ಬಂಟ್ವಾಳ: ಪಣೋಲಿಬೈಲು ಬಳಿ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.

ಪುತ್ತೂರಿನ ಆರ್ಯಾಪು ವಲತ್ತಡ್ಕ ನಿವಾಸಿ ರೋಹಿತ್(22) ಹಾಗೂ ಕುಂಜೂರುಪಂಜ ದೇವಸ್ಯ ನಿವಾಸಿ ಲೋಹಿತ್ ಪಿ.ಆರ್.(20) ಬಂಧಿತ ಆರೋಪಿಗಳು. ಆರೋಪಿಗಳು ಸೆ. 8ರಂದು ಬೈಕಿನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಸ್ಥಳೀಯ ನಿವಾಸಿ ವತ್ಸಲಾ ಅವರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾಗಿದ್ದರು.
ಆರೋಪಿಗಳಿಂದ ಸುಲಿಗೆ ಮಾಡಿದ ಕರಿಮಣಿ ಸರ ಹಾಗೂ ಅಪಾಚಿ ಬೈಕ್ ಸೇರಿ ಒಟ್ಟು 1.35 ಲಕ್ಷ ರೂ.ಗಳ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಕುರಿತು ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಅವರ ನಿರ್ದೇಶನದಂತೆ ಎಡಿಶನಲ್ ಎಸ್ಪಿ ಡಾ.ಶಿವಕುಮಾರ್ ಗುಣಾರೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಸಬ್ ಇನ್ಸ್ ಪೆಕ್ಟರ್ ಅವಿನಾಶ್, ಅಪರಾಧ ಪತ್ತೆ ವಿಭಾಗದ ಸಬ್ ಇನ್ಸ್ ಪೆಕ್ಟರ್ ಕಲೈಮಾರ್, ಡಿವೈಎಸ್ಪಿ ತಂಡದ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್, ಕುಮಾರ್ ಎಚ್.ಕೆ., ನಗರ ಠಾಣಾ ಸಿಬಂದಿ ಜಗನ್ನಾಥ ಶೆಟ್ಟಿ, ಕೃಷ್ಣ ಕುಲಾಲ್, ಹೋಮ್ ಗಾರ್ಡ್ ಜಯಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

