ಮಂಗಳೂರು: ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸುವ ಮೂಲಕ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಎಸ್ ಪಿ ನಟರಾಜ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಮೂರು ವಾಹನಗಳಲ್ಲಿ ಆಗಮಿಸಿ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದೆ. ಮನೆ, ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಮನೆಗೆ ಹಾಗೂ ನಗರದ ಮಲ್ಲಿಕಟ್ಟೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದ ಕೃಷ್ಣವೇಣಿ ಅವರು ವೇಲೆನ್ಸಿಯಾದಲ್ಲಿರುವ ಫ್ರೆಡ್ ರೋಸ್ ಎನ್ಕಲೇವ್ ಅಪಾರ್ಟ್ ಮೆಂಟ್ನಲ್ಲಿ ವಾಸವಾಗಿದ್ದು, ದಾಳಿ ನಡೆಸಿದ ತಂಡ ದಾಖಲೆಗಳನ್ನು ಪರಿಶೀಲನೆ ನಡೆಯುತ್ತಿದೆ.