ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಅಕ್ಟೋಬರ್ 9 ಬುಧವಾರದಿಂದ 12 ಶನಿವಾರದವರೆಗೆ ನಾಲ್ಕು ದಿನ ಜರುಗುವ 47ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಲ್ಲಡ್ಕದ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಊರಿನ ಹಿರಿಯರಾದ ಕೊಳಕೀರು ಭಂಡಾರಮನೆ ವಿಶ್ವನಾಥ ಆಳ್ವ ಅವರು ಬಿಡುಗಡೆಗೊಳಿಸಿ, ಉತ್ಸವ ಸಮಿತಿಯ ಸದಸ್ಯರು ಆಸುಪಾಸಿನ ಗ್ರಾಮದ ಸುಮಾರು 1300 ಮನೆಗಳಿಗೆ ಮನೆಬೇಟಿ ಮಾಡಿ ಆಮಂತ್ರಣ ತಲುಪಿಸುತ್ತಿರುವುದು ಪ್ರಸ್ತುತ ಕಾಲಘಟ್ಟದಲ್ಲಿ ಶ್ಲಾಘನೀಯ ಕೆಲಸ. ಕಲ್ಲಡ್ಕ ದಸರ ನಾಡಹಬ್ಬವಾಗಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಶಾರದೋತ್ಸವದ ಅಂಗವಾಗಿ ಅಕ್ಟೋಬರ್ 6 ರವಿವಾರದಂದು ಕಲ್ಲಡ್ಕ ಉತ್ಸವದ ಅಂಗಣದಲ್ಲಿ ‘ ಮಾರ್ನೇಮಿದ ಗೊಬ್ಬು’ ಮನರಂಜನೀಯ ಕ್ರೀಡಾಕೂಟ ಜರುಗಲಿರುವುದು ಈ ಕ್ರೀಡಾಕೂಟದ ಆಮಂತ್ರಣವನ್ನು ಕ್ರೀಡಾಪಟುವು ಆಗಿರುವ ಬಲ್ಲೆಕೋಡಿ ಬಾಲಕೃಷ್ಣ ಕೊಟ್ಟಾರಿಯವರು ನೆರವೇರಿಸಿ ಉತ್ಸವ ಮತ್ತು ಕ್ರೀಡಾಕೂಟ ಯಶಸ್ವಿಯಾಗಲೆಂದು ಶುಭಹಾರೈಸಿದರು.
ವೇದಿಕೆಯಲ್ಲಿ ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷರಾದ ನರಸಿಂಹ ಮಡಿವಾಳ, ನಿಕಟಪೂರ್ವ ಕಾರ್ಯದರ್ಶಿಗಳಾದ ಚಿ. ರಮೇಶ್ ಕಲ್ಲಡ್ಕ, ಪ್ರತಿಷ್ಠಾನದ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ, ಉತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಗೌರೀಶ್, ಕಾರ್ಯದರ್ಶಿ ಪ್ರಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಸ್ವಾಗತಿಸಿ ದಿನೇಶ್ ಕೃಷ್ಣಕೋಡಿ ವಂದಿಸಿದರು. ಪ್ರತಿಷ್ಠಾನದ ಕೋಶಾದಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.