ಬಂಟ್ವಾಳ, ಜು.23: ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗ (ಇಂಟಕ್) ಸಮಿತಿಯ ಉಪಾಧ್ಯಕ್ಷ, ಕರ್ನಾಟಕ ಮುಸ್ಲಿಮ್ ಫೋರಂನ ಸ್ಥಾಪಕ ಅಧ್ಯಕ್ಷ, ಯುವ ಉದ್ಯಮಿ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ (47) ಅವರು ಕೆಲವು ದಿನಗಳ ಅಸೌಖ್ಯದಿಂದ ಗುರುವಾರ ತಡ ರಾತ್ರಿ ನಿಧನರಾದರು.

ಅರಫಾ ಗ್ರೂಪ್ ತುಂಬೆ ಇದರ ನಿರ್ದೇಶಕ ಕೆ.ಸಾವುಞಿ ಹಾಜಿ ಅವರ ಪುತ್ರರಾದ ಅಮೀರ್ ತುಂಬೆ ಕೆಲವು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ವರ್ಗಾಹಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಚೇತರಿಸಿಕೊಂಡಿತ್ತು. ಆದರೆ ಎರಡು ದಿನಗಳ ಹಿಂದೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಗುರುವಾರ ರಾತ್ರಿ 1:30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಾಜಕೀಯ, ಸಾಮಾಜಿಕದ ಜೊತೆಗೆ ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದ ಅವರು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದರು. ಕೊರೋನ ಅಲೆಯಿಂದ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ತಂಡವನ್ನು ರಚಿಸಿ ನಿರಂತರ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವಾಗಿದ್ದರು.
ಮುಸ್ಲಿಮ್ ಸಮುದಾಯದ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕರ್ನಾಟಕ ಮುಸ್ಲಿಮ್ ಫೋರಂ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಜೊತೆಗೆ ಎಲ್ಲಾ ಜಾತಿ ಧರ್ಮದವರೊಂದಿಗೆ ಅನನ್ಯತೆಯಿಂದ ಇದ್ದ ಅಮೀರ್ ಅವರು ಕೊಡುಗೈ ದಾನಿಯೂ ಆಗಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಅಮೀರ್ ತುಂಬೆ ಮಾಡುತ್ತಿದ್ದ ಸಮಾಜ ಸೇವೆಯನ್ನು ಗುರುತಿಸಿ 2016ರಲ್ಲಿ ಇಂಟರ್ ನ್ಯಾಷನಲ್ ತಮಿಳ್ ಯುನಿವರ್ಸಿಟಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿತ್ತು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ತಂದೆ, ಸಹೋದರ ಸಹೋದರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
