ವಿಟ್ಲ: ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಹೋದ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯ ಮೂಲಕ ಅಪ್ರಾಪ್ರ ಬಾಲಕಿಯೊಬ್ಬಳು ಗರ್ಭಿಣಿಯಾದ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಯಿ ಗ್ರಾಮದ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ೧೩ ವರ್ಷದ ಬಾಲಕಿ ಸದ್ಯ ನಾಲ್ಕು ತಿಂಗಳ ಗರ್ಭಿಣಿ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಪೆರುವಾಯಿ ಆರೋಗ್ಯ ಕೇಂದ್ರದ ವತಿಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುವ ವೇಳೆ ಓರ್ವ ಬಾಲಕಿಯು ವಿಭಿನ್ನವಾಗಿದ್ದಳು. ಇದರಿಂದ ಅನುಮಾನಕ್ಕೊಳಗಾದ ಆರೋಗ್ಯ ಕೇಂದ್ರದ ದಾದಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಸೂಚಿಸಿದ್ದಾರೆ.
ಸೂಚನೆಯಂತೆ ಮಂಗಳೂರಿನಲ್ಲಿ ತಪಾಸಣೆ ನಡೆಸುವ ಸಮಯದಲ್ಲಿ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ಬಾಲಕಿಯ ವಿಚಾರಣೆ ನಡೆಸಿದಾಗ ಆಕೆಯ ಸಹೋದರನಿಂದಲೇ ವರ್ಷದಿಂದ ನಿರಂತರ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ೧೭ ವರ್ಷದ ಬಾಲಕನನ್ನು ವಶಕ್ಕೆ ಪಡೆದುಕೊಂಡು ಬಾಲ ನ್ಯಾಯಮಂಡಳಿಯ ಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ.
