ಬಂಟ್ವಾಳ: ಕರ್ನಾಟಕದಲ್ಲಿ ಹಲವು ದಶಕಗಳಿಂದಲೂ ಕಾರ್ಮಿಕರೊಡಗೂಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಶ್ರಮ ಜೀವಿಗಳ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವ AICCTU ತನ್ನ ಮೊದಲನೇಯ ರಾಜ್ಯ ಸಮ್ಮೇಳನವನ್ನು ನ 24 ಮತ್ತು ನ. 25ರಂದು ಬಂಟ್ವಾಳ ತಾಲೂಕು ಬಿ.ಸಿ .ರೋಡ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ ಎಂದು ಎ.ಐ.ಸಿ.ಸಿ.ಟಿ.ಯು.ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಪ್ಪಣ್ಣ ತಿಳಿಸಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ವಿಧಾನ ಸೌಧದ ಒಳಗೆ ಕೂಡ ಕಾಂಟ್ಯಾಕ್ಟ್ ಬೇಸ್ ನ ಮೇಲೆ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ವಿಚಾರ. ಇಂತಹ ಕಾರ್ಮಿಕ ಜನವಿರೋಧಿ ನೀತಿಗಳನ್ನು ಖಂಡಿಸಿದ ಅವರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಧ್ವನಿಯಾಗಲು ಸಮ್ಮೇಳನ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡುವ ಬಗ್ಗೆ ಸರಕಾರ ಯೋಚನೆ ಮಾಡಿಲ್ಲ. ಕ್ಯಾನ್ಸರ್ ರೋಗಿಗಳಿಗೆ ಮತ್ತು ಎಂಡೋಸಲ್ಪಾನ್ ಪೀಡಿತ ಮಕ್ಕಳಿಗೆ ಸರಕಾರ ಏನು ನೀಡಿದೆ ಎಂದು ಪ್ರಶ್ನಿಸಿದ ಅವರು ಪೌರಕಾರ್ಮಿಕರ ಸಮಸ್ಯೆಗಳನ್ನು ಕೇಳಲು ಸಾಧ್ಯವಾಗದ ಸ್ಥಿತಿಯಿದೆ. ರೈತರ ಸಮಸ್ಯೆ ಏನು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಈ ಸಮ್ಮೇಳನವು ದೇಶದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಪರಿಚಯಿಸಿದ ನಂತರ, ಕಾರ್ಮಿಕ ವರ್ಗವು ನವ ಉದಾರೀಕರಣ ನೀತಿಗಳ ದಾಳಿಯಿಂದ ಚೇತರಿಸಿಕೊಳ್ಳದೇ ಇರುವ ಇಂದಿನ ಪರಿಸ್ಥಿತಿಯಲ್ಲಿ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ರಾಜ್ಯಸಮಿತಿ ಸದಸ್ಯೆ ವಕೀಲೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ಕಾರ್ಮಿಕರ ಶೋಷಣೆಯಾಗುತ್ತಿರುವುದನ್ನು ವಿರೋಧಿಸಿ, ಸಮಾನವಾದ ಸಮಾಜವನ್ನು ಕಟ್ಟುವುದೇ ನಮ್ಮ ಉದ್ದೇಶವಾಗಿದೆ.ಗುತ್ತಿಗೆ ಪದ್ದತಿ ನಿರ್ಮೂಲನೆ ಆಗಬೇಕು. ಘನತೆಯಿಂದ ಸರ್ವರಿಗೂ ಕೆಲಸ ಮಾಡುವ ವಾತಾವರಣ ನಿರ್ಮಾಣ ವಾಗಬೇಕು, ಬಂಡವಾಳಶಾಹಿ, ಜಾತಿ ವ್ಯವಸ್ಥೆ ನಾಶವಾಗಬೇಕು,ಕೋಮುವಾದದ ವಿರುದ್ದ ನಮ್ಮ ಹೋರಾಟ ನಡೆಯುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ಸಮ್ಮೇಳನದ ಪ್ರಮುಖ ಅಂಶಗಳು ಏನು…?
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಕಾರ್ಮಿಕ ವರ್ಗದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ.
ಕರ್ನಾಟಕದಲ್ಲಿ ಇಡೀ ಕಾರ್ಮಿಕ ವರ್ಗವನ್ನೆ ಅಸಂಘಟಿತ ವಲಯಕ್ಕೆ ತಲ್ಲುತ್ತಿರುವ ತಂತ್ರಗಾರಿಕೆಯಗಳನ್ನು ನೋಡುತ್ತಿದ್ದೇವೆ. ಉದ್ಯೋಗ ಬಯಸಿ ಬರುತ್ತಿರುವ ಕಾರ್ಮಿಕರೆಲ್ಲರು ಅಸಂಘಟಿತ ವಲಯದಲ್ಲಿ ಕಂಡು ಬರುತ್ತಿರುವುದರಿಂದ, ಅವರಿಗೆ ಸ್ಥಿರವಾದ ವೇತನ, ಉದ್ಯೋಗ ಭದ್ರತೆ, ಮತ್ತು ಸಾಮಾಜಿಕ ಭದ್ರತೆಗಳಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಲಿಂಗ ಮತ್ತು ಜಾತಿ ತಾರತಮ್ಯ, ಪಿತೃಪ್ರಭುತ್ವ ಮತ್ತು ಜಾತಿ ಸಮುದಾಯದ ಅಸಮಾನತೆಗಳು ಹೊಸ ಹೊಸ ರೂಪಗಳಲ್ಲಿ ಹೊರಹೊಮ್ಮುತ್ತಿವೆ. ಸಮಾನ ವೇತನ ನಿರಾಕರಣೆ ಮತ್ತು ಅನ್ಯಾಯಯುತ ಕೆಲಸದ ಪರಿಸ್ಥಿತಿಗಳೇ ಇದಕ್ಕೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರಿ ಸೇವೆಗಳಲ್ಲಿ ಸುರಕ್ಷಿತ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸ್ಥಾಪನೆಯ ಮೂಲಕ ಕಾರ್ಮಿಕ ಕಾನೂನು ಆಡಳಿತವನ್ನು ಅಳವಡಿಸಲು ಮಾಡಿದ ಪ್ರಯತ್ನಗಳು ಇಂದು ಹಿಂದೆ ಬಿದ್ದಂತೆ ಕಾಣುತ್ತವೆ. ಇದೀಗ, ಖಾಸಗಿ ವಲಯದಲ್ಲಿ ಕಾರ್ಮಿಕರ ಹಕ್ಕುಗಳು ಕಣ್ಮರೆಯಾಗುತ್ತಿವೆ. ಆರ್ಥಿಕ ಉದಾರೀಕರಣದ ಈ ಹೊಸ ಘಟ್ಟದಲ್ಲಿ, ಕಾರ್ಮಿಕರು ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳಿಗಾಗಿ ಹಾಗೂ ಖಾಸಗೀ ವಲಯದಲ್ಲಿ ಕಾರ್ಮಿಕ ಕಾನೂನನ್ನು ಬಲಪಡಿಸುವಂತೆ ಒತ್ತಾಯಿಸಲು ಈ ಸಮ್ಮೇಳನವು ಒಂದು ವೇದಿಕೆಯಾಗಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು ನವೆಂಬರ್ 24ರ (ಭಾನುವಾರ) ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಕೈಕಂಬದಿಂದ ಶ್ರಮಜೀವಿಗಳ ಅಧಿಕಾರದತ್ತ’ ಜಾಥಾದಿಂದ ಶುರುವಾಗಲಿದ್ದು, ತದನಂತರ ಡಾ । ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ: ಮುಂದಿನ ದಾರಿ” ಬಹಿರಂಗ ಸಭೆ ನಡೆಯಲಿದೆ. ಪ್ರತಿನಿಧಿ ಅಧಿವೇಶನವು ನ. 24 ಮತ್ತು 25 ಎರಡೂ ದಿನಗಳ ಕಾಲ ನಡೆಯಲಿದೆ.
ಈ ಸಮ್ಮೇಳನಕ್ಕೆ Aicctu ರಾಷ್ಟೀಯ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ದಿಮ್ರಿ , ರಾಷ್ಟ್ರೀಯ ಅಧ್ಯಕ್ಷ ಕಾಮ್ರೇಡ್ ಶಂಕರ್ ಹಾಗೂ ರಾಜ್ಯದ ಮುಖಂಡರು ಭಾಗವಹಿಸಲಿದ್ದಾರೆ ಹಾಗೂ ಜಾಥಾ ಮತ್ತು ಬಹಿರಂಗ ಸಭೆಗಳಲ್ಲಿ ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ, ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ AICCTUನ ಸದಸ್ಯರಾದ ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಬಿಸಿ ಊಟ ಕಾರ್ಮಿಕರು, ಆಟೋ ಚಾಲಕರು, ಬೀಡಿ ಕಾರ್ಮಿಕರು,NAL, DRDO, ITI ಅಂತಹ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಹಾಗೂ ವಿವಿಧ ರಂಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ತಿಳಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ , ರಾಜ್ಯ ಸಮಿತಿ ಸದಸ್ಯ ನಾಗರಾಜ್ ಪೂಜಾರ್, ವಕೀಲರಾದ ತುಳಸೀದಾಸ್ ವಿಟ್ಲ ಉಪಸ್ಥಿತರಿದ್ದರು.