ತವಾಗುತ್ತದೆ, ಲೇಖನದ ವ್ಯಾಪ್ತಿ ವಿಶಾಲಾಗುತ್ತದೆ. ಮಗುವಿನ ಆರೋಗ್ಯ ಮತ್ತು ಆರೋಗ್ಯ ಈ ಶಿರೋನಾಮೆಗಳು ವ್ಯತ್ಯಸ್ತ ವ್ಯಾಪ್ತಿಗಳನ್ನು ಹೊಂದಿವೆ.
ಒಂದು ಲೇಖನವು ಪ್ರಧಾನವಾಗಿ ನಾಲ್ಕು ಅಂಗಗಳನ್ನು ಹೋದಿರಲೇ ಬೇಕು. ಮೊದಲನೆಯದಾಗಿ ಶಿರೋನಾಮೆಯಾದರೆ ನಂತರದಲ್ಲಿ ಶಿರೋನಾಮೆಗೆ ಪೂರಕವಾದ ಪೀಠಿಕೆಯಿರಬೇಕು. ಆರಂಭಿಕ ಮಾತು ಎಂದೂ ಹೇಳಬಹುದು. ಪೀಠಿಕೆಯು ಬಹಳ ದೊಡ್ಡದಾಗಿರ ಬಾರದು. ಲೇಖನದ ಪುಟಗಳನ್ನು ಆಧರಿಸಿ ಪೀಠಿಕೆಯಿದ್ದರೆ ಅಂದ. ಒಂದು ಪುಟದ ಲೇಖನವಾದರೆ ನಾಲ್ಕು ಸಾಲಿನ ಪೀಠಿಕೆ ಸಾಕು. ನಾಲ್ಕು ವಾಕ್ಯವೆಂದು ನಾನು ಹೇಳುವುದಿಲ್ಲ. ಕೆಲವರ ವಾಕ್ಯವೇ ಅರ್ಧ ಪುಟದಷ್ಟಿರುವುದಿದೆ. ಲೇಖನದ ಬಹುಪಾಲು ಪೀಠಿಕೆಯಲ್ಲೇ ಮುಗಿಯ ಬಾರದು. ಹಲವು ಪುಟಗಳ ದೊಡ್ಡ ಲೇಖನವಾದರೆ ಪುಟ ಮೀರಿದ ಪೀಠಿಕೆಯನ್ನು ಬರೆಯಬಹುದು. ಪೀಠಿಕೆಯೂ ಲೇಖನದ ಒಳ ಸುಳಿಗಳ ದಿಕ್ಕನ್ನು ಓದುಗನಿಗೆ ಮನವರಿಕೆ ಮಾಡುವಂತಿರಬೇಕು. ಪೀಠಿಕೆಯ ಸಾಲುಗಳು ಲೇಖನದ ಪ್ರಧಾನ ಸಾರವನ್ನೇ ಪ್ರತಿನಿಧಿಸ ಬೇಕು.
ಯಾವುದೇ ಲೇಖನವನ್ನು ಬರೆಯುವುದಿದ್ದರೂ ಮೊದಲಿಗೆ ಲೇಖನದ ಕರಡು ಸಿದ್ಧಗೊಳ್ಳಬೇಕು. ಶಿರೋನಾಮೆಯಿಂದ ತೊಡಗಿ ಮುಕ್ತಾಯದ ತನಕವೂ ಲೇಖನವು ಕರಡು ರೂಪದಲ್ಲಿದ್ದರೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಬಹುದು. ತಾನು ಬರೆದುದೇ ಲೇಖನ ಎಂಬ ಧೋರಣೆಯು ಬರಹಗಾರನಿಗೆ ಕೆಟ್ಟ ಹೆಸರನ್ನು ತರುತ್ತದೆ. ಯಾವುದೇ ಲೇಖನವಾದರೂ ಅದನ್ನು ಓದುಗನ ಕೈಗೆ ನೀಡಲೇ ಬೇಕು. ಅದು ಆಗ ಪ್ರಕಟಿತ ಲೇಖನವಾಗುತ್ತದೆ. ಪ್ರಕಟಣೆಯಾದ ನಂತರ ಅದನ್ನು ತಿದ್ದುವಂತಿಲ್ಲ. ಅದಕ್ಕಾಗಿಯೇ ಕಚ್ಚಾ ರೂಪದಿಂದ ಪಕ್ಕಾ ರೂಪಕ್ಕೆ ಸಾಗಿದ ಬರವಣಿಗೆ ಹೆಚ್ಚು ಸಮಂಜಸವಾಗಲು ಸಾಧ್ಯ. ಲೇಖನಗಳು ಮುದ್ರಿತ ಅಥವಾ ಹಸ್ತ ಪ್ರತಿಯ ರೂಪದಲ್ಲಿರಬಹುದು. ಓದುಗರು ಬರವಣಿಗೆಯನ್ನು ವಿಮರ್ಶಿಸುತ್ತಾರೆ ಎಂಬ ಎಚ್ಚರಿಕೆ ಶಿರೋನಾಮೆ ಬರೆಯುವಲ್ಲಿಂದಲೇ ಇರಬೇಕು. ನೀಡುವ ಉದಾಹರಣೆಗಳು, ಬಳಸಿದ ಪದ ಪ್ರಯೋಗಗಳು, ಘಟನಾವಳಿಗಳು, ಭಾಷಾ ಪ್ರಯೋಗ, ಸಮಂಜಸತೆ, ಮನಸೆಳೆಯುವಿಕೆ ಹೀಗೇ ಲೇಖನದ ಎಲ್ಲಾ ಮಜಲುಗಳೂ ವಿಮರ್ಶೆಗೊಳಗಾಗಿ ಭೇಷ್ ಎಂದು ಬಹುತೇಕ ಓದುಗರು ಹೇಳಿದರೆ ಅದು ಸುಂದರ ಬರಹವಾಗುವುದರಲ್ಲಿ ಸಂದೇಹವಿಲ್ಲ.
ಲೇಖನಗಳ ಕರಡು ರೂಪದ ರಚನೆಗಿಳಿಯುವ ಮೊದಲು ಬರವಣಿಗೆಯ ವಿಷಯದ ಸಂಪೂರ್ಣ ಜ್ಞಾನವನ್ನು ಎಲ್ಲ ಮೂಲಗಳಿಂದಲೂ ಸಂಗ್ರಹಿಸಬೇಕು. ಸಂಗ್ರಹಿಸಿದ್ದನ್ನು ಬರೆದಿಟ್ಟು ಕೊಳ್ಳಬೇಕು. ಲೇಖನದ ವ್ಯಾಪ್ತಿಯನ್ನೂ ಶಿರೋನಾಮೆಯಿಂದಲೇ ಗುರುತಿಸಿರಬೇಕು. ಲೇಖನದಲ್ಲಿ ಒಳಗೊಳಿಸ ಬೇಕಾದ ಅಂಶಗಳನ್ನು ಪಟ್ಟಿ ಮಾಡಬೇಕು. ಉದಾಹರಣೆಗೆ ನಾವು ಉಪ್ಪಿನಕಾಯಿಯ ಬಗ್ಗೆ ಲೇಖನ ಬರೆಯಲು ನಿರ್ಧರಿಸಿರುವೆವು ಎಂದಾದರೆ ಶಿರೋನಾಮೆ ಉಪ್ಪಿನ ಕಾಯಿ ಎಂದಾಯಿತು. ಪೀಠಿಕೆಯಲ್ಲಿ ಖಾದ್ಯಗಳ ಬಗ್ಗೆ ಚರ್ಚಿಸಿ ಉಪ್ಪಿನ ಕಾಯಿ ಬಗ್ಗೆ ಪ್ರಸ್ತಾಪಿಸಬಹುದು. ನಂತರದಲ್ಲಿ ನಾವು ಲೇಖನದ ಆಳ ಮತ್ತು ಹರವುಗಳನ್ನು ನಿರ್ಧರಿಸಬೇಕು. ಉಪ್ಪಿನ ಕಾಯಿ ಬಗ್ಗೆಯಾದರೆ ಈ ಕೆಳಗಿನವುಗಳ ಮೇಲೆ ಲೇಖನದಲ್ಲಿ ಬೆಳಕು ಚೆಲ್ಲಬಹುದು.
1. ಉಪ್ಪಿನ ಕಾಯಿಯನ್ನು ತಯಾರಿಸಲು ನಮ್ಮಲ್ಲಿ ದೊರೆಯುವ ವಸ್ತುಗಳು: ಮಾವಿನ ಮಿಡಿ, ನಿಂಬೆ, ಕರಂಡೆಕಾಯಿ, ವಿವಿಧ ತರಕಾರಿಗಳು
2. ದೀರ್ಘಕಾಲ ಉಳಿಯುವ ಉಪ್ಪಿನಕಾಯಿಗಳು ಮತ್ತು ತಾತ್ಕಾಲಿಕ ಬಳಕೆಗೆ ತಯಾರಿಸುವ ಉಪ್ಪಿನಕಾಯಿ
3. ಉಪ್ಪಿನ ಕಾಯಿ ಈ ಹೆಸರಿನ ಮಹತ್ವ
4. ಉಪ್ಪಿನ ಕಾಯಿಯಲ್ಲಿ ಬಳಸುವ ಸಂಬಾರಗಳು
5. ಉಪ್ಪಿನ ಕಾಯಿಯ ವಿಧಗಳು
6. ಉಪ್ಪಿನ ಕಾಯಿಗಳ ದಾಸ್ತಾನು
7. ಉಪ್ಪಿನ ಕಾಯಿ ತಯಾರಿಸುವಾಗ ಅನುಸರಿಸ ಬೇಕಾದ ಎಚ್ಚರಿಕೆಗಳು
8. ಉಪ್ಪಿನ ಕಾಯಿ ಮತ್ತು ಆರೋಗ್ಯ
9. ಉಪ್ಪಿನ ಕಾಯಿ ಮತ್ತು ಉದ್ಯೋಗ
10. ಉಪ್ಪಿನಕಾಯಿಯಿಂದ ಗಳಿಕೆ
11. ಉಪ್ಪಿನ ಕಾಯಿಯಿಂದ ವಿದೇಶೀ ವಿನಿಮಯ

ಇವು ಕೇವಲ ಉದಾಹರಣೆಗಾಗಿ ನೀಡಿದ ಕೆಲವು ಅಂಶಗಳು ಮಾತ್ರವೇ ಆಗಿದ್ದು ಲೇಖಕನ ಜಾಣ್ಮೆ ಮತ್ತು ಚಿಂತನೆಗಳನ್ನು ಸೇರಿಸಿ ಲೇಖನವನ್ನು ವಿಸ್ತರಿಸ ಬಹುದು. ಉಪ್ಪಿನ ಕಾಯಿ ರಾಮಾಯಣದಲ್ಲೂ ಇತ್ತು ಎಂಬ ಅಂಶದೊಂದಿಗೆ ಲೇಖನವನ್ನು ಪುಷ್ಟಿಗೊಳಿಸಬಹುದು. ಮಿಥಿಲೆಯಲ್ಲಿ ಜರಗಿದ ಸೀತಾ ರಾಮರ ಕಲ್ಯಾಣದಲ್ಲಿ ಉಪ್ಪಿನ ಕಾಯಿ ಬಡಿಸಲಾಯಿತು. ಊಟದಲ್ಲಿ ಕೆಲವು ವಾನರರೂ ಕುಳಿತಿದ್ದರು. ಒಂದು ಮಂಗ ಉಪ್ಪಿನ ಕಾಯಿಯಲ್ಲಿ ಬಳಸಿದ ಕಾಯಿಯನ್ನು ಅದುಮಿತು. ಕಾಯಿಯೊಳಗಿನ ಬೀಜ ಹೊರ ಪುಟಿದು ಮೇಲ್ಗಡೆಗೆ ಹಾರಿತು. ಇದನ್ನು ಗಮನಿಸಿದ ವಾನರನಿಗೆ ಆ ಚಿಕ್ಕ ಬೀಜದ ನೆಗೆತ ಪ್ರತಿಷ್ಠೆಯ ಪ್ರಶ್ನೆಯಾಯಿತು. ಬೀಜಕ್ಕಿಂತ ತಾನೇನೇನೂ ಕಡಿಮೆಯಾಗಬಾರದೆಂದು ಬೀಜದ ನೆಗೆತವನ್ನು ಮೀರಿ ನೆಗೆಯಿತು. ಆಗ ಉಳಿದ ವಾನರರೂ ತಮ್ಮ ಪ್ರತಿಷ್ಠೆಯನ್ನು ತೋರಿಸಲು ನೆಗೆಯ ತೊಡಗಿದುವು. ನೆಗೆತದಲ್ಲಿ ಇತರರನ್ನು ಮೀರುವ ಪ್ರಯತ್ನದಲ್ಲಿ ಭೋಜನ ವ್ಯವಸ್ಥೆಯೇ ಹಾಳಾಯಿತು. ಇಂತಹ ರಸ ಸನ್ನಿವೇಶಗಳು ಎಲ್ಲ ಲೇಖನಗಳಿಗೂ ಸಿಗುತ್ತವೆ. ಬರಹಗಾರನ ಓದುವ ಗುಣ, ಅವನ ಪಾಂಡಿತ್ಯದ ಹರವುಗಳು ಲೇಖನದಲ್ಲಿ ಕನ್ನಡಿಯಾಗಬೇಕು.
ಲೇಖನದಲ್ಲಿ ಪ್ರಮುಖವಾಗಿ ವಿಷಯಗಳನ್ನು ಪರಿಚ್ಛೇದಗಳಾಗಿ ವಿಭಜಿಸುವದೂ ಉತ್ತಮ ಲೇಖನದ ಲಕ್ಷಣವಾಗಿದೆ. ಎಂದರೆ ಲೇಖನದ ಸಾಗುವಿಕೆಯಲ್ಲಿ ವಿಷಯದ ವಿವಿಧ ಭಾಗಗಳನ್ನು ಬೇರೆ ಬೇರೆ ಪಾರಾಗಳಲ್ಲಿ ವಿವರಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ಮರದ ಬಗ್ಗೆ ವಿವರಿಸುವಾಗ ಬೀಜದಿಂದ ಆರಂಭಿಸಿ ಬೀಜಕ್ಕೇ ಸಾಗುತ್ತೇವೆ. ಬೀಜ ಬಿತ್ತುತ್ತೇವೆ. ಈ ಬೀಜ ಮೊಳೆತು ಗಿಡವಾಗಿ ಮರವಾಗಿ ಸಹಸ್ರಾರು ಬೀಜಗಳನ್ನು ಕೊಡುತ್ತದೆ ಎಂದರೂ ಲೇಖನವೇ ಆಗುತ್ತದೆ. ಆದರೆ ಈ ಲೇಖನದಲ್ಲಿ ಸ್ವಾರಸ್ಯವೂ ಇಲ್ಲ, ಜ್ಞಾನಾರ್ಥಿಗೆ ಜ್ಞಾನವೂ ಸಿಗದು, ಕೃಷಿಕನಿಗೆ ಮರ ಬೆಳೆಸುವ ವಿಧಾನವೂ ಅರಿಯದು. ಬೀಜವನ್ನು ಬಿತ್ತುವ ವಿಧಾನ, ಬಿತ್ತಿದ ಬೀಜ ಕೆಡದಂತೆ ವಹಿಸಬೇಕಾದ ಮುಂಜಾಗರೂಕತೆಗಳು, ಮೊಳಕೆಯೊಡೆದ ನಂತರದ ಕ್ರಮಗಳು, ಪೋಷಣೆ, ಕಾಂಡ, ಕೊಂಬೆ ರೆಂಬೆ, ಎಲೆ, ಹೂ, ಕಾಯಿ ಮತ್ತು ಹಣ್ಣು ಇವುಗಳ ಬಗ್ಗೆ ಬೇರೇ ವಿಷಯಗಳನ್ನು ನಿಯತವಾದ ಕ್ರಮದಲ್ಲಿ ವಿವರಿಸಿದರೆ ಲೇಖನವು ಸುಂದರವಾಗುತ್ತದೆ. ಬೇರಿನ ಬಗ್ಗೆ ವಿವರಿಸಿ ನೇರ ಹಣ್ಣಿನ ಬಗ್ಗೆ ವಿವರಣೆ ಕೊಡುವುದು, ನಂತರದಲ್ಲಿ ಬಿತ್ತಿದ ಬೀಜದ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳನ್ನು ವ್ಯಾಖ್ಯಾನಿಸುವುದು, ಪುನಹ ಬೀಜದ ಮಾರುಕಟ್ಟೆ ವಿಧಾನದ ವಿವರಣೆ ಹೀಗೆ ಅತ್ತಿಂದಿತ್ತ ವಿಷಯಗಳ ಓಲಾಟಗಳಾದರೆ ಓದುಗನಿಗೆ ಲೇಖನದ ತುದಿ ಬುಡ ಅರಿವಾಗದು. ಲೇಖನದಲ್ಲಿ ಎಷ್ಟೇ ಉತ್ತಮ ಅಂಶಗಳು ವಿವರಿಸಲ್ಪಟ್ಟಿದ್ದರೂ ಆ ಲೇಖನವು ಓದುಗನನ್ನು ಸೂರೆಗೊಳ್ಳದು.
ಲೇಖನದಲ್ಲಿ ವಿಷಯಕ್ಕೆ ಪೂರಕವಾಗದ ಅಂಶಗಳು ಒಳಸುಳಿಯದಂತೆ ಎಚ್ಚರಿಕೆಯೂ ಅಗತ್ಯ. ಹಳ್ಳಿಯ ಭಾಷೆಯಲ್ಲಿ ರಾಮಾಯಣದೊಳಗೆ ಇವನದೇನು ಪಿಟ್ಕಾಯಣ ಎಂದು ಹೇಳುವರಲ್ಲವೇ? ಲೇಖನವೂ ಇಂತಹ ಮುಜುಗರಕ್ಕೆ ಒಳಗಾಗದಿರಲು ಅವನ ಅಥವಾ ಅವಳ ದೃಷ್ಟಿ ಲೇಖನದ ವಿಷಯ ಮತ್ತು ಶಿರೋನಾಮೆಯಲ್ಲೇ ಕೇಂದ್ರೀಕರಣವಾಗಿರಬೇಕು. ಬರೆಯುತ್ತಿದ್ದಂತೆ ಸಹಜವಾಗಿ ಹಲವು ಲೇಖನಗಳ ವಿಷಯಗಳೂ ನಮ್ಮ ತಲೆಯನ್ನು ತಿನ್ನಲಾರಂಭಿಸುತ್ತವೆ. ಅವುಗಳು ಪ್ರಕೃತ ಬರೆಯುವ ಲೇಖನದಲ್ಲಿ ಸೇರಿದರೆ ಆ ಲೇಖನ ಕಸವಾಗುವುದೇ ಹೊರತು ರಸಪಾಕವಾಗದು.
ವಾರ್ತಾವರದಿಯೊಂದು ಹೀಗಿತ್ತು- ಜನಮೆಚ್ಚುವ ಸದನದಲ್ಲಿ ಶಾಸಕಿಯ ಪ್ರಶ್ನೆ. ಮೇಲ್ನೋಟಕ್ಕೆ ಈ ವಾಕ್ಯದಲ್ಲಿ ಲೋಪವು ಕಾಣದು. ಆದರೆ ಈ ವಾಕ್ಯವು, ಸದನದಲ್ಲಿ ಶಾಸಕಿಯ ಜನಮೆಚ್ಚುವ ಪ್ರಶ್ನೆ ಎಂದಿರುತ್ತಿದ್ದರೆ ಇನ್ನೂ ಹೆಚ್ಚು ಅರ್ಥಪೂರ್ಣ ಎನಿಸುವುದಿಲ್ಲವೇ? ಬರೆಯುವ ತರಾತುರಿಯಲ್ಲಿ ಇಂತಹ ವಾಕ್ಯಗಳು ಲೇಖನದೊಳಗೆ ಕಾಣಿಸಿದರೆ ಲೇಖಕ ನಗೆ ಪಾಟಲಿಗೀಡಾಗುತ್ತಾನೆ. ತನ್ನ ಬರವಣಿಗೆಗೆ ವ್ಯಯಿಸಿದ ಕಾಲ, ಯೋಚನೆಗೆ ಹಾಕಿದ ಪರಿಶ್ರಮಗಳು ಗೌರವವನ್ನು ತರುವುದರ ಬದಲು ಹಾಸ್ಯಕ್ಕೊಳಗಾಗುವ ವಸ್ತುವಾದರೆ …..!. ಅದಕ್ಕಾಗಿ ಅವಸರದ ಬರವಣಿಗೆ, ಆರ್ಥದ ಗಾಂಭಿರ್ಯತೆಯನ್ನು ಪರಿಗಣಿಸದ ಬರವಣಿಗೆ ನಮ್ಮದಾಗದಂತೆ ಎಚ್ಚರ ವಹಿಸಿದರೆ ಲೇಖನದ ಮೌಲ್ಯವು ಹೆಚ್ಚುತ್ತದೆ.
ಬರೆಯುತ್ತಾ ಬರೆಯುತ್ತಾ ಒಂದು ಘಟನೆಯನ್ನು ವಿವರಿಸುವಾಗ, ……… ಅವನಿಗೆ ಇದು ಹೊಳೆಯಿತು, ಹೀಗೆ ಹೊಳೆಯಿತು ಎಂಬಿತ್ಯಾದಿಯಾಗಿ ಅಸ್ಪಷ್ಟವಾಗಿ ಬರೆದೆದರೆ ಲೇಖನ ಅಂದವಾಗದು. ಆ ಇದು ಅಥವಾ ಹೀಗೆ ಎಂಬುದು ಅರ್ಥವಾಗುವಂತೆ ವಿವರಣೆ ಮಾಡಿದರೆ ಸೂಕ್ತವಾದ ಮನ್ನಣೆಯಿಂದ ವಾಚಕರು ಸ್ವೀಕರಿಸುವರು. ಬರವಣಿಗೆಯ ಭಾಷೆಯ ಬಗ್ಗೆ ಹಿಡಿತವೂ ಲೇಖನದ ಸೌಂದರ್ಯವನ್ನು ನೂರ್ಮಡಿಸುತ್ತದೆ. ಉದಾಹರಣೆಗೆ, ….. ಫ್ರೆಂಡ್‌ನ ಮನೆ ಬಳಿಯೇ ಇತ್ತು ಎಂದು ಬರೆದರೆ ಓದುಗರು ಇಷ್ಟ ಪಡರು. ಫ್ರೆಂಡ್ ಎಂಬ ಪದವು ಆಂಗ್ಲ ಭಾಷೆಯ ಲೇಖನಕ್ಕೆ ಸೂಕ್ತ . ಆಯಾ ಭಾಷಾ ಪದಗಳನ್ನೇ ಬಳಸಿ ಬರೆಯುವ ಲೇಖನಕ್ಕೆ ಮೆರುಗು ಹೆಚ್ಚು.
ಹಾಗಾದರೆ ಅನ್ಯ ಬಾಷೆಗಳ ಪದಗಳನ್ನು ಲೇಖನದಲ್ಲಿ ಬಳಸಲೇ ಬಾರದೇ? ಅನಿವಾರ್ಯ ಸಂದರ್ಭಗಳು ಎಂದಿವೆ. ಓದುಗನಿಗೆ ಬೇಗ ಅರ್ಥವಾಗಲಿ ಎಂದು ಆಂಗ್ಲ ಪದವನ್ನೋ ಸಂಸ್ಖೃತ ಪದವನ್ನೋ, ಉರ್ದು ಪದವನ್ನೋ… ಅಥವಾ ಯಾವುದೇ ಅನ್ಯ ಭಾಷೆಯ ಪದಗಳನ್ನು ಬಳಸಿದರೆ ಅದು ಯೋಗ್ಯವಾಗುತ್ತದೆ. ಆದರೆ ಅನ್ಯ ಭಾಷೀಯ ಪದಗಳೇ ತುಂಬಿದರೆ ಮೂಲ ಭಾಷೆಯ ಸೊಗಡಿರದ ಲೇಖನವಾಗಿ ಓದುಗನಿಗೆ ಕಿರಿ ಕಿರಿಯಾಗುತ್ತದೆ. ಅಂತರ್ಜಾಲ ಎಂದರೆ ಬೇಗನೇ ಅರ್ಥವಾಗುವುದಿಲ್ಲ ಎಂದು ಇಂಟರ್‌ನೆಟ್ ಪದ ಬರೆಯಬಹುದು. ಆದರೆ ಬರೆಯುವಾಗ, ಇಂಟರ್‌ನೆಟ್ ಎಂದು ಬರೆದರೆ ಅದು ಉದ್ದೇಶಪೂರ್ವಕವಾಗಿ ಬಳಸಲಾದ ಅನ್ಯಭಾಷೀಯ ಪದ ಎಂದು ಗುರುತಿಸಿ ಕೊಟ್ಟಂತಾಗುತ್ತದೆ. ಅದನ್ನೇ, ‘internet’ ಎಂದೂ ಬರೆಯುವುದಿದೆ. ಹಾಗೆಂದು ಎಲ್ಲಾ ಅನ್ಯ ಬಾಷಾ ಲಿಪಿಗಳು ನಮಗೆ ಗೊತ್ತಿರಲು ಸಾಧ್ಯವಿಲ್ಲ ತಾನೇ?. ಬಳಸಿದ ಅನ್ಯ ಭಾಷಿಕ ಪದವು ಓದುಗನಿಗೆ ಹೆಚ್ಚು ಅರ್ಥವಾಗುವಂತೆ ಅಡಿ ಟಿಪ್ಪಣಿ ಬರೆದರೆ ಇನ್ನೂ ಉತ್ತಮ ಪ್ರಯತ್ನವಾಗುತ್ತದೆ.
ಬರವಣಿಗೆಯೋಂದಿಗೆ ಭಾಷಾ ವ್ಯಾಕರಣ ಗ್ರಂಥ ಮತ್ತು ನಿಘಂಟು ಪಕ್ಕದಲ್ಲಿರುವುದು ಒಳಿತು. ಪದಬಳಕೆಯ ಮತ್ತು ವ್ಯಾಕರಣ ಬಳಕೆಯ ಜ್ಞಾನವಿಲ್ಲದೇ ಇದ್ದಾಗ ಪಕ್ಕದಲ್ಲಿರುವ ನಿಘಂಟು ಮತ್ತು ವ್ಯಾರಣ ಗ್ರಂಥಗಳು ನಮ್ಮ ನೆರವಿಗೆ ಬರುತ್ತವೆ. ಬರೆಯುವ ವಾಕ್ಯಗಳು ಮತ್ತು ಪದಗಳು ಹೆಚ್ಚು ಸರಳವಾಗಿದ್ದಾರೆ ಆ ಲೇಖನವು ಸಮೃದ್ಧವಾಗುತ್ತದೆ. ಮರದ ಬಳಿಯಿದ್ದ ಮಂಡೂಕವನ್ನು ನೋಡಿ ನಾಗರಾಜನು ಪುಳಕಿತನಾದನು. ತನ್ನ ದಂಷ್ಟ್ರಗಳನ್ನು ನಾಗಪ್ಪ …………. ಎಂದರೆ ಆಭಾಸವೇ ಸರಿ. ಅದರ ಬದಲಿಗೆ, ಮರದ ಬಳಿಯಿಧ್ದ ಕಪ್ಪೆಯನ್ನು ನೋಡಿ ನಾಗರ ಹಾವು ಪುಳಕಿತವಾಯಿತು. ತನ್ನ ಹಲ್ಲುಗಳನ್ನು……, ಎಂದು ಬರೆದರೆ ಲೇಖನವು ಆಕರ್ಷಕವಾಗುತ್ತದೆ. ಪದಗಳು ಸಮತೂಕದಲ್ಲಿ ಬಳಕೆಯಾಗಬೇಕು. ಓದುಗನನ್ನು ಪದಗಳು ರೊಚ್ಚಿಗೇಳಿಸಬಾರದಲ್ಲವೇ?
ನಮ್ಮ ಚೊಚ್ಚಲ ಲೇಖನವನ್ನು ನಮ್ಮ ಮಿತ್ರರಿಗೋ, ಉತ್ತಮ ಲೇಖಕರೆಂದು ಪ್ರಸಿದ್ಧರಾದವರಿಗೋ ತೋರಿಸಿ ಅಭಿಪ್ರಾಯ ಪಡೆದರೆ ಉತ್ತಮ. ಕೆಲವೊಮ್ಮೆ ಸಮಯಾಭಾವದಿಂದ ಅವರು ಸರಿಯಾಗಿದೆ ಎಂಬ ಪ್ರಮಾಣ ಪತ್ರ ನೀಡಲೂ ಬಹುದು. ಆದರೆ ಲೇಖನದೊಳಗೆ ದೋಷಗಳಿರಲೂ ಬಹುದು. ಇಂತಹ ತೊಂದರೆಗಳಾಗದಿರಲು ಹಲವರಿಗೆ ತೋರಿಸಿದರೂ ಅಡ್ಡಿಯಿಲ್ಲ. ನಮ್ಮ ದೋಷಗಳನ್ನು ಒಬ್ಬರಲ್ಲ ಒಬ್ಬರು ಸರಿಪಡಿಸಿ ಕೊಡಬಹುದು. ಆದರೆ ಇಂತಹ ಸಂದರ್ಭದಲ್ಲಿ, ಹಲವು ಸಮಗಾರರು ಸೇರಿ ಚಪ್ಪಲಿ ಹಾಳಾಯಿತು, ಎಂಬ ಗಾದೆಯಂತೆ ಲೇಖದ ಸ್ವರೂಪ ಕೆಡಬಾರದಲ್ಲವೇ? ಅದಕ್ಕಾಗಿ ತಿದ್ದುಪಡಿ ಮಾಡಲು ಪ್ರಾಮಾಣಿಕರನ್ನೇ ನಾವು ಆರಿಸಿಕೊಳ್ಳಬೇಕು. ಅವಸರದ ಪ್ರಕಟಣೆ ಅಪಾಯಕಾರಿ. ನಮ್ಮ ಲೇಖನದಲ್ಲಿರುವ ದೋಷಗಳನ್ನು ಐದಾರು ಜನ ಓದಿ ಸರಿಪಡಿಸುವುದರಿಂದ, ನೂರಾರು ಜನರ ನಡುವೆ ನಾವು ನಗೆ ಪಾಟಲಿಗೊಳಗಾಗುವುದನ್ನು ತಪ್ಪಿಸ ಬಹುದಲ್ಲವೇ?
ಓದುಗರೊಬ್ಬರು ದಾಕ್ಷಿಣ್ಯದಿಂದಲೋ, ಗೆಳೆತನಕ್ಕೆ ಚ್ಯುತಿ ಬಾರದಿರಲೆಂದೋ, ಉತ್ತೇಜನ ಕೊಡೋಣ ಎಂಬ ಉದ್ದೇಶದಿಂದಲೋ, ನಿಮ್ಮ ಲೇಖನ ಅದ್ಭುತ ಎನ್ನ ಬಹುದು. ನಾವು ಆಗ ಹಿಗ್ಗದೇ ಅವರಲ್ಲಿ ದೋಷ ಇದ್ದರೆ ಹೇಳಿ ಸರಿಪಡಿಸುವೆ, ಬೇಸರ ಪಡಲಾರೆ ಎಂಬ ಭರವಸೆ ನೀಡಿದರೆ ಲೇಖನದ ದೋಷ ಪರಿಮಾರ್ಜನೆಗೆ ಮನಗೊಡಬಹುದಲ್ಲವೇ? ಪ್ರಥಮ ಪ್ರಶಂಸೆಗೆ ಹಿಗ್ಗಿ ಲೇಖನ ಪ್ರಕಟಗೊಳಿಸಿ ಎಡವಟ್ಟು ಮಾಡಿಕೊಂಡರೆ ನಮ್ಮ ಸಾಹಿತ್ಯ ಬದುಕು ಅರಳದು. ಲೇಖಕನಿಗೆ ಸಂಯಮ ಅಥವಾ ತಾಳ್ಮೆಗಳು ಬರವಣಿಗೆ ಮತ್ತು ಪ್ರಕಟಣೆ ಈ ಎರಡೂ ಸಂದರ್ಭಗಳಲ್ಲಿ ಅತೀ ಅಗತ್ಯ.
ಲೇಖನದೊಳಗೆ ಗಾದೆ ಮಾತು ನುಡಿಗಟ್ಟುಗಳನ್ನು ಬಳಸುವುದರಿಂದ ಲೇಖನದ ಮೆರುಗು ಹೆಚ್ಚಬಹುದೇ? ಖಂಡಿತವಾಗಿಯೂ ಲೇಖನವು ಗಾದೆ ಮತ್ತು ನುಡಿಗಟ್ಟುಗಳಿಂದ ಕೂಡಿದರೆ ಅಂದ ಹೆಚ್ಚುತ್ತದೆ. ಆದರೆ ಆ ಗಾದೆ ಮತ್ತು ನುಡಿಗಟ್ಟು ವಿವರಿಸುವ ಅಂಶಕ್ಕೆ ಪೂರಕವಾಗಿರಬೇಕು. ಊಟಕ್ಕೆ ಉಪ್ಪಿನ ಕಾಯಿಯ ಪ್ರಮಾಣಕ್ಕೆ ಮಿತಿಯಿರುವಂತೆ ಲೇಖನದಲ್ಲೂ ಗಾದೆ ಮತ್ತು ನುಡಿಗಟ್ಟುಗಳು ಹಿತ ಮಿತವಾಗಿಯೇ ಇರಬೇಕಾಗುತ್ತದೆ.
ಲೇಖನವು ಎಚ್ಚರಿಕೆಯಿಂದ ಸಾಗಬೇಕು. ಯಾವುದೇ ಧರ್ಮ, ಜಾತಿ, ಪಂಥಗಗಳ ನಿಂದನೆಯಾಗದಂತೆ ಎಚ್ಚರಿಕೆ ಬೇಕು. ತತ್ವ ಶಾಸ್ತ್ರ, ವಿಜ್ಞಾನ, ಚರಿತ್ರೆ, ಮೌಲ್ಯ, ಸಂವಿಧಾನ, ಸರಕಾರ, ಚುನಾವಣೆ, ಆಚರಣೆಗಳು, ನಂಬುಗೆಗಳು ಹೀಗೇ ಎಲ್ಲ ಕ್ಷೇತ್ರಗಳ ಬಗ್ಗೆಯೂ ಬರೆಯಬಹುದು. ಆದರೆ ಲೇಖನದಿಂದಾಗಿ ಸಮಾಜದೊಳಗೆ ಅಶಾಂತಿ, ಗೊಂದಲಗಳು, ಸಂಘರ್ಷಗಳು, ತಪ್ಪು ಸಂದೇಶಗಳು ಪಸರಿಸದಂತೆ ಬಹಳ ಜಾಗರೂಕತೆಯಿರಬೇಕು. ಯಾವುದೇ ಹೀಯಾಳಿಸುವಿಕೆಯ ಬರಹಗಳು, ತೇಜೋವಧೆ ಮಾಡುವ ಬರಹಗಳು ಸ್ವಂತಕ್ಕೂ ಸಮಾಜಕ್ಕೂ ವಿಹಿತವಲ್ಲ.
ಲೇಖನದ ಕೊನೆಗೆ ಉಪಸಂಹಾರ ಅಥವಾ ಮುಕ್ತಾಯದ ಭಾಗವಿರಬೇಕು. ಇದು ಬಹಳ ದೀರ್ಘವಾದುದಾಗಿರಬಾರದು. ಲೇಖನದ ಮುಖ್ಯ ಸಾರದ ಸಮರ್ಥನೆಯಾಗಿ ಒಂದೆರಡು ವಾಕ್ಯಗಳಿಂದಲೂ ಮುಕ್ತಾಯಗೊಳಿಸಬಹುದು. ನದಿಯ ಬಗ್ಗೆ ಬರೆದ ಲೇಖನವಾದರೆ ನದಿಗಳು ಮನುಷ್ಯನ ಜೀವನಾಡಿ. ಮಾನವನಿಗೆ ಬದುಕು ಕಟ್ಟಲು ನದಿಗಳು ಬೇಕೇ ಬೇಕು. ಆದುದರಿಂದ ನದಿಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ ಎಂದು ಬರೆದಾಗ ಉತ್ತಮ ಮತ್ತು ಚಿಕ್ಕ ಮುಕ್ತಾಯವಾಗುತ್ತದೆ. ಇದು ಕೇವಲ ಉದಾಹರಣೆಗಾಗಿ ನೀಡಿದ ಕಾಲ್ಪನಿಕ ಲೇಖನದ ಮುಕ್ತಾಯವೇ ಹೊರತು, ಮುಕ್ತಾಯವು ಹೀಗೆಯೇ ಇರಬೇಕೆಂದಲ್ಲ. ಲೇಖನವನ್ನಾಧರಿಸಿ ಮುಕ್ತಾಯವಿರಬೇಕೇ ಹೊರತು, ಮುಕ್ತಾಯದಲ್ಲಿ ಹೊಸ ವಿಚಾರಗಳನ್ನು ತುರುಕದಿರುವುದು ಸೂಕ್ತವಲ್ಲವೇ?

 

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಅಮ್ಟೂರಿನಲ್ಲಿ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...