ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ವ್ಯಕ್ತಿಯೋರ್ವರು ಹಾಸನ ಜಿಲ್ಲೆಯ ಕೊಣನೂರಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಮನೆ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೂಲತಃ ಕೊಯಿಲ ಗ್ರಾಮದ ಪರಾರಿ ನಿವಾಸಿ ದತ್ತರಾಜ್ ಶೆಟ್ಟಿಗಾರ್ ಮೃತರು.
ಕುಶಾಲನಗರದಲ್ಲಿ ವಾಸವಾಗಿದ್ದ ಅವರು, ಸಮೀಪದ ಚಿಕ್ಕಹೊಸೂರು ತನ್ನಿ ಸಿಮೆಂಟ್ ಪ್ರಾಡಕ್ಟ್ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿದ್ದರು. ಬುಧವಾರ ಬೆಳಗ್ಗೆ 7 ಗಂಟೆಯಿಂದ ಅವರು ನಾಪತ್ತೆಯಾಗಿದ್ದರು.
‘ನನ್ನ ಎಲ್ಲ ಪ್ರೀತಿಯ ಗ್ರಾಹಕರೇ, ನಮ್ಮಲ್ಲಿ ಸಾಮಗ್ರಿ ಖರೀದಿಸಿ ಹಣ ಪಾವತಿಸದೆ ಸಹಕರಿಸಿದ ಗುತ್ತಿಗೆದಾರರಿಗೆ ನನ್ನ ನಮಸ್ಕಾರಗಳು’ ಎಂದು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ಬಳಿಕ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ವಿಷಯ ತಿಳಿದ ಮನೆಯವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದಾಗ ಠಾಣಾಧಿಕಾರಿ ಸೂಚನೆ ಮೇರೆಗೆ ನಾಪತ್ತೆಯಾದ ಕುಶಾಲನಗರ ಬೈಲಕೊಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ಅವರ ಮೃತದೇಹ ಪತ್ತೆಯಾಗಿದೆ.
ದತ್ತರಾಜ್ ಅವರು ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ ಸಂಘದ ಕ್ರೀಡಾ ಸಂಚಾಲಕರಾಗಿದ್ದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.