ಶ್ರೀನಗರ: ದೇಶದಲ್ಲಿ ಕೊರೋನಾ ವೈರಸ್ ಮಂಡೆ ಬಿಸಿಯ ಮಧ್ಯೆ ಗಡಿಯಲ್ಲಿ ಉಗ್ರರ ಕಾಟ ಮುಂದುವರಿದಿದೆ. ಕೊರೋನಾ ಭಯದ ಮಧ್ಯೆಯೇ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೆಲಾಹುಲಾ ಎಂಬ ಪ್ರದೇಶದಲ್ಲಿ ಸೇನಾಪಡೆ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ಮಾಹಿತಿ ತಿಳಿದು ಬಂದಿದೆ.
ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇನಾ ಪಡೆಗಳು ಕಾರ್ಯಾಚರಣೆಗಿಳಿದಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಚುರುಕುಗೊಂಡ ಸೇನಾಪಡೆಗಳು ಕಾರ್ಯಾಚರಣೆಯನ್ನು ಎನ್ಕೌಂಟರ್’ಗೆ ಮಾರ್ಪಡಿಸಿ ಮೊದಲಿಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಬಳಿಕ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿ ಮತ್ತಿಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದ್ದು, ಹತ್ಯೆಯಾದ ಉಗ್ರರ ಕುರಿತು ಸೇನಾಪಡೆಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ವರದಿಗಳು ತಿಳಿಸಿವೆ.
ಕೊರೊನಾ ಭೀತಿಯಿಂದ ಜಗತ್ತು ಇಡೀ ನಲುಗುತ್ತಿದ್ದರೆ ಉಗ್ರರು ಮಾತ್ರ ತಮ್ಮ ಕೀಳು ಮಟ್ಟದ ಬುದ್ದಿ ಯನ್ನು ತೋರ್ಪಡಿಸುತ್ತಲೆ ಇದ್ದಾರೆ.

