ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಮೃತಪಟ್ಟಿದ್ದಾರೆ.
ಮಂಗಳೂರು ನಗರದ ಅಲೋಶಿಯಸ್ ಪದವಿ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ಮೃತಪಟ್ಟವರು
ಬಜ್ಜೆ ಪಡು ಪೆರಾರ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಪ್ಲೇವಿಯಾ ದಂಪತಿಯ ಪುತ್ರಿ ಗ್ಲೋರಿಯಾ ನ.8ರಂದು ಮಧ್ಯಾಹ್ನ ಊಟ ಮಾಡಿ ಕಾಲೇಜಿಗೆ ಬಂದ ಕೂಡಲೇ ತಲೆಸುತ್ತು ಬಂದು ಕುಸಿದು ಬಿದ್ದಿದ್ದರು. ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಗ್ಲೋರಿಯಾ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಬಳಿಕ ನ.13ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ (ಎಂ.ಕಾಂ) ಪೂರೈಸಿ ಕಳೆದ ಜುಲೈನಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ ಅವರು ಬಿ.ಕಾಂ ಪದವಿ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಇಂದು ನಿಧನರಾದ ಉಪನ್ಯಾಸಕಿ ಗ್ಲೋರಿಯಾ ಆಶಾ ರೋಡ್ರಿಗಸ್ ಅವರ ಅಂಗಾಂಗಳನ್ನು ಆಸ್ಪತ್ರೆಯಲ್ಲಿ ವಿವಿಧ ಸ್ವೀಕೃತದಾರರಿಗೆ ರವಾನಿಸಲಾಗಿದೆ. ಮೃತರ ಕುಟುಂಬದ ಒಪ್ಪಿಗೆಯಂತೆ ಅಂಗಾಂಗ ದಾನ ಮಾಡಲಾಯಿತು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.