ಬೆಳ್ತಂಗಡಿ: ಸ್ವಚ್ಛತೆಯ ಕೆಲಸ ನಿರ್ವಹಿಸುತ್ತಿದ್ದ ಕ್ಷೇತ್ರದ ಸಿಬ್ಬಂದಿಗೆ ಯಾತ್ರಾರ್ಥಿ ಹಲ್ಲೆ ಮಾಡಿದ ಘಟನೆ ಕೊಕ್ಕಡ ಗ್ರಾಮದ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ
ಮಹೇಂದ್ರ ಕೊಲ್ಲಾಜೆಪಳಿಕೆ ಹಲ್ಲೆಗೊಳಗಾದ ಸಿಬಂದಿ.
ಮಹೇಂದ್ರ ಅವರು ಮೊಬೈಲ್ ಲೈಟ್ ಬಳಸಿ ಶೌಚಾಲಯವನ್ನು ಶುಚಿಗೊಳಿಸುತ್ತಿದ್ದರು. ಈ ಸಮಯ ಬೆಂಗಳೂರಿನಿಂದ ಬಂದ ಯಾತ್ರಾರ್ಥಿಗಳು ಶೌಚಾಲಯವನ್ನು ಬಳಸುತ್ತಿದ್ದರು. ಮಹೇಂದ್ರ ಅವರ ಮೊಬೈಲ್ ಲೈಟ್ ಉರಿಯುತ್ತಿದ್ದದ್ದನ್ನು ನೋಡಿ ಆತ ತಮ್ಮ ವೀಡಿಯೋ ಮಾಡುತ್ತಿದ್ದಾನೆ ಎಂದು ಅನುಮಾನಿಸಿ ಏಕಾಏಕಿ 20ಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ಮಹೇಂದ್ರ ಅವರಿಗೆ ಹಲ್ಲೆ ಮಾಡಿದ್ದಾರೆ.
ಮಹೇಂದ್ರ ತಲೆಗೆ ಗಂಭೀರ ಏಟು ತಗಲಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸೌತಡ್ಕ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.