ಬಂಟ್ವಾಳ: ಮನೆಯ ಅಟ್ಟದಲ್ಲಿ ದಾಸ್ತಾನಿಟ್ಟಿದ್ದ 3 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳವುಗೈದ ಘಟನೆ ಬಂಟ್ವಾಳ ತಾ.ನ ಕರ್ಪೆ ಗ್ರಾಮದಲ್ಲಿ ನಡೆದಿದ್ದು,ಈ ಬಗ್ಗೆ ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.

ಕರ್ಪೆಗ್ರಾಮದ ಕೆ. ಜಿನಚಂದ್ರ ಜೈನ್ ಅವರ ನಿವಾಸದಲ್ಲಿ ಈ ಕಳವು ಕೃತ್ಯ ನಡೆದಿದೆ.ಜಿನಚಂದ್ರ ಜೈನ್ ಅವರು ಪ್ರಸ್ತುತ ಬಿ.ಮೂಡ ಗ್ರಾಮದಲ್ಲಿ ವಾಸ್ತವ್ಯವಿದ್ದು,ಮಾ.1 ರಂದು ಕರ್ಪೆಗೆ ತೆರಳಿ ಸುಮಾರು 11 ಗೋಣಿ ಚೀಲದಷ್ಟು ಒಣಗಿಸಿದ್ದ ಸುಮಾರು 3 ಕ್ವಿಂಟಾಲ್ ಅಡಿಕೆಯನ್ನು ಮನೆಯ ಅಟ್ಟದಲ್ಲಿರಿಸಿ ಮನೆಗೆ ಬೀಗ ಹಾಕಿ ಸಂಜೆ ವಾಪಾಸ್ ಬಂಟ್ವಾಳದ ಮನೆಗೆ ಬಂದಿದ್ದರು.
ಮರುದಿನ ಬೆಳಿಗ್ಗೆ ಕರ್ಪೆಯ ಮನೆಗೆ ಹೋದಾಗ ಮನೆಯ ಹಿಂಬದಿ ಬಾಗಿಲು ಹಾಗೂ ಮನೆಯೊಳಗಿನ ಬಾಗಿಲು ತೆರೆದುಕೊಂಡಿದ್ದು,ಅನುಮಾನದಿಂದ ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಭಾಗದ ಕಿಟಕಿಯ ರಾಡ್ ನ್ನು ಮುರಿದು ಒಳಪ್ರವೇಶಿಸಿ ಮನೆಯ ಅಟ್ಟದಲ್ಲಿ ಇಟ್ಟಿದ್ದ ಸುಲಿಯದ 11 ಗೋಣಿ ಚೀಲಗಳಲ್ಲಿ ತುಂಬಿಸಿ ದಾಸ್ತಾನಿಟ್ಟಿದ್ದ ಅಡಿಕೆಯನ್ನು ಕಳವುಗೈದಿರುವುದು ಕಂಡು ಬಂದಿದೆ ಎಂದು ಅವರು ದೂರಿನಲ್ಲಿತಿಳಿಸಿದ್ದಾರೆ. ಕಳವಾದ ಅಡಿಕೆಯ ಮೌಲ್ಯ ಸುಮಾರು 60 ಸಾ. ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.