ಬಂಟ್ವಾಳ : ಸಾಧನೆ ಮಾಡಲು ಕೇವಲ ಹೆಚ್ಚಿನ ಅಂಕಗಳನ್ನು ಗಳಿಸುವುದಲ್ಲ.ಹೊರತಾಗಿ ಒಳ್ಳೆಯದಕ್ಕೆ ಅನುಸಾರವಾಗಿರುವುದು,ಗುರು ಹಿರಿಯರ ಆದರ್ಶಗಳನ್ನು ಅನುಸರಿಸುವುದು, ಗೌರವ ಕೊಟ್ಟು ಗೌರವ ಪಡೆದುಕೊಳ್ಳುವುದು,ಶ್ರದ್ಧೆ ಮತ್ತು ನಿಷ್ಠೆಯಿಂದ ನಿತ್ಯದ ಕರ್ತವ್ಯಗಳನ್ನು ನಿಭಾಯಿಸುವುದೇ ಮುಂತಾದ ಅಂಶಗಳನುಸಾರ ನಡೆದರೆ ಖಂಡಿತವಾಗಿ ಗುರಿ ತಲುಪಿ ಸಾಧಕನಾಗಲು ಸಾಧ್ಯ ಎಂಬುದಾಗಿ ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ,ಸಮನ್ವಯ ಸಂಸ್ಥೆಯ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಎಸ್ ಹೇಳಿದರು.


ಅವರು ತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಾರ್ಲಿಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ನಾಯಕ ನಾಯಕಿಯರಿಗೆ ಹಾಗೂ ಮಂತ್ರಿ ಮಂಡಲದ ಸದಸ್ಯರಿಗೆ ಬ್ಯಾಡ್ಜ್ ವಿತರಿಸಿ ಸಂಸತ್ತಿನ ಉದ್ಘಾಟನಾ ಭಾಷಣ ಮಾಡಿದರು.
ಅವರು ಮಾತನಾಡುತ್ತಾ ಇವತ್ತು ವಿದ್ಯಾರ್ಥಿಗಳಲ್ಲಿ ನಾಯಕ ನಾಯಕಿಯರಾದವರಿಗೆ ಅಭಿನಂದಿಸುತ್ತೇನೆ.ಆದರೆ ಶಾಲಾ ಜೀವನದ ಚಟುವಟಿಕೆಗಳಲ್ಲಿ ಮಾತ್ರ ಜವಾಬ್ದಾರಿ ವಹಿಸದರೆ ಸಾಲದು.ಅದರ ಜೊತೆಗೆ ನಾಳೆ ಯಶಸ್ಸು ಕಾಣಬೇಕೆಂಬ ಆಶಯ ನಮ್ಮದಾಗಬೇಕು.ಅದಕ್ಕೇ ಬಾಲಕರಾಗಿರುವಾಗ ಮೊಬೈಲ್ ಬಳಕೆ,ವಿನಾಕಾರಣ ಸುತ್ತಾಡುವುದು,ಒಟ್ಟಾರೆ ಫ್ರೆಂಡ್ ಶಿಪ್ ಮಾಡುವುದು,ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾವಣೆ ಮಾಡುವುದು,ದುಶ್ಚಟಗಳ ದಾಸರಾಗುವುದು ಇತ್ಯಾದಿಗಳಿಂದ ಮೊದಲು ದೂರವಿರಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ವಿ.ಎಸ್.ಭಟ್ ಮಾತನಾಡಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಏನನ್ನು ಬೇಕಿದ್ದರೂ ಸಾಧಿಸಬಹುದು.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಚನೆ ಮಾಡಿ ಮುನ್ನಡೆದರೆ ನಾವು ಸುಸ್ಥಿರ ಮತ್ತು ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ,ವಿದ್ಯಾರ್ಥಿ ಪಾರ್ಲಿಮೆಂಟ್ ನಿರ್ದೇಶಕ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿ ಪ್ರಸ್ತಾವನೆ ಗೈದರು.
ವಿದ್ಯಾರ್ಥಿ ನಾಯಕ ಮೊಹಮ್ಮದ್ ಮಿಶಾಲ್,ವಿದ್ಯಾರ್ಥಿ ನಾಯಕಿ ಸೆಕ್ರೆಟರಿ ಆಝ್ಮೀ ಸನೋಬರ್,ವಿದ್ಯಾರ್ಥಿ ಮಂತ್ರಿ ಮಂಡಲ,ವಿರೋಧ ಪಕ್ಷದ ಸದಸ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು.ಪಾರ್ಲಿಮೆಂಟ್ ನ ಸಹನಿರ್ದೇಶಕ,ಆಂಗ್ಲ ಭಾಷಾ ಉಪನ್ಯಾಸಕ ಚೇತನ್ ಕುಮಾರ್ ಕದ್ರಿ ನಿರೂಪಿಸಿ,ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕವಿತಾ ಕೆ ವಂದಿಸಿದರು.












