ಬಂಟ್ವಾಳ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ದ.ಕ.ಜಿಲ್ಲೆಯ ಯುವ ಸಮರ್ಥ ನಾಯಕನಾಗಿರುವ ಯುವಕರ ಕಣ್ಮಣಿಯಾಗಿರುವ ಜಿ.ಪಂ.ನ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗುತ್ತಿದೆ ಎಂಬ ಮಾಹಿತಿ ಕಾಂಗ್ರೆಸ್ ನ ಅಂತರಿಕ ವಲಯದಿಂದ ಲಭ್ಯವಾಗಿದೆ.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಎಂಎಲ್ಸಿ (MLC Election) ಚುನಾವಣೆಗೆ ಕಾಂಗ್ರೆಸ್ ನಿಂದ ಆರು ಮಂದಿ ಅಭ್ಯರ್ಥಿಗಳ ಹೆಸರು ಮುಂಚೂಣಿಗೆ ಬಂದಿದೆಯಾದರೂ ಕಾಂಗ್ರೆಸ್ ಪಕ್ಷಕ್ಕೆ ಬೆನ್ನಲೆಬುವಾಗಿರುವ ಕ್ರಿಯಾಶೀಲ ಯುವ ನಾಯಕ ಚಂದ್ರಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅದೇಶ ಹೊರಡಿಸುವುದು ಬಹುತೇಕ ಖಚಿತ ಎಂಬ ಸ್ಪಷ್ಟ ಮಾಹಿತಿಯನ್ನು ಕಾಂಗ್ರೆಸ್ ಮೂಲಗಳು ನೀಡಿವೆ.
ದ.ಕ.ಜಿಲ್ಲೆಯಿಂದ ಏಕೈಕ ಅಭ್ಯರ್ಥಿಯಾಗಿ ಜಿಲ್ಲೆಯ ನಾಯಕರುಗಳು ಸರ್ವಾನುಮತದಿಂದ ತುಂಬೆ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ,ಹೈಕಮಾಂಡ್ ಕದ ತಟ್ಟಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ, ಬಿ.ರಾಜು ಕಾರ್ಕಳ, ರಾಜು ಪೂಜಾರಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಭುಜಂಗ ಶೆಟ್ಟಿ, ಹರಿಪ್ರಸಾದ್ ರೈ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದು, ಸ್ಪರ್ಧೆಯ ಕಣದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಅಂತಿಮವಾಗಿ ಚಂದ್ರಪ್ರಕಾಶ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ ಎಂದು ಕಾಂಗ್ರೆಸ್ ನ ಆಂತರಿಕ ಮೂಲಗಳು ಹೇಳಿಕೊಂಡಿವೆ.



ಈ ಬಗ್ಗೆ ಕಾಂಗ್ರೆಸ್ ಸಮಿತಿಯನ್ನು ರಚಿಸಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಿತಿ ಹೈಕಮಾಂಡಿಗೆ ವರದಿ ನೀಡಲಿದೆ ಎಂದು ತಿಳಿದುಬಂದಿದೆ.
*ಅಭ್ಯರ್ಥಿ ಸ್ಥಾನಕ್ಕೆ ಅರ್ಹ ವ್ಯಕ್ತಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ….*
ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾಗಿರುವ ಚಂದ್ರಪ್ರಕಾಶ್ ಶೆಟ್ಟಿ ಅವರು
ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಉತ್ಸುಕರಾಗಿದ್ದು, ತುಂಬೆ ಗ್ರಾ.ಪಂ.ಸದಸ್ಯನಾಗಿ ರಾಜಕೀಯ ಜೀವನ ಪ್ರವೇಶ ಮಾಡಿದ ಬಳಿಕ ಇವರು ರಾಜಕೀಯದ ಹಲವು ಮಜಲುಗಳಲ್ಲಿ ತಾನು ಛಾಪು ಮೂಡಿಸಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಶಕ್ತಿಕೇಂದ್ರವಾಗಿದ್ದ ಗೋಳ್ತಮಜಲು ಜಿ.ಪಂ. ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಜಿ.ಪಂ.ಸದಸ್ಯನಾಗಿದ್ದ ಅವರು ಎರಡನೇ ಬಾರಿ ಸಜೀಪಮುನ್ನೂರು ಜಿ.ಪಂ.ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎರಡು ಅವಧಿಗಳಲ್ಲಿ ಜಿ.ಪಂ.ಸದಸ್ಯನಾದವರು.ಮೂರು ಬಾರಿ ಭೂ.ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ ಅನುಭವಿ. ಮೂಡೂರು ಪಡೂರು ಕಂಬುಳದ ಕಾರ್ಯಧ್ಯಕ್ಷನಾಗಿ ಬಂಟ್ವಾಳ ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷನಾಗಿ, ಜಿಲ್ಲೆಯ ಅನೇಕ ಧಾರ್ಮಿಕ ಕೇಂದ್ರಗಳ ಜೀರ್ಣೊದ್ದಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಯಶಸ್ವಿಗೆ ಪಾತ್ರರಾದವರು ಇವರು. ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದರ ಏಳಿಗೆಗೆ ಕಾರಣರಾದವರು ಪ್ರಕಾಶ್ ಶೆಟ್ಟಿ ತುಂಬೆ. ಕಾಂಗ್ರೆಸ್ ಪಕ್ಷದ ಸಮಿತಿಯ ಅನೇಕ ಜವಾಬ್ದಾರಿಗಳನ್ನು ಹೆಗಲಿಗೆ ಹಾಕಿಕೊಂಡು ಪಕ್ಷದ ಸಂಘಟನಾತ್ಮಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕೆ.ಪಿ.ಸಿ.ಸಿ.ಸದಸ್ಯ, ಡಿ.ಸಿ.ಸಿ.ಸದಸ್ಯ, ನಾಗಿ ಕರ್ತವ್ಯ ಮಾಡಿದ ಇವರು ಅನೇಕ ಕಾರ್ಯಕರ್ತರನ್ನು ಸಂಘಟನಾತ್ಮಕಾವಾಗಿ ಬೆಳೆಸಿದ ಹೆಗ್ಗಳಿಕೆ ಇವರದು. ಆದರೆ ಈವರೆಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಪಕ್ಷ ನೀಡಿದ ಪ್ರತಿಯೊಂದು ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ ಹೈಕಮಾಂಡ್ ನಿಂದ ಶಹಬ್ಬಾಸ್ ಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಮಾಜಿಸಚಿವ ರಮಾನಾಥ ರೈ ಅವರ ಆಪ್ತವಲಯದಲ್ಲಿ ರೈಟ್ ಹ್ಯಾಂಡ್ ಆಗಿ ಗುರುತಿಸಿಕೊಂಡಿದ್ದ ತುಂಬೆ ಅವರಿಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರುಗಳ ಜೊತೆ ಆತ್ಮೀಯ ಸಂಬಂಧವಿದೆ. ಹಾಗಾಗಿಯೇ ರೈ ಅವರ ಜೊತೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ , ಮಂಜುನಾಥ ಭಂಡಾರಿ ಸಹಿತ ಸಚಿವ ಶಾಸಕರು ತುಟಿಪಿಟಿಕ್ ಎನ್ನದೆ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಸೂಚಿಸಿ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಜಿಲ್ಲೆಯಿಂದ ಓರ್ವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲುವುಗಾಗಿ ಶ್ರಮಿಸಿ ಎಂದು ಜಿಲ್ಲೆಯ ನಾಯಕರು ಕಿವಿಮಾತುಹೇಳಿದ್ದಾರೆ ಎಂದು ಹೇಳಲಾಗಿದೆ.