ವಿಟ್ಲ: ನೆಟ್ಲಮೂಡ್ನೂರು ಅನಂತಾಡಿಯ ಒಡಿಯೂರುಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ನೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್‍ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಮೂಡಬೇಕಾದ ಅವಶ್ಯಕತೆಯಿದೆ. ಕಾಲಕಾಲಕ್ಕೆ ಮಳೆ ಬಂದರೆ ಮಾತ್ರ ರೈತಾಪಿ ವರ್ಗ ಈ ಭೂಮಿಯಲ್ಲಿ ಬೆಳೆ ಬೆಳೆಯಬಹುದು. ಇಳೆ ಸಮೃದ್ಧತೆಯಿಂದ ಕೂಡಿರಬಹುದು ಎಂದು ತಿಳಿಸಿದರು.
ನೇರಳಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ವನ ಮಹೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಅನಂತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ, ಸೇವಾ ಬಳಗದ ಅಧ್ಯಕ್ಷ ಡಾ. ಮನೋಹರ ರೈ, ಮುರಳೀಧರ ರೈ ಕಲ್ಲಾಜೆ, ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ನೇರಳಕಟ್ಟೆ ಘಟ ಸಮಿತಿಯ ಅಧ್ಯಕ್ಷ ಪ್ರಕಾಶ್ ರೈ, ಹಿರಿಯರಾದ ತೊಕ್ಕೋಜಿ ರಾವ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ವನಮಹೋತ್ಸವದಲ್ಲಿ ಪಾಲ್ಗೊಂಡರು.
ಒಡಿಯೂರುಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಕುರ್ಲೆತ್ತಿಮಾರ್ ವೆಂಕಪ್ಪ ಶೆಟ್ಟಿ ಸ್ವಾಗತಿಸಿದರು. ಸದಸ್ಯ ದೇವಿ ಪ್ರಸಾದ್ ಶೆಟ್ಟಿ ವಂದಿಸಿದರು. ಉಗ್ಗಪ್ಪ ಶೆಟ್ಟಿ ಕೊಂಬಿಲ ಕಾರ್‍ಯಕ್ರಮ ನಿರೂಪಿಸಿದರು. ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಕಾವ್ಯಲಕ್ಷ್ಮೀ, ಸೇವಾ ದೀಕ್ಷಿತರಾದ ಜಯಶ್ರೀ, ನಿಶಾ ಸಹಕರಿಸಿದರು.
