ವಿಟ್ಲ: ಜಲ ಮರುಪೂರಣ ಕಾರ್ಯ ಪ್ರಸಕ್ತ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ನೀಡುತ್ತಿರುವುದು ಸಂದರ್ಭೋಚಿತವಾಗಿದೆ. ವಿಶ್ವ ಪರಿಸರ ದಿನಾಚರಣೆಯ ಫಲ ಭವಿಷ್ಯಕ್ಕೆ ಬೆಳಕಾಗುವುದು. ಮಾನವನ ಅತೀ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಮುಂದಿನ ಜನಾಂಗದ ಸುಖದ ದೃಷ್ಟಿಯನ್ನಿಟ್ಟುಕೊಂಡು ನಾವು ಪರಿಸರ ಜಾಗೃತಿ ನಡೆಸಬೇಕಾಗಿದೆ ಎಂದು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ವೈ ಶಿವರಾಮಯ್ಯ ಹೇಳಿದರು.
ಅವರು ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಸಾಯಿವಂದನಾದಲ್ಲಿ ವಾರ್ಷಿಕ ಶ್ರಮಸೇವೆ ಯೋಜನೆ(ಸಾಯಿಗಂಗಾ) ಅಡಿಯಲ್ಲಿ ಜಲ ಸಂವರ್ಧನೆ ಮತ್ತು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಯಸ್ಕರ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸುಧಾಕರ ಕೆ. ಮಾತನಾಡಿ ಒಂದು ಶಾಲೆಯ ಮೂಲಕ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಮೂಲಕ ಮನೆ ಹಾಗೂ ಸಮಾಜಕ್ಕೆ ದೂರದೃಷ್ಟಿ ಚಿಂತನೆಗಳನ್ನು ತಲುಪಿಸುವ ಶಿಕ್ಷಣ ಸಂಸ್ಥೆಯ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಯನ್ನು ಸಾವಯವ ರೀತಿಯಲ್ಲಿ ಮಾಡಲು ಮುಂದಾಗಬೇಕು. ಅಳಿಕೆ ಗ್ರಾಮ ಪಂಚಾಯಿತಿ ಬಹು: ಗ್ರಾಮಗಳ ಕೆರೆ ಪುನಶ್ಚೇತನ ಮಾಡಿದ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ ಎಂದು ತಿಳಿಸಿದರು.
ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ ಸುಮಾರು ೧ ಲಕ್ಷ ರೂ. ವೆಚ್ಚದಲ್ಲಿ ಸಂಸ್ಥೆಯಲ್ಲಿ ಎರೆಹುಳ ಗೊಬ್ಬರ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಜಲಮರುಪೂರಣ, ನೀರಿಂಗಿಸುವಿಕೆ, ಮಳೆನೀರು ಕೊಯ್ಲು ಇನ್ನಿತರ ಯೋಜನೆಗಳಿಗೆ ಪಂಚಾಯಿತಿ ಗ್ರಾಮಸ್ಥರಿಗೆ ಉತ್ತೇಜನ ನೀಡುತ್ತಿದೆ ಎಂದರು.
ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು.ಗಂಗಾಧರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ಎರಹುಳ ಗೊಬ್ಬರ ತೊಟ್ಟಿಯನ್ನು ಉದ್ಘಾಟಿಸಿಲಾಯಿತು. ಮಡಿಯಾಲ ಗುಡ್ಡದಲ್ಲಿ ವಿದ್ಯಾರ್ಥಿಗಳಿಂದ ವನಮಹೋತ್ಸವ ನಡೆಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕ ರಘ ಟಿ.ವೈ ಸ್ವಾಗತಿಸಿ, ಪ್ರಸ್ತಾವಿಸಿದರು. ಸಹ ಶಿಕ್ಷಕ ಗುರುಪ್ರಸಾದ್ ವಂದಿಸಿದರು. ನಾರಾಯಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
