ವಿಟ್ಲ: ಹಿಂದಿನ ಕಾಲದಲ್ಲಿ ತಪಸ್ಸಿನ ಮೂಲಕ ಪಡೆಯುತ್ತಿದ್ದ ದೇವರ ಅನುಗ್ರಹ ಇಂದು ಭಜನೆಯಿಂದ ಲಭಿಸುತ್ತದೆ. ಭಕ್ತಿ ಭಾವದ ಮೂಲಕ ದೇವರ ಆರಾಧನೆ ಮಾಡಬೇಕು. ಧಾರ್ಮಿಕತೆಯಲ್ಲಿ ವೈಜ್ಞಾನಿಕ ವಿಚಾರಗಳು ಅಡಗಿದ್ದು, ಮುಂದಿನ ಜನಾಂಗಕ್ಕೆ ನೀಡುವ ಕಾರ್‍ಯವಾಗಬೇಕು ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಹೇಳಿದರು.
ಅವರು ಶನಿವಾರ ರಾತ್ರಿ ಅಳಿಕೆ ಕಲ್ಲೆಂಚಿಪಾದೆ ಶ್ರೀ ಮಹಾದೇವಿ ಭಜನಾ ಮಂಡಳಿಯ ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಾರಂಭದ ಧಾರ್‍ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಭಜನೆಯ ಮೂಲಕ ಸಂಘಟನೆ ಮಾಡಲು ಸಾಧ್ಯವಿದೆ. ಒಂದೇ ರೀತಿಯ ಭಾವನೆ ಚಿಂತನೆ ಇದ್ದಾಗ ಕಾರ್‍ಯದಲ್ಲಿ ಪರಿಪೂರ್ಣತೆ ಇರುತ್ತದೆ ಎಂದು ಹೇಳಿದರು.
ತಾರಾನಾಥ ಕೊಟ್ಟಾರಿ ಪರಂಗಿಪೇಟೆ ಮಾತನಾಡಿ ಸಾತ್ವಿಕ ಮನಸ್ಸು ಇದ್ದಾಗ ಸಮಾಜದಲ್ಲಿ ಪರಿವರ್ತನೆ ಮಾಡಬಹುದು. ನಾಯಕತ್ವ ಇದ್ದಾಗ ಸಂಘಟನೆಗಳು ಮುಂಚೂಣಿಯಲ್ಲಿರುತ್ತವೆ. ಕಾರ್ಯಕರ್ತರ ಪರಿಶ್ರಮ ಇದ್ದಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಎಂ. ಡಿ. ಮಾಯಿಲ ಮಂಚಿ, ಅಮ್ಮಣ್ಣ ಅಳಕೆಮಜಲು, ನಂದಿತಾ ಅವರನ್ನು ಸನ್ಮಾನಿಸಲಾಯಿತು. ಭಜನಾ ಮಂದಿರ ನಿರ್‍ಮಾಣಕ್ಕೆ ನೆರವಾದವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲೆಂಚಿಪಾದೆ ಶ್ರೀ ಮಹಾದೇವಿ ಭಜನಾ ಮಂಡಳಿ ಗೌರವಾಧ್ಯಕ್ಷ ಕಾನ ಈಶ್ವರ ಭಟ್ ವಹಿಸಿದ್ದರು. ಮಾಣಿ ಕರ್ನಾಟಕ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ ಮಾಣಿ, ಕೆಎಸ್‌ಆರ್‌ಟಿಸಿ ಹೆಡ್ ಆರ್ಟಿಷಿಯನ್ ದಿನೇಶ್ ಎ. ಕಾನತ್ತಡ್ಕ, ಯಶೋಧರ ಬಂಗೇರ, ಎಂ. ಡಿ. ವೆಂಕಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮೋಕ್ಷಿತಾ, ಆಷಿತಾ ಪ್ರಾರ್ಥಿಸಿದರು. ರಾಮ ಜಿ. ಎನ್. ಸ್ವಾಗತಿಸಿದರು. ಚೆನ್ನಪ್ಪ ಪಿ. ಅಳಿಕೆ ಪ್ರಸ್ತಾವನೆಗೈದರು. ಆನಂದ, ಲಲಿತಾ ಸನ್ಮಾನ ಪತ್ರ ಓದಿದರು. ಆನಂದ ಜಿ. ವಂದಿಸಿದರು. ಜಯರಾಮ ಪಡ್ರೆ ಕಾರ್‍ಯಕ್ರಮ ನಿರೂಪಿಸಿದರು.
