ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆಯನ್ನು ನಿನ್ನೆ (ಡಿ.9) ಆಯೋಜಿಸಲಾಗಿತ್ತು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಭ್ರಷ್ಟಾಚಾರದಿಂದಾಗುವ ಸಾಮಾಜಿಕ, ರಾಜಕೀಯ ನಷ್ಟಗಳ ಬಗ್ಗೆ ತಿಳಿ ಹೇಳಿ ಯುವಜನತೆ ಭ್ರಷ್ಟಾಚಾರ ವಿರೋಧಿ ಮನೋಭಾವನೆಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ. ಮಾತನಾಡಿ, ಭ್ರಷ್ಟಾಚಾರದ ವಿವಿಧ ಕ್ಷೇತ್ರಗಳು ಅದರಿಂದಾಗುವ ಕೆಡುಕುಗಳನ್ನು ವಿವರಿಸಿ ಭ್ರಷ್ಟಾಚಾರದ ವಿರೋಧಿ ದಿನದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನದ ಬಗ್ಗೆ ಜಾಗೃತಿ ಮೂಡಿಸಿದರು. ಅದರ ಜೊತೆಗೆ ಭ್ರಷ್ಟಾಚಾರಕ್ಕೆ ಕಾರಣವಾಗುವ ವಿವಿಧ ಸನ್ನಿವೇಶಗಳು ಹಾಗೂ ಭ್ರಷ್ಟಾಚಾರದ ಪ್ರಭಾವವನ್ನು ತಗ್ಗಿಸಲು ಯುವ ಜನತೆಯು ಕೈಗೊಳ್ಳಬೇಕಾದ ವರ್ತನೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತೃತೀಯ ಬಿ.ಎ.ತರಗತಿಯ ವಿದ್ಯಾರ್ಥಿನಿಯರಾದ ಲಕ್ಷ್ಮಿ ಸ್ವಾಗತಿಸಿ, ಜಾಹ್ನವಿ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ಚೇತನ ಮತ್ತು ವಿಶಾಲಾಕ್ಷಿ ಪ್ರಾರ್ಥಿಸಿದರು.














